ರಾಜ್ಯದ ಸರಕಾರಿ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಪ್ರತಿಯೊಂದು ಸರಕಾರವೂ ಹಲವಾರು ಯೋಜನೆ, ಉಪಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸಮಸ್ಯೆ, ಕೊರತೆಗಳ ಸುಳಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳು ಇನ್ನೂ ಹೊರಬಂದಿಲ್ಲ. ದಶಕದ ಹಿಂದೆಗೆ ಹೋಲಿಸಿದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳು ಫಲಿತಾಂಶದಲ್ಲಿ ಒಂದಿಷ್ಟು ಸುಧಾರಣೆಯನ್ನು ಕಂಡಿವೆಯಾದರೂ ಈ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ವರ್ಷಗಳುರುಳಿದಂತೆಯೇ ಕಡಿಮೆಯಾಗುತ್ತಲೇ ಇದೆ. ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದನ್ನೇ ಕಾರಣವನ್ನಾಗಿರಿಸಿಕೊಂಡು ಈಗಾಗಲೇ ನೂರಾರು ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸರಕಾರವೇ ಮುಚ್ಚಿದೆ. ಸರಕಾರಿ ಶಾಲೆಗಳು ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳ ಮಕ್ಕಳ ಪಾಲಿಗೆ ಇಂದಿಗೂ ಸಂಜೀವಿನಿ ಇದ್ದಂತೆ. ಆದರೆ ಸರಕಾರ ಮತ್ತು ಸಮಾಜದ ಅಸಡ್ಡೆಯ ಧೋರಣೆಯಿಂದಾಗಿ ಸರಕಾರಿ ಶಾಲಾ-ಕಾಲೇಜುಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.
ವರ್ಷದಿಂದ ವರ್ಷಕ್ಕೆ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಇಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಕುಸಿತ ಕಾಣು ತ್ತಿರುವುದನ್ನು ಗಮನಿಸಿದಾಗ ಸರಕಾರಿ ಶಿಕ್ಷಣ ಸಂಸ್ಥೆಗಳ ಭವಿಷ್ಯದ ಕುರಿತಂತೆ ಪ್ರಶ್ನೆಗಳು ಏಳುವಂತೆ ಮಾಡುತ್ತವೆ. ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿವೆಯಾದರೂ ಸಮಾಜದ ಎಲ್ಲ ವರ್ಗಗಳ ಮಕ್ಕಳಿಗೆ ಈ ಶಿಕ್ಷಣಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ ಹೀಗಾಗಿ ಇಂದಿಗೂ ಬಡ ಮತ್ತು ದುರ್ಬಲ ವರ್ಗದ. ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸರಕಾರಿ ಶಿಕ್ಷಣ ಸಂಸ್ಥೆಗಳನ್ನೇ ನೆಚ್ಚಿಕೊಂಡಿವೆ. ಆದರೆ ಸರಕಾರದ ಎಲ್ಲ ಪ್ರಯತ್ನ ಯೋಜನೆ, ವಿನೂತನ ಉಪಕ್ರಮಗಳ ಹೊರತಾಗಿಯೂ ಈ ಶಿಕ್ಷಣ ಸಂಸ್ಥೆಗಳು ಮೂಲಸೌಕರ್ಯ, ಬೋಧಕ ಮತ್ತು ಬೋಧಕೇತರ ಸಿಬಂದಿಯ ಕೊರತೆಯಿಂದ ಬಳಲುತ್ತಿವೆ. ಇನ್ನು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಅತ್ಯಗತ್ಯ ಶೈಕ್ಷಣಿಕ ಸಾಧನ, ಸಲಕರಣೆಗಳ ಅಲಭ್ಯತೆಯೂ ಇದೆ. ಈ ಎಲ್ಲ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಮತ್ತವರ ಹೆತ್ತವರು ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ವಿಮುಖ ರಾಗುತ್ತಿದ್ದಾರೆ. ಈ ಎಲ್ಲ ಕೊರತೆ, ಸಮಸ್ಯೆಗಳ ಅಪವಾದದಿಂದ ಕೆಲವು ಸರಕಾರಿ ಶಿಕ್ಷಣ ಸಂಸ್ಥೆಗಳು ಹೊರತಾಗಿವೆಯಾದರೂ ಬಹುತೇಕ ಶಾಲೆಗಳ ಪರಿಸ್ಥಿತಿ 'ಅದೇ ಹಾಡು ಅದೇ ರಾಗ' ಎಂಬಂತಾಗಿದೆ.
ಬೋಧಕ ಸಿಬಂದಿಯ ಕೊರತೆ ಸರಕಾರಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಬಲುದೊಡ್ಡ ಸಮಸ್ಯೆ. ಪ್ರತೀ ವರ್ಷ ಸರಕಾರ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಸುತ್ತಲೇ ಬಂದಿದ್ದರೂ ಇದು 'ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂಬಂತಾಗಿದೆ. ಇನ್ನು ಕಳೆದ ಕೆಲವು ವರ್ಷಗಳಿಂದ ಗುತ್ತಿಗೆ ಆಧಾರದ ನೇಮಕಾತಿ, ಅತಿಥಿ ಶಿಕ್ಷಕರ ನೇಮಕಾತಿಯಂತಹ ತಾತ್ಕಾಲಿಕ ನೇಮಕಾತಿ ಪ್ರಕ್ರಿಯೆಗಳಿಗೆ ಸರಕಾರ ಜೋತು ಬಿದ್ದಿರುವುದರಿಂದ ಬೋಧಕ ಸಿಬಂದಿಯ ಕೊರತೆ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇನ್ನು ಶಿಕ್ಷಕರನ್ನು ವಿವಿಧ ಗಣತಿ, ಸಮೀಕ್ಷೆ ಸಹಿತ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಕೂಡ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೇಲೆ ನೇರ ಪರಿಣಾಮ ಬೀರುವಂತೆ ಮಾಡಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪಾಠಪ್ರವಚನ ನಡೆಸುವುದಕ್ಕಿಂತಲೂ ವಿವಿಧ ದಾಖಲೆಪತ್ರಗಳ ನಿರ್ವಹಣೆಯೇ ಶಿಕ್ಷಕರಿಗೆ ಬಲುದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಈ ಎಲ್ಲ ಸಮಸ್ಯೆ, ಕೊರತೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಅಗತ್ಯ ಸಂಖ್ಯೆಯಲ್ಲಿ ಖಾಯಂ ಬೋಧಕ ಸಿಬಂದಿಯ ನೇಮಕ ಸಹಿತ ಎಲ್ಲ ಸಮಸ್ಯೆಗಳಿಗೆ ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡಲ್ಲಿ ಮಾತ್ರವೇ ಸರಕಾರಿ ಶಿಕ್ಷಣ ಸಂಸ್ಥೆಗಳ ಭವಿಷ್ಯದ ಬಗೆಗೆ ಅಶಾವಾದ ಇರಿಸಿಕೊಳ್ಳಲು ಸಾಧ್ಯ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೭-೧೦-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!