ಆ ಪಟ್ಟಣದ ರೈಲು ಹಳಿ ಪಕ್ಕದಲ್ಲಿ ಒಂದು ಮುರುಕಲು ಗುಡಿಸಲು, ಅದರ ಮೇಲೆ ನೀರು ಸೋರದಿರಲಿ ಎಂದು ನೀಲಿ ಬಣ್ಣದ ಪ್ಲಾಸ್ಟಿಕ್ ದೊಡ್ಡ ಹಾಳೆ ಹೊದಿಸಲಾಗಿತ್ತು. ಅದರ ಎದುರು ಸುಮಾರು ಹದಿನಾಲ್ಕು ವರ್ಷದ ಧೀರಜ್ ಎನ್ನುವ  ಬಾಲಕ ಕುಳಿತಿದ್ದ. ಆತನ ಕಣ್ಣಲ್ಲಿ ವಯಸ್ಸಿಗೂ ಮೀರಿ ದಣಿವು ಇಣುಕುತ್ತಿತ್ತು. ಕೈಯಲ್ಲೊಂದು ಪುಟ್ಟ ಬೋರ್ಡ್ ಹಿಡಿದಿದ್ದ ಅದರಲ್ಲಿ " ಇಲ್ಲಿ ಹಳೇ ಪೇಪರ್ , ಖಾಲಿ ಶೀಶೆ ಖರೀದಿಸಲಾಗುತ್ತದೆ" ಎಂದು ಬರೆದಿತ್ತು. ದಿನ ನಿತ್ಯ ತನ್ನ ಸೈಕಲ್ ರಿಕ್ಷಾದ ಎದುರು ಅದನ್ನು ಇಳಿ ಬಿಟ್ಟು  ರಸ್ತೆ ಮೇಲೆ ಹೋಗುತ್ತ ಜೋರಾಗಿ 

"ಹಳೇ ಪೇಪರ್.. ಖಾಲಿ. ಶೀಶಾ...." ಎಂದು ಕೂಗುತ್ತಿದ್ದ. ಜನರು ಆತನನ್ನು "ಹಳೇ ಪೇಪರ್ ಹುಡುಗ.." ಎಂತಲೇ ಕೂಗುತ್ತಿದ್ದರು ವಿನಃ ಆತನ ನಿಜವಾದ ಹೇಸರು ಕೇಳುತ್ತಿರಲಿಲ್ಲ. ಇಂದು ಎಂದಿನಂತೆ  ಹೊರಟಿದ್ದ ಧೀರಜ್ ದಾರಿಯಲ್ಲಿದ್ದ ಒಂದು ಶಾಲೆಯ ಮುಂದೆ ನಿಂತಿದ್ದ. ಅಲ್ಲಿ ಎಲ್ಲ ಮಕ್ಕಳು ಯೂನಿಫಾರ್ಮ್ ನಲ್ಲಿ ಇದ್ದವರು ಬೆನ್ನಿನ ಮೇಲೆ ಬ್ಯಾಗ್ ನೇತಾಕಿ ಕೊಂಡು ತಮ್ಮ ತಮ್ಮಲ್ಲೇ ನಗುತ್ತ ಹರಟುವುದನ್ನು ಆಸೆ ಕಣ್ಣಿನಿಂದ ನೋಡುತ್ತ ನಿಂತಿರುತ್ತಾನೆ. ಆಗ ಅಲ್ಲಿದ್ದ ಒಬ್ಬ ಹುಡುಗ ಈತನ ಹತ್ತಿರ ಬಂದವ"" ಯಾಕಣ್ಣಾ ನೀ ಶಾಲೆಗೆ ಹೋಗ್ತಿಲ್ವಾ"ಎಂದು ಮುಗ್ಧ ಪ್ರಶ್ನೆ ಕೇಳಿದಾಗ  ಧೀರಜ್ ತುಟಿ ಅಂಚಿನಲ್ಲಿ ನಸುನಗೆ ನಗೆ ಸೂಸುತ್ತ 

" ಇಲ್ಲಾ, ಏಕೆಂದರೆ ನಿನ್ನ ಬ್ಯಾಗ್ ನಲ್ಲಿ ಇರೋದು ನನ್ನ ಹತ್ರ ಇಲ್ಲಾ.." ಎಂದು ಹೇಳಿದಾಗ ಆ ಹುಡುಗ" ಏನು "ಎಂದು ಕೇಳಿದಾಗ ಧೀರಜ್" ಪುಸ್ತಕ " ಎಂದು ಉತ್ತರಿಸುತ್ತಾನೆ. ಅವನ ಮಾತು ಆಲಿಸಿದ ಆ ಹುಡುಗ ಮತ್ತೇನೂ ಮಾತಾಡದೇ ಸೀದಾ ತನ್ನ ತರಗತಿಯತ್ತ ಹೋಗುತ್ತಾನೆ. ಇತ್ತ ಧೀರಜ್ ಮತ್ತೆ " ಹಳೇ ಪೇಪರ್... ಖಾಲಿ ಶೀಶಾ..." ಎಂದು ಕೂಗುತ್ತ ಸೈಕಲ್ ಏರಿ ಹೊರಟು ಹೋಗುತ್ತಾನೆ. ಸಾಯಂಕಾಲ ಆತ ಒಂದು ಮನೆಯ ಮುಂದುಗಡೆ  ಬಂದಾಗ ಅಲ್ಲಿ ಗೇಟಿನ ಪಕ್ಕ.  ಒಂದಿಷ್ಟು ಪುಸ್ತಕ, ಪೇಪರ್ ಬಿದ್ದಿರುವುದನ್ನು ನೋಡುತ್ತಾನೆ. ಅಷ್ಟರಲ್ಲಿ ಆ ಮನೆಯ ಬಾಗಿಲು ತೆರೆದು ಓರ್ವ ವೃದ್ಧ ಮಹಿಳೆ ಬಂದವಳು ಆತನಿಗೆ " ಇದೆಲ್ಲಾ ತಗೋಂಡು ಹೋಗಪ್ಪಾ... ದುಡ್ಡು ಗಿಡ್ಡು ಏನೂ ಕೊಡಬೇಡಾ.. ಇವೆಲ್ಲ ನನ್ನ ಮಗನ ಪುಸ್ತಕಗಳು" ಎಂದಾಗ ಆತ  " ಆಂಟೀ ತುಕಾ ಹಾಕ್ಲಾ?"ಎಂದು ಕೇಳಿದಾಗ ಅವರು ಏನೂ ಬೇಡಾ.. ಹಾಗೇ ತಗೊಂಡು ಹೋಗೂಂತ ಹೇಳಿದ್ನಲ್ಲಾ... ಮನೆಯಲ್ಲಿ ಇಡೋಕೆ ಜಾಗಾ ಇಲ್ಲ.." ಎನ್ನುತ್ತಾರೆ.ಆಯ್ತು ಎಂದ ಧೀರಜ್ ಅವುಗಳನ್ನು ತನ್ನ ರಿಕ್ಷಾದ ಇಡಲು ಮುಂದಾದಾಗ ಅದೇಕೋ ಒಂದು ಎಕ್ಸರ್ಸೈಜ್ ಮೇಲೆ ಕಣ್ಣು ಹೋಗಿ ಅದನ್ನು ಪ್ರತ್ಯೇಕವಾಗಿ ಇಡುತ್ತಾನೆ.ಆ ಎಕ್ಸರ್ಸೈಜ್ ರಕ್ಷಾ ಪುಟದ ಮೇಲೆ "ಅಜೀತ್.. ಹತ್ತನೇ ತರಗತಿ " ಎಂದು ಬರೆದಿರುತ್ತದೆ. ರಾತ್ರಿ ತನ್ನ ಗುಡಿಸಿಲಿದ್ದಾಗ ಧೀರಜ್ ಆ ಎಕ್ಸರ್ಸೈಜ್ ಬುಕ್ ತೆಗೆದು ನೋಡುತ್ತಾನೆ. ಅದರ ಮೊದಲನೇ ಪುಟದಲ್ಲಿ "ಯಾವಾಗಲೂ ದೊಡ್ಡ ಕನಸು ಕಾಣು... ಏಕೆಂದರೆ ಸಣ್ಣ ಕನಸಿನಲ್ಲಿ ಶಕ್ತಿ ಇರಲ್ಲ.." ಎಂದಿರುತ್ತದೆ  ಹಾಗೂ ಹೀಗೂ ಕಷ್ಟ ಪಡುತ್ತ. ರಾತ್ರಿ ಎಷ್ಟೊತ್ತಾದರೂ ಆತ ಅದನ್ನೇ ಓದಲು ಪ್ರಯತ್ನಿಸುತ್ತಾನೆ.

ಮುಂದೆ ಕೆಲವು ದಿನಗಳ ನಂತರ ಅದರಲ್ಲಿರುವುದನ್ನು ನಿಧಾನವಾಗಿ ಅಕ್ಷರ ಜೋಡಿಸಿಕೊಂಡು ಓದುತ್ತ ಹೋದಂತೆ ಉತ್ಸಾಹ  ಜಾಸ್ತಿ ಆಗಿ ಆತನಿಗೇನೋ ಒಂದು ಖಜಾನೆ ದೊರೆತಂತಾಗುತ್ತದೆ. ಒಂದು ದಿನ ಆತ ಅದೇ ಶಾಲೆಯ ಮುಂದೆ ಹೋಗುತ್ತಿದ್ದಾಗ  ಅಂದು ಮಾತನಾಡಿಸಿದ್ದ ಹುಡುಗ ಎದುರಾಗಿ "ಇದೇನೋ ... ನೀ ಇನ್ನೂ  ಈ ಹಳೇ ಪೇಪರ್ ವ್ಯವಹಾರ ಬಿಟ್ಟೇ ಇಲ್ವಾ" ಎಂದು ಕೇಳಿದಾಗ ಧೀರಜ್ -"ಇಲ್ಲ.. ಈಗ ನಾನು ಈ ಹಳೇ ಪೇಪರ್ ನಲ್ಲಿಯೇ ಓದನ್ನು ಕಂಡ್ಕೋತಾ ಇದ್ದೇನೆ.." ಎಂದಾಗ ಆತನ ಮಾತು ಆಲಿಸಿದ ಆ ಹುಡುಗ ನಗಲು ಆರಂಭಿಸಿದವ ಪುನಃ ಆತನಿಗೆ - ನಿನಗೆ ಓದಲು ಇಷ್ಟವಾ "ಎಂದು ಕೇಳಿದಾಗ ಧೀರಜ್ ಹೌದು ಎಂಬಂತೆ ತಲೆ ಆಡಿಸುತ್ತ.... ಯಾರಾದರೂ ಕಲಿಸಿದ್ರೆ ಖಂಡಿತ ಕಲೀತಿನಿ" ಎನ್ನುತ್ತಾನೆ. ಆ ಹುಡುಗ  ತನ್ನ ಮನೆ ಬಂದವ ಈ ವಿಚಾರ ತನ್ನ ತಾಯಿ ಜೋತೆ ಮಾತನಾಡುತ್ತಾನೆ. ಆತನ ತಾಯಿ ಕೂಡ ಶಿಕ್ಷಕಿ ಆಗಿ ಕೆಲಸ ಮಾಡುತ್ತಿರುತ್ತಾರೆ.

ಅವರ ಹೆಸರು ನಿರ್ಮಲಾ. ಮರುದಿನ ಸ್ವತಃ ನಿರ್ಮಲಾ ರವರೇ  ಧೀರಜ್ ಇರುವ ಬಳಿ ಬಂದು " ನಿನಗೆ ನಿಜಕ್ಕೂ ಓದು ಬರಹ ಕಲಿಯಲು ಇಷ್ಟಾನಾ" ಎಂದು ಕೇಳಿದಾಗ ಆತ " ಹೌದು ಮೇಡಂ  ಆದ್ರೆ ನಿಮಗೆ ಫೀಸ್ ಕೊಡಲು ನನ್ನ ಬಳಿ ಹಣ ಇಲ್ಲ" ಎಂದು ಹೇಳಿದಾಗ ನಿರ್ಮಲಾರವರು " ನನಗೆ ಫೀಸು ಗೀಸು ಎಂಥಾದ್ದೂ ಬೇಡಾ.. ಆದರೆ ನನಗೆ ಒಂದು ವಚನ ಕೊಡು ಏನೆಂದರೆ ಇನ್ನು ಹಳೇ ಪೇಪರ್ ಮಾರಿದಂತೆ ನಿನ್ನ ಕನಸುಗಳನನ್ನೂ ಮಾರಬೇಡಾ ಗೊತ್ತಾಯ್ತಾ.... ಎನ್ನುತ್ತಾರೆ. ಆತ ಅದಕ್ಕೆ ಸಮ್ಮತಿಸುತ್ತಾನೆ. ಅಂದಿನಿಂದಲೇ ಆತನ ಬದುಕು ಬದಲಾಗುತ್ತದೆ. ಬೆಳಿಗ್ಗೆ ಯಿಂದ ಸಂಜೆ ವರೆಗೆ ಹಳೇ ಪೇಪರ್ ಖಾಲಿ ಶೀಶೆ ವ್ಯವಹಾರ ಮಾಡಿ ಸಂಜೆ ಆಯಿತೆಂದರೆ ನಿರ್ಮಲಾ ರ ಮನೆಗೆ ತಪ್ಪದೇ ಓದು ಬರಹ ಕಲಿಯಲು ಹೋಗಲು ಶುರು ಮಾಡುತ್ತಾನೆ. ಹೀಗೆ ಬರಬರುತ್ತ ಆತ ನಿಧಾನವಾಗಿ  ಅಕ್ಷರ , ಶಬ್ದ ನಂತರ ವಾಕ್ಯ ರಚನೆ ಮಾಡುವುದು ಕಲಿತವ ಐದಾರು ತಿಂಗಳಲ್ಲಿ ಸತತ ಪ್ರಯತ್ನದಿಂದ ಪೇಪರ್ ಓದುವ ಮಟ್ಟಕ್ಕೆ ಬರುತ್ತಾನೆ. ಇದು ಹೀಗೆ ಮುಂದುವರೆದಾಗ ಆತನ ಪ್ರಗತಿ ಗಮನಿಸಿದ ನಿರ್ಮಲಾ ಟೀಚರ್ ಆತನಿಗೆ  "ಧೀರಜ್.. ನೀನು ಪರೀಕ್ಷೆ ಕಟ್ತಿಯಾ? ನಾನು ಹೇಗೋ ಮಾಡಿ ನಿನ್ನನ್ನು ಶಾಲೆಗೆ ಸೇರಿಸ್ತೀನಿ" ಎಂದಾಗ ಧೀರಜ್ ಕೊಂಚ ನಾಚಿಕೊಳ್ಳೂತ್ತ ಅವರಿಗೆ " ಮೇಡಂ  ನಾನು ಆಗಲೇ  ಸುಮಾರು ಹದಿನಾಲ್ಕು ವರ್ಷದವ.. ಅಲ್ಲಿ ಎಲ್ಲಾ ಮಕ್ಕಳು ನನಗಿಂತ ಚಿಕ್ಕವರಿರ್ತಾರೆ..." ಎಂದಾಗ ನಿರ್ಮಲಾ ರವರು " ನೋಡು.. ಕನಸಿಗೆ ಯಾವ ವಯಸ್ಸೂ ಇರಲ್ಲ.. ನಾನಿದ್ದೇನೆ ನೀನು ಧೈರ್ಯವಾಗಿರು ಎಂದು ಆತನಿಗೆ ಅಡ್ಮಿಷನ್ ಕೊಡಿಸುತ್ತಾರೆ. ಆರಂಭದಲ್ಲಿ ಎಲ್ಲ ಮಕ್ಕಳು ಈತನನ್ನು ಕಂಡು  " ನೋಡ್ರೋ.. ಹಳೇ ಪೇಪರ್ ಖಾಲಿ ಶೀಶೆ ನಮ್ಮ ತರಗತಿಗೂ ಬಂತು" ಎಂದು ಗೇಲಿ ಮಾಡತೊಡಗಿದ್ದರಾದರೂ, ಬರಬರುತ್ತ ಎಲ್ಲರೂ ಸುಮ್ಮನಾಗಿ ಬಿಡುತ್ತಾರೆ.  ಏಕೆಂದರೆ ಧೀರಜ್ ತನ್ನ  ಸತತ ಪ್ರಯತ್ನದಿಂದ ಇಡೀ ತರಗತಿಯಲ್ಲಿ ಎಲ್ಲರಿಗಿಂತ ಮುಂದೆ ಬರತೊಡಗಿದ್ದ.ಹಗಲಿಡೀ ಹಳೇ ಪೇಪರ್ ಮತ್ತು ಖಾಲಿ ಶೀಶೆ ಯ ವ್ಯವಹಾರ, ರಾತ್ರಿ ತುಂಬಾ ಹೊತ್ತಿನವರೆಗೆ ಓದುವುದು ಮಾಡುತ್ತಿದ್ದ. ಹೀಗೆ ಮಾಡಿ ತನಗೆ ದಣಿವು ಎನಿಸಿದಾಗ ಆತ ಆ ಎಕ್ಸರ್ಸೈಜ್ ನ ಮೊದಲನೇ ಪುಟದಲ್ಲಿ ಬರೆದ ಬರಹ ಏನೆಂದರೆ " ಯಾವತ್ತೂ ದೊಡ್ಡ ಕನಸು ಕಾಣುತ್ತಿರ ಬೇಕು" ಎನ್ನುವುದನ್ನು ಓದುತ್ತಿರುತ್ತಾನೆ. ಇದೇ ರೀತಿ ಆತ ಚೆನ್ನಾಗಿ ಓದುತ್ತಿರುವುದನ್ನು ಗಮನಿಸಿದ ನಿರ್ಮಲಾ ರವರು ನಾಲ್ಕು ವರ್ಷಗಳ ನಂತರ ಆತನೊಂದಿಗೆ ತಮ್ಮ ಬಳಿ ಇದ್ದ  ಹಳೇ ಮೊಬೈಲ್ ಕೊಡುತ್ತ " ನೋಡು.. ಇನ್ನು ನೀನು ಕಾಲೇಜ್ ಗೆ ಹೋಗ್ತಿರುವವ " ಎಂದಾಗ ಆತ ಅವರಿಗೆ" ಮೇಡಂ.. ಈಗ ನಾನು ಹಳೇ ಪೇಪರ್ ಹುಡುಗ ಅನಿಸ್ತೀನಾ" ಎಂದು ಕೇಳಿದಾಗ ಅವರು" ಧೀರಜ್ ನೀನು ಈಗ ಹಳೇ ಪೇಪರ್ ಹುಡುಗ ಅಲ್ಲ.. ಕಥೆಯಾಗಿರುವವ " ಎನ್ನುತ್ತಾರೆ.

ಹೀಗೆ ದಿನಗಳು ಉರುಳಿದಂತೆ ಆತ ಕಾಲೇಜಿನ ಶಿಕ್ಷಣದೊಂದಿಗೆ  ಪಾರ್ಟ್ ಟೈಂ ಕೆಲಸ ಮಾಡತೊಡಗುತ್ತಾನೆ. ಅದೇನೆಂದರೆ  ಚಿಕ್ಕ ಬಡ ಮಕ್ಕಳಿಗೆ ಪಾಠ ಹೇಳಿಕೊಡುವುದು. ಏಕೆಂದರೆ ಆತನಿಗೆ ತಾನು ಎಲ್ಲವನ್ನೂ ಮುಫತ್ತಾಗಿ ಕಲಿತಿದ್ದು ನೆನಪಿರುತ್ತದೆ .ಬರಬರುತ್ತ ಆ ಏರಿಯಾದಲ್ಲೆಲ್ಲ ಇವನದೇ ಮಾತು ಕೇಳಿಬರತೊಡಗುತ್ತದೆ.

ಸುಮಾರು ಹತ್ತು ವರ್ಷಗಳ ನಂತರ ನಿರ್ಮಲಾರವರಿಗೆ ಒಂದು ಪ್ರಸಿದ್ಧ ವಾದ ಶಾಲೆಯ ಇವೆಂಟ್ ನಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದಾಗ ಅಲ್ಲಿದ್ದ ಆಂಕರ್  " ಇನ್ನು ಕೆಲವೇ ನಿಮಿಷಗಳಲ್ಲಿ ಈ ನಮ್ಮ ನಿರ್ಮಲಾ ಮೇಡಂ ರವರು ರಸ್ತೆಯಲ್ಲಿ ಹಳೇ ಪೇಪರ್ ಖಾಲಿ ಶೀಶೆ ವ್ಯವಹಾರ ಮಾಡುತ್ತಿದ್ದ ಒಬ್ಬ ಹುಡುಗನನ್ನು ಇಂದು ಅಮೂಲ್ಯ ರತ್ನ ವನ್ನಾಗಿಸಿದ ಹುಡುಗನ ಪರಿಚಯಯ ಮಾಡಿಸುತ್ತೇವೆ "ಎಂದು 

ಅನೌನ್ಸ್  ಮಾಡಿದಾಗ  ಯುವಕ ಧೀರಜ್ ಬಂದು ಕೈ ಮುಗಿದು ನಿಲ್ಲುತ್ತಿದ್ದಂತೆ ನೆರೆದ ಜನರ ಚಪ್ಪಾಳೆ  ಶಬ್ದ ಮುಗಿಲು ಮುಟ್ಟುವಂತಿತ್ತು. ಸೂಟು ಬೂಟು ಧರಿಸಿದ, ಧೀರಜ್ ಕೈ ಯಲ್ಲಿ ಮೈಕ್ ಹಿಡಿದವ ಮತ್ತೊಮ್ಮೆ ಎಲ್ಲರಿಗೂ ನಮಸ್ಕರಿಸುತ್ತ " ನಾನು ಧೀರಜ್... ಅದೇ ಹಳೇ ಪೇಪರ್ ಖಾಲಿ ಶೀಶೆ ವ್ಯವಹಾರ ಮಾಡುತ್ತಿದ್ದವ" ಎಂದು ಹೇಳಿದಾಗ ಮತ್ತೆ ಜೋರಾಗಿ ಚಪ್ಪಾಳೆ ಶಬ್ದ ಕೇಳಿ ಬರತೊಡಗಿದವು.

ಅತ್ತ ನಿರ್ಮಲಾ ಮೇಡಂ ಕಣ್ಣಿನಿಂದ ಒಂದೇ ಸಮ ಆನಂದ ಭಾಷ್ಪ ಸುರಿಯತೊಡಗಿತ್ತಿರುತ್ತವೆ. ಮುಂದುವರೆದ ಧೀರಜ್ -" ಈ ಮೊದಲು ನನ್ನ ಬಳಿ ಎರಡೇ ವಸ್ತುಗಳಿದ್ದವು ಒಂದು ಮುರುಕಲು ಸೈಕಲ್ ರಿಕ್ಷಾ ಹಾಗೂ ಮತ್ತೊಂದು ಒಂದು ಹಳೇ ಎಕ್ಸರ್ಸೈಜ್ ಬುಕ್. ಅದರಲ್ಲಿನ" ಮುರಿದ ವಸ್ತು ಗಳೂ ಸಹ ಕನಸು ನನಸಾಗಿ ಮಾಡಬಲ್ಲವು.. ಎನ್ನುವ ಮಾತಿನ ಪ್ರೇರಣೆ ಯಿಂದಲೇ ನಾನು ಇಂದು ಒಳ್ಳೆ ಶಾಲೆಯ ಶಿಕ್ಷಕನಾಗಿ ಕೆಲಸ ಮಾಡುವ ಮಟ್ಟಕ್ಕೆ ಬಂದಿದ್ದೇನೆ. ಇದೆಲ್ಲವೂ ನಮ್ಮ ನಿರ್ಮಲಾ ಮೇಡಂ ನವರ ಕೃಪೆ, ಆಶೀರ್ವಾದದ ಫಲ ಎಂದರೆ ತಪ್ಪಾಗಲಾರದು. ಅವರಿಂದಾಗಿ ನಾನು ಹೊಸ ಬದುಕು ಕಟ್ಟಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಇಂದಿಗೂ ನನ್ನಬದುಕಿಗೆ ತಿರುವು ಕೊಟ್ಟ ಆ ಎಕ್ಸರ್ಸೈಜ್ ಬುಕ್ ನ್ನು ಜತನವಾಗಿ ನನ್ನ ಬೀರುವಿನಲ್ಲಿ ಇಟ್ಟುಕೊಂಡಿದ್ದೇನೆ. ಇದಲ್ಲದೇ ನಮ್ಮ ನಿರ್ಮಲಾ ಮೇಡಂ ರವರು  ನನಗೆ ಹಾಕಿ ಕೊಟ್ಟ ಬುನಾದಿ ಯಂತೆ ಈಗಲೂ ನಾನು ಬಡ ಮಕ್ಕಳಿಗೆ ಪಾಠ ಮಾಡುತ್ತಿದ್ದೇನೆ. ನನ್ನ ಈ ಎಲ್ಲ ಸಾಧನೆಗೆ ಅವರೇ ಕಾರಣ ಎಂದು ಹೇಳಿ ನನ್ನ ನಾಲ್ಕು ಮಾತು ಮುಗಿಸುವೆ " ಎಂದು ಹೇಳಿ ಮುಗಿಸಿದಾಗ ಕುಳಿತವರೆಲ್ಲ ಎದ್ದು ನಿಂತು ಮತ್ತೊಮ್ಮೆ ಚಪ್ಪಾಳೆ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸುತ್ತಾರೆ.

-ಅರವಿಂದ.ಜಿ.ಜೋಷಿ, ಮೈಸೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ