ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕರೆಗದ್ದೆಯಲ್ಲಿ ಕಳೆದ ವಾರ ಆನೆದಾಳಿ ನಡೆಸಿದ ಪರಿಣಾಮ ಇಬ್ಬರು ರೈತರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದಿನವಿಡೀ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರಕಾರ ರವಿವಾರ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ನಡೆಸಿ ಮಾನವ-ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಸಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಎಂಟು ಅಂಶಗಳ ಕಾರ್ಯಯೋಜನೆಯನ್ನು ರೂಪಿಸಿ, ಜಾರಿಗೆ ತರಲು ನಿರ್ಧರಿಸಲಾಗಿದೆ. ಸರಕಾರ ರೂಪಿಸಿರುವ ಮಾರ್ಗಸೂಚಿಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿ ಸುವ ಮೂಲಕ ಅರಣ್ಯ ಪ್ರದೇಶದ ತಪ್ಪಲಲ್ಲಿರುವ ಕೃಷಿ ಮತ್ತು ಜನವಸತಿ ಪ್ರದೇಶಗಳ ಜನರನ್ನು ಕಾಡುತ್ತಿರುವ ಪ್ರಾಣಭಯವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು.
ದಿನಗಳುರುಳಿದಂತೆಯೇ ರಾಜ್ಯದ ವಿವಿಧೆಡೆಗಳಲ್ಲಿ ವನ್ಯಜೀವಿಗಳು ಜನವಸತಿ ಮತ್ತು ಕೃಷಿ ಭೂಮಿಗೆ ಲಗ್ಗೆ ಇಡುವ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಮಾತ್ರವಲ್ಲದೆ ಅಮಾಯಕ ರೈತರು ವನ್ಯಜೀವಿಗಳ ದಾಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಸಮಸ್ಯೆ ಜಟಿಲವಾಗುತ್ತಲೇ ಸಾಗಿದೆ. ವನ್ಯಜೀವಿಗಳ ಉಪಟಳ ಮೇರೆ ಮೀರಿದಾಗಲೆಲ್ಲ ಜನರು ಅರಣ್ಯ ಇಲಾಖೆ ಮತ್ತು ಸರಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಲೇ ಬಂದಿದ್ದು ಈ ಸಂದರ್ಭದಲ್ಲೆಲ್ಲ ಸರಕಾರ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರ ಮಾರ್ಗೋಪಾಯಗಳ ಬಗೆಗೆ ಚರ್ಚಿಸಿ, ಒಂದಿಷ್ಟು ಸಲಹೆ-ಸೂಚನೆ, ಕಾರ್ಯಯೋಜನೆ, ಹೊಸ ನೀತಿ ರೂಪಣೆಯ `ಮಾತುಗಳನ್ನಾಡಿ ಸಂತ್ರಸ್ತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಆದರೆ ಸರಕಾರದ ನಿಧಾನಗತಿಯ ಧೋರಣೆಯಿಂದಾಗಿ ಈ ಎಲ್ಲ ಘೋಷಣೆಗಳು ಪರಿಪೂರ್ಣವಾಗಿ ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಗಿವೆ. : ಇನ್ನು ಕೆಲವೆಡೆ ಒಂದಿಷ್ಟು ಜಾರಿಗೆ ಬಂದರೂ ಇವು ವನ್ಯಜೀವಿಗಳ ಉಪಟಳಕ್ಕೆ ಕಡಿವಾಣ ಹಾಕುವಲ್ಲಿ ಸಫಲವಾಗಿಲ್ಲ.
ರವಿವಾರ ನಡೆದ ಸಭೆಯಲ್ಲಿ ರೈತ ಸಂಘಟನೆಗಳ ಮುಖಂಡರು ಮತ್ತು ಬೆಳಗಾರರ ಸಂಘಟನೆಗಳ ಪದಾಧಿಕಾರಿಗಳು ಎತ್ತಿರುವ ಅಂಶಗಳ ಬಗೆಗೆ ಸಂಬಂಧಿತ ಇಲಾಖೆಗಳು ತುರ್ತು ಗಮನಹರಿಸಬೇಕು. ಅರಣ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ರೆಸಾರ್ಟ್, ಸಫಾರಿ, ಗಣಿಗಾರಿಕೆಯಂತಹ ಮಾನವ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕುರಿತಂತೆ ಸಚಿವರ ಸಹಿತ ಅಧಿಕಾರಿಗಳ ಗಮನ ಸಳೆದಿದ್ದಾರೆ. ಈ ಎಲ್ಲ ಅಕ್ರಮ ಚಟುವಟಿಕೆಗಳ ಬಗೆಗೆ ಜಾಣಮೌನ ತಳೆದಿರುವ ಕುರಿತಂತೆ ಸಚಿವರ ಸಮ್ಮುಖದಲ್ಲಿಯೇ ತುಸು ಖಾರವಾಗಿಯೇ .ಅಧಿಕಾರಿಗಳನ್ನುತರಾಟೆಗೆ ತೆಗೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ರೈತ ಮುಖಂಡರ ಈ ಮಾತುಗಳು ಆಕ್ರೋಶ ಭರದಿಂದ ಕೂಡಿವೆ ಎಂದೆನಿಸಿದರೂ ಈ ಬಗ್ಗೆ ಸರಕಾರ ಮತ್ತು ಸಂಬಂಧಿತ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಬೇಕು. ಅರಣ್ಯ ಪ್ರದೇಶದಲ್ಲಿ ಬೃಹತ್ ಯಂತ್ರೋಪಕರಣಗಳನ್ನು ಬಳಸಿ ನಡೆಸಲಾಗುತ್ತಿರುವೆ ವಾಣಿಜ್ಯ ಚಟುವಟಿಕೆಗಳಿಂದಾಗಿ ವನ್ಯಜೀವಿಗಳು ನಾಡಿನ ಹಾದಿ ಹಿಡಿಯುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಗಣಿಸದಿರುವುದು ಅಚ್ಚರಿಯೇ ಸರಿ. ದಟ್ಟ ಅರಣ್ಯ ಪ್ರದೇಶಗಳಲ್ಲಿ ಬೃಹದಾಕಾರವಾಗಿ ಬೆಳೆದಿರುವ ವಾಣಿಜ್ಯ ಚಟುವಟಿಕೆಗಳನ್ನು ನಿಯಂತ್ರಿಸದೇ ಹೋದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಸದ್ಯೋಭವಿಷ್ಯದಲ್ಲಿ ನಿತ್ಯನಿರಂತರವಾಗಲಿರುವುದು ನಿಶ್ಚಿತ.
ಇನ್ನಾದರೂ ಸಂಬಂಧಪಟ್ಟ ಎಲ್ಲ ಇಲಾಖೆಗಳು ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ, ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಲು ಮೂಲ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೪-೧೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!