ಅವರೊಬ್ಬ ಪ್ರಸಿದ್ಧ ಹರಿಕಥಾ ಕೀರ್ತನೆ ಮಾಡುವ ಶಾಸ್ತ್ರಿಗಳು. ದೇವರು-ದಿಂಡ್ರು, ಪಾಪ-ಪುಣ್ಯ, ಸತ್ಯ-ಧರ್ಮ, ನ್ಯಾಯ-ನೀತಿ, ಸ್ವರ್ಗ-ನರಕ, ಅಂತ ಪ್ರವಚನ ಮಾಡುತ್ತಾ ಅಪಾರ ಭಕ್ತ ವೃoದಗಳ ಅಭಿಮಾನಿ ದೇವರಾಗಿದ್ದವರು. ಒಮ್ಮೆ ಅವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಿರ್ವಾಹಕ ಕಣ್ತಪ್ಪಿನಿಂದ 10 ರೂಪಾಯಿ ಹೆಚ್ಚಿಗೆ ನೀಡಿದ. ಅದನ್ನು ಗಮನಿಸಿದ ಶಾಸ್ತ್ರಿಗಳ ಮನಸ್ಸಿನಲ್ಲಿ ನಾನಾ ತರಹದ ವಿಚಾರಗಳು ಬರಲಾರಂಬಿಸಿದವು . "ಕೇವಲ ಹತ್ತು ರೂಪಾಯಿ ತಾನೇ, ಯಾಕೆ ಮರಳಿಸಬೇಕು? ಈ ನಿರ್ವಾಹಕ ಎಷ್ಟೋ ಜನರಿಗೆ ಚಿಲ್ಲರೆ ವಾಪಸ್ ನೀಡದೆ ಪ್ರತಿನಿತ್ಯ ಎಷ್ಟೋ ಲಾಭ ಮಾಡಿಕೊಳ್ತಾನೆ. ಈ 10 ರೂ. ನಾನು ಮರಳಿಸದಿದ್ದರೆ ಅವನಿಗೆ ಏನು ನಷ್ಟ ಆಗಲ್ಲ." ಆಗ ಒಳ ಮನಸ್ಸು ಹೇಳಿತು "ಇದು ತಪ್ಪು" ಆತ ಏನೇ ಮಾಡಿರಲಿ "ನೀನು ಹಾಗೆ ಮಾಡಿ ಪಾಪಿಯಾಗಬೇಡ". ಮನಸ್ಸು ಚಂಚಲ ತಾನೇ? ಇನ್ನೊಂದು ದಿಕ್ಕಿನಲ್ಲಿ ಚಿಂತಿಸಿತು "ನಮಗೆ ಹಲವಾರು ಜನರು ಮೋಸ ಮಾಡ್ತಾರೆ, ಅದನ್ನು ಸರಿದೂಗಿಸಲು ಭಗವಂತ ನನಗೆ ಇದನ್ನು ಪ್ರಸಾದದ ರೂಪದಲ್ಲಿ ನೀಡಿರಬಹುದು." ಕೊನೆಗೆ ಅಂತರಾತ್ಮ ಹೇಳಿತು, "ಇದು ತಪ್ಪು ಬೇರೆಯವರ ಋಣ ಬೇಡ," "ಮೌಲ್ಯ ಸಣ್ಣದಾದರೂ ವಿಕರ್ಮಕ್ಕೆ ಶಿಕ್ಷೆ ದೊಡ್ಡದು", 'ಬೇಡ ಕೊಟ್ಟು ಬಿಡು' ಅಂತ.
ಅಂತೂ-ಇಂತೂ ಮಾನಸಿಕ ತೊಳಲಾಟದಲ್ಲಿ ಸ್ವಾರ್ಥ ಮನಸ್ಸು ಗೆದ್ದೇ ಬಿಟ್ಟಿತು "ತಾನು ಕೊಡಲ್ಲ" ಅಂತ ಗಟ್ಟಿ ಮನಸ್ಸು ಮಾಡಿ ಬಸ್ಸಿನಿಂದ ಕೆಳಗಿಳಿದೇ ಬಿಟ್ಟರು. ಆದರೆ ಅವರ ಅರಿವಿಗೇ ಬಾರದಂತೆ ಕೈ ತನ್ನಿಂದ ತಾನೇ ಕಿಸೆಗೆ ಹೋಯಿತು, 10 ರೂ. ನಿರ್ವಾಹಕನಿಗೆ ನೀಡಿತು. ಅದು "ಅಭ್ಯಾಸ ಬಲ". ಇಲ್ಲಿಯವರೆಗೆ ಯಾರಿಗೂ ಮೋಸ ಮಾಡದ ಶಾಸ್ತ್ರಿಗಳ ಅಂತರಾತ್ಮ ಅವರಿಗೆ ತಿಳಿಯದಂತೆ ಗೆದ್ದೇ ಬಿಟ್ಟಿತು. ಆಗ ನಿರ್ವಾಹಕ ಹೇಳಿದ ಮಾತು ತೀರಾ ಮಾರ್ಮಿಕವಾಗಿತ್ತು. "ಶಾಸ್ತ್ರಿಗಳೇ, ನಾನು ಬೇಕಂತಲೇ ಜಾಸ್ತಿ ನೀಡಿ "ನೀವು ಹೇಗೆ" ಅಂತ ಪರೀಕ್ಷಿಸಲು ಹಾಗೆ ಮಾಡಿದೆ, ನಾನು ನಿಮ್ಮ ಅಭಿಮಾನಿ, ನಿಮ್ಮ ಪ್ರವಚನವನ್ನು ಕೇಳುತ್ತಾ ಬಂದವನು, "ನೀವು ಸದ್ಗುಣವಂತರು" ಅಂತ ನನ್ನ ಸ್ನೇಹಿತರ ಮುಂದೆ ಕೊಚ್ಚಿಕೊಳ್ತಾ ಇದ್ದೆ, ಆಗ ನನ್ನ ಸ್ನೇಹಿತನೊಬ್ಬ ಈ ರೀತಿ ಪರೀಕ್ಷಿಸಲು ಹೇಳಿದ, ಅನಿವಾರ್ಯವಾಗಿ ಹೀಗೆ ಮಾಡಬೇಕಾಯಿತು, "ದಯವಿಟ್ಟು ಕ್ಷಮಿಸಿ", ಆದರೆ ಈ ಪರೀಕ್ಷೆಯಲ್ಲಿ ತಾವು ಗೆದ್ದು ನನ್ನ ವಿಶ್ವಾಸವನ್ನು ಇನ್ನೂ ಹೆಚ್ಚು ಮಾಡಿದಿರಿ.
ಈಗ ಶಾಸ್ತ್ರಿಗಳ ಆತ್ಮಾವಲೋಕನ ಪ್ರಾರಂಭವಾಯಿತು . ದೇವರೇ ನೀನೇ ನನ್ನನ್ನು ಕಾಪಾಡಿದೆ, ಎಲ್ಲಿಯಾದರೂ ನಾನು ಸ್ವಾರ್ಥ ಮನಸ್ಸಿಗೆ ಬಲಿಯಾಗಿದ್ದಲ್ಲಿ ಕೇವಲ ಹತ್ತು ರೂಪಾಯಿಗೆ ನಾನು ಇಷ್ಟು ವರ್ಷ ಕಾಪಾಡಿಕೊಂಡು ಬಂದಿದ್ದ ನನ್ನ ಮಾನ ಮರ್ಯಾದೆ ಮೂರು ಕಾಸಿಗೂ ಬೆಲೆ ಇಲ್ಲದೆ ಹೋಗುತ್ತಿತ್ತು, ಆಗ ನಾನು "ಬದುಕಿದ್ದೂ ಸತ್ತಂತೆ" ಆಗ್ತಿದ್ದೆ, ಇನ್ನು ಮುಂದೆಯೂ 'ನೀನು ನನ್ನೊಂದಿಗೆ ಇದ್ದು ಮರ್ಯಾದೆ ಕಳೆದು ಕೊಳ್ಳದಂತೆ ಎಚ್ಚರಿಕೆ ನೀಡುತ್ತಾ ಇರು' ಅಂತ ಬೇಡಿಕೊಂಡು ನಿಟ್ಟಿಸಿರು ಬಿಟ್ಟರು. "ಆನೆ ಕದ್ರೂ ಕಳ್ಳ, ಅಡಿಕೆ ಕದ್ರೂ ಕಳ್ಳನೇ" ಎಂಬ ಗಾದೆ ನನಗಾಗ ನೆನಪಾಯಿತು . ನಾವು ಕೆಲವೊಮ್ಮೆ ಸಣ್ಣ ಸಣ್ಣ ವಿಷಯಕ್ಕೆ ಮರ್ಯಾದೆ ಕಳೆದುಕೊಳ್ಳುತ್ತೇವೆ. "ಕದ್ದಮಾಲಿನ ಮೌಲ್ಯ ಸಣ್ಣದಾದರೂ, ಹೋಗುವ ಮರ್ಯಾದೆ ಅಪಾರವಾದದ್ದು" ಹಾಗಾಗಿ ಎಲ್ಲರೂ"ಎಚ್ಚರದಿಂದಿರಿ." ನಾವೆಲ್ಲರೂ ಸದಾ ಭಗವಂತನ CC TV. "ಕಣ್ಗಾವಲಿನಲ್ಲಿರುತ್ತೇವೆ" ಏನಂತೀರಿ?
(ಎಂದೋ ಕೇಳಿದ ಕಥೆಯನ್ನು ನೆನಪಿಟ್ಟು, ಇಂದು ಬರೆದಿದ್ದೇನೆ)
-ನಂದಾ ಕುಂದಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!