ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಹಿರಿಯರು, ವಯೋವೃದ್ಧರ ವಿಷಯ ಪ್ರಸ್ತಾವಿಸಿದ್ದಾರೆ. ಸರಕಾರಿ ನೌಕರರು ತಮ್ಮ ಹೆತ್ತವರನ್ನು ಸರಿಯಾಗಿ ನೋಡಿ ಕೊಳ್ಳದೆ ಇದ್ದಲ್ಲಿ ಅಂಥ ನೌಕರರ ವೇತನದಿಂದ ಶೇ. ೧೦ರಿಂದ ೧೫ ಭಾಗವನ್ನು ಕಡಿತಗೊಳಿಸಿ ಅವರ ಹೆತ್ತವರ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಮಾಡುವುದಾಗಿ ರೇವಂತ್ ರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಕಾನೂನನ್ನು ರೂಪಿಸಿ ಜಾರಿಗೊಳಿಸುವುದಾಗಿ ಅವರು ಎಚ್ಚರಿಸಿದ್ದಾರೆ. ರೆಡ್ಡಿಯವರ ಕಳಕಳಿ ಯೋಗ್ಯವಾದುದೇ ಆಗಿದ್ದು, ದೇಶದ ಜ್ವಲಂತ ಸಮಸ್ಯೆಯನ್ನು ಪ್ರತಿಫಲಿಸುತ್ತಿದೆ.

ತೆಲಂಗಾಣದ ಮುಖ್ಯಮಂತ್ರಿ ಸರಕಾರಿ ಉದ್ಯೋಗಗಳಿಗೆ ಹೊಸದಾಗಿ ನೇಮಕಾತಿ ಆದವರಿಗೆ ನೇಮಕಾತಿ ಪತ್ರ ವಿತರಿಸಿದ ಸಂದರ್ಭದಲ್ಲಿ ಈ ವಿಷಯವನ್ನೆತ್ತಿದ್ದಾರೆ. 'ನಿಮ್ಮ ಹೆತ್ತವರು ಮತ್ತು ಹುಟ್ಟೂರನ್ನು ಎಂದಿಗೂ ಮರೆಯ ಬಾರದು. ಇಂದು ನೀವು ಯಾವುದೇ ಪದವಿ ಅಥವಾ ಅಧಿಕಾರದಲ್ಲಿದ್ದರೂ ಅದಕ್ಕೆ ನಿಮ್ಮ ಹೆತ್ತವರು ಕಾರಣ ಎಂಬುದನ್ನು ಮರೆಯದಿರಿ. ನಾಳೆ ಓರ್ವ ಸರಕಾರಿ ಅಧಿಕಾರಿಯಾಗಿರುವ ನಿಮ್ಮೆದುರು ಯಾರೇ ಬಡ ವ್ಯಕ್ತಿ ಬಂದು ನಿಂತರೂ ನಿಮ್ಮ ಹೆತ್ತವರೆಂದೇ ತಿಳಿಯಿರಿ' ಎಂದು ರೇವಂತ್ ರೆಡ್ಡಿಯವರು ನೂತನವಾಗಿ ನೇಮಕಾತಿ ಆದವರಿಗೆ ಹಿತವಚನ ಹೇಳಿದ್ದಾರೆ. ಹಿರಿಯರು, ವಯೋವೃದ್ಧರೆಡೆಗಿನ ಅವರ ಈ ಕಾಳಜಿ ಮೆಚ್ಚುವಂಥದ್ದೇ ಆಗಿದೆ.

ಜನರು ವೃದ್ಧಾಪ್ಯದಲ್ಲಿ ಅವಗಣನೆಗೆ ತುತ್ತಾಗುವುದು ದೇಶದ ಬಲುದೊಡ್ಡ ಸಮಸ್ಯೆಗಳಲ್ಲಿ ಒಂದು. ಒಂದು ಅಂದಾಜಿನ ಪ್ರಕಾರ ದೇಶದ ಒಟ್ಟು ಜನಸಂಖ್ಯೆ ಯ ಶೇ. ೧೦ರಷ್ಟು ಹಿರಿಯ ನಾಗರಿಕರಿದ್ದಾರೆ, ೨೦೩೦ರ ವೇಳೆಗೆ ಇದು ಶೇ. ೧೨ಕ್ಕೆ ಹೆಚ್ಚುವ ನಿರೀಕ್ಷೆಯಿದೆ. ಇಡೀ ದೇಶದಲ್ಲಿ ಅವಲಂಬಿತ ಹಿರಿಯರ ಪ್ರಮಾಣ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚಿದೆ (ಶೇ. ೧೯.೪). ನಮ್ಮ ರಾಜ್ಯದಲ್ಲಿ ೨೦೨೧ರಲ್ಲಿ ಒಟ್ಟು ಜನಸಂಖ್ಯೆಯ ಶೇ. ೧೧.೫ರಷ್ಟು ಹಿರಿಯರಿದ್ದರೆ ೨೦೩೬ರ ವೇಳೆಗೆ ಇದು ಶೇ. ೧೭.೨ ತಲುಪುವ ಅಂದಾಜಿದೆ. ವಯೋವೃದ್ಧರ ಸಂಖ್ಯೆ ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿರುವುದು ಗಮನಿಸಬೇಕಾದ ಇನ್ನೊಂದು ಅಂಶ.

ರೇವಂತ್ ರೆಡ್ಡಿಯವರ ಕಳಕಳಿಯನ್ನು ಈ ಹಿನ್ನೆಲೆಯಲ್ಲಿ ಮೆಚ್ಚಬೇಕು. ಕೈಕಾಲು ಗಟ್ಟಿಯಿರುವ ತನಕ ದುಡಿದು ಬದುಕುವ ಜನರು ಮುಪ್ಪಿನಲ್ಲಿ ಮಕ್ಕಳ ಮೇಲೆ ಅವಲಂಬಿತರಾಗುತ್ತಾರೆ. ಆದರೆ ವಯೋವೃದ್ಧ ಹೆತ್ತವರನ್ನು ನಿಕೃಷ್ಟವಾಗಿ ಕಾಣುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ. ಇದರ ಜತೆಗೆ ಮಕ್ಕಳು ಉದ್ಯೋಗ ಮತ್ತಿತರ ಕಾರಣಗಳಿಂದಾಗಿ ದೂರದ ಊರು, ಪರದೇಶ ಸೇರಿದ್ದರಿಂದ ಕಂಗೆಡುವ ವಯೋವೃದ್ಧರ ಸಂಖ್ಯೆಯೂ ಸಾಕಷ್ಟು ದೊಡ್ಡದಿದೆ. 'ಹಳ್ಳಿಗಳು ವೃದ್ಧಾಶ್ರಮಗಳಂತೆ ಕಾಣಿಸುತ್ತಿವೆ' ಎಂಬ ಮಾತು ಈ ದೃಷ್ಟಿಯಿಂದ ನಿಜವಾಗಿದೆ. ಮುಪ್ಪಿನಲ್ಲಿ ಮನುಷ್ಯನಿಗೆ ಆಶ್ರಯ, ಆರೈಕೆ, ಆರ್ಥಿಕ ಸ್ವಾವಲಂಬನೆ, ಆರೋಗ್ಯ ಸಹಾಯ ಅಗತ್ಯವಾಗಿರುತ್ತವೆ. ಎಲ್ಲರೂ ಒಂದಲ್ಲೊಂದು ದಿನ ಮುಪ್ಪಾಗಲೇ ಬೇಕು ಎನ್ನುವುದು ಸಾರ್ವಕಾಲಿಕ ಸತ್ಯ. ಪ್ರಸ್ತುತ ರೇವಂತ್ ರೆಡ್ಡಿಯವರು ತರಲು ಬಯಸಿರುವ ಕಾನೂನು ಈ ದೃಷ್ಟಿಯಿಂದ ಸ್ವಾಗತಾರ್ಹ ಮತ್ತು ಎಲ್ಲ ರಾಜ್ಯಗಳು ಅನುಸರಿಸಲು ಯೋಗ್ಯವಾದುದು. ಇವೆಲ್ಲಕ್ಕಿಂತ ಮುಖ್ಯವಾಗಿ ಈ ವಿಷಯದಲ್ಲಿ ಕಾನೂನಿಗಿಂತ ನೈತಿಕತೆಯೇ ಮುಖ್ಯ. ಮಕ್ಕಳಿಗೆ ನೈತಿಕತೆಯ ಶಿಕ್ಷಣ ಮತ್ತು ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಿದಲ್ಲಿ ಇಂತಹ ಸಮಸ್ಯೆ ಎದುರಾಗುವುದನ್ನು ಹಲವಾರು ಸಂದರ್ಭಗಳಲ್ಲಿ ಪಾಲಕರೇ ತಪ್ಪಿಸಬಹುದಾಗಿದೆ. ಇಂತಹ ಕಾನೂನಿನ ಜತೆಗೆ ವಯೋವೃದ್ಧರ ಕಲ್ಯಾಣ ದೃಷ್ಟಿಯಿಂದ ಅಭಿಯಾನಗಳು, ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಕೂಡ ಸರಕಾರಗಳು ಕೈಗೆತ್ತಿಕೊಳ್ಳಬೇಕು. ವಯೋವೃದ್ಧರ ಸಂಖ್ಯೆ ಹೆಚ್ಚುತ್ತ ಹೋಗುವ ಸಂದರ್ಭದಲ್ಲಿ ಎಲ್ಲ ಸರಕಾರಗಳು ಇದನ್ನೊಂದು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೧-೧೦-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ