ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ತಮಿಳುನಾಡಿನ ರೈತರು ಪ್ರಧಾನಿ ಮೋದಿಯವರ ಪ್ರತಿಕೃತಿ ಮಾಡಿ ಅರೆ ಬೆತ್ತಲೆಯಾಗಿ ಪಾದಗಳಿಗೆ ನಮಸ್ಕರಿಸಿ ಸಾಲ ಮನ್ನಾ ಮಾಡಿ  ಎಂದು ಒತ್ತಾಯಿಸುವ ವರದಿಯನ್ನು ಎಲ್ಲರೂ ನೋಡಿರಬಹುದು. ಅದೇ ರೀತಿಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ತನ್ನ ಪಾಲು ಕೊಟ್ಟರೆ ನಾವು ಸಾಲ ಮನ್ನ ಮಾಡಲು ರೆಡಿ ಎನ್ನುತ್ತಾರೆ. ಅದೇ ರೀತಿಯಲ್ಲಿ  ರೈತರ ಸಾಲ ಮನ್ನಾ ಯಾಕೆ ಮಾಡಬೇಕು ಎಂತಲೂ ಕೇಳುತ್ತಾರೆ. ಮತ್ತೊಂದು ಪಕ್ಷದ ಮುಖಂಡರು ನಾನು ಮುಖ್ಯಮಂತ್ರಿ ಆದ ತಕ್ಷಣ ರೈತರ ಸಾಲ ಮನ್ನಾ ಮಾಡುತ್ತೇನೆ ಎನ್ನುತ್ತಾರೆ. 

ಅಧಿಕಾರ ಪಡೆಯುವ ಮುನ್ನ ಕೊಡುವ ಆಶ್ವಾಸನೆಯನ್ನು ಅಧಿಕಾರ ಪಡೆದ ಮೇಲೆ ಮಾಡಲಿಕ್ಕಾಗುವುದಿಲ್ಲ. ಜವಾಬ್ಧಾರಿಯುತ ಸ್ಥಾನದಲ್ಲಿ ಇಲ್ಲದಿದ್ದಾಗ, ಏನೇನೂ ಬೇಡಿಕೆ ಇಟ್ಟು ಅದರ ಈಡೇರಿಕೆಗೆ ಒತ್ತಾಯ ಮಾಡುವುದು ಸುಲಭ. ಆದರೆ ಅವರೇ ಜವಾಬ್ದಾರಿಯ ಸ್ಥಾನಕ್ಕೆ  ಬಂದಾಗ ಅದನ್ನು ಮಾಡುವುದಕ್ಕೆ ಅವರಿಗೂ ಕಷ್ಟವಾಗುತ್ತದೆ. ಇದು ಎಲ್ಲಾ ಕಡೆ ಇರುವಂತದ್ದೇ.

ದೇಶದಾದ್ಯಂತ ರೈತರು ಸಾಲದಲ್ಲಿ ಮುಳುಗಿದ್ದಾರೆ. ಬೆಳೆ ಬೆಳೆಸುವುದಕ್ಕಾಗಿ, ಜೀವನ ಹೊರೆಯುವುದಕ್ಕಾಗಿ ಸಾಲ ಮಾಡಿ, ಸಾಲಕ್ಕೆ ತಕ್ಕ ಉತ್ಪಾದನೆಯಾಗದೆ ಸಾಲ ತೀರಿಸಲು ಹೆಚ್ಚುವರಿ ಸಾಲ  ಪಡೆಯುತ್ತಾ ರೈತಾಪಿ ವರ್ಗದ ಸಾಲ ಅವನನ್ನೇ ನುಂಗುವ ಮಟ್ಟಕ್ಕೆ  ಬಂದಿದೆ. ಒಂದು ವೇಳೆ  ಬ್ಯಾಂಕುಗಳು, ಸಹಕಾರಿ ಸಂಘಗಳು ಹಳೇ ಸಾಲ ತೀರುವಳಿಗೆ ಹೆಚ್ಚುವರಿಯಾಗಿ ಮತ್ತೆ ಹೊಸ ಸಾಲ ಕೊಡುವುದೇ ಇಲ್ಲ ಎಂದಾಗಿದ್ದರೆ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಯೆ ಎಣೆಯೇ ಇರುತ್ತಿರಲಿಲ್ಲ. ನಮ್ಮ ದೇಶದಲ್ಲಿ ಸಾಲ ಪಡೆಯದ ಕೃಷಿಕರ ಶೇಕಡಾವಾರು ತೆಗೆದರೆ ಅದು ೫ % ವೂ ಇರಲಿಕ್ಕಿಲ್ಲ. ಪ್ರತೀಯೊಬ್ಬರೂ ಸಾಲಗಾರರು. ದೇಶದ ಬಹುತೇಕ ಕೃಷಿ  ಭೂಮಿ ಬ್ಯಾಂಕುಗಳಿಗೆ ಅಡಮಾನವಾಗಿವೆ. 

ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಸಾಲ ಮನ್ನಾ ಮಾಡಿ ಎಂದು ಕೇಳುವುದರಲ್ಲಿ ನ್ಯಾಯ ಇಲ್ಲ ಎನ್ನುವುದಿಲ್ಲ. ಆದರೆ ಇವರ ಬೇಡಿಕೆಗೆ ಅದು ಕೇಂದ್ರ ಇರಲಿ, ರಾಜ್ಯ ಸರಕಾರ ಇರಲಿ  ಮಣಿಯುವುದೇ ಇಲ್ಲ. ಈ ಹಿಂದೆ ಎರಡು ಬಾರಿ ನಮ್ಮ ದೇಶದಲ್ಲಿ ಸಾಲ ಮನ್ನಾ ಆಗಿತ್ತು. ಹಿಂದೊಮ್ಮೆ ಕೇಂದ್ರ ಸರಕಾರ ಭಾರಿ ಪ್ರಮಾಣದ ಸಾಲ ಮನ್ನಾ ಮಾಡಿತ್ತು. ಇವೆಲ್ಲವೂ ಚುನಾವಣಾ ಪೂರ್ವದಲ್ಲಿ ಅನುಕಂಪದಲ್ಲಿ ಮತ ಪಡೆಯುವುದಕ್ಕಾಗಿ ಮಾಡಿದವುಗಳೇ ಹೊರತು ರೈತರ ಮೇಲಿನ ನೈಜ ಕಳಕಳಿಯಿಂದಲ್ಲ. ಇನ್ನೂ ಯಾವುದೇ ಸರಕಾರ ರೈತರೆಂಬ ಅಸಂಘಟಿತ ವರ್ಗದ ಸಾಲ ಮನ್ನಾ ಮಾಡುವುದೇ ಆದರೂ ಅದನ್ನೇ ಮಾಡುತ್ತದೆ. 

ಈ ಹಿಂದಿನ ಸಾಲ ಮನ್ನಾದಲ್ಲಿ ಎಷ್ಟು ರೈತರು ಸಾಲ ಮುಕ್ತರಾಗಿದ್ದಾರೆ ? ಬರೇ ಲೆಕ್ಕಾಚಾರ ಅಷ್ಟೇ ಸಿಗಬಹುದು. ಬ್ಯಾಂಕುಗಳಲ್ಲಿ ಅನುತ್ಪಾದಕ ಸಾಲ (ಏನ್‌ಪಿಎ) ಎಂದು ಪರಿಗಣಿಸಿದ್ದವುಗಳನ್ನು ಮಾತ್ರವೇ ಮನ್ನಾ ಮಾಡಲಾಗಿದೆ. ಯಾರು ಸಾಲವನ್ನು ಪಾವತಿಸದೇ ಉಳಿಸಿದ್ದಾರೆಯೋ ಅವರಿಗೆ, ರಾಜಕೀಯ ಪ್ರಭಾವ ಉಳ್ಳವರಿಗೆ ಇದರ ಪ್ರಯೋಜನ ದೊರಕಿದೆ. ನಮ್ಮ ದೇಶದಲ್ಲಿ ಪ್ರಾಮಾಣಿಕ ಪ್ರಜೆಗಳೆಂದು ಹೇಳಬಹುದಾದ ರೈತಾಪಿ ವರ್ಗ ಸಾಲವನ್ನು ತೀರಿಸದೆ ಇರುವವರೇ ಅಲ್ಲ. ಅಪವಾದವಾಗಿ ಇರುವ ಕೆಲವೇ ಕೆಲವು ಮಂದಿ  ಮಾತ್ರ ಸಾಲ ಪಡೆದು ಕಟ್ಟದೇ ಬಾಕಿ ಮಾಡುತ್ತಾರೆ. ಅವರಿಗೆ ಮಾತ್ರ ಇಂತಹ ಸಾಲ ಮನ್ನಾ ಯೋಜನೆಯ ಪ್ರತಿಫಲ ದೊರೆಯುತ್ತದೆ. ಪ್ರಾಮಾಣಿಕರಿಗೆ  ದೊರೆಯುವುದಿಲ್ಲ.

ಇವೆಲ್ಲಾ ಸಂಗತಿಗಳನ್ನು ನಾವು ಕಂಡವರು ಆದ ಕಾರಣ ಇನ್ನೂ ಇನ್ನೂ ಸಾಲ ಮನ್ನಾ ಮಾಡಿ ಎಂದು ಕೇಳುವುದಲ್ಲ. ನ್ಯಾಯ ಸಮ್ಮತವಾಗಿ ರೈತರಿಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಅಥವಾ ಬಡ್ಡಿ ರಹಿತವಾಗಿ ಸಾಲ ದೊರೆಯಬೇಕು. ಈಗ ಬ್ಯಾಂಕುಗಳ ಮೂಲಕ ರೈತರಿಗೆ ದೊರೆಯುತ್ತಿರುವ ಸಾಲಕ್ಕೆ ೧೦ - ೧೨ % ದಷ್ಟು ಬಡ್ಡಿ ಇದೆ. ಇದಲ್ಲದೆ ಪ್ರತೀಯೊಬ್ಬ ಸಾಲಗಾರನೂ ಅವನ ಸಾಲದ ಮೊತ್ತದ ಮೇಲೆ ೩.೭೫ % ಫಸಲ್ ಬೀಮಾ ಯೋಜನೆಯ ಕಂತನ್ನು ಪಾವತಿಸಬೇಕು. ಇದಲ್ಲದೇ ಬ್ಯಾಂಕುಗಳು ರೈತರಿಗೆ ನೀಡುವ ಸಾಲಕ್ಕೆ ಲಕ್ಷಕ್ಕೆ ಕನಿಷ್ಟ ೧೦೦೦ದಷ್ಟು ಸಾಲ ಮಂಜೂರಾತಿ ವೆಚ್ಚ ಎಂದು ವಸೂಲಿ ಮಾಡುತ್ತವೆ. ಇದೆಲ್ಲಾ ಸೇರಿದರೆ ರೈತರಿಗೆ ಕೊಡಮಾಡುವ ಸಾಲದ ಮೇಲಿನ ಬಡ್ಡಿ ೧೬% ದಷ್ಟಾಗುತ್ತದೆ. ಬಡ್ಡಿಯ ಮೇಲೆ ಬಡ್ಡಿ ಸೇರಿದರೆ  ಒಬ್ಬ ೧ ಲಕ್ಷ ಸಾಲ ಮಾಡಿದವನ ಸಾಲ ೨ ಲಕ್ಷವಾಗಲು ಕೇವಲ ೫ ವರ್ಷ ಸಾಕು. ಇದು ನಿಜವಾಗಿ ರೈತರಿಗೆ ಹೊರೆ. 

ಇದನ್ನು ರೈತರು ವಿರೋದಿಸಬೇಕು. ಬಡ್ಡಿ ರಹಿತವಾಗಿ ಅಥವಾ ಅತೀ ಕಡಿಮೆ ಬಡ್ಡಿಯ ಸಾಲ ಕೇಳಲು ರೈತರು ಅರ್ಹರು ಏಕೆಂದರೆ ಅವರು ಸಮಾಜಕ್ಕೆ ಕೊಡುವ ಕೊಡುಗೆ ಅಪಾರ. ಕೃಷಿ ಕ್ಷೇತ್ರದಲ್ಲಿ ಬರೇ ಕೃಷಿಕನಷ್ಟೇ ಬದುಕುವುದಲ್ಲ. ಸಮಾಜದಲ್ಲಿ ಕೆಲಸಗಾರ ವರ್ಗವನ್ನು ಸಲಹಿದ ಕ್ಷೇತ್ರ. ಸರಕಾರಿ ಇಲಾಖೆಗಳನ್ನು ಸೇವಾ ಕ್ಷೇತ್ರ ಎಂದು ಕರೆಯುತ್ತಾರೆ. ಆದರೆ ಅದಕ್ಕಿಂತಲೂ ಮೇಲ್ಮಟ್ಟದ ಸೇವಾ ಕ್ಷೇತ್ರ ಎಂದರೆ ಅದು ಕೃಷಿ ಕ್ಷೇತ್ರ. ಇದನ್ನು ನಂಬಿ ಸಮಾಜವೇ ಬದುಕುತ್ತದೆ. ಆದ ಕಾರಣ  ಕೃಷಿ ಕ್ಷೇತ್ರಕ್ಕೆ ಬಡ್ಡಿ ರಹಿತವಾಗಿ ಸಾಲವನ್ನು ಅನಾಯಾಸವಾಗಿ ನೀಡಬಹುದು. ಇದನ್ನು ರೈತರು, ರೈತ ಸಂಘಟನೆಗಳು ಒತ್ತಾಯ  ಮಾಡಬೇಕು.  

ಬರೇ ಬಡ್ಡಿ ಮನ್ನಾ ಮಾಡುವುದಲ್ಲ ಕೃಷಿಕರು ಬಳಕೆ ಮಾಡುವ ಕೃಷಿ ಒಳ ಸುರಿಗಳ ಮೇಲೆ ಕರ, ಮೌಲ್ಯವರ್ಧಿತ ಕರ ಎಂಬುದಾಗಿ ಹೇರುವ ಸುಮಾರು ೨೦ -೨೫ % ಹೆಚ್ಚು ಕರವನ್ನು  ವಿನಾಯಿತಿಗೊಳಿಸಬೇಕು. ಒಂದು ಪೈಪು ಕೊಂಡರೆ ಅದಕ್ಕೆ ೫- ೧೮ % ಜಿ ಎಸ್ ಟಿ, ರಸಗೊಬ್ಬರಕ್ಕೆ, ಯಂತ್ರ ಸಾಮಾಗ್ರಿಗಳಿಗೆ, ಹೀಗೆ ಪ್ರತೀಯೊಂದಕ್ಕೂ  ಭಾರೀ ಪ್ರಮಾಣದ ಕರ ವಿಧಿಸಿ ರೈತನನ್ನು ದಿವಾಳಿ ಹಂತಕ್ಕೆ ಸರಕಾರ ತರುತ್ತಿದೆ. (ಕೆಲವೊಂದು ಕೃಷಿ ಸಾಮಾಗ್ರಿಗಳ ಜಿ ಎಸ್ ಟಿ ದರವನ್ನು ಕೇಂದ್ರ ಸರಕಾರ ಇತ್ತೀಚೆಗೆ ಕಡಿಮೆ ಮಾಡಿದೆ) ಇದನ್ನು ವಿಧಿಸದಂತೆ ರೈತರು ಒಗ್ಗಟ್ಟಾಗಿ ಹೋರಾಡಬೇಕು. 

ರೈತಾಪಿವರ್ಗವನ್ನು  ಶೋಷಿಸುವಂತಹ ಹಲವಾರು ಸಂಗತಿಗಳು ಇವೆ. ಇದನ್ನು ಮಾಡದಂತೆ  ಸಂಬಂಧಿಸಿದವರಲ್ಲಿ ಒತ್ತಾಯ ಮಾಡೊಣ. ಸಾಲವಾಗಿ ಕೊಟ್ಟದ್ದು, ಸಾಲ. ಅದು ದಾನವಲ್ಲ. ಅದಕ್ಕೆ ಬಡ್ಡಿ ವಿಧಿಸದಂತೆ ಕೊಳೋಣ. ರೈತರನ್ನು ಪ್ರಾಮಾಣಿಕ ಪ್ರಜೆಗಳೆಂದು ಪರಿಗಣಿಸಿ ಅವರಿಗೆ ಅದಕ್ಕೆ ತಕ್ಕ ಗೌರವ ದೊರೆಯುವಂತೆ ನಾವು ಒತ್ತಾಯಿಸೋಣ.

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ