ನಕ್ಸಲ್ ಪಿಡುಗಿನ ವಿರುದ್ಧ ಸಾರಿರುವ ಸಮರದಲ್ಲಿ ಭಾರತೀಯ ಸಶಸ್ತ್ರಪಡೆಗಳಿಗೆ ಮತ್ತೊಂದು ದೊಡ್ಡ ಗೆಲುವು ದೊರಕಿದೆ. ''ನಕ್ಸಲೀಯ ಭಯೋತ್ಪಾದನೆಯ ಒಸಾಮಾ ಬಿನ್ ಲಾಡೆನ್' ಎಂದು ಪರಿಗಣಿಸಲ್ಪಟ್ಟಿರುವ ಮದ್ದಿ ಹಿಡ್ಡಾನನ್ನು ಆಂಧ್ರಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ. ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಹಿರಿಯ ಕಮಾಂಡರ್ ಆಗಿದ್ದ ಹಿಡ್ಡಾ ಕಳೆದೆರಡು ದಶಕಗಳಿಂದ ಭದ್ರತಾ ಪಡೆಗಳ ಕಣ್ಣಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಆತ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ೨೬ ದಾಳಿಗಳ ರೂವಾರಿಯಾಗಿದ್ದು, ಆತನ ತಲೆಗೆ ೫೦ ಲಕ್ಷ .ರೂ. ಘೋಷಿಸಲಾಗಿತ್ತು. ೨೦೧೦ರಲ್ಲಿ ದಾಂತೇವಾಡದಲ್ಲಿ ಸಿಆರ್‌ಪಿಎಫ್ ಮೇಲೆ ಈತನ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ೭೬ ಮಂದಿ ಸಿಆರ್ ಪಿಎಫ್ ಸಿಬ್ಬಂದಿಗಳು ಹತರಾಗಿದ್ದರು. ೨೦೧೩ರಲ್ಲಿ ಜಿರಾಂ ಗಟ್ಟಿಯಲ್ಲಿ ಆತ ನಡೆಸಿದ ಹೊಂಚುದಾಳಿಯೊಂದರಲ್ಲಿ ಕೆಲವಾರು ಕಾಂಗ್ರೆಸ್ ಮುಖಂಡರು ಸಾವಿಗೀಡಾಗಿದ್ದರು. ನಕ್ಸಲೀಯರನ್ನು ಸಶಸ್ತ್ರ ದಾಳಿಗೆ ಹುರಿದುಂಬಿಸುವುದರಲ್ಲಿ ಆತ ಪರಿಣತನಾಗಿದ್ದು, ಆತನ ಸಾವಿನಿಂದ ನಕ್ಸಲೀಯ ಆಂದೋಲನಕ್ಕೆ ಇನ್ನಷ್ಟು ದೊಡ್ಡ ಹೊಡೆತ ಬೀಳಲಿದೆಯೆಂದು ನಂಬಲಾಗಿದೆ. ಆತನನ್ನು ನವೆಂಬರ್ ೧೦ರೊಳಗೆ ಒಂದೋ ಸೆರೆ ಹಿಡಿಯಬೇಕು ಅಥವಾ ಹತ್ಯೆಗೈಯಬೇಕು ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಡುವು ವಿಧಿಸಿದ್ದರು. ಈ ಗಡುವಿನೊಳಗೇ ಭದ್ರತಾ ಪಡೆಗಳು ತಮ್ಮ ಕಾರ್ಯದಲ್ಲಿ ಯಶಸ್ಸು ಸಾಧಿಸಿವೆ.

ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ನಕ್ಸಲ್ ಪಿಡುಗಿಗೂ ಅಂತ್ಯ ಕಾಣಿಸಬೇಕೆಂದು ಕೇಂದ್ರ ಸರಕಾರವು ನಿಶ್ಚಯಿಸಿದೆ. ಈ ಹಾದಿಯಲ್ಲಿ ಈಗಾಗಲೆ ಬಹಳಷ್ಟು ಯಶ ಸಿಕ್ಕಿದೆ. ಈ ವರ್ಷವೊಂದರಲ್ಲಿ ೧೨೨೫ ನಕ್ಸಲೀಯರು ಶಸ್ತ್ರ ತ್ಯಜಿಸಿ ಶರಣಾಗಿದ್ದಾರೆ. ೨೭೦ಕ್ಕೂ ಅಧಿಕ ನಕ್ಸಲರನ್ನು ಹತ್ಯೆಗೈಯಲಾಗಿದ್ದು, ೬೮೦ ಮಂದಿಯನ್ನು ಸೆರೆ ಹಿಡಿಯಲಾಗಿದೆ. ಬಹುತೇಕ ನಕ್ಸಲೀಯರು ಈಗ ನಕ್ಸಲೀಯ ಅಂದೋಲನದ ಪೊಳ್ಳುತನವನ್ನು ಅರಿತುಕೊಳ್ಳತೊಡಗಿದ್ದಾರೆ ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರುವ ತವಕದಲ್ಲಿದ್ದಾರೆ.

ಇದು ಕಾಡಿನಲ್ಲಿರುವವರ ಮಾತಾಯಿತು. ಆದರೆ ನಗರದಲ್ಲಿದ್ದುಕೊಂಡು ಇತರರನ್ನು ನಕ್ಸಲೀಯ ಆಂದೋಲನಕ್ಕೆ ಪ್ರೋತ್ಸಾಹಿಸುವ ನಗರ ನಕ್ಸಲರ ಮೇಲೆಯೂ ನಿಯಂತ್ರಣ ಸಾಧಿಸ ಬೇಕಾದುದು ಮುಖ್ಯವಾಗಿದೆ. ನಕ್ಸಲೀಯ ಸಶಸ್ತ್ರ ಹೋರಾಟವು ಈಗ ಅಪ್ರಸ್ತುತವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಚಿಂತನೆಯನ್ನು ಇನ್ನಿತರ ಆಯಾಮಗಳಿಂದ ಪ್ರಚುರಪಡಿಸಲು ಈ ನಗರ ನಕ್ಸಲರು ಯತ್ನಿಸುವ ಸಾಧ್ಯತೆಗಳಂತೂ ಇದ್ದೇಇವೆ. ಈ ಕುರಿತಂತೆಯೂ ಪ್ರಭುತ್ವವು ಎಚ್ಚರದಲ್ಲಿರಬೇಕಾದುದು ಅಗತ್ಯವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೦-೧೧-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ