ಮೈಸೂರು ಜಿಲ್ಲೆಯ ಫಾರ್ಮ್ ಹೌಸ್ವೊಂದರಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚಿ, ಆ ಭ್ರೂಣ ಒಂದು ವೇಳೆ ಹೆಣ್ಣು ಎಂದು ದೃಢಪಟ್ಟರೆ ಅದನ್ನು ಕೊಲ್ಲುವ ದಂಧೆ ಬೆಳಕಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ಕಳೆದ ವರ್ಷ ಮಂಡ್ಯ ಜಿಲ್ಲೆಯ ಆಲೆಮನೆಯಲ್ಲಿ ಇಂತಹದ್ದೇ ದಂಧೆ ನಡೆಸುತ್ತಿದ್ದವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ನಂತರ ಆಂಧ್ರಪ್ರದೇಶಕ್ಕೆ ಇಲ್ಲಿಂದ ಗರ್ಭಿಣಿಯರನ್ನು ಕರೆದೊಯ್ದು ಅಲ್ಲಿ ಭ್ರೂಣ ಹತ್ಯೆ ಮಾಡುತ್ತಿದ್ದುದನ್ನು ಆರೋಗ್ಯ ಅಧಿಕಾರಿಗಳು ಬಯಲಿಗೆ ಎಳೆದಿದ್ದರು. ಇದೀಗ ಮೈಸೂರಿನ ಫಾರ್ಮ್ ಹೌಸ್ ಸರದಿ. ರಾಜ್ಯದ ಆರೋಗ್ಯ ಇಲಾಖೆಯಲ್ಲಿನ ಕೆಲವು ಜಿಲ್ಲೆಗಳ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವುದರಿಂದ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಪತ್ತೆಯಾಗದೆ ನಡೆಯುತ್ತಿರುವ ಪ್ರಕರಣಗಳು ಎಷ್ಟಿರಬಹುದು ಎಂದು ಊಹಿಸಿಕೊಂಡರೆ ಕಷ್ಟವಾಗುತ್ತದೆ.
ಭ್ರೂಣ ಹತ್ಯೆ ಮಾಡಿದರೆ ಕಠಿಣಾತಿಕಠಿಣ ಶಿಕ್ಷೆಯಾಗುತ್ತದೆ ಎಂಬುದು ಜನರಿಗೆ ಮನವರಿಕೆಯಾಗುವ ರೀತಿ ಅವರನ್ನು ದಂಡಿಸಬೇಕು. ಇಲ್ಲದೆ ಹೋದರೆ ಈಗಾಗಲೇ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಯೇ ಮಹಿಳೆಯರು ಅಂತರಿಕ್ಷಕ್ಕೆ ಮಹಿಳೆ. ಹೋಗುವಷ್ಟು ಮುಂದುವರಿದಿದ್ದಾರೆ. ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ಆದರೆ ಹೆಣ್ಣು ಮಗು ಎಂದರೆ ಹಿಂಜರಿಯುವ ಕೆಟ್ಟ ಮನಸ್ಥಿತಿ ಇನ್ನೂ ಜೀವಂತವಾಗಿರುವುದೇ ಭ್ರೂಣ ಹತ್ಯೆ ಎಗ್ಗಿಲ್ಲದೆ ಸಾಗುತ್ತಿರುವುದಕ್ಕೆ ಕಾರಣ ಎಂಬುದು ನಿರ್ವಿವಾದ. ಭ್ರೂಣ ಎನ್ನುವುದು ಒಂದು ಜೀವ. ಸೃಷ್ಟಿಯಾದ ಮೇಲೆ ಅದಕ್ಕೂ ಬದುಕುವ ಹಕ್ಕಿದೆ. ಒಂದು ಮಗು ಕಣ್ಣುಬಿಡುವ ಮೊದಲೇ ಅದನ್ನು ಹತ್ಯೆ ಮಾಡುವುದು ಕೊಲೆಗಿಂತ ಕಡಿಮೆ ಏನಲ್ಲ. ಈ ಸಂಗತಿ ಪೋಷಕರಿಗೆ ಅರ್ಥವಾಗುವವರೆಗೆ ಹಾಗೂ ಗಂಡು ಮಗು ಬೇಕೇಬೇಕು ಎಂಬ ಹಪಾಹಪಿ ನಿಲ್ಲುವವರೆಗೂ ಭ್ರೂಣ ಹತ್ಯೆ ಬಹುಶಃ ನಿಲ್ಲುವಂತೆ ಕಾಣುತ್ತಿಲ್ಲ. ಭ್ರೂಣ ಹತ್ಯೆಯನ್ನು ಸರ್ಕಾರಗಳು ಅಪರಾಧ ಎಂದು ಘೋಷಿಸಿದ್ದರೂ ಜನರು ಅದಕ್ಕೆ ಬೆಲೆ ನೀಡುತ್ತಿಲ್ಲ ಎಂಬುದನ್ನು ಪತ್ತೆಯಾಗುತ್ತಿರುವ ಪ್ರಕರಣಗಳೇ ಹೇಳುತ್ತಿವೆ. ಹೆಣ್ಣು ಬೇಡ, ಗಂಡು ಮಗುವೇ ಬೇಕು ಎಂಬುದು ಮಾನಸಿಕ ರೋಗ ಎನ್ನದೆ ವಿಧಿ ಇಲ್ಲ. ದೇಶ ಸಾಕಷ್ಟು ಮುಂದುವರಿದಿದೆ. ವೈಜ್ಞಾನಿಕವಾಗಿ ಹೊಸ ಎತ್ತರಕ್ಕೆ ಏರಿದೆ. ಆದರೂ ಭ್ರೂಣ ಹತ್ಯೆ ಎಂಬ ಪಿಡುಗು ಮಾತ್ರ ನಿಲ್ಲುತ್ತಿಲ್ಲ. ಅಧಿಕಾರಿಗಳು ಈಗ ನಡೆಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸಕೂಡದು. ಭ್ರೂಣಹತ್ಯೆ ಮಾಡಿದರೆ ಕಠಿಣಾತಿಕಠಿಣ ಶಿಕ್ಷೆಯಾಗುತ್ತದೆ ಎಂಬುದು ಜನರಿಗೆ ಮನವರಿಕೆಯಾಗುವ ರೀತಿ ಅವರನ್ನು ದಂಡಿಸಬೇಕು. ಇಲ್ಲದೆ ಹೋದರೆ ಈಗಾಗಲೇ ಕುಸಿಯುತ್ತಿರುವ ಲಿಂಗಾನುಪಾತ ಮತ್ತಷ್ಟು ಇಳಿಕೆಯಾಗಿ, ಮುಂದೊಂದು ದಿನ ಲಿಂಗ ಅಸಮಾನತೆ ಹೆಚ್ಚುವ ಅಪಾಯವಿದೆ. ಈಗಲೇ ಹುಡುಗರಿಗೆ ಕನ್ಯೆಯರು ಸಿಗುತ್ತಿಲ್ಲ. ದಶಕಗಳ ಹಿಂದೆ ಮಾಡಿದ ತಪ್ಪುಗಳು ಈಗ ಫಲ ನೀಡುತ್ತಿವೆ. ಮುಂದೆಯೂ ಆ ರೀತಿ ಆಗುವುದು ಬೇಡ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೫-೧೦-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!