ಮುರುಗನ್ ಎಂದರೆ ಯಾರೋ ಪುಟ್ಟ ಹುಡುಗ ಅಂದುಕೊಳ್ಳಬೇಡಿ. ಶಾಲೆಗೆ ಹೋಗದೇ ಹಠ ಮಾಡುತ್ತಿದ್ದ ಮೂರುಗನ್ ಎಂಬ ಬಾಲಕನಿಗೆ ಆತನ ಪೋಷಕರು ಮಂಚ್ ಚಾಕಲೇಟ್ ನೀಡಿ ಪುಸಲಾಯಿಸಿ ಶಾಲೆಗೆ ಕರೆದುಕೊಂಡು ಹೋದರು ಎಂದು ತಿಳಿದುಕೊಳ್ಳಲೇ ಬೇಡಿ. ಇಲ್ಲಿ ಮುರುಗನ್ ಎಂದರೆ ಸಾಕ್ಷಾತ್ ದೇವರು. ದೇವರು ‘ಮಂಚ್’ ಚಾಕಲೇಟ್ ತಿನ್ನುತ್ತಾರಾ? ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಎಲ್ಲವೂ ಸಾಧ್ಯ. ಇಲ್ಲಿ ದೇವರಿಗೆ ಮದ್ಯ, ಏಡಿ, ಮಾಂಸ, ಒಣ ಮೀನು, ಇಲಿ, ಪೇಡಾ, ಬರ್ಫಿ ಎಲ್ಲವನ್ನೂ ಅರ್ಪಿಸಬಹುದಾಗಿದೆ. ಪ್ರತಿಯೊಂದು ದೇವಸ್ಥಾನಕ್ಕೂ ಅದರದ್ದೇ ಆದ ವಿವಿಧ ಬಗೆಯ ಆಚರಣೆಗಳು ಇರುತ್ತವೆ ಮತ್ತು ಅವುಗಳಿಗೊಂದು ಐತಿಹಾಸಿಕ ಹಿನ್ನಲೆಯೂ ಇರುತ್ತದೆ.
ಹೆಚ್ಚಾಗಿ ಹಿಂದೂ ದೇವಾಲಯಗಳಲ್ಲಿ ದೇವರ ನೈವೇದ್ಯಕ್ಕೆ ಹಣ್ಣು ಹೂವು ಅರ್ಪಿಸಲಾಗುತ್ತದೆ. ತುಪ್ಪ, ಬೆಣ್ಣೆ, ಮೋದಕ ಅಥವಾ ಲಡ್ಡುವನ್ನು ಸಾಮಾನ್ಯವಾಗಿ ಅರ್ಪಿಸಲಾಗುತ್ತದೆ. ಅದೂ ಇರಲಿ. ಪಾಯಸ, ಪೊಂಗಲ್, ಪುಳಿಯೊಗರೆ, ಮೊಸರನ್ನ ಹೀಗೆ ನಾನಾ ಬಗೆಯ ಆಹಾರವನ್ನೂ ನೈವೇದ್ಯಕ್ಕೆ ಇಡಲಾಗುತ್ತದೆ ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ‘ಮಂಚ್’ ಚಾಕಲೇಟನ್ನು ಅರ್ಪಿಸಲಾಗುತ್ತಿದೆ. ಕೇರಳದ ದೇವಸ್ಥಾನವೊಂದರಲ್ಲಿ ಈ ಥರದ ತೀರಾ ವಿಚಿತ್ರ ಆಚರಣೆಯೊಂದು ನಡೆಯುತ್ತಿದೆ. ಕೇರಳದ ಅಲಪುಜ್ಜಾದ ‘ಮಂಚ್’ ಮುರುಗನ್ ದೇವಸ್ಥಾನದಲ್ಲಿ, ಮಂಚ್ ಚಾಕೊಲೇಟ್ ಅನ್ನು ದೇವರಿಗೆ ನೈವೇದ್ಯವಾಗಿ ಭಕ್ತರು ಸಮರ್ಪಿಸುತ್ತಾರೆ. ಅಷ್ಟೇ ಅಲ್ಲ, ಈ ದೇವಸ್ಥಾನದಲ್ಲಿ ವಿಶೇಷ ಸಂದರ್ಭಗಳಲ್ಲಿ ಮಂಚ್ ಚಾಕೊಲೇಟ್ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಈ ಪದ್ಧತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ನಡೆಸಿಕೊಂಡು ಬಂದಿದ್ದಾರೆ.
ಸುಮಾರು ೩೦೦ ವರ್ಷ ಇತಿಹಾಸವಿರುವ ಚೆಮ್ಮೊತ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿರುವ ಬಾಲ ಮುರುಗನ್ ದೇವರಿಗೆ ‘ಮಂಚ್’ ಚಾಕಲೇಟ್ ಅರ್ಪಿಸುವ ಕ್ರಮ ಜಾರಿಗೆ ಬಂದದ್ದು ಇತ್ತೀಚೆಗೆ. ಸುಮಾರು ೨೦ ವರ್ಷಗಳ ಹಿಂದೆ ಮುಸ್ಲಿಂ ಬಾಲಕನೋರ್ವ ಈ ದೇವಸ್ಥಾನದಲ್ಲಿರುವ ಗಂಟೆಗಳನ್ನು ಬಾರಿಸುತ್ತಾನೆ ಮತ್ತು ಗಂಟೆ ಬಾರಿಸುವ ಕ್ರಮವನ್ನು ತಮಾಷೆ ಮಾಡುತ್ತಾನೆ. ಆದರೆ ಅದೇ ದಿನ ರಾತ್ರಿ ಆತನಿಗೆ ತೀವ್ರವಾದ ಜ್ವರ ಕಾಡುತ್ತದೆ. ಆತ ತೀವ್ರವಾದ ಜ್ವರದಲ್ಲೂ ‘ಮುರುಗನ್’ ಎಂಬ ಹೆಸರನ್ನು ಕನವರಿಸುತ್ತಾನೆ. ಇದನ್ನು ಕಂಡು ಗಾಬರಿಯಾದ ಆತನ ಹೆತ್ತವರು ಅವನನ್ನು ಮರುದಿನ ಬೆಳಿಗ್ಗೆಯೇ ಮುರುಗನ್ ದೇವಾಲಯಕ್ಕೆ ಕರೆದು ತರುತ್ತಾರೆ. ಅಲ್ಲಿಯ ಅರ್ಚಕರು ‘ಆ ಹುಡುಗ ಮಾಡಿದ ತಪ್ಪಿನಿಂದ ಮುರುಗನ್ ಸ್ವಾಮಿಗೆ ಅಪಚಾರವಾಗಿದೆ. ದೇವರಿಗೆ ತಪ್ಪು ಕಾಣಿಕೆ ರೂಪದಲ್ಲಿ ಏನಾದರೂ ವಸ್ತುಗಳನ್ನು ನೀಡಬೇಕು’ ಎನ್ನುತ್ತಾರೆ. ಆತನ ಹೆತ್ತವರು ಹೂವು, ಹಣ್ಣು ಮತ್ತು ಎಣ್ಣೆಗಳನ್ನು ನೀಡುತ್ತಾರೆ
ಆದರೆ ಆ ಹುಡುಗ ಮಾತ್ರ ತನ್ನ ಕಿಸೆಯಿಂದ ‘ಮಂಚ್’ ಚಾಕಲೇಟ್ ತೆಗೆದು ದೇವರ ಎದುರಿನ ಪೀಠದಲ್ಲಿಡುತ್ತಾನೆ. ಪವಾಡ ಎಂಬಂತೆ ಆ ಹುಡುಗ ಗುಣಮುಖನಾಗುತ್ತಾನೆ. ಈ ವಿಷಯ ಊರಿನಾದ್ಯಂತ ಹರಡುತ್ತದೆ. ಕ್ರಮೇಣ ಜನರು ಮುರುಗನ್ ಸ್ವಾಮಿಗೆ ‘ಮಂಚ್’ ಚಾಕಲೇಟ್ ಅರ್ಪಿಸಲು ಪ್ರಾರಂಭಿಸುತ್ತಾರೆ. ಮುರುಗನ್ ಸ್ವಾಮಿ ‘ಮಂಚ್’ ಮುಗುಗನ್ ಆಗಿ ಬಿಡುತ್ತಾರೆ. ಮಂಚ್ ಚಾಕಲೇಟ್ ನಿಂದ ತುಲಾಭಾರವೂ ಈ ದೇಗುಲದಲ್ಲಿ ಜರುಗುತ್ತದೆ. ಈ ದೇಗುಲಕ್ಕೆ ಮಕ್ಕಳು ಹೆಚ್ಚಾಗಿ ಬಂದು ಪರೀಕ್ಷೆಯಲ್ಲಿ ತಮಗೆ ಉತ್ತಮ ಅಂಕಗಳನ್ನು ಗಳಿಸುವಂತೆ ಆಶೀರ್ವಾದವನ್ನು ಬೇಡುತ್ತಾರೆ. ‘ಮಂಚ್’ ಚಾಕಲೇಟ್ ಸಹಾ ಅರ್ಪಿಸಿ ಹೋಗುತ್ತಾರೆ. ಹೇಗಿದೆ ನಮ್ಮ ವೈವಿಧ್ಯಮಯ ಆಚರಣೆಗಳು…?
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!