ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ದೇಶದ ಉಳಿದ ಭಾಗವು ಕಳೆದೊಂದು ದಶಕ ದಿಂದ ಭಯೋತ್ಪಾದನಾ ದಾಳಿಯಿಂದ ಬಹುತೇಕ ಮುಕ್ತವಾಗಿತ್ತು, ಆದರೆ, ದಿಲ್ಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟವು ಪುನಃ ಹಳೆಯ ದಿನಗಳನ್ನು ನೆನಪಿಸಿರುವುದು ದುರಂತ. ಇದು ಉಗ್ರರ ಹೇಯ ದುಷ್ಕೃತ್ಯ ಎಂದು ಸಂಪುಟ ಸಭೆಯೂ ತೀರ್ಮಾನಿಸಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ಯುದ್ಧ ಇನ್ನೂ ಮುಗಿದಿಲ್ಲ ಎಂಬುದನ್ನೂ ಈ ದುರ್ಘಟನೆ ಎಚ್ಚರಿಸಿದೆ.
ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಿಂದ ಕೇರಳದವರೆಗೆ ವಿವಿಧೆಡೆ ಸ್ಫೋಟಕ ವಸ್ತುಗಳ ವಶ, ಶಂಕಿತರ ಬಂಧನಗಳು ಹೆಚ್ಚಾಗಿದ್ದವು. ಈ ಮೂಲಕ ಭದ್ರತಾ ಏಜೆನ್ಸಿಗಳು ಸಾಕಷ್ಟು ಸಂಭಾವ್ಯ ಉಗ್ರ ಕೃತ್ಯಗಳನ್ನು ನಿಶ್ಯಬ್ದಗೊಳಿಸಿದ್ದವು. ಆದರೆ, ದಿಲ್ಲಿಯಲ್ಲಿನ ಸ್ಫೋಟದ ಮುನ್ಸೂಚನೆ ಅರಿಯಲು ಗುಪ್ತಚರ ವಿಭಾಗ ಸ್ವಲ್ಪಮಟ್ಟಿಗೆ ವಿಫಲವಾಗಿದ್ದು, ತತ್ಪರಿಣಾಮ ೧೨ ನಾಗರಿಕರ ಜೀವನಷ್ಟ ಅನುಭವಿಸಬೇಕಾಗಿ ಬಂದಿರುವುದು ಮಾತ್ರ ದುರಂತ. ಈ ಸ್ಫೋಟ ಸಂಭವಿಸಿದ್ದನ್ನು ಗಮನಿಸಿದಾಗ, ದಿಲ್ಲಿಯ ನಾನಾ ಕಡೆ ಭಾರೀ ಆಘಾತ ನೀಡಲು ಉಗ್ರರು ಸಜ್ಜಾಗಿದ್ದರು. ಆದರೆ, ಅವಸರದಲ್ಲಿ ಸ್ಪೋಟಗೊಂಡು ಮಹಾದುರಂತ ತಪ್ಪಿ ಹೋಗಿದೆ ಎನ್ನುವುದು ಭದ್ರತಾ ತಜ್ಞರ ವಿಶ್ಲೇಷಣೆಯೇ ಆದರೂ, ಈ ದುಷ್ಕೃತ್ಯದ ಕಲ್ಲು ರಾಷ್ಟ್ರದ ರಾಜಧಾನಿಯಲ್ಲಿ ಎಬ್ಬಿಸಿದ ತರಂಗಗಳು ಮಾತ್ರ ಘನಘೋರ
ಬಂದರು ಅಲ್ಲದೆ, ಭಾರತದ ಆಂತರಿಕ ಶಾಂತಿಯನ್ನು ಇಂಥ ಸ್ಫೋಟಗಳ ಮೂಲಕ ಕದಡುತ್ತಿರುವ ಪಾಕ್ ಪ್ರೇರಿತ ಉಗ್ರರ ಕೃತ್ಯ ನಾಚಿಕೆಗೇಡು. ಉಗ್ರರೇಕೆ ರಾಜಧಾನಿಯ ಹೆಬ್ಬಾಗಿಲಿಗೆ ಬಂ ಎನ್ನುವ ಪ್ರಶ್ನೆಯ ಹಿಂದೆ ಪಿತೂರಿ ಸಿದ್ಧಾಂತಗಳೂ ಎದ್ದು ತೋರುತ್ತಿವೆ. ಪಹಲ್ಯಾಮ್ ದುರಂತಕ್ಕೆ ಪ್ರತೀಕಾರವಾಗಿ ಭಾರತ 'ಆಪರೇಷನ್ ಸಿಂದೂರ' ನಡೆಸಿ, ಗಡಿಯಾಚೆಗಿನ ಜೈಶೆ ಮೊಹಮ್ಮದ್, ಲಷ್ಕರೆ ತೈಬಾದ ನೆಲೆಗಳನ್ನು ನಿರ್ನಾಮ ಮಾಡಿತ್ತು. ದಿಲ್ಲಿ ಸ್ಫೋಟ ಅದಕ್ಕೆ ಪ್ರತೀಕಾರವೇ? ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಈ ಪ್ರಕರಣದಲ್ಲಿ ಭಾಗಿಯಾದವರು ಹಾಗೂ ಬಂಧನಕ್ಕೊಳಗಾದವರೆಲ್ಲ ಉನ್ನತ ಶಿಕ್ಷಣ ಪಡೆದವರು ಮತ್ತು ಶ್ರೀಮಂತ ಕುಟುಂಬಗಳಿಂದ ಬಂದವರು ಎನ್ನುವುದು ಗಮನಾರ್ಹ. ಬಡತನ, ನಿರುದ್ಯೋಗದಿಂದಾಗಿ ಉಗ್ರವಾದ ಹೆಡೆಯೆತ್ತಿದೆ ಎನ್ನುವ ವಾದ ಈಗ ಹುಸಿಯಷ್ಟೇ. ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಡಾ. ಮುಜಮ್ಮಿಲ್, ಫರಿದಾಬಾದ್ನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು. ಅಲ್ಲದೆ, ಬಂಧಿತರಾದ ಶೋಪಿಯಾನ್ನ ಮೌಲ್ವಿ ಇರ್ಫಾನ್ ಅಹ್ಮದ್, ಮನ್ಸೂದ್ ಅಹ್ಮದ್ ದಾರ್, ಶ್ರೀನಗರದ ಆರಿಫ್ ನಿಸಾರ್ ದಾರ್ ಮತ್ತು ಯಾಸಿರ್ ಉಲ್ ಅಶ್ರಫ್, ಗಂದೇರ್ಬಾಲ್ನ ಜಮೀರ್ ಅಹ್ಮದ್ - ಇವರಾರೂ ಬಡವರು, ನಿರುದ್ಯೋಗಿಗಳು ಅಥವಾ ಅನಕ್ಷರಸ್ಥರಲ್ಲ, ಹಾಗೆಯೇ, ಕೆಂಪುಕೋಟೆ ಬಳಿಯ ಸ್ಫೋಟದಲ್ಲಿ ಸಾವನ್ನಪ್ಪಿದ ಡಾ. ಉಮರ್ ನಬಿ ಎಂ.ಡಿ. ಪದವಿ ಪಡೆದ ವೈದ್ಯ, ಈತನ ಮತ್ತೊಬ್ಬ ಸಹಚರ ಡಾ. ಶಾಹೀನ್ ಕೂಡ ವೈದ್ಯೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕು. ಈ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೇಗೆಸಂಗ್ರಹಿಸಿದರು ಎಂಬುದು ಪ್ರಶ್ನೆ ತೀವ್ರ ತನಿಖೆಯಿಂದ ಸ್ಫೋಟದ ಸಂಚು ಬಯಲಾಗಲಿ. ಪಾತಕಿಗಳಿಗೆ ತಕ್ಕ ಶಿಕ್ಷೆಯಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೩-೧೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!