ಆಯಾ ದೇಶದ ಆಡಳಿತಾತ್ಮಕ ಮತ್ತು ಮಿಲಿಟರಿ ವ್ಯವಸ್ಥೆಯ ರೂಪಣೆ, ನಿಗಾವಣೆ, ನಿರ್ವಹಣೆಗಳು ಅಲ್ಲಲ್ಲಿನ ನೀತಿ - ನಿಯಮಾವಳಿ, ಸಂವಿಧಾನ ಇತ್ಯಾದಿಗಳಿಗೆ ಬಿಟ್ಟ ವಿಷಯ. ಆಯಾ ಕಾಲಘಟ್ಟದ ಅನಿವಾರ್ಯತೆಗೆ ತಕ್ಕಂತೆ ವ್ಯವಸ್ಥೆಯಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅದರಲ್ಲಿ ಸೇರಿರುತ್ತದೆ. ಆದರೆ ಪ್ರಸ್ತುತ ವಿಶ್ವದ ‘ಭೂರಾಜಕೀಯ’ ಯಾವ ಪರಿಸ್ಥಿತಿಗೆ ಮುಟ್ಟಿದೆಯೆಂದರೆ, ನೆರೆಹೊರೆಯ ರಾಷ್ಟ್ರಗಳ ಆಳುಗ/ಮಿಲಿಟರಿ ವ್ಯವಸ್ಥೆಗಳಲ್ಲಿ ಒಂದು ಸಣ್ಣ ಕದಲಿಕೆಯಾದರೂ ಅದನ್ನು ನಿರ್ಲಕ್ಷಿಸಲಾಗದಂತಹ ಸಂದರ್ಭ ಎದುರಾಗಿದೆ. ಹೌದು, ನೆರೆರಾಷ್ಟ್ರ ಪಾಕಿಸ್ತಾನವನ್ನು ಗಮನದಲ್ಲಿಟ್ಟುಕೊಂಡೇ ಈ ಮಾತನ್ನು ಹೇಳುತ್ತಿರುವುದು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರಿಗೆ ಜೀವನಪರ್ಯಂತ ರಕ್ಷಣಾ ಮುಖ್ಯಸ್ಥನ ಹುದ್ದೆಯಲ್ಲಿರುವುದಕ್ಕೆ ಅನುವು ಮಾಡಿಕೊಡುವಂಥ ಸಾಂವಿಧಾನಿಕ ತಿದ್ದುಪಡಿಯನ್ನು ಅಲ್ಲಿನ ಸಂಸತ್ತು ಅಂಗೀಕರಿಸಿದೆಯಂತೆ. ಇದರನ್ವಯ, ಪಾಕಿಸ್ತಾನದ ಭೂಸೇನೆ - ವಾಯುಪಡೆ - ನೌಕಾಪಡೆಗಳ ಮೇಲೆ ಮುನೀರ್ ಅವರಿಗೆ ಹೆಚ್ಚಿನ ಅಧಿಕಾರ ದಕ್ಕಲಿದೆ. ಇದಕ್ಕೆ ಪಾಕ್ ನೆಲದಲ್ಲೇ ಒಂದು ಮಟ್ಟಿಗಿನ ವಿರೋಧವೂ ವ್ಯಕ್ತವಾಗಿದೆಯೆನ್ನಿ. ಭಾರತದ ಮೇಲೆ ಮುರಕೊಂಡು ಬೀಳಲು ಇನ್ನಿಲ್ಲದಂತೆ ತವಕಿಸುವ ಮುನೀರ್ ಮಹಾಶಯರು, ತಮಗೆ ದಕ್ಕಿರುವ ಹೆಚ್ಚುವರಿ ಅಧಿಕಾರವನ್ನು ಈ ನಿಟ್ಟಿನಲ್ಲಿ ಚೆನ್ನಾಗಿಯೇ ಬಳಸಿಕೊಳ್ಳಬಹುದು ಎಂಬುದು ಬಲ್ಲವರ ಅಭಿಮತ. 

ಹೀಗಾಗಿ ಪಾಕ್ ನಲ್ಲಾಗಿರುವ ಈ ಬೆಳವಣಿಗೆಯ ಸಂಭಾವ್ಯ ಹೆಜ್ಜೆಗಳನ್ನು ಮುನ್ನಂದಾಜಿಸಿ ಭಾರತವು ಈಗಿನಿಂದಲೇ ಪ್ರತಿತಂತ್ರವನ್ನು ಹೆಣೆದಿಟ್ಟುಕೊಂಡು, ಸೇನಾಸನ್ನದ್ಧತೆಗೆ ಮತ್ತಷ್ಟು ಇಂಬುಕೊಡಬೇಕಾದ ಅಗತ್ಯವಿದೆ. ಇದು ಶಾಂತಿಪ್ರಿಯರನ್ನು ಹೆದರಿಸುವ ಮಾತಲ್ಲ ; ಬದಲಿಗೆ ನೆರೆ ರಾಷ್ಟ್ರದ ವಿಕ್ಷಿಪ್ತರನ್ನು ಕಟ್ಟಿಹಾಕಿ ಕೆಡವಲು ಹೂಡಲೇಬೇಕಾದ ರಣತಂತ್ರದ ಮಾತಾಗಿದೆ. ಏಕೆಂದರೆ, ಭಾರತದ ಮೌನವನ್ನೂ ಸೌಜನ್ಯವನ್ನೂ ‘ದೌರ್ಬಲ್ಯ’ ಎಂದೇ ಪರಿಗಣಿಸುವ ಪಾಕಿಸ್ತಾನದ ಆಳುಗರು ಮತ್ತು ಸೇನಾನಾಯಕರ ಪಡೆಗಳನ್ನು ನಂಬಲಾಗದು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೫-೧೧-೨೦೨೫ 

ಚಿತ್ರ ಕೃಪೆ: ಅಂತರ್ಜಾಲ ತಾಣ