ಒಂದೂರಿನಲ್ಲಿ ಶ್ರೀದೇವಿ ಹಾಗೂ ಜಯಶ್ರೀ ಎಂಬ ಗೆಳತಿಯರು ಒಂದೇ ದಿನದಲ್ಲಿ ಹುಟ್ಟಿದವರು. ಕಾಕತಾಳಿಯಂತೆ ಒಂದೇ ದಿನದಲ್ಲಿ ಮದುವೆಯಾದವರು. ಹಾಗಾಗಿ ಅವಳ ಮದುವೆಗೆ ಇವಳು ಹೋಗಲಿಲ್ಲ. ಇವಳ ಮದುವೆಗೆ ಅವಳು ಹೋಗಲಿಲ್ಲ.
ಜಯಶ್ರೀಗೆ ಒಳ್ಳೆ ನೌಕರಿ ಇರುವ ವರ ಸಿಕ್ಕರೆ ಶ್ರೀದೇವಿಯು ರೈತನನ್ನು ವರಿಸಿದ್ದಳು. ಇಬ್ಬರಿಗೂ ಒಂದು ಗಂಡು ಒಂದು ಹೆಣ್ಣು ಮಗುವಿಗೆ ಜನ್ಮವಿತ್ತರು. ಮದುವೆಯಾಗಿ ಇಪ್ಪತ್ತು ವರುಷಗಳು ಕಳೆದಿರಬಹುದು ಜಯಶ್ರೀ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಬಾಧೆಯಿಂದ ಬಳಲುತ್ತಿರುವಳು. ಈ ವಿಷಯವನ್ನು ತಿಳಿದ ಶ್ರೀದೇವಿ ಗೆಳತಿ ಜಯಶ್ರೀಯ ಆರೋಗ್ಯವನ್ನು ವಿಚಾರಿಸಲು ಬರುತ್ತಾಳೆ.
ನಿನಗೆ ಒಳ್ಳೆ ಗಂಡನಿದ್ದಾನೆ ಮಕ್ಕಳಿಬ್ಬರೂ ಇಂಜನಿಯರ್ ಪದವಿಯನ್ನು ಇನ್ನೇರಡು ಮೂರು ವರುಷಗಳಲ್ಲಿ ಮುಗಿಸಲಿದ್ದಾರೆ. ಅವರ ಮದುವೆಯನ್ನು ಮಾಡಿ ಮಕ್ಕಳ ಸುಖಸಂಸಾರವನ್ನು ನೀನು ಕಾಣಬೇಕು ದೇವರು ನಿನಗೆ ಧೀರ್ಘಾಆಯುಷ್ಯವನ್ನು ನೀಡಲಿ ಎಂದು ಶ್ರೀದೇವಿ ಹರಕೆ ಹೊತ್ತಂತೆ ಹೇಳಿದಾಗ ಜಯಶ್ರೀ ನನ್ನ ಬಗ್ಗೆ ಚಿಂತೆ ಮಾಡಬೇಡ ದೇಶಕ್ಕೆ ಅನ್ನ ನೀಡುವ ರೈತನನ್ನು ನೀನು ಕೈಹಿಡಿದಿರುವಿ ಅವರನ್ನು ಸಂರಕ್ಷಿಸುವ ಹೆಚ್ಚಿನ ಭಾರ ನಿನಗೆ ಇದೆ. ನೀನು ನನಗಿಂತಲೂ ಹೆಚ್ಚು ಕಾಲ ಬಾಳಬೇಕೆಂದು ಜಯಶ್ರೀ ಹರಿಸಿದಳು. ಆಗ ನನಗೆ ಏನಾಗಿದೆ ಗುಂಡಕಲ್ಲ ಇದ್ದಂಗ ಅದೀನಿ ನನ್ನ ನೋಡಿದ್ರ ಸಾವು ಅಷ್ಟು ದೂರ ಸರಿತೈತಿ ಎಂದು ಶ್ರೀದೇವಿ ಅಂದಾಗ ಜಯಶ್ರೀ ಹಾಗೂ ಅವರ ಕುಟುಂಬದವರೆಲ್ಲರೂ ನಕ್ಕಿದ್ದೆ ನಕ್ಕಿದ್ದು.
ಎಲ್ಲರೂ ಊಟ ಮಾಡಿದರು ನಂತರ ಶ್ರೀದೇವಿ ತನ್ನೂರಿನ್ನಂತಹ ಪ್ರಯಾಣ ಬೆಳೆಸುವಾಗಲೂ ನೀನು ಆರಾಮ ಆಗಬೇಕು ಬೇಕಿದ್ದರ ನನ್ನ ಆಯುಷ್ಯವನ್ನು ಧಾರೆ ಎರೆಯುತ್ತೇನೆ ಅಂದಾಗ ಜಯಶ್ರೀ ಕಣ್ಣಂಚಿನ ನೀರು ಅವಳಿಗೆ ತಿಳಿಯದಂತೆ ಧರೆಗೆ ಬಿತ್ತು. ಅಳಬೇಡ ಏನೇ ಬಂದರೂ ನಾ ಇರುವೆ ಎಂದು ಶ್ರೀದೇವಿ ಹೇಳಿ ಅಲ್ಲಿಂದ ಕಾಲಕಿತ್ತಳು.
ನಾಲ್ಕಾರು ತಿಂಗಳ ನಂತರ ಶ್ರೀದೇವಿಯ ಯಜಮಾನರಿಂದ ಜಯಶ್ರೀಗೆ ಫೋನ್ ಕರೆ ಬರುತ್ತೆ ಸ್ವೀಕರಿಸಿ ಮಾತನಾಡುತ್ತಾ ಯಾವಾಗಲೂ ಗೆಳತಿ ಶ್ರೀದೇವಿಯೆ ಫೋನ್ ಮಾಡುವವಳು ಇವತ್ತು ಇವರು ಮಾಡಿರುವ ವಿಶೇಷ ಏನೆಂದು ತಿಳಿದು ಕೊಳ್ಳುವ ಮುನ್ನ ಗುಂಡಕಲ್ಲಿನಂತಿರುವ ಗೆಳತಿ ಶ್ರೀದೇವಿ ಹ್ಯಾಂಗ್ ಅದಳ ಎಂದಾಗ ಅವಳು...ಅವಳು...ಎಂದು ಅನ್ನುತ್ತಿರುವಾಗ ಏನಾಯಿತು ಎಂದು ಜಯಶ್ರೀ ಗಾಬರಿಗೊಂಡಳು. ಇದ್ದಕ್ಕಿದ್ದಂತೆ ಮಲವಿಸರ್ಜನೆಗೆ ಹೋದವಳು ಬರಲೇ ಇಲ್ಲ. ಹಾರ್ಟ್ಫೇಲಾಯ್ತು ಎಂದು ಉತ್ತರ ಬಂದಾಗ ಕೊನೆಗೂ ನಿನ್ನ ಹಠವನ್ನೇ ಸಾಧಿಸಿಬಿಟ್ಟಿಯಾ...ಎಂದು ಜಯಶ್ರೀ ಅಳಲಾರಂಭಿಸಿದಳು.
ಶ್ರೀದೇವಿ ತೀರಿಕೊಂಡು ಈಗ ಇಪ್ಪತ್ತು ವರುಷಗಳು ಗತಿಸಿವೆ. ಜಯಶ್ರೀ ಈಗಲೂ ಬದುಕಿರುವದಕ್ಕೆ ಗೆಳತಿ ಶ್ರೀದೇವಿಯು ತನ್ನ ಆಯುಷ್ಯವನ್ನು ನಿನಗೆ ಧಾರೆ ಎರೆದಿರುವುದು ನಿಜವಲ್ಲವೇ ಎಂದು ಜಯಶ್ರೀಯ ಗಂಡ ಆಗಾಗ ನೆನಪಿಸುತ್ತಲೆ ಇರುತ್ತಾನೆ. ಹಾಗೆಯೆ ಗೆಳತಿಯ ತ್ಯಾಗವನ್ನು ಜಯಶ್ರೀ ಸದಾ ಸ್ಮರಿಸುತ್ತಲೆ ಕಾಲ ನೂಕುತ್ತಿದ್ದಾಳೆ!
-ವೀರಪ್ಪ ನಿಂಗೋಜಿ, ಯಲಬುರ್ಗಾ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!