ಬ್ಯಾಂಕ್‌ ಗಳಲ್ಲಿ ಸ್ಥಳೀಯರು ಮತ್ತು ಸ್ಥಳೀಯ ಭಾಷೆ ಗೊತ್ತಿಲ್ಲದ ಅನ್ಯ ರಾಜ್ಯಗಳ ಸಿಬ್ಬಂದಿ ನಡುವೆ ಸಂವಹನದ ಭಾಷೆಯ ವಿಷಯಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಸಂಘರ್ಷಗಳು ನಡೆದಿತ್ತು. ಸ್ಥಳೀಯ ಭಾಷೆಯೇ ಗೊತ್ತಿಲ್ಲದ ಸಿಬ್ಬಂದಿಗಳನ್ನು ಹೀಗೆ ನೇಮಕ ಮಾಡುವುದು, ಅನಕ್ಷರಸ್ಥ ಅಥವಾ ಅಕ್ಷರಸ್ಥರಾಗಿದ್ದರೂ ಅನ್ಯ ಭಾಷೆ ಬರದ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸವಲತ್ತುಗಳನ್ನು ಸುಲಭವಾಗಿ ಪಡೆಯಲು ಅಡ್ಡಿಯಾಗಿತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಇಂಥ ವರ್ತನೆ ವಿರುದ್ಧ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ವತಃ ರಾಜ್ಯ ಸರ್ಕಾರವೇ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಹಣಕಾಸು ಸಚಿವರ ಗಮನ ಸೆಳೆಯಬೇಕಾದ ಅನಿವಾರ್ಯತೆ ಎದುರಾಗಿತ್ತು.

ಸ್ಥಳೀಯ ನೇಮಕಕ್ಕೆ ಆದ್ಯತೆ ಕುರಿತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಸೂಚನೆ ಸ್ವಾಗತಾರ್ಹ. ಈ ನಡುವೆ ಸ್ವಾಗತಾರ್ಹ ಬೆಳವಣಿಗೆ ಯೊಂದರಲ್ಲಿ, ಬ್ಯಾಂಕ್‌ಗಳು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳಬೇಕು ಮತ್ತು ಅವರ ಸ್ಥಳೀಯ ಭಾಷಾ ಜ್ಞಾನದ ಆಧಾರದಲ್ಲೇ ಅವರ ಕಾರ್ಯಕ್ಷಮತೆ ಅಳೆಯುವ ಕೆಲಸ ಆಗಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ. ಪ್ರತಿಯೊಂದು ಶಾಖೆಯ ನೇಮಿಸಲಾಗುವ ಎಲ್ಲಾ ಸಿಬ್ಬಂದಿಗೆ ಸ್ಥಳೀಯ ಜನತೆ ಮತ್ತು ಅವರು ಆಡುವ ಭಾಷೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು. ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಬರದಿದ್ದರೂ, ಶಾಖೆಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿರುವವರು ಆ ರಾಜ್ಯದ ಭಾಷೆಯನ್ನು ಅರಿತಿರುವುದು ಕಡ್ಡಾಯ. ಇದೇ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚಿಸಿರುವುದು ಉತ್ತಮ ಬೆಳವಣಿಗೆ. ಜನ ಸಾಮಾನ್ಯರೊಂದಿಗೆ ಅಧಿಕಾರಿಗಳು ಸೂಕ್ತ ಸಂವಹನ ನಡೆಸುವುದು ಸಾಧ್ಯವಾಗದೇ ಹೋದಲ್ಲಿ, ಬ್ಯಾಂಕಿಂಗ್ ಸೇವೆಗಳು ಜನರಿಗೆ ಸೂಕ್ತ ರೀತಿಯಲ್ಲಿ ದೊರಕುವುದು ಕಷ್ಟಕರ. ಹಿಂದೆಲ್ಲಾ ಅಧಿಕಾರಿಗಳಿಗೆ ಗ್ರಾಹಕರು ಮತ್ತು ಅವರ ಸಾಲ ಪಡೆದ ಅರ್ಹತೆಗಳ ಅರಿವಿರುತ್ತಿತ್ತು. ಆದರಿಂದು ಶಾಖೆಗಳಿಗೆ ತಮ್ಮ ಗ್ರಾಹಕರ ಪರಿಚಯವೇ ಇಲ್ಲದಂತಾಗಿದೆ. ಗ್ರಾಹಕರ ಮಾಹಿತಿಗಾಗಿ ಬ್ಯಾಂಕುಗಳೀಗ ಬಾಹ್ಯ ಕ್ರೆಡಿಟ್ ಮಾಹಿತಿ ಕಂಪನಿಗಳನ್ನು ಅವಲಂಬಿಸಿವೆ. ಇದರಿಂದಾಗಿ ಸಾಲಗಳು ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ ಎನ್ನುವ ಮೂಲಕ ಸಚಿವೆ ನಿರ್ಮಲಾ ಬ್ಯಾಂಕ್ ಗಳ ಸದ್ಯದ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹೀಗಾಗಿ ಇನ್ನಾದರೂ ಬ್ಯಾಂಕ್‌ಗಳು ಎಚ್ಚೆತ್ತುಕೊಂಡು ಸ್ಥಳೀಯರನ್ನೇ ಹೆಚ್ಚು ಹೆಚ್ಚು ನೇಮಕ ಮಾಡಬೇಕು ಮತ್ತು ಅನ್ಯ ರಾಜ್ಯಗಳಿಂದ ಬರುವವರಿಗೆ ತರಬೇತಿ ಮೂಲಕ ಸ್ಥಳೀಯ ಭಾಷೆಯ ಅರಿವು ಮೂಡಿಸುವ, ಸ್ಥಳೀಯರೊಂದಿಗೆ ಸೌಹಾರ್ಧಯುತವಾಗಿ ಮಾತುಕತೆ ನಡೆಸುವ ಕುರಿತು ಸೂಚನೆ ನೀಡಬೇಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ ದಿ: ೦೮-೧೧-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ