ಮಕ್ಕಳಲ್ಲಿ ಮೊಬೈಲ್ ಚಟವನ್ನು ಬಿಡಿಸಿ ಪುಸ್ತಕ ವಾಚನ ಹವ್ಯಾಸವನ್ನು ಬೆಳೆಸುವುದಕ್ಕಾಗಿ, 'ಮೊಬೈಲ್ ಬಿಡಿ, ಪುಸ್ತಕ ಹಿಡಿ' ಎಂಬ ಅಭಿಯಾನವನ್ನು ನವೆಂಬರ್ ೧೪ರಿಂದ ಆರಂಭಿಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಇಂಥ ಅಭಿಯಾನವೊಂದನ್ನು ಆರಂಭಿಸಲಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ತಿಂಗಳುಗಳ ಹಿಂದೆ ಘೋಷಿಸಿದ್ದರು. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರವೇ ಈ ಅಭಿಯಾನ ಆರಂಭಿಸಲು ನಿರ್ಧರಿಸಿರುವುದು ಶ್ಲಾಘನಾರ್ಹ.

ಸ್ಮಾರ್ಟ್ ಫೋನ್ ಬಳಕೆಗೆ ಬಂದ ಬಳಿಕ ಮೊಬೈಲ್ ಎಂಬ ಮಾಯಾಜಾಲದೊಳಗೆ ಜಗತ್ತು ಬಂಧಿಯಾಗಿದೆ. ಪ್ರತಿಯೊಂದು ಆವಿಷ್ಕಾರಗಳಿಗೂ ಒಳಿತು ಮತ್ತು ಕೆಡುಕು ಎಂಬ ಎರಡೂ ಮುಖಗಳು ಇರುವ ಹಾಗೆ ಸ್ಟಾರ್ಟ್ ಫೋನಿಗೂ ಇದೆ. ಇಂದು ಬಹುತೇಕ ಎಲ್ಲಮನೆಗಳಲ್ಲಿ ಕನಿಷ್ಠ ಒಂದಾದರೂ ಸ್ಮಾರ್ಟ್ ಫೋನ್ ಇದ್ದೇ ಇದೆ. ಹಾಗಾಗಿ ಎಳೆಯ ವಯಸ್ಸಿನಿಂದಲೇ ಮಕ್ಕಳು ಸ್ಟಾರ್ಟ್ ಫೋನ್ ಬಳಕೆಗೆ ಪರಿಚಿತರಾಗುತ್ತಿರುವುದು ಸಹಜ. ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ (ಅಸರ್) -೨೦೨೪ರ ಪ್ರಕಾರ, ರಾಜ್ಯದಲ್ಲಿ ಶೇ. ೯೮ ಮಕ್ಕಳಿಗೆ ಮನೆಯಲ್ಲಿಮೊಬೈಲ್ ಫೋನ್ ಲಭ್ಯತೆ ಇದೆ. ಇವರಲ್ಲಿ ಶೇ. ೬೩ ಮಂದಿಗೆ ಶಾಲೆಗೆ ಸ್ಟಾರ್ಟ್ ಫೋನ್ ತರುವುದಕ್ಕೆ ಅನುಮತಿ ಇದೆ. ರಾಜ್ಯದ ೧೪ರಿಂದ ೧೬ ವಯೋಮಾನದ ಮಕ್ಕಳಲ್ಲಿ ಶೇ.೭೦ ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯದಲ್ಲಿ ೧೪ರಿಂದ ೧೬ರ ಈ ವಯೋಗುಂಪಿನ ಸ್ಟಾರ್ಟ್ ಫೋನ್ ಬಳಕೆಯ ಬಗೆಗಿನ ಈ ಸ್ಥಿತಿಗತಿ ಇದೇ ವಯೋಮಾನದ ಮಕ್ಕಳ ಜಾಗತಿಕ ಸ್ಥಿತಿಗತಿಗೆ ತಾಳೆಯಾಗುತ್ತದೆ ಎಂಬುದಾಗಿ ಅಸರ್ ವರದಿ ಹೇಳಿದೆ.

ಮಕ್ಕಳಿಗೆ ಸ್ಟಾರ್ಟ್ ಫೋನ್ ಬಳಕೆ ಲಭ್ಯವಿದೆ, ಅವರು ಡಿಜಿಟಲ್ ಸಾಕ್ಷರರಾಗುತ್ತಿದ್ದಾರೆ ಎಂಬುದು ಒಳ್ಳೆಯದೇನೋ ನಿಜ. ಆದರೆ ಮೊಬೈಲ್ ಬಳಕೆ ಒಂದು ಗೀಳಾದರೆ ದೊಡ್ಡ ಸಮಸ್ಯೆ. ಈ ಹಿಂದೆ ಕೋವಿಡ್ ಕಾಲದಲ್ಲಿ ಪ್ರತ್ಯಕ್ಷ ತರಗತಿಗಳು ನಿಂತುಹೋದಾಗ ಆನ್‌ ಲೈನ್ ತರಗತಿಗಳು ನಡೆಯುತ್ತಿದ್ದವು. ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಲು ಆ ಕಾಲದಲ್ಲಿ ಸೃಷ್ಟಿಯಾದ ಅನಿವಾರ್ಯವೂ ಕಾರಣ. ಅತಿಯಾದ ಮೊಬೈಲ್ ಬಳಕೆಯಿಂದ ಬೆಳೆಯುತ್ತಿರುವ ಮಕ್ಕಳು ಹಲವು ಅನಾರೋಗ್ಯಗಳಿಗೆ ತುತ್ತಾಗಬಹುದಾಗಿದೆ. ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು, ಏಕಾಗ್ರತೆಯ ಕೊರತೆ ಒಂದು ಕಡೆಯಾದರೆ ಮೊಬೈಲ್ ಬಳಕೆಯಿಂದ ಸೃಷ್ಟಿಯಾಗುವ ಭ್ರಮಾಲೋಕ, ಗೀಳು ಸ್ಥಿತಿ ಇನ್ನೊಂದು ಕಡೆ. ಇದರ ಜತೆಗೆ ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗುವ ಮೂಲಕ ಅಪರಾಧ, ಲೈಂಗಿಕತೆ, ಅಶ್ಲೀಲತೆಗಳತ್ತ ಸೆಳೆಯಲ್ಪಡುವ ಸಾಧ್ಯತೆಗಳಿವೆ. ಅಪರಾಧ ಚಟುವಟಿಕೆಗೆ ಸುಲಭದ ತುತ್ತು ಕೂಡ ಆಗಬಲ್ಲರು. ಹೀಗೆ ಸ್ಮಾರ್ಟ್ ಫೋನ್ ಬಳಕೆ ಎಂಬುದು ಎರಡು ಅಲಗಿನ ಕತ್ತಿ ಇದ್ದಂತೆ. ಅದು ಮಿತ ಪ್ರಮಾಣದಲ್ಲಿ ಶೈಕ್ಷಣಿಕ ಮತ್ತು ಜ್ಞಾನವೃದ್ಧಿಯ ಉದ್ದೇಶಗಳಿಗೆ ಬಳಕೆ ಯಾದರೆ ಮಾತ್ರ ಕ್ಷೇಮ.

ಈ ಹಿನ್ನೆಲೆಯಲ್ಲಿ ಮಕ್ಕಳ ಮೊಬೈಲ್ ಗೀಳನ್ನು ಬಿಡಿಸಿ, ಪುಸ್ತಕ ವಾಚನದಂತಹ ಉತ್ತಮ ಹವ್ಯಾಸದತ್ತ ಸೆಳೆಯುವ ಉದ್ದೇಶದಿಂದ ಸರಕಾರ, ಶಿಕ್ಷಣ ಇಲಾಖೆ ಅಭಿಯಾನ ಆರಂಭಿಸುತ್ತಿರುವುದು ಉತ್ತಮ ನಡೆ. ಶಾಲೆ ಕಾಲೇಜುಗಳಲ್ಲಿ ಈ ಅಭಿಯಾನ ಕ್ರಿಯಾಶೀಲವಾಗಿ ನಡೆಯಬೇಕು. ಇದಕ್ಕೆ ಸಾಥಿಯಾಗಿ ಮನೆಯಲ್ಲಿ ಹೆತ್ತವರಿಂದಲೂ ಪೂರಕ ವಾತಾವರಣ ಸೃಷ್ಟಿಯಾಗಬೇಕು. ಎಷ್ಟೋ ಮನೆಗಳಲ್ಲಿ ಹೆತ್ತವರೇ ಮಕ್ಕಳನ್ನು ಸುಮ್ಮನಿರಿಸುವುದಕ್ಕಾಗಿ ಕೈಗೆ ಮೊಬೈಲ್ ತುರುಕಿ ಬಿಡುವುದುಂಟು. ಇದು ನಿಲ್ಲಬೇಕು. ಪಾಲಕರು ಮೊಬೈಲ್ ಬಳಕೆಯ ವಿಷಯದಲ್ಲಿ ತಾವೇ ಮಕ್ಕಳಿಗೆ ಉತ್ತಮವಾದ ಒಂದು ಮಾದರಿಯನ್ನು ಹಾಕಿಕೊಟ್ಟರೆ ಮಕ್ಕಳು ಅದನ್ನು ಪಾಲಿಸುತ್ತಾರೆ. ಹೀಗಾಗಿ ಮೊಬೈಲ್ ಮಿತ ಬಳಕೆಯ ವಿಷಯ ಮತ್ತೊಮ್ಮೆ 'ಮನೆಯೇ ಮೊದಲ ಪಾಠಶಾಲೆ' ಆಗಲಿ. ಆಗ ಈ ಅಭಿಯಾನ ಯಶಸ್ವಿಯಾಗಿ ಉದ್ದೇಶ ಈಡೇರಬಲ್ಲದು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೨-೧೦-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ