"ಇದೇನು ಶಾಂತಾ, ಈ ಸಾರಿ ಹಾಲಿನ ಬಿಲ್ಲು ಇಷ್ಟು ಜಾಸ್ತಿ ಬಂದಿದೆ.. ಸ್ವಲ್ಪ ನೋಡ್ಕೊಂಡು ಮಾಡು... ಎಲ್ಲಾ ಪದಾರ್ಥಗಳ ಬೆಲೆ. ಆಕಾಶ ಮುಟ್ತಾ ಇದೆ.. ಗಳಿಸುವವರು ಎಷ್ಟೂಂತ ಸಹಿಸಿಯಾರು.., ಈ ಮನೆಯ  ನಡೆಸಿಕೊಂಡು ಹೋಗ್ತಿರೋ ನಿನಗೆ ಕಿಂಚಿತ್ತೂ ಯೋಚನೆ ಇದ್ದಂತಿಲ್ಲ... ನೋಡು  ನಾಳೆಯಿಂದ 

ನೀನು ಮತ್ತೆ ಚಿಕ್ಕ ಸೊಸೆ ಇಬ್ರೂ ಹಾಲು ಕುಡಿಯೋದು ನಿಲ್ಲಿಸಿ.. ಹಾಗೇ ಆ ಹಾಲಿನವನಿಗೆ ಅರ್ಧ ಲೀಟರ್ ಕಡಿಮೆ ಕೊಡೋಕೆ ಹೇಳು "ಎಂದು ಪಂಕಜಮ್ಮ ನವರು ತಮ್ಮ ದೊಡ್ಡ ಸೊಸೆ ಶಾಂತಾಳಿಗೆ ಸೂಚನೆ ನೀಡುತ್ತಾರೆ. ಅವರ ಮಾತು ಆಲಿಸಿದ ಶಾಂತಾಳಿಗೆ ಬೇಸರವಾಗಿ ಒಮ್ಮೆ ತನ್ನ ಸೊಸೆಯತ್ತ ನೋಡುತ್ತ, ಮನಸ್ಸಿನಲ್ಲಿ ತನ್ನಷ್ಟಕ್ಕೆ ತಾನು"ಅರ್ರೇ.. ಇದೆಂಥಾ ಮಾತು..! ಹಾಲಿನ ದರ ಏರಿದರೆ ಸೊಸೆಯಂದಿರು ಅದನ್ನು ಬಳಸುವುದು ಕಡಿಮೆ ಮಾಡಬೇಕು.. ಮನೆಯಲ್ಲಿ ಮಿಕ್ಕಿದವರಾರಿಗೂ ಇದು ಅಪ್ಲೈ ಆಗಲ್ಲ...ಈ ಮೊದಲು  ಸೊಸೆಯಿಂದಿರಿಗೆ ಹಣ್ಣು ತಿನ್ನುವುದನ್ನು ನಿಲ್ಲಿಸಿದ್ರು.. ಈಗ ಹಾಲು ಸಹ ನಿಲ್ಸಿ ಅಂತ ಹೇಳ್ತಿದ್ದಾರೆ.. ಏನೇ ತುಟ್ಟಿಯಾದರೂ ಅದರ ಏಟು ಮೊದಲಿಗೆ ಸೊಸೆಯಂದ ಮೇಲೆ ಬೀಳತ್ತಲ್ಲ.. ಹೀಗೆ ಆದ್ರೆ ಇನ್ನೂ ಏನೇನು ಕಡಿತ ಮಾಡ್ತಾರೋ "  ಅಂತ ಅಂದುಕೊಳ್ಳುತ್ತ ನಿಂತಾಗ ಪುನಃ ಜಾನಕಮ್ಮ ನವರು" ಏನ ಹಾಗ್ ನೊಡ್ತಾ ನಿಂತಿದ್ದೀ.. ಬೇರೆ ಕೆಲಸ ನೋಡ್ಕೋ ಹೋಗು.. ನಾನು ತರಕಾರಿ ಅಂಗಡಿ ಕಡೆ ಹೋಗಿ ಒಂದಿಷ್ಟು ತರಕಾರಿ ತಗೋಂಡು ಬರ್ತೇನೆ " ಎನ್ನುತ್ತ ಅಲ್ಲಿದ್ದ ಒಂದು ಪುಟ್ಟ ಕೈ ಚೀಲ ಹಿಡಿದು ಹೊರಟು ನಿಂತಾಗ, ಶಾಂತಾಳಿಗೆ ತನ್ನ ಮಾವ " ಇಂದು ಮಟರ್ ಪನ್ನೀರ್ ಮಾಡು ಅಂತ ಹೇಳಿದ ಮಾತು ನೆನಪಾಗಿ ಬಾಗಿಲು ಬಳಿ ನಿಂತು ಪಾದರಕ್ಷೆ ಹಾಕಿ ಕೊಳ್ಳುತ್ತಿದ್ದ ತನ್ನ ಅತ್ತೆಗೆ  " ಅತ್ತೆ.... ಮಾವಾ ಹೇಳಿದ್ದಾರೆ ಇವತ್ತು ಪನ್ನೀರ್ ಮಟರ್ ಮಾಡು ಅಂತ.. ಹೇಗೂ ನೀವು ಹೋಗ್ತಾ ಇದ್ದೀರಲ್ಲಾ ಬರುವಾಗ ಅದನ್ನೂ ಹಿಡ್ಕೊಂಡು ಬನ್ನಿ.." ಎನ್ನುತ್ತಾಳೆ.

ಆಕೆ  ಬಾಯಿಯಿಂದ ಈಮಾತು ಕೇಳಿಸಿಕೊಂಡ ಪಂಕಜಮ್ಮ ನವರು ಒಂದು ಸಲ ಆಕೆಯನ್ನು ದುರುಗುಟ್ಟಿ ನೋಡಿದವರು ಏನೊಂದು ಮಾತನಾಡದೇ ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತಾರೆ. ಶಾಂತಾ ಅಡುಗೆ ಮನೆಗೆ ಬಂದಾಗ ಚಿಕ್ಕ ಸೊಸೆ ಆಶಾ ಎರಡು ಪ್ಲೇಟ್ ನಲ್ಲಿ ತಿಂಡಿ ಹಾಕಿ -" ತಗೊಳ್ಳಿ ಅಕ್ಕ ಮೊದಲು ತಿಂಡಿ ತಿನ್ನಿ ಆಮೇಲೆ ಉಳಿಕೆ ಕೆಲಸ ಮಾಡೋಣ...ನನಗೂ ಹೊಟ್ಟೆ ತುಂಬಾ ಹಸೀತಾ ಇದೆ.. ಅದರಲ್ಲೂ ಬಿಸಿ ಬಿಸಿ ಆದ ಘಂ ಎನ್ನೋ ಉಪ್ಪಿಟ್ಟು ನೋಡಿದ ಮೇಲೆ ಇನ್ನೂ ಹೆಚ್ಚು  ಹಸೀತಾ ಇದೆ..., ನನಗಂತೂ  ಚಿಕ್ಕ ವಯಸ್ಸಿನಿಂದಲೂ ಈ ರೀತಿ ಬಿಸಿ ಬಿಸಿ ಉಪ್ಪಿಟ್ಟು ತಿಂದ ಮೇಲೆ ಒಂದು ಲೋಟ ಹಾಲು ಕುಡಿಯೋದು ಅಂದ್ರೆ ತುಂಬಾ ಇಷ್ಟ.." ಎನ್ನುತ್ತ ಒಂದು ಲೋಟಕ್ಕೆ ಬಿಸಿ ಹಾಲು ಹಾಕಿಕೊಂಡು ಇಬ್ಬರೂ ಅಲ್ಲಿದ್ದ ಟೇಬಲ್ ಬಳಿ ಬಂದು ಕುಳಿತು ತಿನ್ನಲು ಆರಂಭಿಸಿದಾಗ  ಶಾಂತಾ ಅವಳಿಗೆ " ಇವತ್ತೊಂದು ದಿನ ನಿನಗೆ ತಿಂಡಿ ನಂತರ ಹಾಲು ಕುಡಿಯೋದು ಲಭ್ಯ..." ಎಂದು ಹೇಳುತ್ತಿದ್ದಂತೆ  ಆಶಾಳ ಕೈ ಹಾಗೇ ನಿಂತು ಬಿಡುತ್ತದೆ. ಆಗ ಆಕೆ ಶಾಂತಾಳಿಗೆ " ಯಾಕಕ್ಕಾ.. ಏನು ಹಾಗಂದ್ರೆ"ಎಂದು ಕೇಳಿದಾಗ ಶಾಂತಾ " ಅದೇನೊಮ್ಮಾ ಅತ್ತೆ ಹೇಳ್ತಿದ್ರು ಹಾಲಿನ ದರ ಜಾಸ್ತಿ ಆಗಿದೆ ... ಅದರ ಬಿಲ್ಲು ಹೆಚ್ಚು ಬರ್ತಿದೆ ಅಂತ.. ಅದಕ್ಕೋಸ್ಕರ ನಾವಿಬ್ರೂ ನಾಳೆಯಿಂದ ಹಾಲು ಕುಡಿಯೋದು ನಿಲ್ಸಬೇಕು ಅಂತ ಹೇಳಿದ್ದಾರೆ ಅಷ್ಟೇ ಅಲ್ಲ ಹಾಲಿನವನಿಗೂ ನಾಳೆಯಿಂದ ಅರ್ಧ ಲೀಟರ್ ಕಡಿಮೆ ಕೊಡು ಅಂತ ಹೇಳಿದ್ದಾರೆ" ಎನ್ನುತ್ತಾಳೆ. ಆಗ ಆಶಾ ತನ್ನ ಹುಬ್ಬೆರಿಸುತ್ತ" ಹೋ... ವಿಷಯ ಹಾಗೋ ಸಾಮಾನು ತುಟ್ಟಿ ಆದ್ರೆ ಏನಂತೆ ನಮ್ಮ ಮನೇಲಿ ಮೂರು ಜನ ದುಡಿತಿದ್ದಾರಲ್ಲ  ಹೀಗಾಗಿ ನಮ್ಮ ಮನೆ ಆರ್ಥಿಕ ಸ್ಥಿತಿ  ಕೆಟ್ಟೇನು ಹೋಗಿಲ್ವಲ್ಲಾ.." ಎಂದು ಹೇಳಿದಾಗ ಶಾಂತಾ -" ನೋಡು ಆಶಾ..ಅದೇಲ್ಲಾ ನನಗೆ ಗೊತ್ತಿಲ್ಲಾ.. ಅತ್ತೆ ಆ ಥರ  ಹೇಳಿದ್ರೆ  ನಾನಾದ್ರೂ ಏನು ಮಾಡೋಕೆ ಸಾಧ್ಯ?" ಎಂದು ತನ್ನ ಅಶಕ್ತತೆ ವ್ಯಕ್ತಪಡಿಸುತ್ತಾಳೆ

ಆಗ ಆಶಾ" ಸರಿ ಬಿಡಿ ಅಕ್ಕಾ.. ವಿಷಯ ಹೀಗಾದ್ರೆ ನಾನು ಅತ್ತೆ ಹತ್ರ ಮಾತಾಡ್ತೀನಿ. ಆಗ ಹೆಣ್ಣಿನ ಬೆಲೆ ತುಟ್ಟಿ ಆದಾಗ ಹಣ್ಣು ತಿನ್ಬೇಡಿ ಅಂದ್ರು ಈಗ ಹಾಲಿನ ದರ ಹೆಚ್ಚಾಯ್ತು ಹಾಲು ಕುಡಿಯೋದು ನಿಲ್ಲಿಸಿ ... ಅಂತಾರೆ ಎಲ್ಲಾದಕ್ಕೂ ಒಂದು ಸೀಮೆ ಅಂತ ಇರುತ್ತೆ ಅಲ್ವಾ..? ಅದಿರ್ಲಿ ಮೊದ್ಲು ತಿಂಡಿ ತಿಂದು ಮುಗಿಸೋಣ"  ಎಂದು ಮುಂದಿದ್ದ ತಿಂಡಿ ತಿಂದು  ತಮ್ಮ ತಮ್ಮ ಕೆಲಸ ಮಾಡಲು ಶುರು ಮಾಡುತ್ತಾರೆ.

ಒಂದು ತಾಸಿನ ಬಳಿಕ ಹೊರಗೆ ಹೋಗಿದ್ದ ಪಂಕಜಮ್ಮ ನವರು ಕೈಯಲ್ಲಿ ತರಕಾರಿ ಚೀಲ ಹಿಡಿದು ಒಳಗೆ ಬಂದವರು   ಸೋಫಾ ಮೇಲೆ ಕುಳಿತುಕೊಳ್ಳುತ್ತ-" ಶಾಂತಾ... ಒಂದು ಲೋಟಾ ನೀರು ತಂದು ಕೊಡ್ತಿಯಾ.. ಹೊರಗಡೆ ಅದೇನು ಸೆಖೆ.. ತರಕಾರಿ ಬೆಲೆನೂ ಮೇಲಕ್ಕೆ ಹೋಗ್ತಾ ಇದೆ... ಹೀಗಾದ್ರೆ ಏನು  ತರೋದು ಏನು ತಿನ್ನೋದು..." ಎನ್ನುತ್ತಾರೆ. ಶಾಂತಾ ಒಳಗೆ ಹೋಗಿ ನೀರು ತಂದು ಕೊಡುವಾಗ ಆಕೆಯ ಹಿಂದೆ ಬಂದ ಚಿಕ್ಕ ಸೊಸೆ ಆಶಾ ಳನ್ನು ಕಂಡವರು " ಆಶಾ.. ತಗೋ ಈ ತರಕಾರಿ.. ಎಲ್ಲಾ ಕ್ಲೀನ್ ಮಾಡಿ ತೊಳ್ದು ಒಣಗಿದ ಮೇಲೆ ಫ್ರೀಜ್ ನಲ್ಲಿ ಇಡು.. ಹಾಗೆ ಇದರಲ್ಲಿ ಪನ್ನೀರ್ ಎಷ್ಟು ಇದೆ ಅಂತ ನೋಡು" ಎಂದಾಗ ಆಕೆ ತೆಗೆದು ನೋಡಿದವಳು" ಇದೇನು ಬರೀ ಅರ್ಧ ಕಿಲೋ ಮಾತ್ರ ಇದ್ದಂತಿದೆ... ಇಷ್ಟರಲ್ಲಿ ಮನೆಮಂದಿಗೆಲ್ಲ ಹೇಗೆ ಸಾಲತ್ತೆ... ಎಲ್ಲಾರಿಗೂ ಪನ್ನೀರ ಮಟರ್ ಅಂದ್ರೆ ತುಂಬಾ ಇಷ್ಟ... ತರೋದು ತಂದ್ರಿ ಒಂದು ಕಿಲೋ ತರಬಹುದಾಗಿತ್ತು" ಎನ್ನುತ್ತಾಳೆ. ಆಗ ಜಾನಕಮ್ಮ ನವರು" ಆಶಾ.. ಇತ್ತೀಚೆಗೆ ಪನ್ನೀರ್  ಕೂಡ ಎಷ್ಟು ತುಟ್ಟಿ ಆಗಿದೆ ನಿನಗೇನಾದ್ರೂ ಗೊತ್ತಾ?  .. ಈಗ ಎಷ್ಟು ತಂದಿದಿನೋ ಅಷ್ಟನ್ನೇ ಮಾಡಿ ಮುಗಿಸು... ನಮ್ಮ ಕಾಲದಲ್ಲಿ ಈ ಪನ್ನಿರು ಅನ್ನೋದು ನೋಡೋಕೂ ಸಿಗ್ತಿದ್ದಿಲ್ಲ...ನಿಮ್ಮಗಳಿಗೆ ತಿನ್ನೋಕ್ಕಾದ್ರೂ ಸಿಕ್ತಾ ಇದೆಯಲ್ಲ... ಸ್ವಲ್ಪ ಸ್ವಲ್ಪ ತಿನ್ನಿ ಸಾಕು.. ಎಂದು ಹೇಳಿದಾಗ ಆಶಾ " ಇದೇನು ಅತ್ತೆ ತಿನ್ನೋ ಪದಾರ್ಥ ಅಂದ ಮೇಲೆ ಹೊಟ್ಟೆ ತುಂಬಾ ತಾನೇ ತಿನ್ಬೇಕು.. ಅಷ್ಟಕ್ಕೂ ಸಂಪಾದನೆ ಮಾಡೋದು ಯಾತಕ್ಕೆ? ಹೊಟ್ಟೆ ತುಂಬಾ ತಿಂದರೆ ತಾನೇ ಕೈ ಕಾಲಿಗೆ ಶಕ್ತಿ ಬಂದು ಕೆಲಸ ಮಾಡ್ಲಿಕ್ಕೆ ಓಡಾಡ್ಲಿಕ್ಕೆ ಆಗೋದು.. ನೀವು ನೋಡಿದ್ರೆ ಹಾಲು ಕುಡಿಯೋದು ನಿಲ್ಲಿಸಿ ಅಂತ ಬೇರೆ ಹೇಳ್ತಿದ್ಜೀರಿ... ಹೀಗಾದ್ರೆ ಪೌಷ್ಟಿಕ ಆಹಾರ ಏನು ತಿನ್ನಬೇಕು" ಎಂದಾಗ ಅವರು" ನೀನು ಮನೆಯ ಸೊಸೆ ಅಂದ್ರೆ ಲಕ್ಷ್ಮೀ ಇದ್ದಂತೆ ಸೊಸೆ ಆದವ್ರು ಮನೆಯಲ್ಲಿ ಇರುವವರ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕು.. ಆದ್ರೆ ನೀವು ನಿಮಗೆ ಪೌಷ್ಟಿಕ ಆಹಾರ ಬೇಕು ಅಂತೀರಲ್ಲ..ಅದರ ಅವಶ್ಯಕತೆ ನಿಮಗೇನಿದೆ.." ಅಂತ ಹೇಳಿದವರು ತಮ್ಮ ರೂಮಿಗೆ  ಹೊರಟು ಹೋಗುತ್ತಾರೆ.ಅಲ್ಲಿ ಎ.ಸಿ. ಆನ್ ಮಾಡಿಕೊಂಡು ತಣ್ಣಗಿನ ಹವೆ ಸೇವಿಸತೊಡಗುತ್ತಾರೆ ಇತ್ತ ಇಬ್ಬರೂ ಸೊಸೆಯಂದಿರು ತಮ್ಮ ತಮ್ಮೊಳಗೆ " ಮೊದಲೆಲ್ಲ ಅತ್ತೆ ಹೀಗಿರಲಿಲ್ಲ...ಈಗ ಮನೆಯಲ್ಲಿ ಸಾಕಷ್ಟು ಹಣದ ಅನುಕೂಲ ಇದ್ದರೂ ಸಹ ಯಾಕೆ ಹೀಗೆ ಮಾತಾಡ್ತಿದ್ದಾರೋ ಗೊತ್ತಾಗ್ತಿಲ್ಲ.. ಇದಕ್ಕೂ ಮುಂಚೆ ಮನೆ ಆರ್ಥಿಕ ಸರಿ ಇರಲಿಲ್ಲ ಆಗ  ಆದರೂ ನಮ್ಮಗಳಿಗೆ ಊಟ ತಿಂಡಿಗೆ ಯಾವ ಚಕಾರವೂ ಎತ್ತುತ್ತಿರಲಿಲ್ಲ...ಈಗ ನೋಡು ಮಾನವರಿಗೆ ಆರೋಗ್ಯ ಸರಿ ಇರಲ್ಲ ಇನ್ನು ನಮ್ಮಿಬ್ಬರ ಗಂಡಂದಿರಿಗೆ ಬಿಡುವೇ ಇರಲ್ಲ.. ಹೀಗಾಗಿ ಮಾವನವರು ತಮ್ಮ ಜವಾಬ್ದಾರಿಯನ್ನು ಅತ್ತೆ ಮೇಲೆ ಹಾಕಿದ್ದಾರೆ..." ಎಂದುಕೊಂಡು ಮತ್ತೆ ತಮ್ಮ ಕೆಲಸದಲ್ಲಿ ಮಗ್ನರಾಗುತ್ತಾರೆ.ಆದಾಗ್ಯೂ ಶಾಂತಾಳ ಮನಸ್ಸಿನಲ್ಲಿ ಏನಾದರೊಂದು ಯೋಚನೆಗಳು ಏಳುತ್ತಲೇ ಇರುತ್ತವೆ.

ಆ ರಾತ್ರಿ ಇಬ್ಬರೂ ಸೊಸೆಯಂದಿರು ಸೇರಿ ಬಿಸಿ ಬಿಸಿ ಅಡುಗೆ ರೆಡಿ ಮಾಡಿ ಉಳಿದವರಿಗೆಲ್ಲ ಒಟ್ಟಿಗೆ ಕೂರಿಸಿ ಊಟ ಬಡಿಸುತ್ತಿರುತ್ತಾರೆ. ಶಾಂತಾ ಊಟ ಬಡಿಸುವಾಗ ಆಕೆ ಮಾವ " ಪನ್ನೀರ್ ಮಟರ್ ಚೆನ್ನಾಗಿ ಮಾಡಿದ್ದೀ ನನಗೆ ಇನ್ನೂ ಸ್ವಲ್ಪ ಬಡಿಸು ಎಂದಾಗ ಶಾಂತಾ ತಂದು ಬಡಿಸುತ್ತಾಳೆ. ಆಗ ಅವರ ಪಕ್ಕದಲ್ಲಿ ಕುಳಿತಿದ್ದ ಪಂಕಜಮಮ್ಮ ನವರು " ನನಗೂ ಸ್ವಲ್ಪ ಹಾಕು" ಎಂದು ಶಾಂತಾಳಿಗೆ ಎಂದಾಗ ಆಕೆ ಇಲ್ಲಾ ನಾನು ನೀವು ಹೇಳಿದ ಮಾತು ಜ್ಞಾಪಿಸಿ ಕೊಳ್ತಾ ಇದ್ದೆ " ಎನ್ನುತ್ತಾಳೆ. ಆಗ ಆಕೆ ಮಾವನವರು" ಏನಮ್ಮಾ ಆ ಮಾತು?" ಎಂದು ಕೇಳಿದಾಗ 

ಶಾಂತಾ " ಏನಿಲ್ಲ ಮಾವಾ.. ಎರಡು ಮೂರು ದಿನಗಳ ಹಿಂದೆ ನಮಗೆ - ಎಲ್ಲಾದರ ರೇಟು ಜಾಸ್ತಿ ಆಗ್ತಾ ಇದೆ ಮನೆ  ಅದಕ್ಕೆ ನೋಡಿಕೊಂಡು ಮಾಡು ಎಂದು ನಮಗೆ ಕುಡಿಯೋ ಹಾಲು , ತಿನ್ನೋ ಹಣ್ಣಿಗೆ ನಿರ್ಬಂಧ ಮಾಡಿದ್ದರು..ನೀವೇ ಹೇಳಿ ನಾವು ಪೌಷ್ಟಿಕಾಂಶ ಆಹಾರ ತಿನ್ನದೇ ಇದ್ರೆ ಓಡಾಡಿ ಎಲ್ಲಾ ಕೆಲಸ ಮಾಡಲು ಶಕ್ತಿ ಬೇಡವಾ 

ಹೀಗಾಗಿ..."ಎಂದು ಹೇಳುತ್ತಿದ್ದವಳ ನಡುವೆ   ಅವರು ತಮ್ಮ ಪತ್ನಿ ಯತ್ತ ನೋಡಿ" ಯಾಕೆ ಪಂಕಜಾ ಆ ರೀತಿ ಹೇಳ್ದೆ ಅವರೇನು ಬೇರೆಯವರಾ? ಎಲ್ಲಾದರ ರೇಟು ಜಾಸ್ತಿ ಆಗುತ್ತೆ ಅಂತ ತಿನ್ನೋದು ಕಡಿಮೆ ಮಾಡಿದರೆ ಆಗತ್ತಾ.. ಇಷ್ಟಕ್ಕೂ ನಮಗೇನು ಮೊದಲಿನ ಹಾಗೆ ಆರ್ಥಿಕ ಸಂಕಷ್ಟ ಇಲ್ಲವಲ್ಲಾ.. ನಾನೂ ದುಡೀತೇನೆ ಮಕ್ಕಳೂ ದುಡಿತಿದ್ದಾರೆ ಮತ್ಯಾಕೆ ನಿರ್ಬಂಧ ಮಾಡ್ತಿದ್ದೀ... ಕಾಲ ಕಾಲಕ್ಕೆ ಮನೆಯವರ ಎಲ್ಲಾ ಬೇಕು ಬೇಡ ನೋಡ್ಕೊಂಡು ದಿನವಿಡೀ ದುಡಿಯುವ ಸೊಸೆಯಂದಿರಿಗೆ ಹೀಗೆ ಮಾಡಿದರೆ ಹೇಗೆ ಹೇಳು.. ಒಂದು ವೇಳೆ ನೀ  ಅವರಿಗೆ ಎಲ್ಲದಕ್ಕೂ ನಿರ್ಬಂಧ ಮಾಡ್ತಿದ್ರೆ ನಾಳೆ ಅಕಸ್ಮಾತಾಗಿ ಹುಷಾರು ತಪ್ಪಿ ಮಲಗಿದ್ರೆ ಎಲ್ಲಾ ನಿನ್ನ ಕೈ ಯಲ್ಲಿ ಮಾಡೋಕೆ ಆಗುತ್ತಾ. ಯೋಚನೆ ಮಾಡು.."ಎಂದು ಸಮಾಧಾನದಿಂದ ಹೇಳಿದಾಗ ಪಂಕಜಮಮ್ಮ ನವರು ಮನದಲ್ಲಿ" ಹೌದಲ್ಲ ,.. ನಾನು ಆ ನಿಟ್ಟಿನಲ್ಲಿ ಯೋಚನೆ ಮಾಡದೇ ದುಡುಕುತನ ತೋರಿಸಿದೆ ಅಂತ ಕಾಣುತ್ತೆ " ಎಂದು ಕೊಂಡವರು 

ಇಬ್ಬರೂ ಸೊಸೆಯಂದಿರಿಗೆ ನಾಳೆಯಿಂದ ಎಲ್ಲಾ ನೀವೇ ವಹಿಸಿಕೊಳ್ಳಿ ನಾನು ಯಾವ ತಂಟೆಗೂ ಬರಲ್ಲ"ಎಂದು ಹೇಳಿ ಮುಗಿಸಿದಾಗ ಇಬ್ಬರ ಸೊಸೆ ಮೋಗದಲ್ಲಿ ಮಂದಹಾಸ ಮೂಡದೇ ಇರಲ್ಲ 

-ಅರವಿಂದ.ಜಿ.ಜೋಷಿ, ಮೈಸೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ