ಕಟ್ಟಬೇಕಿಲ್ಲಿ ನಾವ್ ಕರುನಾಡ ಮಣ್ಣಿನಲಿ
ಮೆಟ್ಟಿ ಎದೆಯೊಡ್ಡಿ ನಾವ್ ನಿಲ್ಲಬೇಕಿಲ್ಲಿ/
ಎಡರು ತೊಡರುಗಳ ಹಾದಿಯಲಿ
ಮೋಹ ಕೊಂಕುಗಳ ಬದಿಗಿರಿಸಿಯಿಲ್ಲಿ//
ಒಂದೇ ತೋಟದಿ ಅರಳಿದ ಪುಷ್ಪಗಳಿಹುದಿಲ್ಲಿ
ಜಾತಿ ಭೇದಗಳ ಕಿತ್ತೊಗೆವೆವಿಲ್ಲಿ/
ತುಂಗೆ ಭದ್ರೆ ಗೋದಾವರಿ ಕೃಷ್ಣೆ
ನೇತ್ರಾವತಿ ಕಾವೇರಿ ಪಾವನ ನದಿಗಳಿಲ್ಲಿ//
ರಾಜ ವಂಶಸ್ಥರು ಆಳಿ ಮೆರೆದಿಹರಿಲ್ಲಿ
ವೀರ ಧೀರ ಸ್ತ್ರೀರತ್ನಗಳು ಸೆಣಸಿಹರಿಲ್ಲಿ/
ನಾಡು ನುಡಿಯ ಅಕ್ಕರೆಯ ಸವಿಯಿಹುದಿಲ್ಲಿ
ಹೆಮ್ಮೆಯ ರಕುತ ಹರಿಯುತಿದೆ ಧಮನಿಯಲಿ//
ಅನ್ನದಾತರು ಬೆಳೆವರು ಹೊನ್ನನಿಲ್ಲಿ
ಸಕಲ ವೃತ್ತಿಯವರು ಒಮ್ಮತದಿ ಬಾಳುವರಿಲ್ಲಿ/
ಸಕ್ಕರೆಯ ಸವಿಜೇನು ತುಂಬಿಹುದಿಲ್ಲಿ
ರಾಗ ದ್ವೇಷ ಭೋಗಗಳ ತ್ಯಜಿಸೋಣವಿಲ್ಲಿ//
ಕನ್ನಡದ ಹೆಸರು ಬೆರೆತಿರಲಿ ತನುವಲಿ
ಹೊನ್ನುಡಿಯ ಬರವಣಿಗೆ ಸದಾ ನಲಿದಾಡುತಿರಲಿ/
ಸಂಗೀತ ನೃತ್ಯ ನಾಟಕ ಯಕ್ಷಗಾನದಲಿ
ಹೊಮ್ಮಲಿ ಸವಿನುಡಿಯು ಹೆಜ್ಜೆ ಹೆಜ್ಜೆಯಲಿ//
ಕನ್ನಡದ ಹಸಿರ ಸಿರಿ ಕಂಗೊಳಿಸಲಿ
ಮುನ್ನಡೆಯ ಸಾಧನೆಯ ಪಥವು ಸಾಗಲಿ/
ಮನದಾಸೆ ಮಹದಾಸೆ ಗುರಿಯೊಂದೇ ನನಗೆ
ಮತ್ತೊಮ್ಮೆ ಹುಟ್ಟುವೆ ಕನ್ನಡಮ್ಮನ ಗರ್ಭದಲಿ//
-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!