ಜಗತ್ತಿನ ರಾಜತಾಂತ್ರಿಕತೆ ಚದುರಂಗ ಆಟದಷ್ಟೇ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಭಾರತ, ಅಮೆರಿಕ, ಚೀನಾ ನಡುವಿನ ಬಾಂಧವ್ಯ ಈಗೀಗ ಪಡೆದುಕೊಳ್ಳುತ್ತಿರುವ ತಿರುವನ್ನು ಊಹಿಸಲೂ ಅಸಾಧ್ಯ ಎನ್ನುವಂತಾಗಿದೆ. ಕೆಲ ದಿನಗಳ ಹಿಂದೆ ಅಮೆರಿಕದ ಜತೆಗೆ ಭಾರತದ ಸಂಬಂಧ ಕೊಂಚೆ ಹಳಸಿತು ಎಂಬ ವಾತಾವರಣ ಸೃಷ್ಟಿಯಾದಾಗ, ಅಷ್ಟು ದಿನ ಶತ್ರುವಂತೆ ವರ್ತಿಸುತ್ತಿದ್ದ ಚೀನಾವು ಹೊಸದಿಲ್ಲಿಗೆ ಹತ್ತಿರವಾಗಲು ಇನ್ನಿಲ್ಲದ ಪ್ರಯತ್ನ ನಡೆಸಿತು. ಗಡಿವಿವಾದಗಳನ್ನೂ ಮರೆತು ಬೀಜಿಂಗ್ -ಹೊಸದಿಲ್ಲಿ "ನಾವು ಭಾಯಿಭಾಯಿ,'' ಎಂಬ ಸಂದೇಶ ರವಾನಿಸಿದಾಗ, 'ಓಹ್ ಚೀನಾಕ್ಕೆ ಬುದ್ಧಿ ಬಂತು' ಎಂದೇ ಭಾರತವೂ ಸಹಜವಾಗಿ ಭಾವಿಸಿತ್ತು. ಆದರೆ, ಭಾರತದ ಅವಿಭಾಜ್ಯ ಅಂಗಗಳ ಮೇಲೆ ಹಕ್ಕು ಸಾಧಿಸುವ ಚೀನಾದ ಹಳೇ ದುರಾಸೆ ಪುನಃ ಹೆಡೆಯೆತ್ತಿರುವುದು ತೀರಾ ನಾಚಿಕೆಗೇಡು.
ಬ್ರಿಟನ್ನಲ್ಲಿ ನೆಲೆಸಿರುವ ಹಾಗೂ ಜಪಾನಿನತ್ತ ಹೊರಟಿದ್ದ ಭಾರತೀಯ ಮೂಲದ ಮಹಿಳೆ ಪೆಮಾ ವಾಂಗ್ ಥಾಂಗೋಕ್ರನ್ನು ಚೀನಾವು ಶಾಂಫ್ಟ್ ವಿಮಾನ ನಿಲ್ದಾಣದಲ್ಲಿ ನಡೆಸಿಕೊಂಡ ರೀತಿಗೆ ಈಗಾಗಲೇ ಭಾರತೀಯ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ವಿಮಾನ ನಿಲ್ದಾಣದಲ್ಲಿ ಚೀನಾದ ವಲಸೆ ಅಧಿಕಾರಿಗಳು ಪಾಸ್ಪೋರ್ಟ್ ವಿಚಾರಣೆಯ ನೆಪವೊಡ್ಡಿ ತಮ್ಮನ್ನು ಗಂಟೆಗಟ್ಟಲೆ ಬಂಧಿಸಿ, ಕಿರುಕುಳ ನೀಡಿದರು ಎಂಬುದು ಪೆಮಾ ಅವರ ಆಕ್ರೋಶ. ಆದರೆ, ಹೊಸದಿಲ್ಲಿಗೆ ಇದಿಷ್ಟೇ ತಲೆ ಕೆಡಿಸಿಕೊಳ್ಳುವಂಥ ವಿಚಾರವಾಗಿಲ್ಲ. ಭಾರತೀಯ ಮಹಿಳೆಯ ಪಾಸ್ ಪೋರ್ಟಿನಲ್ಲಿ ಅರುಣಾಚಲ ಪ್ರದೇಶವು ಆಕೆಯ ಜನ್ಮಸ್ಥಳ ಎಂದು ನಮೂದಾಗಿರುವುದನ್ನು ಚೀನಾ ಅಧಿಕಾರಿಗಳು ಸಹಿಸಿಕೊಳ್ಳದಿರುವುದು ಇಲ್ಲಿ ಚರ್ಚೆಯ ವಿಚಾರ.
ಭಾರತದ ಅವಿಭಾಜ್ಯ ಅಂಗವನ್ನು ತನ್ನದು ಎಂದು ಹೇಳಿಕೊಳ್ಳುವ ಚೀನಾದ ದುರಹಂಕಾರಕ್ಕೆ ಧಿಕ್ಕಾರವಿರಲಿ. ಒಂದು ದೇಶದ ಕಾನೂನುಬದ್ದ ವೀಸಾವಿದ್ದಾಗ್ಯೂ, ಪಾಸ್ಪೋರ್ಟನ್ನು ಮುಟ್ಟುಗೋಲು ಹಾಕಿಕೊಂಡ ಚೀನಾದ ವರ್ತನೆ ಅತಿರೇಕದ್ದು. ಹೊಸ ಟಿಕೆಟ್ ಖರೀದಿಸುವಂತೆ ಚೀನಿ ಅಧಿಕಾರಿಗಳು ಒತ್ತಡ ಹೇರಿದ್ದು ಭಾರತಕ್ಕೆ ಮಾಡಿದ ಅವಮಾನವಲ್ಲದೆ ಮತ್ತೇನೂ ಅಲ್ಲ.
ಅರುಣಾಚಲ ಪ್ರದೇಶವು ಭಾರತದ ಭಾಗವಲ್ಲ, ಬದಲಾಗಿ ತನ್ನ ಭಾಗ ಎಂದು ಚೀನಾ ಈ ಹಿಂದೆಯೂ ಸಾಕಷ್ಟು ಸಲ ತಂಟೆ ತೆಗೆದಿದೆ. ಅರುಣಾಚಲವನ್ನು 'ದಕ್ಷಿಣ ಟಿಬೆಟ್' ಎಂದು ನಕಾಶೆಯಲ್ಲಿಯೂ ತೋರಿಸುವ ದಾರ್ಷ್ಟ್ಯತನ ಪ್ರದರ್ಶಿಸಿದೆ. ಇದಕ್ಕೆ ಭಾರತವೂ ಆಯಾ ಸಂದರ್ಭಗಳಲ್ಲಿ ತಕ್ಕ ತಿರುಗೇಟನ್ನು ನೀಡುತ್ತಲೇ ಬಂದಿದೆ.
ಅಸಲಿಗೆ, ಟಿಬೆಟ್ ನೆಲವೇ ಚೀನಾದಲ್ಲ, ಅತಿಕ್ರಮಣ ಮೂಲಕ ಆ ಬೌದ್ಧ ದೇಶವನ್ನು ಕಬಳಿಸಿದ್ದಲ್ಲದೆ, ಅದರಾಚೆಗಿನ ಭೂಮಿ ಮೇಲೂ ವಕ್ರದೃಷ್ಟಿ ಬೀರುವುದು ಕಮ್ಯುನಿಸ್ಟ್ ರಾಷ್ಟ್ರದ ವಿಸ್ತರಣಾವಾದಿತನಕ್ಕೆ ಸಾಕ್ಷಿಯಷ್ಟೇ, ತನ್ನೊಂದಿಗೆ ಗಡಿ ಹಂಚಿಕೊಂಡ ಯಾವ ರಾಷ್ಟ್ರಗಳೊಂದಿಗೆ ಚೀನಾ ಉತ್ತಮ ಸಂಬಂಧ ಇಟ್ಟುಕೊಂಡಿದೆ? ಭೂತಾನ್, ಮಂಗೋಲಿಯಾ, ರಷ್ಯಾ, ಜಪಾನ್, ನೇಪಾಳ... ಬಹುಮುಖ್ಯವಾಗಿ ಭಾರತದೊಂದಿಗೂ ತಕರಾರುಗಳ ದೊಡ್ಡ ಇತಿಹಾಸವನ್ನೇ ಚೀನಾ ಹೊಂದಿದೆ.
ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾ ಯೋಚಿಸುವುದು ಒಳಿತು. ಇಲ್ಲದಿದ್ದರೆ, ಉಭಯ ರಾಷ್ಟ್ರಗಳ ನಡುವಿನ ಒಪ್ಪಂದ ಕೇವಲ ತೋರಿಕೆ ಅಂತನ್ನಿಸಲೂಬಹುದು. ಅರುಣಾಚಲ ವಿಚಾರದಲ್ಲಿ ಚೀನಾ ತನ್ನ ವರ್ತನೆಯನ್ನು ಪುನರ್ ವಿಮರ್ಶಿಸಲಿ ಹಾಗೂ ಭಾರತದ ಕ್ಷಮೆಯನ್ನೂ ಯಾಚಿಸಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೭-೧೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!