ಇಂದು ೭೦ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ದಿನವಿದು. ಇದು ಜರುಗಿದ್ದು ೧೯೫೬ ನವೆಂಬರ್ ೧ರಂದು. ಆಗ ನಮ್ಮ ನಾಡು ಕರೆಸಿಕೊಂಡಿದ್ದು 'ಮೈಸೂರು ರಾಜ್ಯ' ಎಂಬ ಹೆಸರಿನಿಂದ. ತರುವಾಯದಲ್ಲಿ ರಾಜ್ಯದ ಎಲ್ಲ ಭಾಗಗಳ ಜನರ ಭಾವನಾತ್ಮಕ ತೊಡಗಿಸಿಕೊಳ್ಳುವಿಕೆಗೆ ಅನುವು ಮಾಡಿ ಕೊಡಲು ಮತ್ತು ಅವರ ತರ್ಕದ ಮಾನ್ಯತೆಯ ದ್ಯೋತಕವಾಗಿ ೧೯೭೩ರ ನವೆಂಬರ್ ೧ರಂದು 'ಮೈಸೂರು' ರಾಜ್ಯಕ್ಕೆ 'ಕರ್ನಾಟಕ' ಎಂದು ಮರುನಾಮಕರಣ ಮಾಡಲಾ ಯಿತು ಎಂಬುದೆಲ್ಲ ಬಹುಜನರಿಗೆ ಗೊತ್ತಿರುವ ಸಂಗತಿಯೇ. ಒಟ್ಟಿನಲ್ಲಿ ಕನ್ನಡನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರ. ತ್ಯಾಗ ಮತ್ತು ಪರಿಶ್ರಮಗಳನ್ನು ಸ್ಮರಿಸಿ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆಯ ವಿಷಯದಲ್ಲಿ ಹೊಮ್ಮಿರುವ ಭವ್ಯತೆಯನ್ನು ಮೆಲುಕುಹಾಕಿ ಸಂಭ್ರಮಿಸುವ ದಿನವಿದು. ಹಾಗಂತ ಇದು ಮೈಮರೆಯುವ ಕಾಲಘಟ್ಟವೂ ಅಲ್ಲ, ಕನ್ನಡದ ನೆಲ-ಜಲದ ಸಂರಕ್ಷಣೆ, ಕನ್ನಡಿಗರಿಗೆ ಉದ್ಯೋಗಾವಕಾಶಗಳ ಲಭ್ಯತೆ, ಆಡಳಿತ ಭಾಷೆ ಮತ್ತು ಅನ್ನದ ಭಾಷೆಯಾಗಿ ಕನ್ನಡ ಮುಂತಾದ ಚರ್ಚಾವಿಷಯಗಳಲ್ಲಿನ ನಾಡಿನ ಜನರ ನಿರೀಕ್ಷೆಗಳನ್ನೂ ಅಂದುಕೊಂಡಷ್ಟು ಈಡೇರಿಲ್ಲ ಎಂಬ ಕಹಿಸತ್ಯವನ್ನು ನಾವ್ಯಾರೂ ಮರೆಯುವಂತಿಲ್ಲ, ಹೀಗಾಗಿ, ಮನೆ, ಮಾರುಕಟ್ಟೆ, ಕಾರ್ಯಕ್ಷೇತ್ರ ಹೀಗೆ ವಿವಿಧ ನೆಲೆಗಳಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸುವುದಕ್ಕೆ ಸಂಕಲ್ಪಿಸೋಣ. ಆಗ ಮಾತ್ರವೇ, 'ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು' ಎಂಬ ಕವಿವಾಣಿ ಸಾರ್ಥಕ್ಯವನ್ನು ಕಂಡೀತು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೧-೧೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!