ಮೊನ್ನೆ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದೆ. ಆಗ ಅಜಮಾಸು 25-28  ಪ್ರಾಯದ ಯುವಕನೊಬ್ಬ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತಿಂದು ಬಿಸಾಡಿದ ತಿಂಡಿಯ ಪೊಟ್ಟಣಗಳ ಕವರ್, ಖಾಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಕವರ್, ಟೀ ಕಪ್,‌ಗುಟ್ಕಾ ಕವರ್ ಮುಂತಾದವುಗಳನ್ಮು ಪೊರಕೆಯಿಂದ ಶುಚಿಗೊಳಿಸುತ್ತಿದ್ದ. ಇಂಥ ದೃಶ್ಯಗಳು ಎಲ್ಲಾ ಬಸ್ ನಿಲ್ದಾಣಗಳಲ್ಲೂ ಸಾಮಾನ್ಯ. ಆದರೆ,   ಅಂದು‌‌‌ ನಡೆದ ಆ ಒಂದು ಚಿಕ್ಕ ಘಟನೆ ಬಹಳ‌ ಯೋಚಿಸುವಂತೆ ಮಾಡಿತು. ಕಸ ಗುಡಿಸುತ್ತಾ ಸಾಗುತ್ತಿದ್ದ ಆ ಯುವಕನನ್ನು ಕಂಡು ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬಳು ತಾಯಿ ಥಟ್ಟನೆ ತನ್ನ ಮಗನಿಗೆ ಆ ದೃಶ್ಯವನ್ನು ತೋರಿಸಿ "ನೋಡು‌, ನೀನು ಸರಿಯಾಗಿ ಓದದಿದ್ರೆ, ನನ್ನ ಮಾತು ಕೇಳದಿದ್ರೆ, ಹಠ ಮಾಡಿದ್ರೆ, ನಾಳೆ ನೀನು ಆತನ ಹಾಗೇ ಬಸ್‌ಸ್ಟ್ಯಾಂಡ್‌‌ನಲ್ಲಿ ಕಸ ಗುಡಿಸುವ ಕೆಲಸ ಮಾಡಬೇಕಾಗ್ತದೆ" ಎಂದು ಬುದ್ಧಿವಾದ ಹೇಳಲು ತೊಡಗಿದಳು. 

ಆಕೆಯ ಮಾತನ್ನು ಕೇಳಿ ನನಗೆ ಸಂತೋಷದ ಜೊತೆಗೆ ದುಃಖವೂ ಆಯಿತು. ಇಂದು ಪಾಲಕರು ಬಾಲ್ಯದಲ್ಲಿಯೇ ತಮ್ಮ ಮಕ್ಕಳಿಗೆ ಸರಿ ತಪ್ಪುಗಳ ತಿಳುವಳಿಕೆ ನೀಡಿ ತಿದ್ದುವ ಬದಲು , ತಮ್ಮ ಜವಾಬ್ದಾರಿಯಿಂದಲೇ ನುಣುಚಿಕೊಳ್ಳುವ ಕಾಲಘಟ್ಟವಿದು.‌  ಹೀಗಿರುವಾಗ ಈ ಚಿಕ್ಕ ನಿದರ್ಶನವನ್ನೇ ತೆಗೆದುಕೊಂಡು ತನ್ನ ಮಗನಿಗೆ ಬುದ್ಧಿ ಹೇಳಲು ಹೊರಟ ಆಕೆಯ ಗ್ರಹಿಕೆಯನ್ನು ಮೆಚ್ಚಿದೆ; ಆದರೆ, ಕಸ ಗುಡಿಸುವವನ ನಿದರ್ಶನವನ್ನು ಮಗನಿಗೆ ಕೇಳಿದ ರೀತಿ ಮಾತ್ರ ಬಹಳ ಬೇಸರ‌ ತಂದಿತು. ನಮ್ಮ ಮಕ್ಕಳ‌ ಭವಿಷ್ಯ ಒಳ್ಳೆದಾಗಬೇಕು, ಎತ್ತರದ ಸ್ಥಾನಕ್ಕೆ ಏರಬೇಕೆಂಬ ಆಸೆ, ಆಲೋಚನೆಗಳನ್ನು ಹೊಂದುವುದು ತಪ್ಪಲ್ಲ. ಅದಕ್ಕಾಗಿ ಇನ್ನೊಬ್ಬರ ವೃತ್ತಿಯನ್ನು ಕೀಳಾಗಿ‌‌ ಕಾಣುತ್ತಾ ಅದನ್ನು ಅಸಹ್ಯವಾದದ್ದು ಎಂಬಂತೆ ಬಿಂಬಿಸಿ, ಕಂಡ ದೃಶ್ಯವನ್ನು ನಕಾರಾತ್ಮಕವಾಗಿ ಮಗುವಿನ ಮನಸ್ಸಿನಲ್ಲಿ ಮೂಡಿಸಿದ ಪರಿ ಹಿಡಿಸಲಿಲ್ಲ.

ಅದರ ಬದಲಾಗಿ "ನೋಡು ಮಗಾ, ನಾವೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕಬಾರದು. ಸ್ವಚ್ಛತೆ ಪಾಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ನಾವು ಮಾಡಿರುವ ಹೊಲಸನ್ನು ಆ ವ್ಯಕ್ತಿ ಸ್ವಲ್ಪವೂ ಬೇಸರಿಕೊಳ್ಳದೇ ಎಷ್ಟು ನಿಷ್ಠೆಯಿಂದ ಶುಚಿಗೊಳಿಸುತ್ತಿದ್ದಾನೆ ನೋಡಿದೆಯಾ. ಕೆಲ್ಸದಾಗೆ ದೊಡ್ಡದು, ಚಿಕ್ಕದು,  ಮೇಳು‌-ಕೀಳು ಇರಕಿಲ್ಲ. ಆದ್ರೆ ನಾವ್ ಮಾಡೋ ಕೆಲಸದಾಗೇ ಪ್ರಾಮಾಣಿಕತೆ ಇರಬೇಕು" ಎಂದು ಮಗುವಿಗೆ ಸ್ವಚ್ಛತೆಯ ಪಾಠದೊಂದಿಗೆ, ಜೀವನದ ಮೌಲ್ಯದ ಜ್ಞಾನ ನೀಡಬಹುದಿತ್ತು. ಅದರೊಟ್ಟಿಗೆ "ನೋಡು‌ ಮಗಾ... ಜೀವನದಲ್ಲಿ ಮನುಷ್ಯಾ ಒಳ್ಳೆ ಮೌಲ್ಯ, ಹವ್ಯಾಸ, ಗುರಿ ಇಟ್ಕೊಂಡಿರಬೇಕು. ಹಾಗೇ ನಾಳೆ ನೀನು ಚೆನ್ನಾಗಿ ಓದಿ, ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತವಾದ ಹುದ್ದೆಯನ್ನು ಅಲಂಕರಿಸಿದ್ರೆ, ನಿನಗೆ ಒಳ್ಳೆ ಆಡಳಿತ‌ ನಡೆಸೋ ಅವಕಾಶ ಸಿಕ್ತದೆ. ಆಗ ಜನರಲ್ಲಿ ಸಾಮಾಜಿಕ ಜವಾಬ್ದಾರಿ, ಕಾಳಜಿ ಜೊತೆ ಅವರವರ ಕರ್ತವ್ಯಗಳ ಬಗ್ಗೆ ತಿಳುವಳಿಕೆ ಮೂಡಿಸಿ ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣವಾಗುವಂತೆ‌ ಮಾಡಬಹುದು" ಎಂದು ಸಕಾರಾತ್ಮಕ ಸ್ಪೂರ್ತಿ ಮಾತು ಹೇಳಿದ್ದಿದ್ರೆ ಎಷ್ಟು ಚೆನ್ನಾಗಿರುತಿತ್ತು ಅಲ್ವಾ?

ಅಂದು ನರೇಂದ್ರ ಜಟಕಾ ಗಾಡಿಯಲ್ಲಿ ಹೋಗುವಾಗ ತಂದೆ ವಿಶ್ವನಾಥ ದತ್ತ "ನೀನು ದೊಡ್ಡವನಾದ ಮೇಲೆ ಏನಾಗ್ತಿ?" ಎಂದಾಗ ನರೇಂದ್ರ "ಜಟಕಾಸಾಬಿ' ಆಗ್ತೇನೆ‌ ಅಪ್ಪಾಜಿ" ಎಂದು ಉತ್ತರ ಕೊಟ್ಟಿದ್ದನಂತೆ. ಅಪ್ಪನಿಗೆ ಮಗನ ಉತ್ತರ ಹಿಡಿಸಲಿಲ್ಲ. ಅಲ್ಲೇ ಪಕ್ಕದಲ್ಲಿದ್ದ ಅಮ್ಮ ಭುವನೇಶ್ವರಿ ದೇವಿ  ಮಗನ ಮಾತನ್ನು‌ ಕೇಳಿಸಿಕೊಂಡು ಕ್ಷಣ ಹೊತ್ತು ಮೌನಿಯಾದಳು. ಮನೆಗೆ ಬಂದ ಮೇಲೆ ಗೋಡೆಯ ಮೇಲೆ ತೂಗುಹಾಕಿದ್ದ  ಶ್ರೀಕೃಷ್ಣ ಅರ್ಜುನನ್ನು ಕೂರಿಸಿಕೊಂಡು ಸಾರೋಟು ಓಡಿಸುತ್ತಿದ್ದ ಪಟ ತೋರಿಸಿ, 'ಮಗು, ಸಾರೋಟು ಓಡಿಸುವುದು ಕೆಟ್ಟ ಉದ್ಯೋಗವಲ್ಲ, ಆದರೆ ನೀನು ಓಡಿಸಬೇಕಾದುದು ಜನರು ಓಡಾಡುವ ರಥವನ್ನಲ್ಲ, ಬದಲಿಗೆ ಧರ್ಮದ ಸಾರೋಟನ್ನು' ಎನ್ನುತ್ತಾಳೆ. ಆ ಮಹಾತಾಯಿ ನೀಡಿದ ಸುಂದರ ನಿದರ್ಶನವು ಮುಂದೆ ನರೇಂದ್ರನ‌ ಬದುಕನ್ನೇ ಬದಲಿಸಿ ಆತನನ್ನು ವಿಶ್ವನಾಯಕನನ್ನಾಗಿಸಿತು.

ನಿತ್ಯವೂ ನಮ್ಮ ಸುತ್ತಮುತ್ತ ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಿರುತ್ತವೆ. ಮಕ್ಕಳಲ್ಲಿ ಬಾಲ್ಯದಲ್ಲೇ ಶ್ರೇಷ್ಠತೆಯ ವ್ಯಸನ ತುರುಕುತ್ತಿರುವ ಪೋಷಕರ ಮನಸ್ಸುಗಳು ಇಂದು ಹೆಚ್ಚುತ್ತಲೇ ಇವೆ. ಕೆಲವು ಶಾಲೆಗಳಲ್ಲಿಯೂ 'ನೀನು ದನ ಕಾಯೋಕೆ ಲಾಯಕ್ಕು, ಹೀಗೆ ಮಾರ್ಕ್ಸ್ ತೆಗೆದ್ರೆ ಆಟೋ ಓಡಿಸ್ಕೊಂಡಿರ್ತೀಯ, ಮೆಕಾನಿಕ್ ಆಗಿ ಗ್ಯಾರೇಜಿಗೆ ಹೋಗ್ತೀಯಾ, ಹೋಟೆಲ್‌ನಲ್ಲಿ ಪಾತ್ರೆ ತೊಳಿಬೇಕಾಕ್ತದೆ' ಅಂತೆಲ್ಲ ಕನಿಷ್ಠ ದರ್ಜೆಯ ಮಾತುಗಳನ್ನಾಡುವ ಟೀಚರ್‌ಗಳೂ ಇದ್ದಾರೆ. ಈ ರೀತಿ‌ ಮಕ್ಕಳನ್ನು ಒಂದೇ ಕ್ಷಣಕ್ಕೆ ಜಡ್ಜ್ ಮಾಡಿ  ಡಿಮೋಟಿವೆಟ್ ಮಾಡುವ ಬದಲಾಗಿ ನಾವು ಸಹ ಆ ಭುವನೇಶ್ವರಿ ದೇವಿ ಹಾಗೇ ಏಕೆ ಮಕ್ಕಳಿಗೆ ಚೆಂದದ ಪಾಠವನ್ನು ಹೇಳ್ತಾ, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬಾರದು?

ನಾವು ಮೇಲು ಎಂದು ತೋರಿಸಿಕೊಳ್ಳಲು, ಇನ್ನೊಬ್ಬರನ್ನು ಕೀಳು ಎನ್ನುವುದಾಗಲಿ, ನಾವು ಶ್ರೇಷ್ಠರಾಗಲು ಇನ್ನೊಬ್ಬರನ್ನು ಕನಿಷ್ಠರನ್ನಾಗಿಸುವ ಪ್ರಯತ್ನದಲ್ಲಿ ಅರ್ಥವಿಲ್ಲ. ಇಲ್ಲಿ ಪ್ರತಿಯೊಬ್ಬರೂ ಅದ್ವೀತಿಯರು ನಾವು ಅವರವರಲ್ಲಿರುವ ಸದ್ಗುಣಗಳತ್ತ ಮಾತ್ರ ಬೆಳಕು ಚೆಲ್ಲಬೇಕು. ಹಾಗಾಗಿ, ಇಲ್ಲಿ ಬದಲಾಗಬೇಕಿರುವುದು ನಮ್ಮ ದೃಷ್ಟಿಕೋನವೇ ಹೊರತು ಬೇರೆ ಏನಲ್ಲ. 

ಕೃಪೆ: ಸುರೇಂದ್ರ ಪೈ ಭಟ್ಕಳ (ವಿಜಯಕರ್ನಾಟಕ)