ಮೊಬೈಲ್, ಅಂತರ್ಜಾಲ ತಾಣಗಳು, ಟಿವಿ ಮೊದಲಾದವುಗಳ ಭರಾಟೆಯಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಬಹುತೇಕರ ಅನಿಸಿಕೆ. ಒಂದಷ್ಟು ಮಟ್ಟಿಗೆ ಈ ವಿಚಾರ ಸತ್ಯವೇ ಆದರೂ ಪುಸ್ತಕಗಳನ್ನು ಪ್ರಕಟಿಸುವ, ಬರೆಯುವ, ಬಿಡುಗಡೆಯಾಗುವ ಸಂಖ್ಯೆ ಕಡಿಮೆಯಾಗಿಲ್ಲ. ಹುಮ್ಮಸ್ಸೂ ಮಾಸಿಲ್ಲ. ಮೊದಲೆಲ್ಲಾ ಕಥೆ, ಕಾದಂಬರಿ ಮುಂತಾದ ಪ್ರಕಾರಗಳ ಪುಸ್ತಕಗಳು ಹೆಚ್ಚಾಗಿ ಬಿಡುಗಡೆಯಾಗುತ್ತಿದ್ದರೆ ಈಗ ವೈಚಾರಿಕ, ವೈಜ್ಞಾನಿಕ, ರಾಜಕೀಯ, ಐತಿಹಾಸಿಕ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಗಿದೆ. ಕರ್ನಾಟಕ ರಾಜ್ಯೋತ್ಸವದ ಸಮಯದಲ್ಲಿ ಸಾಹಿತ್ಯ ಪ್ರಕಾಶನದ ಮುಖ್ಯಸ್ಥರಾದ ಶ್ರೀ ಎಂ ಎ ಸುಬ್ರಹ್ಮಣ್ಯ ಇವರು ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ ಬರೆದ ಸಮಯೋಚಿತ ಲೇಖನ ‘ಬತ್ತಿಲ್ಲ ಪುಸ್ತಕ ಪ್ರೀತಿ’ ಯನ್ನು ಯಥಾವತ್ತಾಗಿ ‘ಸಂಪದ’ ದಲ್ಲಿ ಮರು ಪ್ರಕಟ ಮಾಡುತ್ತಿದ್ದೇವೆ. ಈ ಲೇಖನದಲ್ಲಿರುವ ಮಾಹಿತಿಗಳು ಹಲವರ ಪ್ರಶ್ನೆಗಳಿಗೆ ಉತ್ತರವಾದೀತು ಎಂಬ ನಂಬಿಕೆ ನಮ್ಮದು. 

“ಸಾಮಾಜಿಕ ಮಾಧ್ಯಮಗಳ ಅಬ್ಬರದಲ್ಲಿ ಓದಿನ ಸಂಸ್ಕೃತಿ ಮರೆಯಾಗುತ್ತಿದೆ ಎಂಬ ಕಳವಳದ ನಡುವೆಯೂ ಕನ್ನಡದ ಪುಸ್ತಕಗಳನ್ನು ಓದುಗರ ವಲಯ ತುಂಬ ಕಾತರದಿಂದ ಸ್ವಾಗತಿಸುತ್ತಿದೆ ಎಂಬುದು ವಾಸ್ತವ. ಸೃಜನಶೀಲ ಕೃತಿಗಳು ಮತ್ತು ವಿಷಯ ನಾವೀನ್ಯದ ಕೃತಿಗಳು ಮಾರುಕಟ್ಟೆಯಲ್ಲಿ ಬಿಸಿದೋಸೆಯಂತೆ ಖರ್ಚಾಗುತ್ತಿವೆ. ಪ್ರಕಾಶಕರು ಪ್ರತೀ ವರ್ಷ ಲೋಕಾರ್ಪಣೆ ಮಾಡುವ ಪುಸ್ತಕಗಳ ಸಂಖ್ಯೆ ಮತ್ತು ಮಾರಾಟ ಮಾಡುವ ಕೃತಿಗಳ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಪುಸ್ತಕಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ಎಂಬುದಂತೂ ಸ್ಪಷ್ಟ.” ಇದು ಶ್ರೀ ಎಂ.ಎ. ಸುಬ್ರಹ್ಮಣ್ಯ ಅವರ ಧೃಡವಾದ ಮಾತುಗಳು. ಅವರ ಪ್ರಕಾರ ‘ಪುಸ್ತಕ ಪ್ರೀತಿ ಬತ್ತಿಹೋಗಿದೆಯಾ?’ ಇದು ಪುಸ್ತಕ ಕ್ಷೇತ್ರದಲ್ಲಿರುವ ಎಲ್ಲರೂ ಇತ್ತೀಚೆಗೆ ಹೆಚ್ಚಾಗಿ ಎದುರಿಸುತ್ತಿರುವ ಪ್ರಶ್ನೆ ಇದು. 

ಹಾಗೆ ನೋಡಿದರೆ ನನ್ನ ೫೫ ವರ್ಷಗಳ ಅನುಭವದಲ್ಲಿ ಆಗಿನಿಂದಲೂ ಕೇಳಿಬರುತ್ತಿರುವಂತಹ ಪ್ರಶ್ನೆಯೇ ಆಗಿದೆ ಇದು. ಸಿನಿಮಾ ಬಂದಮೇಲೆ ಓದುಗರು ಕಡಿಮೆಯಾಗಿದ್ದಾರೆಯೇ? ಟೀವಿ ಬಂದಮೇಲೆ ಪುಸ್ತಕ ಕೊಳ್ಳುಗರ ಸಂಖ್ಯೆ ಬಿದ್ದುಹೋಗಿದೆಯೇ? ಎಂಬ ಪ್ರಶ್ನೆಗಳು ಈಗೀಗ ಮೊಬೈಲ್ ಫೋನ್ ಗೀಳಿನಿಂದಾಗಿ ಹೆಚ್ಚಾಗಿವೆ. ಹೊಸಜನಾಂಗಕ್ಕೆ 'ಗೂಗಲ್ ಗುರು' ಸಿಕ್ಕನಂತರವಂತೂ ಈ ಪ್ರಶ್ನೆ ಮತ್ತೆ ಮತ್ತೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರ ಶೋಧವೂ ನನ್ನಂಥವರ ಪ್ರಯತ್ನವಾಗಬೇಕು. ಹೌದು. ಸಿನಿಮಾ ಬಂತೆಂದು ಯಾರೂ ಪುಸ್ತಕ ಬಿಡಲಿಲ್ಲ. ಪುಸ್ತಕ ಓದುವವರೂ ಸಿನಿಮಾ ನೋಡುವವರೂ ಬೇರೆಯೇ ಆಗಿದ್ದರು. ಒಬ್ಬರೇ ಆಗಿದ್ದ-ಆಗಿರುವ ಸಂಭವ ತುಂಬ ಕಡಿಮೆ. ಮನೆಮನೆಯಲ್ಲೂ ಟೀವಿ ಬಂತಲ್ಲ? ಆ ಮೊದಲು ಆ ಮನೆಯವರೆಲ್ಲ ಪುಸ್ತಕ ಓದುವ ಗೀಳಿನವರಾಗಿದ್ದರೇ ಎಂಬುದಕ್ಕೂ ಇಂಥದೇ ಉತ್ತರ. ಆದರೆ, ಈಚಿನ ದಶಕದಲ್ಲಿ ವ್ಯಾಪಿಸಿರುವ ಮೊಬೈಲ್ ಫೋನ್ ಗೀಳು ಬರೀ ಪುಸ್ತಕ ಓದುಗರ ಸಮಯ ಮಾತ್ರ ಕಬಳಿಸುತ್ತಿಲ್ಲ, ಬದಲಾಗಿ ಎಲ್ಲ ಹವ್ಯಾಸದವರ ಮತ್ತು ಎಲ್ಲ ವೃತ್ತಿಯವರ ಸಮಯವನ್ನೇ ಕಸಿಯುತ್ತಿರುವುದು ಪೂರ್ತಿ ಸುಳ್ಳಲ್ಲ.

ಓದುಗರ ಸಂಖ್ಯೆ ಹೆಚ್ಚುತ್ತಿದೆ

ಏನೆಲ್ಲ ಪಲ್ಲಟಗಳ ಮಧ್ಯೆಯೂ ಓದಬೇಕಾದವರು ಓದುತ್ತಿಲ್ಲ. ಓದಿಸಬೇಕಾದವರು ಓದುವಂತೆ ಮಾಡುತ್ತಿಲ್ಲ ಎಂಬ ಕೊರಗಿನ ಮಧ್ಯೆಯೂ ಕನ್ನಡದ ಕ್ಲಾಸಿಕ್ ಕೃತಿಗಳ ಮಾರಾಟ ಮತ್ತು ಓದುಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಕಾಶಕರು, ಮಾರಾಟಗಾರರು ತಾವೂ ಓದಿ, ಓದುಗರಿಗೆ ಓದುವಂತೆ ಪ್ರೇರೇಪಿಸಬೇಕು. ಏಕೆಂದರೆ, ಸದ್ಯದ ಕಾಲಘಟ್ಟದಲ್ಲಿ ಆ ಬಗೆಯ ಪಾಲಕರ ಮತ್ತು ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ. ಇನ್ನು ಸರ್ಕಾರದ ಧೋರಣೆಯ ಬಗೆಗಂತೂ ಮಾತಾಡಿದರೂ ಪ್ರಯೋಜನವಿರದು. ಕನ್ನಡದ 50 ಶ್ರೇಷ್ಠ ಪುಸ್ತಕಗಳ ಪಟ್ಟಿ ಮಾಡಿಕೊಂಡು ಕನ್ನಡ ಬಲ್ಲವರೆಲ್ಲರಿಗೂ 'ಇವುಗಳನ್ನಾದರೂ ಓದಿ, ಇಲ್ಲದಿದ್ದರೆ ನಿಮಗೆ ಓದಲು ಬಂದರೂ ವ್ಯರ್ಥ. ಮಾತ್ರವಲ್ಲ; ಜನ್ಮವೇ ವ್ಯರ್ಥವೆನಿಸೀತು!"- ಎಂಬ ಎಚ್ಚರಿಕೆಯೊಂದಿಗೆ ತಲುಪಿಸಬೇಕು. ಪುಸ್ತಕ ಪ್ರೀತಿಯ ಒರತೆ ಬತ್ತದಂತೆ ನೋಡಿಕೊಳ್ಳಬೇಕು!

(ಮುಂದುವರಿಯುತ್ತದೆ)

ಕೃತಜ್ಞತೆಗಳು: ಎಂ ಎ ಸುಬ್ರಹ್ಮಣ್ಯ ಮತ್ತು ವಿಜಯವಾಣಿ ಪತ್ರಿಕೆ

ಚಿತ್ರ ಕೃಪೆ: ಅಂತರ್ಜಾಲ ತಾಣ