ನಮ್ಮ ಮನೆಯಲ್ಲೇ ಸುಲಭದಲ್ಲಿ ದೊರೆಯುವ ಹಣ್ಣೆಂದರೆ ಬಾಳೆ  ಹಣ್ಣು. ಆದರೆ ಅದು ನಮಗೆ ಅದು ಅಷ್ಟು ಇಷ್ಟವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಕಿತ್ತಳೆ, ಮೂಸಂಬಿ, ಸೇಬು ಹಾಗೂ ಇನ್ನಿತರ ವಿದೇಶೀ ಹಣ್ಣುಗಳನ್ನು ನಾವು ಎಷ್ಟು ಬೆಲೆಯಾದರೂ ಕೊಟ್ಟು ಖರೀದಿ ಮಾಡುತ್ತೇವೆ. ಅದು ತಪ್ಪಲ್ಲ. ಆದರೆ ನಮ್ಮ ಮನೆಯಂಗಳದಲ್ಲೇ ಬೆಳೆಯುವ ಬಾಳೆ ಹಣ್ಣಿನಲ್ಲಿರುವಷ್ಟು ಶರೀರ ಪೊಷಕಗಳು ಬೇರೆ ಹಣ್ಣಿನಲ್ಲಿ ಇರಲಿಕ್ಕಿಲ್ಲ. ಬಾಳೆ ಹಣ್ಣು ತಿಂದ ತಕ್ಷಣ ಅದರಲ್ಲಿನ ಪೋಷಕಾಂಶಗಳು ರಕ್ತಕ್ಕೆ ಸೇರುವ ಗುಣವನ್ನು ಹೊಂದಿದೆ. ಆಯಾಸವಾದವರು ಗ್ಲೂಕೋಸ್ ಮಿಶ್ರಿತ ನೀರನ್ನು ಕುಡಿಯುವುದನ್ನು ನೀವು ಕೇಳಿರಬಹುದು. ಗ್ಲೂಕೋಸ್ ಬದಲಿಗೆ ಬಾಳೆ ಹಣ್ಣು ತಿಂದರೂ ಅದು ತಕ್ಷಣ ಆಯಾಸ ಪರಿಹರಿಸಿಕೊಡುತ್ತದೆ. ಇದನ್ನು ನೀವು ಕ್ರೀಡಾ ಸ್ಪರ್ಧೆಗಳು ನಡೆಯುವಾಗ, ವಿರಾಮದ ಸಮಯದಲ್ಲಿ ಕ್ರೀಡಾಳುಗಳು ಬಾಳೆಹಣ್ಣನ್ನು ತಿನ್ನುತ್ತಾರೆ. ಏಕೆಂದರೆ ಗ್ಲುಕೋಸ್ ಮಿಶ್ರಿತ ನೀರಿಗಿಂತ ನೈಸರ್ಗಿಕವಾಗಿ ದೊರಕುವ ಬಾಳೆಹಣ್ಣಿನ ಪೋಷಕಾಂಶಗಳು ಉತ್ತಮ ಹಾಗೂ ದೇಹಕ್ಕೆ ತಕ್ಷಣ ಲಭ್ಯವಾಗುತ್ತವೆ.

ಬಾಳೆ ಹಣ್ಣು ಎಷ್ಟು ಹಣ್ಣಾಯಿತೋ ಅಷ್ಟು ಅದರಲ್ಲಿ ಪೊಷಕಗಳು ಹೆಚ್ಚು ಇರುತ್ತವೆ. ಹೆಚ್ಚಿನವರು ಸಿಪ್ಪೆ ಹಳದಿ ಇರುವಾಗ ತಿನ್ನಲು ಇಚ್ಚೆ ಪಡುತ್ತಾರೆ. ಸ್ವಲ್ಪ ಸಿಪ್ಪೆ ಕಪ್ಪಗಾದರೆ ಅದು ಹಾಳಾಗಿದೆ ಎಂದು ತಿರಸ್ಕರಿಸುತ್ತಾರೆ. ನಿಜಾಂಶ ಏನೆಂದರೆ ಬಾಳೆ ಹಣ್ಣಿನ ಸಿಪ್ಪೆ ಹಳದಿಯಾದಾಗ ಅದು ಸಂಪೂರ್ಣವಾಗಿ ಮಾಗುವ ಮೊದಲ ಹಂತದಲ್ಲಿರುತ್ತದೆ. ಪೂರ್ತಿ ಹಣ್ಣಾಗುವಾಗ ಅದರ ಹಳದಿ ಬಣ್ಣ ಇನ್ನಷ್ಟು ದಟ್ಟವಾಗುತ್ತದೆ. ಹಳದಿಯಾಗಿರುವಾಗ ಅದರ ಸಿಪ್ಪೆ ದಪ್ಪ ಇರುತ್ತದೆ. ಹಣ್ಣಾದಂತೆ ತೆಳುವಾಗಲಾರಂಭಿಸುತ್ತದೆ. ಪೂರ್ತಿ ಪಕ್ವವಾದ ಬಾಳೆ ಹಣ್ಣು ಉತ್ತಮ ಸಿಹಿ ಹೊಂದಿದ್ದು, ಸ್ವಲ್ಪವೂ ಒಗರು ಹೊಂದಿರುವುದಿಲ್ಲ. ಅದನ್ನು ಬಾಯಿಗಿರಿಸಿದಾಗಲೇ ಅದು ಕರಗುತ್ತದೆ. ಜಠರದಲ್ಲಿ ಬೇಗ ಜೀರ್ಣವಾಗುತ್ತದೆ. ಒಂದು ರೀತಿಯ ಆಕರ್ಷಕ ಸುವಾಸನೆಯನ್ನೂ ಹೊಂದಿರುತ್ತದೆ. ಪೂರ್ತಿ ಮಾಗಿದ ಬಾಳೆ ಹಣ್ಣನ್ನು ಸೇವಿಸುವುದರಿಂದ ಅದರ ನಾರಿನಂಶ, ವಿಟಮಿನ್ ಇನ್ನಿತರ ಪೋಷಕಾಂಶ ಶರೀರಕ್ಕೆ  ದೊರೆಯುತ್ತದೆ. ಅರೆ ಪಕ್ವ ಹಣ್ಣಿನಲ್ಲಿ ಅದು ಕಡಿಮೆ ಪ್ರಮಾಣದಲ್ಲಿದ್ದು, ಸೇವಿಸಿದರ ಲಾಭ ನಮ್ಮ ದೇಹಕ್ಕೆ ಸಿಗುವುದಿಲ್ಲ. ರೋಬಸ್ಟಾ ಅಥವಾ ಕ್ಯಾವಂಡೀಸ್ ತಳಿಯ ಬಾಳೆ ಹಣ್ಣುಗಳು ಪೂರ್ಣ ಪ್ರಮಾಣದಲ್ಲಿ ಹಣ್ಣಾಗುವಾಗ ಅದ ಮೈಮೇಲೆ ಚುಕ್ಕಿಗಳು ಬೀಳಲು ಪ್ರಾರಂಭವಾಗುತ್ತವೆ. ಚುಕ್ಕಿಗಳ ಸಂಖ್ಯೆ ಹೆಚ್ಚಾಗಿ ಬಾಳೆ ಹಣ್ಣಿನ ನೋಟ ಸೊಗಸಾಗಿಲ್ಲದೇ ಇದ್ದರೂ ಅಂತಹ ಬಾಳೆ ಹಣ್ಣು ಆರೋಗ್ಯಕ್ಕೆ ಉತ್ತಮ. ಪಕ್ವ ಬಾಳೆ ಹಣ್ಣು ಸೇವಿಸುವುದರಿಂದ ನಮ್ಮ ಶರೀರದಲ್ಲಿ ಕ್ಯಾನ್ಸರ್ ವಿರುದ್ಧ  ಹೋರಾಡುವ ಆಂಟೀ ಬಾಡೀಸ್ ಅಭಿವೃದ್ದಿಯಾಗುತ್ತದೆ. ಈ ಕಾರಣದಿಂದ ನಿಯಮಿತವಾಗಿ ಬಾಳೆ ಹಣ್ಣನ್ನು ಸೇವಿಸಿ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ