ಪ್ರಕೃತಿಯಲ್ಲಿ ಹಲವು ಮರಗಳು ಬಣ್ಣಬಣ್ಣದ ಹೂಗಳಿಂದ ಕಂಗೊಳಿಸುವ ಕಾಲದಲ್ಲಿ ಒಂದು ಮರ ದೂರದಿಂದಲೇ ನಮ್ಮ ಗಮನ ಸೆಳೆಯುತ್ತದೆ - ಬಿಡಿಸಿದ ಕೊಡೆಯ ಆಕಾರದಲ್ಲಿ ಮರದ ಎಲೆಗಳೇ ಕಾಣಿಸದಂತೆ ಕೊಂಬೆಕೊಂಬೆಗಳಲ್ಲಿ ಅರಳಿರುವ  ಕೆಂಬಣ್ಣದ ರಾಶಿರಾಶಿ ಹೂಗಳಿಂದಾಗಿ. ಅದುವೇ ಗುಲ್ ಮೊಹರ್ ಮರ. “ಕಾಡಿನ ಬೆಂಕಿ” ಇದಕ್ಕೆ ಅನ್ವರ್ಥಕ ಹೆಸರು. 

ಈ ಚಿತ್ತಾಕರ್ಷಕ ಮರದ ಮೂಲಸ್ಥಾನ ಮಡಗಾಸ್ಕರ್ ಎನ್ನಲಾಗಿದೆ. ಈಗಂತೂ ಇದು ಜಗತ್ತಿನ ಹಲವೆಡೆಗಳಲ್ಲಿ ಹಬ್ಬಿದೆ. ಇದರ ನೆರಳೂ ಗಾಢವಾಗಿರುವ ಕಾರಣ ಬೇಸಗೆಯಲ್ಲಿ ಬಿಸಿಲು ಜೋರಾದಾಗ ದಾರಿಹೋಕರು ಇದರ ನೆರಳಿನಲ್ಲಿ ನಿಲ್ಲುತ್ತಾರೆ. 

ಬೆಚ್ಚಗಿನ ವಾತಾವರಣ ಇರುವ ಉಷ್ಣವಲಯ ಮತ್ತು ಉಪ-ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುವ ಮರ ಇದು. 40 ಅಡಿ ಎತ್ತರದ ವರೆಗೆ ಬೆಳೆಯುತ್ತದೆ ಗುಲ್ ಮೊಹರ್ ಮರ. ಜಗತ್ತಿನ ಅತಿ ಸುಂದರ ಮರಗಳಲ್ಲಿ ಒಂದೆಂದು ಹೆಸರುವಾಸಿ. 

ಐದು ದಳಗಳ ಇದರ ಹೂಗಳು ನೋಡಲು ಬಹು ಚಂದ. ಕೆಳಗಿನ ನಾಲ್ಕು ದಳಗಳು ಕೆಂಪಾಗಿದ್ದರೆ, (Scarlet) ಅವುಗಳ ಮೇಲಿನ ಐದನೆಯ ದಳ ಬಿಳಿ ಬಣ್ಣದಲ್ಲಿದ್ದು, ಹಳದಿ ಛಾಯೆ ಮತ್ತು ಕೆಂಪು ಚಳಕುಗಳಿಂದ ಮನಸೆಳೆಯುತ್ತದೆ. 

ಸುಮಾರು ಒಂದಡಿ ಉದ್ದದ ಇದರ ಬೀಜಕೋಡಿನಲ್ಲಿ ಒಂದರ ಪಕ್ಕ ಇನ್ನೊಂದರಂತೆ ಜೋಡಿಸಿಟ್ಟ ಹತ್ತಾರು ಬೀಜಗಳು. ಈ ಬೀಜಗಳು ನೋಡಲು ಬಹು ಅಂದ. ತಿಳಿಗಂದು ಬಣ್ಣದ ಬೀಜಗಳಲ್ಲಿ ಎರಡು ತೆಳು ಬಿಳಿ ಬಣ್ಣದ ಗೆರೆಗಳು. ಈ ಬೀಜಗಳನ್ನು ಬಳಸಿ ಸುಂದರ ಕಲಾಕೃತಿಗಳನ್ನು ರಚಿಸಬಹುದು. 

ಗುಲ್ ಮೊಹರ್ ಮರದ ಕಾಂಡದಲ್ಲಿ ಸಣ್ಣಸಣ್ಣ ಹಕ್ಕಿಗಳು ತೂತು ಕೊರೆದು ಗೂಡು ಮಾಡುತ್ತವೆ: ಆ ಗೂಡುಗಳಲ್ಲಿ ಮೈನಾ, ಬಾರ್ಬೆಟ್, ಬುಲ್-ಬುಲ್ ಮತ್ತು ಪಾರಾಕಿಟ್ ಹಕ್ಕಿಗಳ ಹಿಂಡುಹಿಂಡುಗಳ ವಾಸ. 

ಫೋಟೋಗಳು: ಹೂ ಅರಳಿಸಿರುವ ಗುಲ್ ಮೊಹರ್ ಮರ, ಹೂ ಮತ್ತು ಬೀಜಗಳು 

ಕೃಪೆ: ಆರ್. ಎಸ್. ಸ್ಪ್ರಿಂಗ್ ಪತ್ರಿಕೆ