'ನೀವು ನಂಬಬೇಕಿರುವುದು ಕಲೆಯನ್ನೇ ಹೊರತು, ಕಲಾವಿದನನ್ನು ಅಲ್ಲ' ಎಂಬುದು ಕಲಾಲೋಕದ ಪ್ರಸಿದ್ದ ನಾಣ್ಣುಡಿ ಬರೆದಂತೆ ಬದುಕದ, ನುಡಿದಂತೆ ನಡೆಯದ ಕಲಾವಿದರು ತಮ್ಮ ದಾರಿಯನ್ನು ಸಮರ್ಥಿಸಿಕೊಳ್ಳಲು ಇಂಥಾ ಮಾತುಗಳನ್ನು ಕಟ್ಟಿದ್ದಾರೆ. ನುಡಿದಂತೆ ನಡೆಯುವುದು ನೈತಿಕತೆಯ ಮೊದಲ ಪಾಠ. ಆದರೆ, ರಚಿಸುವ ಕೃತಿಯನ್ನು ಬರೆಯುವ ಸಾಹಿತ್ಯವನ್ನು ಕೇವಲ ಶಬ್ದ ಚಮತ್ಕಾರ ಎಂದು ಭಾವಿಸಿರುವ ಕಲಾವಿದರ ಆಳದಲ್ಲಿ ಆತ್ಮಹೀನನೇ ಆಗಿರುತ್ತಾನೆ. ನಮ್ಮಲ್ಲಿ ಬಹುತೇಕ ಸಾಹಿತಿಗಳು, ಕಲಾವಿದರು ಇರುವುದೇ ಹೀಗೆ. ಆದರೆ, ಕನ್ನಡದ ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಈ ಮಾತಿಗೆ ಅಪವಾದವೆಂಬಂತೆ ಬಾಳಿ ಬದುಕಿ ಹೋದರು.
ಸಾಹಿತ್ಯದಿಂದ ಕ್ರಾಂತಿ ಮಾಡಬಹುದು, ಸಮಾಜ ಸುಧಾರಣೆ ಮಾಡಬಹುದು ಎಂಬುದು ನಮ್ಮ ಬಹುತೇಕ ಸಾಹಿತಿಗಳ ನಂಬಿಕೆ. ಆದರೆ, ಭೈರಪ್ಪ ಈ ಮಾತನ್ನು ಒಪ್ಪುತ್ತಲೇ ಇರಲಿಲ್ಲ ಸಾಹಿತಿ ತನ್ನ ವೈಯಕ್ತಿಕ ಬದುಕಿನಲ್ಲಿ ತನ್ನ ಶಕ್ತಿ ಸಾಮರ್ಥ್ಯದ ಇತಿಮಿತಿಯಲ್ಲಿ ಸಮಾಜಕ್ಕೆ ಉಪಕಾರ ಮಾಡಬಹುದು ಎಂಬುದನ್ನು ಬರೆಯಲಿಲ್ಲ. ಬದಲಿಗೆ ಆಗು ಮಾಡಿ ತೋರಿಸಿದರು ಹುಟ್ಟೂರಾದ ಸಂತೇಶಿವರದ ಜನ ನೀರಿಲ್ಲದೆ ಕಡುಕಷ್ಟ ಪಡುತ್ತಿರುವುದನ್ನು ಕಂಡು ಭೈರಪ್ಪ ಕೇವಲ ಮರುಗಲಿಲ್ಲ. ತಮ್ಮ ತಾಯಿ ಗೌರಮ್ಮನ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿ, ನೀರಿನ ಸಮಸ್ಯೆಗೆ ಪರಿಹಾರ ಕಂಡಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದರು. (ಚಿತ್ರ ನೋಡಿ) ನೀರಿನ ಸಮಸ್ಯೆ ಕೈಮೀರಿ, ಸರಕಾರವೇ ಮಧ್ಯಪ್ರವೇಶಿಸಬೇಕು ಎಂದಾಗ, ಅದಕ್ಕೂ ಅವರು ಹಿಂಜರಿಯಲಿಲ್ಲ. ಸರಕಾರಿ ಸ್ಥಾನ-ಮಾನ, ಪ್ರಶಸ್ತಿ, ಗೌರವ, ಬಡ್ತಿ ಮತ್ತಿತರ ಸೌಲಭ್ಯಗಳಿಗಾಗಿ ಅಧಿಕಾರಸ್ಥರ ಬಳಿ ತೆರಳುವುದು ಸಾಹಿತಿಗಳು ಮಾಡುವ ಕೆಲಸವಲ್ಲ ಎಂದು ನಂಬಿದ್ದ ಭೈರಪ್ಪ, ತನ್ನ ಸೀಮೆಯ ಜನರಿಗಾಗಿ ಮುಖ್ಯಮಂತ್ರಿಯನ್ನು ಕಂಡರು.
ಊರ ದೇಗುಲದ ಜೀರ್ಣೋದ್ದಾರಕ್ಕಾಗಿ ದೇಣಿಗೆ ನೀಡಿದರು. ನೋವು, ಬಡತನ, ಅಪಮಾನ, ರೋಗ ರುಜಿನ, ವಾರಾನ್ನ- ಹೀಗೆ ಎಲ್ಲ ಸವಾಲುಗಳನ್ನು ಬಾಲ್ಯದಲ್ಲಿಯೇ ಎದುರಿಸಿದ್ದ ಭೈರಪ್ಪ ತಮ್ಮ ಬದುಕಿನುದ್ದಕ್ಕೂ ಇಂಥಾ ಸವಾಲು ಎದುರಿಸುವ ಜನರಿಗಾಗಿ ಮಿಡಿದರು. ಅನಾಥ ಹಾಗೂ ಬೀದಿಬದಿ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಮೈಸೂರಿನಲ್ಲಿ 'ಒಡನಾಡಿ' ಸಂಸ್ಥೆ ಆರಂಭವಾದಾಗ, ಸಂಸ್ಥೆಯನ್ನು ಬೆಂಬಲಿಸಿ ಉದಾರವಾಗಿ ದೇಣಿಗೆ ನೀಡಿದರು. ಉಡುಪಿಯ ಹೆಣ್ಣು ಮಗಳೊಬ್ಬಳು ತಾಯಿ ಜತೆ ಬೀದಿಗೆ ಬಿದ್ದಿದ್ದಾಳೆ. ಆ ಮಗುವಿಗೆ ಓದಲು ಹಣಕಾಸಿನ ನೆರವು ಸಿಗುತ್ತಿಲ್ಲ ಎಂದು ಪತ್ರಿಕೆಯಲ್ಲಿ ಓದಿ ತಿಳಿದ ಭೈರಪ್ಪ, ಅವರಿಬ್ಬರನ್ನೂ ಸಂಪರ್ಕಿಸಿ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸಿದರು.
ಕೆಲವು ವರ್ಷಗಳ ಹಿಂದೆ ಅಸ್ಸಾಂನ ಸಂಘವೊಂದು ಅವರಿಗೆ ಭಾರಿ ಮೊತ್ತದ ನಗದು ಸಹಿತ ಬಹುಮಾನ ನೀಡಿ ಗೌರವಿಸಿತು. ಭೈರಪ್ಪ ನಗದು ಹಣವನ್ನು ಬಡಮಕ್ಕಳಿಗೆ ವಿನಿಯೋಗಿಸಿ ಎಂದು ವಾಪಸ್ ನೀಡಿದ್ದರು. ಹಾಗೆ ನೋಡಿದರೆ ಭೈರಪ್ಪ ತಮಗೆ ಬಂದ ಪ್ರಶಸ್ತಿಯ ಮೊತ್ತವನ್ನು ಯಾವತ್ತೂ ಮನೆಗೆ ತರುತ್ತಿರಲಿಲ್ಲವಂತೆ ಅದನ್ನು ಒಳ್ಳೆಯ ಕೆಲಸ ಮಾಡುವ ಸಂಘಸಂಸ್ಥೆಗಳಿಗೆ ದೇಣಿಗೆ ನೀಡುತ್ತಿದ್ದರು. ಹೀಗೆ ನೆರವು ನೀಡುವಾಗ ಸಂಬಂಧಿಸಿದ ಸಂಘಸಂಸ್ಥೆಯ ಪ್ರಾಮಾಣಿಕತೆಯನ್ನು ನೋಡುತ್ತಿದ್ದರೆ ವಿನಾ ಆ ಸಂಘ ಸಂಸ್ಥೆಗಳ ಸೈದ್ಧಾಂತಿಕ ಇಲ್ಲವೇ ರಾಜಕೀಯ ಒಲವು ನಿಲುವುಗಳನ್ನಲ್ಲ,
ಭೈರಪ್ಪ ಸಹಾಯ ಮಾಡಿದ್ದು ದೊಡ್ಡ ಸಂಗತಿಯಲ್ಲ, ತಾವು ಮಾಡಿದ ಸಹಾಯವನ್ನು ಅವರು ಯಾವತ್ತೂ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಿಲ್ಲ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗದಂತೆ ಈ ಕೆಲಸ ಮಾಡಿದರು. ಬರಹಕ್ಕಿಂತ ಬದುಕು ದೊಡ್ಡದು. ಭೈರಪ್ಪ ಅವರ ಬರಹದಷ್ಟೇ ಬದುಕೂ ದೊಡ್ಡದು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೬-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!