ನಾಯಿ, ಹಾವು ಇತ್ಯಾದಿ ಪ್ರಾಣಿಗಳ ಕಡಿತ, ದಾಳಿಯಿಂದ ಗಾಯಗೊಂಡಂತಹ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆ ಬರುವವರಿಗೆ ಶುಲ್ಕವನ್ನು ಮುಂಗಡವಾಗಿ ಪಾವತಿ ಮಾಡಬೇಕು ಎಂದು ಕಟ್ಟುನಿಟ್ಟು ಮಾಡದೆ ಎಲ್ಲ ಖಾಸಗಿ ಆಸ್ಪತ್ರೆಗಳು ತುರ್ತು ಚಿಕಿತ್ಸೆ ಒದಗಿಸಬೇಕು ಎಂದು ಸರಕಾರ ಆದೇಶ ಹೊರಡಿಸಿರುವುದು ಸರಿಯಾಗಿಯೇ ಇದೆ. ವನ್ಯಪ್ರಾಣಿಗಳು, ಹಾವುಗಳಿಂದ ಕಡಿತಕ್ಕೆ ಒಳಗಾಗುವ ಪ್ರಕರಣಗಳು, ಬೀದಿನಾಯಿ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಾಗತಾರ್ಹ ಆದೇಶ ಇದು. ಎಷ್ಟೋ ಜೀವಗಳು, ಮಾರಣಾಂತಿಕ ಹಾನಿ, ಆರೋಗ್ಯ ಸಮಸ್ಯೆಗಳು. ಉಂಟಾಗುವುದನ್ನು ಈ ಆದೇಶ ತಪ್ಪಿಸಬಹುದಾಗಿದೆ. ಮುಖ್ಯವಾಗಿ ನಾಯಿ, ಹಾವು ಇತ್ಯಾದಿ ಕಡಿತ, ದಾಳಿಯಿಂದ ಹೆಚ್ಚು ತೊಂದರೆಗೀಡಾಗುವ ಗ್ರಾಮೀಣ ಪ್ರದೇಶಗಳ ಜನರಿಗೆ ಈ ಆದೇಶದಿಂದ ಅನುಕೂಲವಾಗಬಹುದಾಗಿದೆ.

ನಾಯಿ, ಹಾವು ಕಡಿತ, ವನ್ಯಪ್ರಾಣಿಗಳ ದಾಳಿಯಂತಹ ಸನ್ನಿವೇಶಗಳಲ್ಲಿ ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಮೊದಲು ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ಮುಂಗಡ ಹಣ ಪಾವತಿ ಮಾಡುವಂತೆ ಆಗ್ರಹಿಸಬಾರದು ಎಂದು ಈ ಆದೇಶ ಹೇಳುತ್ತದೆ. ಅಂದರೆ ಇಂತಹ ತುರ್ತು ಪರಿಸ್ಥಿತಿಗಳಲ್ಲಿ ರೋಗಿಯ ಪ್ರಾಣ ರಕ್ಷಣೆಯೇ ಮೊದಲ ಆದ್ಯತೆಯಾಗಬೇಕು. ಆ ಬಳಿಕ ಅರ್ಹ ಪ್ರಕರಣಗಳಲ್ಲಿ ಸರಕಾರದಿಂದ ವೆಚ್ಚ ಭರಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.

ವಿಷದ ಹಾವು ಕಡಿದಂತಹ ಸಂದರ್ಭಗಳಲ್ಲಿ ಚಿಕಿತ್ಸೆ ಎಷ್ಟು ಬೇಗನೆ ದೊರೆಯುತ್ತದೆಯೋ ಅಷ್ಟು ಒಳ್ಳೆಯದು. ವ್ಯಕ್ತಿಯ ಜೀವ ಉಳಿಸಲು, ಅಂಗಾಂಗ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ನಾಯಿ ಕಡಿತದಂತಹ ಸಂದರ್ಭಗಳಲ್ಲಿ ತತ್‌ ಕ್ಷಣ ಪ್ರಾಣಕ್ಕೆ ಅಪಾಯ ಇಲ್ಲವಾದರೂ ರೇಬಿಸ್ ನಿರೋಧಕ ಲಸಿಕೆ ಸಾಧ್ಯವಾದಷ್ಟು ಬೇಗನೆ ಹಾಕಿಸಿಕೊಳ್ಳುವುದು ಒಳ್ಳೆಯದು. ವನ್ಯಪ್ರಾಣಿಗಳ ಹಾವಳಿ ಇರುವಲ್ಲಿ ಅವುಗಳ ದಾಳಿಯಿಂದ ಗಾಯಗೊಂಡರೆ ಆದಷ್ಟು ಬೇಗನೆ ಚಿಕಿತ್ಸೆಗೆ ಒಳಗಾಗುವ ಅಗತ್ಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಎಲ್ಲ ಕಡೆಯೂ ಉಚಿತ ಆರೋಗ್ಯ ಸೇವೆ ಲಭ್ಯವಿರುವ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವುದಿಲ್ಲ. ಅಂಥಲ್ಲಿ ಖಾಸಗಿ ಆಸ್ಪತ್ರೆಗೆ ತೆರಳುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹಣ ಪಾವತಿಸದೆ ಚಿಕಿತ್ಸೆ ಪಡೆಯುವುದಕ್ಕೆ ಈ ಆದೇಶದಿಂದ ಅನುಕೂಲವಾಗಲಿದೆ. ಹೀಗೆ ಚಿಕಿತ್ಸೆ ನೀಡಬೇಕಾದುದು ಮಾನವೀಯ ಮತ್ತು ವೈದ್ಯಕೀಯ ನೈತಿಕತೆಯ ದೃಷ್ಟಿಯಿಂದಲೂ ಸರಿ, ಅದನ್ನೇ ಈ ಸರಕಾರಿ ಆದೇಶ ಹೇಳಿದೆ.

ನಾಯಿ, ಪ್ರಾಣಿ, ಹಾವುಗಳ ಕಡಿತ ಎಂದಲ್ಲ; ಯಾವುದೇ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಆಸ್ಪತ್ರೆಗಳು ಅಗತ್ಯ ಚಿಕಿತ್ಸೆಯನ್ನು ತತ್‌ಕ್ಷಣ ಒದಗಿಸಿ ಪ್ರಾಣ ರಕ್ಷಣೆ ಮಾಡುವ ಧೈಯವನ್ನು ಹೊಂದಿರಬೇಕು.

ಈ ಆದೇಶ ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗುವಂತೆ ನೋಡಿ ಕೊಳ್ಳಬೇಕಾದ ಜವಾಬ್ದಾರಿ ಆರೋಗ್ಯ ಮತ್ತು ಇತರ ಸಂಬಂಧಿತ ಇಲಾಖೆಗಳ ಮೇಲಿದೆ. ಹೀಗೆ ತುರ್ತು ಚಿಕಿತ್ಸೆ ನೀಡಿದ ಅರ್ಹ ಪ್ರಕರಣಗಳಲ್ಲಿ ಮುಂದೆ ಸರಕಾರಕ್ಕೆ ವಿವರ ಸಲ್ಲಿಸಿ ಮರುಪಾವತಿ ಪಡೆಯಬಹುದು ಎಂದು ಈ ಆದೇಶ ಹೇಳಿದೆ. ಇಂತಹ ಕ್ಲೇಮುಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಸರಕಾರ, ಇಲಾಖೆಗಳ ಮೇಲೆ ವಿಶ್ವಾಸ ಹುಟ್ಟುತ್ತದೆ. ಮುಂದೆಯೂ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಪ್ರೇರಣೆ ದೊರೆಯುತ್ತದೆ. ಉಚಿತ ಚಿಕಿತ್ಸೆ ನೀಡಿ ಮರುಪಾವತಿ ವಿಳಂಬವಾದರೆ ರೋಗಿಗೂ ಆಸ್ಪತ್ರೆಗೂ ಸಮಸ್ಯೆಯಾಗಬಹುದು. ಇದನ್ನು ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಈ ಆದೇಶ ಸಾರ್ಥಕತೆ ಪಡೆಯುತ್ತದೆ. ಸರಕಾರದ ಆದೇಶ ಸಮರ್ಪಕವಾಗಿ ಪಾಲನೆಯಾಗುವಂತೆ ಸರಕಾರ ನೋಡಿಕೊಳ್ಳಬೇಕಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೮-೧೧-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ