ಮೊದಲು ಹಬ್ಬಗಳು ಪ್ರಕೃತಿಯ ಆರಾಧನೆಯಿಂದ ಹುಟ್ಟಿದವುˌಭೂಮಿ, ನೀರು, ಗಾಳಿ, ಬೆಂಕಿ, ಆಕಾಶ. ಇವುಗಳೊಂದಿಗೆ ಮಾನವನ ಬಾಂಧವ್ಯವನ್ನು ಆಚರಿಸುವ ಸಂದರ್ಭಗಳು. ಆದರೆ ಕಾಲದೊಂದಿಗೆ ಹಬ್ಬಗಳು ಶ್ರೀಮಂತರ ಆಡಂಭರˌ ಅಬ್ಬರದ ಪ್ರದರ್ಶನವಾದವು. ಮಣ್ಣಿನ ಹಬ್ಬಗಳು ಶ್ರೀಮಂತವಾದವು, ಆದರೆ ನಿಜವಾದ ಪ್ರಕೃತಿ ಆರಾಧಕ ರೈತರುˌ ಪ್ರಕೃತಿ ನಂಬಿ ಬದುಕುವವರು ಬಡವರಾದರು. ಪ್ರಕೃತಿ ಶೋಷಣೆ ಮಾಡಿದವರು ಶ್ರೀಮಂತರಾದರು. ಹಬ್ಬಗಳು ಕೇವಲ ಆಚರಣೆ ಅಲ್ಲ ಹಬ್ಬ ಬಂದರೆ ಆರ್ಥಿಕ ಮಾರುಕಟ್ಟೆ ಜೀವಂತವಾಗುತ್ತದೆ, ಬೀದಿಗಳಲ್ಲಿ ಬಣ್ಣಗಳು, ಶಬ್ದಗಳು, ನಗುವುಗಳು ಹರಡುತ್ತವೆ.
ನಿನ್ನೆ ನಾನು ದೀಪಾವಳಿ ಹಬ್ಬದಂದು ಮಾರುಕಟ್ಟೆಯೊಳಗೆ ಸುಮ್ನೆ ನಡೆದು ಹೋಗುತ್ತಿದ್ದೆ. ದೊಡ್ಡ ಶ್ರೀಮಂತರು ತಮ್ಮ ದೇವರಿಗೆ ಹೂವುˌ ಹಣ್ಣು ˌ ಕಾಯಿ ಕೊಂಡುಕೊಳ್ಳಲು ಸಣ್ಣ ರೈತನೊಂದಿಗೆ, ಬೆಳೆಗಾರನೊಂದಿಗೆ ಒಂದು ರೂಪಾಯಿ, ಎರಡು ರೂಪಾಯಿಗೆ ವಾದಿಸುತ್ತಿದ್ದರು. ಇವರೇಲ್ಲಾ ನಿಜವಾದ ದೇವರು ( ರೈತ) ಅವರೊಂದಿಗೆˌ ಇಲ್ಲದ ವಿಧಿ ವಿಧಾನ ಪೂಜೆ ಅನುಸರಿಸಲು ನಿಜವಾದ "ದೇವರು"ಗಳೊಂದಿಗೆ Bargain ಮಾಡು ನೋಡಿ ಬೇಸಲವೆನ್ನಿಸಿತು. ಆದರೂ ಆ ಗದ್ದಲದ ಮಧ್ಯೆ ಮಣ್ಣಿನ ವಾಸನೆಯಂತೊಂದು ಧ್ವನಿ ಕೇಳಿಸಿತು.
“ಏಯ್ಯಾ! ಬೇಕಾದ್ರೂ ತಗೋ, ಬೇಡಾದ್ರೆ ಮುಂದೆ ಹೋಗು!” ನಿಜವಾಗಿಯೂ ವೃದ್ಧ ರೈತನ ಧ್ವನಿಯನ್ನು ನಾನು ಗಮನಿಸಿದೆ. ಅದು ವೃದ್ಧ ರೈತನೊಬ್ಬನ ಧ್ವನಿ. ಬಿಸಿಲಿನಲ್ಲಿ ಬೆವರು ಸುರಿಸಿ ಬೆಳೆದವನ ಧ್ವನಿ. ಅಲ್ಲಿ ಕೋಪವಿಲ್ಲˌ ಅದು ಸ್ವಾಭಿಮಾನ, ಅದು ಗೌರವ, ಅದು ನಿಷ್ಠೆ. ಅವನ ಮಾತಿನ ಅರ್ಥ ಸ್ಪಷ್ಟ: “My product, my price!” ಅದು ಕೇವಲ ವ್ಯಾಪಾರದ ಮಾತಲ್ಲ. ಅದು ಬದುಕಿನ ಘೋಷಣೆ! ಆ ಕ್ಷಣದಲ್ಲಿ ನನಗೆ ಅನಿಸಿತುˌ
ಇದನ್ನೇ ದೀಪಾವಳಿ ಎಂದರೆ ಎಷ್ಟು ಚೆಂದ! ಯಾಕೆಂದರೆ ಬೆಳಕು ಕೇವಲ ದೀಪದಲ್ಲಲ್ಲ, ಅದು ರೈತನ ಕಣ್ಣಿನ ಕಿರಣದಲ್ಲಿ ಇದೆ, ಕುಂಬಾರನ ಕೈಯಲ್ಲಿ ಅರಳುವ ಮಣ್ಣಿನ ಹಣತೆಯ ಕಲೆಯಲ್ಲಿ ಇದೆ, ಆಕಾಶದ ಬುಟ್ಟಿಯ ಕಲಾವಿದ ನಗುವಿನಲ್ಲಿ ಇದೆ. ಹಬ್ಬಗಳು ಬಂದಾಗ ಹಣ ಹರಿಯುತ್ತದೆ, ಆದರೆ ನಿಜವಾದ ಸಂಪತ್ತು ಎಂದರೆ ಒಬ್ಬನ ಹೃದಯದಿಂದ ಮತ್ತೊಬ್ಬನ ಹೃದಯಕ್ಕೆ ಹರಿಯುವ ಪ್ರೀತಿ.
ದೀಪಾವಳಿ ಅಂದರೆ, ರೈತನ ಮನೆಗೂ ಬೆಳಕು ತಲುಪುವ ಹಬ್ಬ, ಬಡವನ ಕೈಗೂ ಆದಾಯದ ಬಿಸಿ ತರುವ ಹಬ್ಬ. ಪ್ರತಿ ಮುಖದಲ್ಲಿ ನಗು ಅರಳುವ ಹಬ್ಬ ಆ ರೈತನ “My product, my price” ಎಂಬ ಧ್ವನಿ, ಪ್ರತಿ ದಿನ ಪ್ರತಿಧ್ವನಿಸಲಿ. ಗುಟ್ಕಾ ˌ ಸಿಗರೇಟ್ˌ ಸರಾಯಿˌ ಮಸಾಲೆ ದೋಸೆˌ ಪಿಜ್ಜಾ ˌಬರ್ಗರ್ .. ಮಾರುವವನು ತನ್ನ ಬೆಲೆ ತಾನೇ ನಿಗದಿಪಡಿಸುತ್ತಾನೆ. ಮತ್ತು ಅವುಗಳೊಂದಿಗೆ ಯಾವ ಚೌಕಸಿ ಮಾಡದೆ ಕೊಳ್ಳುತ್ತೇವೆ. ವಿಕೃತಿಯನ್ನು ನಾವು ಎಷ್ಟೂ ಹಣ ನೀಡಿ ಪಡೆಯಲು ಸಿದ್ದರು. ಆದರೆ ನಿಜವಾದ ದೇವರು "ರೈತರು" ಅವರೊಂದಿಗೆ ಚಿಲ್ಲರೆ ಉಳಿಸಲು ಚೌಕಸಿ. ರೈತ ತನ್ನ ತೋಟದಲ್ಲಿ ಬೆಳೆದ ಹಣ್ಣು ಕಾಯಿ ಹೂ ತನ್ನ ಶ್ರಮದ ಬೆಲೆ ತಾನೇ ಕೇಳುವ ಕಾಲ ಬರಲಿ.
ಶ್ರೀಮಂತರ ದೇವರಿಗೆ ಪೂಜಿಸಲು ಹೂಗಳು ಬೇಕು, ಆದರೆ ಆ ಹೂಗಳು ಬಡವನ ತೋಟದಿಂದ ಬರುತ್ತವೆ. ಆ ಹೂಗಳು ಇನ್ನೊಬ್ಬನ ಮನೆ ಆವರಣದಿಂದ ಕದ್ದದ್ದಾಗಿರುವುದಿಲ್ಲ. ಅವನ ಬೆವರಿನಿಂದ ಬೆಳೆದದ್ದಾಗಿರುತ್ತದೆ. ನಿಜವಾದ ಶ್ರೀಮಂತಿಕೆ ಕೊಡುವುದರಲ್ಲಿ ಇದೆ. ನಿಸರ್ಗ ನಿಯಮವೆಂದರೆˌ ಕೊಟ್ಟಷ್ಟೂ ಹೆಚ್ಚು ಮರಳಿ ಬರುತ್ತದೆ ಇನ್ನಷ್ಟು ಶ್ರೀಮಂತಿಕೆ ಹೆಚ್ಚುತ್ತದೆ. ನಿಸರ್ಗ ನಿಮ್ಮನ್ನು ಗಮನಿಸುತ್ತದೆ ಕೊಡುವಾಗ ನಗು ಮೊಗ್ಗದಿಂದ ˌ ಆನಂದದಿಂದ ˌ ಧನ್ಯತೆಯಿಂದ ನೀಡಿ ಅದರ ಹತ್ತುಪಟ್ಟು ವಾಪಸು ಬರುತ್ತದೆ. ದೇವರ ಹುಂಡಿಗೆ ಒಂದು ರೂಪಾಯಿ ಹಾಕಿ ಕೋಟಿ ರೂಪಾಯಿ ಪುಣ್ಯ ಬೇಡುವವರುˌದೇವರು ಮೂರ್ಖನೆಂದುಕೊಂಡಿದ್ದಾರೆ. ಹೂ ಬೆಳೆದವನಿಂದ ಒಂದು ರೂಪಾಯಿ / ಎಂಟಾನೆಗೆ ಹೊಡೆದಾಡುವ ಹೃದಯಕ್ಕೆ ದೇವರ ಅನುಗ್ರಹ ಸಿಗುವುದಿಲ್ಲ.
ನಿಜವಾದ ದೀಪಾವಳಿ ಅಂದರೆ, ನಿನ್ನ ಮನದ ಕತ್ತಲನ್ನು ಕರಗಿಸಿ, ಮತ್ತೊಬ್ಬನ ಬದುಕಿನಲ್ಲಿ ಬೆಳಕು ಮೂಡಿಸುವುದು. ಪಟಾಕಿ ಹೊಡೆದು ಗಾಳಿಯನ್ನು ಕಲುಷಿತಗೊಳಿಸುವ ಹಬ್ಬವಲ್ಲ ಇದು. ಇದು ಮಣ್ಣಿನ ಮಡಿಲಿಗೆ ಮರಳಿ ಹೋಗುವ, ಮಣ್ಣಿನ ಮಗನ ನಗುವಿಗೆ ಕಿರಣ ನೀಡುವ ಹಬ್ಬ. ದೀಪಾವಳಿಯ ನಿಜವಾದ ಬೆಳಕು ದೀಪದಲ್ಲಲ್ಲ, ಮಣ್ಣಿನೊಳಗಿನ ಮಾನವನ ಘನತೆಯಲ್ಲಿದೆ.
-ಜಯದೇವ ಪೂಜಾರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!