ಒಂದು ಹಕ್ಕಿ ಮರಣ ಮುಖವಾಗಿತ್ತು. ಆದರೂ ಮುಖದ ಮೇಲೆ ಸಂತೃಪ್ತಿಯ ತೆರೆಯಾಡುತ್ತಿತ್ತು. ನಾಡ ನಲೆಗಾರ ಹಕ್ಕಿಗೆ ಕೇಳಿದ “ಈ ಗಳಿಗೆಯಲ್ಲಿ ನಿನ್ನ ಭಾವನೆ ಏನು?” ಹಕ್ಕಿ- “ನಾನು ಅತ್ಯಂತ ಸಂತುಷ್ಟನಾಗಿದ್ದೇನೆ” ನಲೆಗಾರ- ಹಾಗಾದರೆ, ನೀನು ಪಕ್ಷಿಲೋಕದಲ್ಲಿ ಅಪಾರ ಸಿರಿ -ಸಂಪದ, ಅಧಿಕಾರ- ಅಂತಸ್ತು ಗಳಿಸಿರಬೇಕು.” ಹಕ್ಕಿ-“ಇಲ್ಲ ನನ್ನದೆನ್ನುವ ಒಂದು ಹುಲ್ಲು ಕಡ್ಡಿಯೂ ಈ ಜಗತ್ತಿನಲ್ಲಿ ಇಲ್ಲ.”ನಲೆಗಾರ- “ಹಾಗಾದರೆ, ನಿನ್ನ ಸಂತಸದ ಕಾರಣವೇನು?” ಹಕ್ಕಿ-“ಬಹುಶಃ ಭಗವಂತನಿಗೂ ಸಾಧ್ಯವಾಗದ ಒಂದು ಸಣ್ಣ ಕೆಲಸ ನಾನು ಮಾಡಿದೆ.” ನಲೆಗಾರ- “ಅದಾವುದು" ಹಕ್ಕಿ-"ನನ್ನ ಆಯುಷ್ಯದ ಉದ್ದಕ್ಕೂ ನಿಸ್ವಾರ್ಥದಿಂದ ಹಾಡಿ ಕುಣಿದು ಆತನ ಈ ವಿಶಾಲ ವಿಶ್ವವನ್ನು ಸಂಗೀತಮಯ ಗೊಳಿಸಿದೆ! ರಸಭರಿತ ಮಾಡಿದೆ!!" ಹಕ್ಕಿಯ ಸಂತೃಪ್ತ ಜೀವನ ಕಂಡ ನಲೆಗಾರನ ಹೃದಯ ತುಂಬಿ ಬಂದಿತ್ತು !!

ಅದೇ ಪ್ರಶ್ನೆಯನ್ನು ಮರಣ ಶಯ್ಯಯಲ್ಲಿರುವ ೮೦-೯೦ ವರ್ಷದ ಮನುಷ್ಯನಿಗೆ ಕೇಳಿದರೆ ಏನು ಹೇಳಬಲ್ಲ. “ಜಗತ್ತಿನಲ್ಲಿ ನನ್ನಷ್ಟು ದುಃಖಿ ಯಾರೂ ಇಲ್ಲ ಎಂದಲ್ಲವೇ? ಆತನಿಗೆ ನಾಲ್ಕು ಜನ ಮಕ್ಕಳು, ೧೬ ಜನ ಮೊಮ್ಮಕ್ಕಳು, ೬೪ ಜನ ಮರಿ ಮೊಮ್ಮಕ್ಕಳು! ಅಪಾರ ಸಿರಿ ಸಂಪದ,ಆದರೂ ಆತ ಅತ್ಯಂತ ದುಃಖಿ.“ಇಷ್ಟೆಲ್ಲ ಇದ್ದೂ, ನೀನು ದುಃಖಿ ಏಕೆ?” ಎಂದು ಕೇಳಿದರೆ ಆತ ಹೇಳುವುದೇನು? “ಇದನ್ನೆಲ್ಲ ನಾನು ಹೇಗೆ ತೊರೆದು ಹೋಗಲಿ !” ಎಂದಲ್ಲವೆ? ಹಕ್ಕಿಯ ಭಾವಕ್ಕೂ ಮನುಷ್ಯನ ಭಾವಕ್ಕೂ ಎಷ್ಟು ವ್ಯತ್ಯಾಸ. ಹಕ್ಕಿ ಮುಕ್ತ. ಮನುಷ್ಯ ಬಂಧಿತ!

ಹರಿದಾಸರ ಕರ್ಮ, ಹಕ್ಕಿಯ ಕರ್ಮ, ಯೋಗಕರ್ಮ; ತಾನಸೇನನ ಕರ್ಮ, ಮುದುಕನ ಕರ್ಮ ವಿಷಾದ ಕರ್ಮ. ವಿಷಾದ ಕರ್ಮ ಬಂಧನಕಾರಿ, ದುಃಖದಾಯಕ! ಯೋಗಕರ್ಮ ಮುಕ್ತಿದಾಯಕ ಆನಂದಕಾರಿ !

(ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ)

(ಸಂಗ್ರಹ) - ಶಿವ ಕಾರ್ಕಳ