‘ಕನ್ನಡ’ ಎನುವ ಪದವೇ ಸೊಗಸು. ಹೊನ್ನಿಗಿಂತಲೂ ಮಿಗಿಲು. ಕನ್ನಡ ತಾಯಿಯ ಮಕ್ಕಳಾದ ನಾವು 'ಕರ್ನಾಟಕ 'ಎಂದು ನಾಮಾಂಕಿತವಾದ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ನಾಡು ನುಡಿಗಾಗಿ ಹೋರಾಡಿದ ಹಿರಿಯರನ್ನು ನೆನಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.

ಏಕೀಕರಣದ ಚಳುವಳಿ ೧೯೦೫ರಿಂದ ೧೯೫೦ರೊಳಗೆ ಬಹಳಷ್ಟು ಬಾರಿ ನಡೆಯಿತು. ಎಲ್ಲವೂ ಪ್ರಾಂತ್ಯವಾರು ಭಾಷೆಯ ಆಧಾರದ ಮೇಲೆ ಮೈಸೂರು ರಾಜ್ಯ ಉದಯವಾಯಿತು. ೧೯೫೬ ನವಂಬರ ೧ ರಂದು ಮದ್ರಾಸ್, ಹೈದರಾಬಾದ್, ಮುಂಬಯಿ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನವಾಗಿ 'ಕರ್ನಾಟಕ' ಎಂದು ನಾಮಕರಣವಾಯಿತು. ಈ ಮನ್ನಣೆಯು ದೇವರಾಜ್ ಅರಸುರವರ ಆಡಳಿತ ಕಾಲದಲ್ಲಾಯಿತು. ಆಲೂರರ ಜೊತೆಯಲ್ಲಿ ಕೈಜೋಡಿಸಿದವರು ಅನಕೃರವರು, ಡಾ  ಕೋಟ ಶಿವರಾಮ ಕಾರಂತರು, ಮಾಸ್ತಿಯವರು, ಕುವೆಂಪುರವರು, ಕೃಷ್ಣರಾವ್, ಬಿ.ಎಂ.ಶ್ರೀಯವರು ಮೊದಲಾದವರು.

'ಕರ್ನಾಟಕ' ಎನ್ನುವ  ಹೆಸರು ಹಿಂದಿನಿಂದಲೂ ಇತ್ತೆಂದು ಉಲ್ಲೇಖವಿದೆ. ಹೊಯ್ಸಳರು, ಕದಂಬರು, ಮೈಸೂರು ಅರಸರು 'ಕರ್ನಾಟಕ ಸಿಂಹಾಸನಾಧೀಶ್ವರ' ಎಂದು ಬಿರುದಾಂಕಿತರೆಂದು ಉಲ್ಲೇಖವಿದೆ. ಕರ್ನಾಟಕ ಸಾಹಿತ್ಯದಲ್ಲೂ ಆಸಕ್ತಿಯಿತ್ತು. ಹಾಗಾಗಿ ಕರ್ನಾಟಕ ಹೆಸರೇ ಬಂತು. ಮುಂದೆ ೧೯೭೩ ನವಂಬರ ೧ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ, ಉತ್ತರ ಕನ್ನಡ, ಉತ್ತರ ಕನ್ನಡ, ಮಲೆನಾಡು, ಹಳೆಯ ಮೈಸೂರು  ಸೇರಿ 'ಕರ್ನಾಟಕ' ವಾಯಿತು. ಕನ್ನಡಿಗರ ಸ್ಫೂರ್ತಿಯ ಸಂಕೇತವಾಗಿ ಹಳದಿ ಕೆಂಪು ಬಣ್ಣದ ಕನ್ನಡ ಧ್ವಜ, ನಾಡಗೀತೆ(ಜಯ ಭಾರತ ಜನನಿಯ ತನುಜಾತೆ) ಘೋಷಿಸಲ್ಪಟ್ಟಿತು. ಕರ್ನಾಟಕ ರಾಜ್ಯೋತ್ಸವದಂಗವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರವಿಟ್ಟು ಮೆರವಣಿಗೆ ಹಮ್ಮಿಕೊಳ್ಳಲಾಗುತ್ತದೆ. ಶಾಲೆ, ಸಂಘಸಂಸ್ಥೆಗಳು, ಕಛೇರಿಗಳಲ್ಲಿ ಕನ್ನಡ ಧ್ವಜಕ್ಕೆ ಗೌರವ ನೀಡಲಾಗುತ್ತದೆ. ಸಾಂಸ್ಕೃತಿಕ ಸಮಾರಂಭಗಳನ್ನು ಏರ್ಪಡಿಸಲಾಗುತ್ತದೆ. ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ ನೀಡುವುದಿದೆ. ಕನ್ನಡಮ್ಮನ ಮಡಿಲಿನ ಕುಡಿಗಳಾದ ನಮ್ಮ ಕರ್ತವ್ಯ ಬಹಳ ದೊಡ್ಡದಿದೆ. ವ್ಯವಹಾರಕ್ಕೆ ಯಾವುದೇ ಭಾಷೆ ಕಲಿಯೋಣ. ತಾಯಿ ಭಾಷೆಯ ಮರೆಯದಿರೋಣ. ಕನ್ನಡ ನಾಡು ನುಡಿಗಾಗಿ ನಾವೇನು ಮಾಡಬಹುದೆಂದು ಚಿಂತನ-ಮಂಥನ ನಡೆಸಬೇಕು. ಮನೆ ಮನೆಗಳಲ್ಲಿಯೂ ಮನೆ ಮಾತು ಕನ್ನಡವಿದ್ದಲ್ಲಿ ಪ್ರೋತ್ಸಾಹಿಸೋಣ.

ಕನ್ನಡ ಕಲಿಯೋಣ-ಕರ್ನಾಟಕ ನಾಡ ಹಬ್ಬವನ್ನು ಆಚರಿಸೋಣ.ಕನ್ನಡ ಭಾಷೆ,ಅದರ ಮಹತ್ವ,ಅರಿವು ಮೂಡಿಸುವ ಕೆಲಸವಾಗಬೇಕು.ಕಥೆ, ಕವನ, ಒಗಟು, ನುಡಿಗಟ್ಟು, ಪದಬಂಧ, ನಗೆಹನಿ, ವೈಚಾರಿಕ ಲೇಖನಗಳ ಪರಿಚಯ ಮಾಡಿಸಬಹುದು. ಅನ್ಯ ಭಾಷೆಗೆ ಗೌರವ ಕೊಡಬೇಕು ಹಾಗೆಂದು ಮಾತೃಭಾಷೆಯನ್ನು ತುಳಿಯಬಾರದು. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಕ್ರಮ ಕೈಗೊಳ್ಳಬೇಕು. ಕಾಲಾಯ ತಸ್ಮೈ ನಮಃ ಎಂಬ ಹಾಗೆ, ಈಗಿನ ಪರಿಸ್ಥಿಗೆ ಸರಿಯಾಗಿ ವ್ಯವಹಾರಿಕಾ ಭಾಷೆಯನ್ನು ಕಲಿಯಬೇಕಾಗುತ್ತದೆ. ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ನಾವು ಮನುಷ್ಯರಾಗಿರಬಹುದೆಂಬ ವ್ಯಾಮೋಹ, ಭ್ರಮೆಯಿಂದ ಹೊರಬರಬೇಕು. ಕನ್ನಡ ನೆಲ-ಜಲ, ಪ್ರಕೃತಿ ಪ್ರೀತಿ, ಗೌರವ ಬೆಳೆಸಿಕೊಳ್ಳಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಳ್ಳಬಹುದು. ಕನ್ನಡಕ್ಕಾಗಿ ದುಡಿದ, ದುಡಿಯುವ ಮಹನೀಯರನ್ನು ಗೌರವಿಸುವ ಕೆಲಸವಾಗಬೇಕು. ಯೋಗ್ಯರನ್ನು ಸ್ಥಳೀಯರು ಗುರುತಿಸಿ ಹೇಳಬೇಕು. ಅರ್ಹತೆಗೆ ಅಭಿನಂದನೆ ಸಿಗುವಂತಾಗಬೇಕು. ಸಾಹಿತಿಗಳ ಗುರುತಿಸುವಿಕೆ, ಎಲೆಯ ಮರೆಯ ಕಾಯಿಯಂತಿರುವವರನ್ನು, ಸದ್ದಿಲ್ಲದೆ  ಸಮಾಜ ಸೇವೆ ಮಾಡುವವರನ್ನು, ಮಕ್ಕಳ ಸಾಹಿತಿಗಳನ್ನು ಆರಿಸಿ ಅಭಿನಂದಿಸುವ ಕೆಲಸವಾಗಬೇಕು. ರಾಜ್ಯೋತ್ಸವ ಆಚರಣೆಯ ಮಹತ್ವವನ್ನು ಶಾಲಾ ಕಲಿಕೆಯಲ್ಲಿಯೇ ಮಕ್ಕಳಿಗೆ ಮನದಟ್ಟು ಮಾಡಬೇಕು. ಭಿನ್ನತೆಯಲ್ಲಿ ಏಕತೆ ಇರುವುದನ್ನು ಒಪ್ಪಿ ನಡೆಯಬೇಕು. ಒಟ್ಟಾರೆಯಾಗಿ ಕನ್ನಡವನ್ನು ಅಸಡ್ಡೆ(ತಾತ್ಸಾರ) ಮಾಡದೆ ಕನ್ನಡದ ಕೈಂಕರ್ಯವನ್ನು ಪ್ರತಿಯೋರ್ವ ಕನ್ನಡಿಗನೂ ಮಾಡಿ ತನ್ನ 'ಅಳಿಲಸೇವೆ'ಯನ್ನು ನಾಡಿಗಾಗಿ ಸಮರ್ಪಿಸಿದರೆ ರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗಬಹುದು.

 (ಸಂಗ್ರಹ ಮಾಹಿತಿ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ