ಬಿಹಾರ ಚುನಾವಣೆಯ ಪರಿಣಾಮವೋ, ಕಾಂಗ್ರೆಸ್ ಇರುವುದೇ ಹಾಗೆಯೋ, ಅದರ ವಂಶವಾಹಿನಿಯನ್ನು ಬಳಸುತ್ತಿರುವ ವಂಶದ ಮಾನಸಿಕತೆಯೇ ಹಾಗೆಯೋ ತಿಳಿಯದು ರಾಹುಲ್ ಗಾಂಧಿಯವರು ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ಯಾವ ಚುನಾವಣೆಯನ್ನು ಕಾಂಗ್ರೆಸ್ ತನ್ನ ಪ್ರತಿಷ್ಠೆ ಎಂದುಕೊಳ್ಳುತ್ತದೋ, ಯಾವ ಯಶಸ್ಸನ್ನು ರಾಹುಲ್ ಗಾಂಧಿ ತಲೆಗೆ ಕಟ್ಟಬೇಕೆಂದು ಪಕ್ಷ ಹಾತೊರೆಯುತ್ತಿರುತ್ತದೋ ಆಗ ಪರಿಸ್ಥಿತಿಗಳು ಕೈಮೀರತೊಡಗಿದರೆ, ತನ್ನ ತಂತ್ರಗಾರಿಕೆಗಳೆಲ್ಲವೂ ಬುಡಮೇಲಾಗತೊಡಗಿದರೆ ಕಾಂಗ್ರೆಸ್ ನಾಯಕರ ಬಾಯಿಂದ ಇಂಥ ಹೇಳಿಕೆಗಳು ಬರುತ್ತವೆ. ಅದರಲ್ಲಿ ಜನರ ಭಾವನೆಗಳ ಮೇಲೆ ಗೌರವಗಳಿರುವುದಿಲ್ಲ. ಸಂವೇದನೆಯಂತೂ ಸುತರಾಂ ಇರುವುದಿಲ್ಲ. ಸಮಾಜಮುಖಿ ಧ್ವನಿಯಿರುವುದಿಲ್ಲ. ರಾಹುಲ್ ಗಾಂಧಿಯವರ ಬಾಯಿಂದ ಈಗ ಸೇನೆ, ನ್ಯಾಯಾಂಗ ಮತ್ತು ಆಡಳಿತವರ್ಗಗಳಲ್ಲಿನ ಶೇ. ೧೦ರಷ್ಟು ಜನರು ಬಹುಸಂಖ್ಯಾತ ಕೆಳವರ್ಗಗಳ ಮೇಲೆ ದಬ್ಬಾಳಿಕೆ ನಡೆಸುತ್ತಾರ' ಎಂಬ ಮಾತು ಬಂದಿದೆ! ಅದರ ಧ್ವನಿಯನ್ನು ಕಾಣುವುದೇನು?
ಜವಾಬ್ದಾರಿ ಇರುವ ಯಾರೂ ಆಡದಂತಹ ಅವರಾಡಿದ್ದಾರೆ. ಭಾರತೀಯ ಸೇನೆಯ ಬಗ್ಗೆ ಕಾಂಗ್ರೆಸ್ ಸರ್ಕಾರಗಳು ಎಷ್ಟು ಮುತುವರ್ಜಿ ವಹಿಸಿದ್ದವು ಎಂಬುದು ತೆರೆದ ಪುಸ್ತಕ. ಆದರ ನ್ಯಾಯಾಂಗ ಮತ್ತು ಆಡಳಿತ ವರ್ಗಗಳಲ್ಲೂ ಮೇಲ್ವರ್ಗದ ಸಮುದಾಯಗಳ ಜನರಿಂದ ಉಳಿದವರು ದೌರ್ಜನ್ಯ ಅನುಭವಿಸುತ್ತಿದ್ದಾರೆ ಎನ್ನುವುದಷ್ಟು ಸರಿ? ಅದು ಸಂವಿಧಾನದ ಆಶಯಗಳು ಇನ್ನೂ ಈಡೇರಿಲ್ಲ ಎಂದಂತಲ್ಲವೇ? ಭಾರತದ ಸಂವಿಧಾನ ಸಾಮಾಜಿಕ ನ್ಯಾಯದ ನೆಲೆಯಲ್ಲಿ ದಮನಕ್ಕೊಳಗಾದ ವರ್ಗಗಳಿಗೆ ಮೀಸಲಾತಿಯ ಮೂಲಕ ನ್ಯಾಯದ ಅವಕಾಶವನ್ನು ನೀಡಿದೆ. ಆ ಮಟ್ಟಿಗೆ ಅಂಬೇಡ್ಕರರ ಆಶಯ ಕೂಡ ಈಡೇರುತ್ತಿದೆ. ದಮನಿತ ವರ್ಗಗಳು ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸುತ್ತಿದ್ದಾರೆ. ಅದರ ಬಗ್ಗೆ ದೇಶದ ಎಲ್ಲಾ ಪ್ರಜ್ಞಾವಂತರಿಗೆ ಹೆಮ್ಮೆ ಇದೆ. ಮೀಸಲಾತಿಯ ಮಹತ್ತ್ವವನ್ನು ಅರಿಯದವನು ದೇಶವನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ. ಆದರೆ ಸಾಮಾಜಿಕ ನ್ಯಾಯದ ನಿಯಮದಡಿಯಲ್ಲಿ ಉನ್ನತ ಹುದ್ದೆ ಮತ್ತು ಅಧಿಕಾರಕ್ಕೇರಿದ ವರ್ಗಗಳಿಗೆ ಇನ್ನೂ ನ್ಯಾಯ ಸಿಗಲಿಲ್ಲ ಎಂದ ಮಾತಿನ ಅರ್ಥವೇನು? ಅದು ಆ ವರ್ಗಕ್ಕೆ ಮಾಡಿದ ಅವಮಾನವಲ್ಲವೇ? ಸಾಮಾಜಿಕ ನ್ಯಾಯದ ವ್ಯಾಖ್ಯಾನವನ್ನೇ ತಿರುಚಿದಂತಾಗದೇ? ನ್ಯಾಯಾಂಗ ಕ್ಷೇತ್ರದಲ್ಲಿ ಇಂದು ದೇಶದ ಅತ್ಯಂತ ಉನ್ನತ ಸ್ಥಾನದಲ್ಲಿರುವವರು ಒಂದು ಕಾಲದಲ್ಲಿ ಸಮಾಜದಲ್ಲಿ ದಮನಕ್ಕೊಳಗಾಗಿದ್ದವರು ಎನ್ನುವುದನ್ನು ರಾಹುಲ್ ಗಾಂಧಿ ಮರೆತಿದ್ದಾರೆ. ರಾಷ್ಟ್ರಪತಿಗಳಂಥ ಸ್ಥಾನದಲ್ಲೂ ಬುಡಕಟ್ಟು ವರ್ಗದ ಮಹಿಳೆ ಅಲಂಕೃತರಾಗಿದ್ದಾರೆ. ಅಂಬೇಡ್ಕರರ ಆಶಯದಂತೆ ಸರ್ವರಿಗೂ ಶಿಕ್ಷಣ, ಅವಕಾಶಗಳು ಲಭ್ಯವಾಗುತ್ತಿವೆ. ಸಂವಿಧಾನದ ಕಾರಣದಿಂದ ಇಂದು ಸಾಮಾಜಿಕ ಮತ್ತು ಆರ್ಥಿಕ ಕಾರಣಕ್ಕಾಗಿ ಕೌಶಲ ಮತ್ತು ಪ್ರತಿಭೆಗಳು ಅವಕಾಶ ವಂಚಿತವಾಗಿವೆ ಎಂಬ ಪರಿಸ್ಥಿತಿಯಂತೂ ಈಗಿಲ್ಲ. ಆದ್ದರಿಂದ ರಾಹುಲ್ ಗಾಂಧಿಯವರ' ಮಾತು ದಮನಿತ ವರ್ಗದ ಒಗ್ಗಟ್ಟಿನ ಬಗ್ಗೆ ಅವರು ಸಂಶಯ ಪಟ್ಟಿದ್ದಾರೆ. ಒಂದು ವರ್ಗವನ್ನು ಜಾತಿಯ ಕಾರಣದಿಂದ ರಾಹುಲ್ ನೀವಿನ್ನೂ ದುರ್ಬಲರು ಎಂದಿದ್ದಾರೆ ಎಂದೇ ಅರ್ಥ. ಮಾತಿನ ಭರದಲ್ಲಿ ಹೊಣೆಗಾರಿಕೆ ಇರುವವರು ಹದ ತಪ್ಪಬಾರದು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೬-೧೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!