ರಷ್ಯಾದಿಂದ ಭಾರತದ ತೈಲ ಖರೀದಿ ವಿಚಾರದಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ಬಂಧಿತ ಹೇಳಿಕೆ ನೀಡುತ್ತಲೇ ಇದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆಯಿಂದ ಹಿಡಿದು, ಇಲ್ಲಿಯವರೆಗೂ ಅವರ ಹೇಳಿಕೆಗಳು ಸಾಗುತ್ತಲೇ ಇವೆ.
ವಿದೇಶಾಂಗ ವ್ಯವಹಾರದಲ್ಲಿ ಪ್ರೌಢಿಮೆ ಮುಖ್ಯ. ಆದರೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಪ್ರೌಢಿಮೆ ಕಾಣೆಯಾಗಿದೆ. ಈಗಲೂ ಟ್ರಂಪ್ ಅವರು ಅದೇ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿ ನಿಲ್ಲಿಸುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ ಎಂದು ಹೋದಲ್ಲಿ, ಬಂದಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ವಿದೇಶಾಂಗ ಇಲಾಖೆಯೇ ಭಾರತ ಮತ್ತು ಅಮೇರಿಕದ ಮುಖ್ಯಸ್ಥರು ಇತ್ತೀಚಿನ ದಿನಗಳಲ್ಲಿ ಮಾತುಕತೆಯನ್ನೇ ನಡೆಸಿಲ್ಲ. ಹೀಗಾಗಿ, ಅಂಥ ಭರವಸೆ ನೀಡಲು ಸಾಧ್ಯವೇ ಇಲ್ಲ ಎಂದಿದ್ದರೂ, ಟ್ರಂಪ್ ಇದನ್ನು ಕಿವಿಗೇ ಹಾಕಿಕೊಳ್ಳುತ್ತಿಲ್ಲ.
ಇದರ ಮಧ್ಯೆಯೇ, ರಷ್ಯಾದ ಎರಡು ತೈಲ ಕಂಪೆನಿಗಳ ಮೇಲೆ ಅಮೇರಿಕ ದಿಗ್ಭಂಧನ ಹೇರಿದೆ. ಇದರಿಂದಾಗಿ ಜಾಗತಿಕವಾಗಿ ತೈಲ ದರ ಹೆಚ್ಚಾಗಬಹುದು ಎಂಬ ಆತಂಕಗಳಿವೆ. ಆದರೂ, ಭಾರತದ ಮೇಲೆ ಈ ದಿಗ್ಭಂಧನ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಿಶ್ಲೇಷಣೆ ನಡೆದಿದೆ. ಇದುವರೆಗೆ ಭಾರತ, ದಿಗ್ಭಂಧನ ವಿಧಿಸಿರುವ ಎರಡ ಕಂಪೆನಿಗಳಿಂದ ನೇರವಾಗಿ ತೈಲ ಖರೀದಿ ಮಾಡಿಲ್ಲ. ಬದಲಾಗಿ ಮಧ್ಯವರ್ತಿ ಕಂಪೆನಿಗಳ ಮೂಲಕವೇ ಖದೀದಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಮುಖ್ಯವಾಗಿದೆ.
ಈ ಬೆಳವಣಿಗೆಯ ನಡುವೆ, ಭಾರತ ಅಸಿಯಾನ್ ಶೃಂಗ ಸಭೆಗೆ ವರ್ಚ್ಯುವಲ್ ಆಗಿ ಹಾಜರಾಗಲು ನಿರ್ಧರಿಸಿದೆ. ಮಲೇಷ್ಯಾದ ಪ್ರಧಾನಿಯೇ ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಪ್ರಧಾನಿ ಅವರ ನಿರ್ಧಾರವನ್ನು ಪ್ರತಿಪಕ್ಷ ಕಾಂಗ್ರೆಸ್ ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ. ಈ ಶೃಂಗಕ್ಕೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬರುತ್ತಿದ್ದು, ಇವರ ಭೇಟಿಯನ್ನು ತಪ್ಪಿಸಿಕೊಳ್ಳಲು ನರೇಂದ್ರ ಮೋದಿ ಅವರು ಕೌಲಾಲಂಪುರಕ್ಕೆ ಹೋಗುತ್ತಿಲ್ಲ ಎಂದು ವ್ಯಂಗ್ಯವಾಡಿದೆ. ಆದರೆ, ಮೋದಿ ಅವರು ಹೋಗದಿರುವುದೇ ಲೇಸು ಎಂಬುದು ಅನುಭವಿ ವಿದೇಶಾಂಗ ತಜ್ಞರ ಅಭಿಮತ. ರಷ್ಯಾ ಮತ್ತು ಉಕ್ರೇನ್ ಯುದ್ಧದ ವಿಚಾರದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವ ಟ್ರಂಪ್, ಕೌಲಾಲಂಪುರದಲ್ಲಿ ಯಾರನ್ನು ಮುಜುಗರಕ್ಕೀಡು ಮಾಡುತ್ತಾರೆ ಎಂಬ ಕುತೂಹಲವಿದೆ. ಈ ಹಿಂದೆಯೂ ಭಾರತದ ವಿಚಾರದಲ್ಲಿ ಮುಜುಗರ ಸೃಷ್ಟಿ ಮಾಡುವ ಯತ್ನವನ್ನು ಟ್ರಂಪ್ ನಡೆಸಿದ್ದರು. ಪಾಕ್ ಸೇನಾ ಮುಖ್ಯಸ್ಥ ಅಮೇರಿಕಾದಲ್ಲಿರುವಾಗಲೇ, ಮೋದಿ ಅವರನ್ನೂ ಟ್ರಂಪ್ ಆಹ್ವಾನಿಸಿದ್ದರು. ಆದರೆ, ಮೋದಿ ಜಾಣ ನಡೆ ಇಟ್ಟು ಟ್ರಂಪ್ ಆಹ್ವಾನ ತಿರಸ್ಕರಿಸಿದ್ದರು. ಈಗಲೂ ಕೌಲಾಲಂಪುರಕ್ಕೆ ಹೋಗದಿರುವುದರಲ್ಲಿ ಉತ್ತಮ ನಡೆ ಇದೆ ಎಂಬುದು ತಜ್ಞರ ಅಭಿಪ್ರಾಯ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೪-೧೦-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!