ಈ ವಾರ ಮಕ್ಕಳಿಗಾಗಿ ಎರಡು ಸೂಪರ್ ಥ್ರಿಲ್ಲರ್ ಕಾದಂಬರಿ ಪುಸ್ತಕಗಳ ಮಾಹಿತಿ ನೀಡಲಾಗಿದೆ.
ಹ್ಯಾಚೆಟ್ (Hatchet)
ಗ್ಯಾರಿ ಪಾಲ್ಸನ್ರ ಹ್ಯಾಚೆಟ್ ಒಂದು ರೋಮಾಂಚಕ ಕಥೆಯಾಗಿದ್ದು, ಹದಿಮೂರು ವರ್ಷದ ಬ್ರಿಯಾನ್ ರಾಬೆಸನ್ನ ರೋಚಕ ಪಯಣವು ಓದುಗರನ್ನು ಅದ್ಭುತ ಓದಿನ ಕಡಲಿನಲ್ಲಿ ಮುಳುಗಿಸುತ್ತದೆ. ತಾನು ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತದ ನಂತರ ಕೆನಡಾದ ಕಾಡಿನಲ್ಲಿ ಸಿಲುಕಿಕೊಂಡ ಬ್ರಿಯಾನ್ ಏಕಾಂಗಿಯಾಗಿ ಬದುಕಬೇಕಾದ ಪರಿಸ್ಥಿತಿ ಬರುತ್ತದೆ. ಆಗ ಅವನಿಗಿದ್ದ ಏಕೈಕ ಆಸರೆ ಎಂದರೆ ಒಂದು ಕೊಡಲಿ ಮಾತ್ರ. ಆತ ತನ್ನ ದೃಢನಿಶ್ಚಯದಿಂದ ಬೇಟೆಯಾಡಲು, ಪುಟ್ಟ ಮನೆಯನ್ನು ನಿರ್ಮಾಣ ಮಾಡಲು ಮತ್ತು ಕಾಡುಪ್ರಾಣಿಗಳಿಂದ ಹಿಡಿದು ಕೆಟ್ಟ ಹವಾಮಾನದವರೆಗಿನ ಪ್ರಕೃತಿಯ ಸವಾಲುಗಳನ್ನು ಎದುರಿಸಲು ಕಲಿಯುತ್ತಾನೆ. ೫೪ ದಿನಗಳ ಕಷ್ಟದಾಯಕ ಅನುಭವ ಮತ್ತು ಶೋಧನೆಯ ಬಳಿಕ ಆತ ವಿಮಾನದ ಧ್ವಂಸಾವಶೇಷದಲ್ಲಿ ಬದುಕುಳಿಯುವ ಒಂದು ಕಿಟ್ ಅನ್ನು ಕಂಡುಕೊಳ್ಳುತ್ತಾನೆ, ಅದು ಅವನಿಗೆ ರಕ್ಷಣೆಗೆ ಕರೆ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ಕಾಡಿನಲ್ಲಿ ಆತನ ಅನುಭವವು ಅವನನ್ನು ಶಾಶ್ವತವಾಗಿ ಬದಲಾಯಿಸುತ್ತದೆ, ಅವನು ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗಿಬಿಡುತ್ತದೆ.
೧೯೮೭ರಲ್ಲಿ ಮೊದಲು ಪ್ರಕಟವಾದ ಹ್ಯಾಚೆಟ್, ಬದುಕುಳಿಯುವಿಕೆ, ಸ್ಥಿರತೆ ಮತ್ತು ಸ್ವಾವಲಂಬನೆಯ ಮೂಲ ಚಿತ್ರಣದೊಂದಿಗೆ ಹಲವಾರು ತಲೆಮಾರುಗಳ ಓದುಗರನ್ನು ಆಕರ್ಷಿಸುತ್ತಾ ಬಂದಿದೆ. ಕಾದಂಬರಿಯ ತೀವ್ರವಾದ, ವಾಸ್ತವಿಕ ಕಥೆಯ ನೆಲೆಗಟ್ಟು ೧೯೯೮ ರಲ್ಲಿ ಖ್ಯಾತ ‘ನ್ಯೂಬೆರಿ’ ಗೌರವವನ್ನು ಗಳಿಸಿತು, ಇದು ಆಧುನಿಕ ಕ್ಲಾಸಿಕ್ ಕಾದಂಬರಿಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿತು. ಇದರ ಯಶಸ್ಸು ನಾಲ್ಕು ಸರಣಿಗಳಿಗೆ ಮೂಲ ಕಾರಣವಾಯಿತು—ದಿ ರಿವರ್, ಬ್ರಿಯಾನ್ಸ್ ವಿಂಟರ್, ಬ್ರಿಯಾನ್ಸ್ ರಿಟರ್ನ್ ಮತ್ತು ಬ್ರಿಯಾನ್ಸ್ ಹಂಟ್. ಪ್ರತಿಯೊಂದೂ ಬ್ರಿಯಾನ್ ನ ಪಯಣವನ್ನು ಮತ್ತು ಪ್ರಕೃತಿಯಿಂದ ಅವನು ಕಲಿತ ಪಾಠಗಳನ್ನು ವಿವರಿಸುತ್ತವೆ. ಈ ರೋಮಾಂಚನ ಪ್ರಯಣವನ್ನು ಓದುವ ಮಕ್ಕಳಿಗೆ ಭವಿಷ್ಯದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಬರುತ್ತದೆ.
ಹ್ಯಾಚೆಟ್ ಸಾಂಸ್ಕೃತಿಕವಾಗಿ ದೀರ್ಘಕಾಲೀನ ಪ್ರಭಾವ ಬೀರಿದೆ, ೧೯೯೦ ರ ‘ಎ ಕ್ರೈ ಇನ್ ದಿ ವೈಲ್ಡ್’ ಚಿತ್ರಕ್ಕೆ ಈ ಕಾದಂಬರಿಯು ಮೂಲ ಸ್ಫೂರ್ತಿಯಾಗಿದೆ ಮತ್ತು ವಿಶ್ವದಾದ್ಯಂತ ಮಕ್ಕಳಿಗೆ ಒಂದು ಒಲವಿನ ಥ್ರಿಲ್ಲರ್ ಕೃತಿಯಾಗಿ ಉಳಿದುಕೊಂಡಿದೆ. ಹ್ಯಾಚೆಟ್ ಅನ್ನು ಓದುವ ಪ್ರತಿಯೊಬ್ಬ ಓದುಗ ಒಂದು ಅದ್ಭುತ ಪಯಣದ ಯಾನವನ್ನು ಅನುಭವಿಸುತ್ತಾನೆ. ಅತ್ಯಂತ ದುರ್ಗಮವಾದ ಕಾಡಿನಲ್ಲಿ ಬದುಕಬಲ್ಲ ಮನೋಸ್ಥೈರ್ಯವನ್ನು ಗಳಿಸುತ್ತಾನೆ. ಬ್ರಿಯಾನ್ ಜೊತೆಯಲ್ಲೇ ಸಾಗುವ ಓದುಗ ಆತನ ಪ್ರತಿಯೊಂದು ಸಾಹಸವನ್ನು ಖುದ್ದಾಗಿ ಅನುಭವಿಸಿದ ರೋಮಾಂಚಕತೆಯನ್ನು ಪಡೆಯುತ್ತಾನೆ. ಅದೇ ಈ ಕಾದಂಬರಿಯ ಸಾಮರ್ಥ್ಯವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಗ್ರೀನ್ ನೋವ್ನ ಮಕ್ಕಳು (The Children of Green Knowe)
ಲೂಸಿ ಎಂ. ಬಾಸ್ಟನ್ರ ಗ್ರೀನ್ ನೋವ್ನ ಮಕ್ಕಳು, 1954ರಲ್ಲಿ ಮೊದಲ ಭಾಗವಾಗಿ ಪ್ರಕಟಗೊಂಡು ನಂತರ ಆರು ಭಾಗಗಳಾಗಿ ಮುಂದುವರೆದ ಸರಣಿಯ ಮೊದಲ ಪುಸ್ತಕವಾಗಿದೆ. ಕಥೆಯು ಟೋಸ್ ಲ್ಯಾಂಡ್ ಎಂಬ ಯುವ ಬಾಲಕನ ಸಾಹಸಗಾಥೆಯನ್ನು ಓದುಗರ ಮುಂದೆ ತೆರೆದಿಡುತ್ತದೆ. ಇವನನ್ನು ಪ್ರೀತಿಯಿಂದ ‘ಟಾಲಿ’ ಎಂದು ಕರೆಯುತ್ತಾರೆ. ಟಾಲಿ ತನ್ನ ತಾತನ ಮನೆಯಾದ ಗ್ರೀನ್ ನೋವ್ ಗೆ ತನ್ನ ಮುತ್ತಜ್ಜಿಯೊಂದಿಗೆ ವಾಸಿಸಲು ತೆರಳುತ್ತಾನೆ. ಚುರುಕಾದ ಕಲ್ಪನಾಶಕ್ತಿ ಮತ್ತು ಕುತೂಹಲದಿಂದ ಕೂಡಿದ ಟಾಲಿ, ಪುರಾತನ ಮನೆಯಲ್ಲಿ ಭೂತಗಳನ್ನು ಹುಡುಕಲು ಪ್ರಾರಂಭಿಸುತ್ತಾನೆ. ಶೀಘ್ರದಲ್ಲೇ, ಅವನು ಶತಮಾನಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಮೂವರು ಮಕ್ಕಳಾದ ಟೋಬಿ, ಅಲೆಕ್ಸಾಂಡರ್ ಮತ್ತು ಲಿನೆಟ್ರ ಆತ್ಮಗಳನ್ನು ಕಂಡುಕೊಂಡು ಅವುಗಳ ಸ್ನೇಹಿತನಾಗುತ್ತಾನೆ. ಅವರೆಲ್ಲರ ಸ್ನೇಹವು ಟಾಲಿಯ ಬದುಕನ್ನು ಆಶ್ಚರ್ಯ ಮತ್ತು ಕುತೂಹಲದಿಂದ ತುಂಬಿದ ಅಸಾಧಾರಣ ಸಾಹಸವಾಗಿ ಪರಿವರ್ತಿಸುತ್ತದೆ. ಇದರ ರೋಮಾಂಚಕ ಥ್ರಿಲ್ಲರ್ ಅನುಭವವು ಹೃದಯವನ್ನು ಹಿಂಡುವ ಭಾವನಾತ್ಮಕ ವಾತಾವರಣದೊಂದಿಗೆ, ಗ್ರೀನ್ ನೋವಾದ ಮಕ್ಕಳ ಬಾಲ್ಯದ ಕಲ್ಪನೆಯ ಮಾಯಾಜಾಲವನ್ನು ಅದ್ಭುತವಾಗಿ ಓದುಗರಿಗೆ ತೆರೆದಿಡುತ್ತದೆ. ಸಾಹಸಮಯ ಹಾಗೂ ಭಯಾನಕ ಕಥೆಗಳನ್ನು ಬಯಸುವ ಮಕ್ಕಳಿಗೆ ಇದು ಹೇಳಿ ಮಾಡಿಸಿದ ಕಾದಂಬರಿಯಾಗಿದೆ.
(ಇನ್ನಷ್ಟು ಕಥೆ ಪುಸ್ತಕಗಳ ವಿವರ ಮುಂದಿನ ವಾರ).
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!