ಬಿಹಾರದಲ್ಲಿ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಘೋಷಿಸುವ ಮೂಲಕ ಅಲ್ಲಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬಿಹಾರದಲ್ಲಿ ಚುನಾವಣಾ ಮತಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ ಐ ಆರ್) ಕೈಗೊಂಡ ಬಳಿಕ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಸಹಜವಾಗಿಯೇ ಎಲ್ಲರ ಕುತೂಹಲ ಕೆರಳಿಸಿದೆ. ಮತದಾರರ ಪಟ್ತಿಯ ವಿಶೇಷ ಪರಿಷ್ಕರಣೆಯ ಕಾರ್ಯವು ಮುಗಿದಿದ್ದರೂ, ಅದನ್ನು ಪ್ರಶ್ನಿಸಿದ ಕೆಲವು ದಾವೆಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಕರಡು ಪಟ್ಟಿಯಲ್ಲಿ ಹೆಸರಿದ್ದರೂ ಅಂತಿಮ ಪಟ್ಟಿಯಿಂದ ಹೆಸರು ಬಿಡಲಾದ ಸುಮಾರು ಮೂರುವರೆ ಲಕ್ಷ ಮತದಾರರ ಕುರಿತಂತೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೋಮಾವಾರವಷ್ಟೇ ಸೂಚನೆ ನೀಡಿದೆ. ಒಂದು ಬಾರಿ ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ನ್ಯಾಯಾಂಗವು ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುವಂತಿಲ್ಲ. ಹಾಗಾಗಿ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತಂತೆ ಇನ್ನೂ ವಿಚಾರಣೆ ನಡೆಸುವುದು ಅದೆಷ್ಟು ಸರಿ ಎಂಬುದು ಕೆಲವು ಪರಿಣಿತರ ವಾದವಾಗಿದೆ. ಚುನಾವಣಾ ಆಯೋಗವು ಹೇಳುವಂತೆ ಬಿಹಾರದಲ್ಲಿ ೭.೪೨ ಕೋಟಿ ಮತದಾರರು ಮತದಾನದಲ್ಲಿ ಭಾಗವಹಿಸಲಿದ್ದಾರೆ. ೨೧.೫೩ ಲಕ್ಷ ಹೆಸರುಗಳನ್ನು ಸೇರಿಸಲಾಗಿದೆ. ಆಯೋಗವು ಹೇಳುವಂತೆ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತಂತೆ ಕೆಲವು ಪಕ್ಷಗಳು ಮತ್ತು ದಿಲ್ಲಿಯಲ್ಲಿ ಕುಳಿತಿರುವ ಕೆಲವು ಎನ್ ಜಿ ಓ ಗಳ ಆಕ್ಷೇಪವಿತ್ತೇ ಹೊರತು ಬಿಹಾರದ ಜನರ ಆಕ್ಷೇಪವಿರಲಿಲ್ಲ. ಅಪ್ರಸ್ತುತವಾಗಿರುವ ಹೆಸರುಗಳನ್ನಷ್ಟೇ ತೆಗೆಯಲಾಗಿದೆ. ಮತದಾರರಿಗೆ ತನ್ನ ಹೆಸರುಗಳನ್ನು ಧೃಡೀಕರಿಸಲು ಹಲವಾರು ಅವಕಾಶಗಳನ್ನು ನೀಡಿದ ಬಳಿಕವಷ್ಟೇ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ. 

ಬಿಹಾರದಲ್ಲಿ ನಡೆಸಲಾಗಿರುವ ಮತದಾರ ಪಟ್ಟಿ ಪರಿಷ್ಕರಣೆಯು ಚುನಾವಣಾ ಫಲಿತಾಂಶದ ಮೇಲೆ ಏನು ಪರಿಣಾಮ ಬೀರುವುದೆಂದು ಕಾದುನೋಡಬೇಕು. ಏಕೆಂದರೆ ಮತಕಳ್ಳತನವನ್ನು ತಡೆಯಲು ಇದು ನೆರವಾಗಲಿದೆ. ಬಿಹಾರ ಚುನಾವಣೆಯ ಯಶಸ್ಸು ಚುನಾವಣಾ ಆಯೋಗಕ್ಕೆ ದೇಶದೆಲ್ಲೆಡೆ ಮತದಾರ ಪಟ್ಟಿಯ ಪರಿಷ್ಕರಣೆಗೆ ದೃಷ್ಟಾಂತವಾಗಬಹುದು. ಪರಿಷ್ಕರಣೆಯ ಕುರಿತಂತೆ ಕೆಲವರ ಅಪಪ್ರಚಾರದ ಮಿಥ್ಯೆಯನ್ನು ಬಿಹಾರ ಚುನಾವಣೆಯು ಬಯಲುಗೊಳಿಸುವುದೆಂದು ಆಶಿಸೋಣ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೯-೧೦-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ