ಹಲಸಿನ ಹಣ್ಣು ಆರೋಗ್ಯಕ್ಕೆ ಉತ್ತಮ. ಹಿಂದೆ ಮಳೆಗಾಲದಲ್ಲಿ (ಆಷಾಡ) ಜನ ಹಲಸಿನ ಕಾಯಿ, ಹಲಸಿನ ಹಣ್ಣು,  ಹಲಸಿನ ಬೀಜ ತಿನ್ನುತ್ತಿದ್ದರು. ಆಗ ಆಷಾಡ ಎಂದರೆ ಕಷ್ಟದ ದಿನಗಳು. ಒಂದು ಹೊತ್ತಿನ ಊಟ ಸ್ವಲ್ಪ ಕಡಿಮೆಯಾದರೂ ಅಷ್ಟಾದರೂ ಉಳಿಯಿತಲ್ಲಾ ಎನ್ನುವ ಭಾವನೆ. ಅದಕ್ಕೆ  ಪೂರಕ ಆಹಾರವಾಗಿ ಹಲಸನ್ನು ಬಳಸುತ್ತಿದ್ದರು.

ಹಲಸಿನ ಹಣ್ಣು ತಿಂದರೆ ಒಂದು ಹೊತ್ತಿನ ಊಟ ಬಿಟ್ಟರೂ ತೊಂದರೆಯಾಗದು. ಮರಗಳಲ್ಲಿ ಬೆಳೆಯುವ ಅತೀ ದೊಡ್ದ ಹಣ್ಣು ಎಂದರೆ  ಹಲಸು ಮಾತ್ರ. ಇದು ಮನುಷ್ಯ, ಪ್ರಾಣಿ, ಪಕ್ಷಿ ಎಲ್ಲರಿಗೂ ಆಹಾರ. ಇದನ್ನರಿತೇ ನಮ್ಮ ಪೂರ್ವಿಕರು ಹಲಸಿನ ಸಸಿ ನೆಟ್ಟು ಬೆಳೆಸಿ ಹಲಸಿನ ಕಾಯಿ ಪಡೆಯುತ್ತಿದ್ದರು.

ದಿನದಲ್ಲಿ ೧೦-೧೨ ಹಲಸಿನ ಸೊಳೆ ತಿಂದರೆ ಅರ್ಧ ದಿನದ ಊಟ ತಿಂದಷ್ಟು ಶರೀರಕ್ಕೆ ಶಕ್ತಿಯನ್ನು ಅದು ಕೊಡುತ್ತದೆ. ತಿನ್ನುವಾಗ ಮಾತ್ರ ಹಲಸಿನ ಸೊಳೆಯನ್ನು ಸಣ್ಣಕ್ಕೆ ಜಗಿದು ತಿಂದರೆ (ಕನಿಷ್ಠ ೩೦ ಬಾರಿ) ಮಾತ್ರ ಅದರ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ  ಅದು ಹಾಗೆಯೇ ಹೊರ ಹೋಗುತ್ತದೆ. ಇದನ್ನು ಜಗಿಯುವುದರಿಂದ ಹಲ್ಲಿಗೆ ವ್ಯಾಯಾಮ ದೊರೆಯುತ್ತದೆ. ಈ ಹಣ್ಣಿನಲ್ಲಿ ನೈಸರ್ಗಿಕ ನಾರು, ಪ್ರೊಟೀನು, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಇನ್ನಿತರ ಪೋಷಕಾಂಶಗಳು ಇವೆ. ೧೦೦ ಕ್ಯಾಲೊರಿಗಳಲ್ಲಿ ೯೫ ಕ್ಯಾಲೊರಿ ಸತ್ವ ಇರುವ ಹಣ್ಣು ಇದು. ಇದನ್ನು ಬೇಯಿಸಿ, ಮತ್ತು ಹಸಿಯಾಗಿ ತಿನ್ನಬಹುದು. ಬೇಯಿಸಿ ವಿವಿಧ ಅಡುಗೆ ಮಾಡಬಹುದು. ಹಪ್ಪಳ, ಪಲ್ಯ, ಸಾಂಬಾರು ಮಾಡಿ ಬಳಕೆ ಮಾಡಬಹುದು. ಹಲಸಿನ ಬೀಜವನ್ನು ಬೇರೆ ಬೇರೆ ರೀತಿ ಅಡುಗೆ ಮಾಡಬಹುದು. ಅದನ್ನು ೨-೩ ತಿಂಗಳು ದಾಸ್ತಾನು ಇಟ್ಟು ಬಳಸಬಹುದು. ಹಲಸಿನ ಬೀಜ ವಾಯು ಎನ್ನುತ್ತಾರೆ. ವಾಯು ಎಂದರೆ ಅದರಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟುಗಳಿವೆ ಎಂದರ್ಥ. ಇದನ್ನು ಹಿತಮಿತವಾಗಿ ಸೇವಿಸಿದರೆ ಅಂಥಃ ಸಮಸ್ಯೆ ಇಲ್ಲ.

ಒಂದು ಕಾಲದಲ್ಲಿ ಹಲಸು ಬೆಳೆದು ಹಣ್ಣಾಗಿ ತೋಟದ ಮೂಲೆಯಲ್ಲಿ ಕೊಳೆಯುತ್ತಾ ಇರುತ್ತಿತ್ತು. ಆದರೆ ಕಾಲ ಕಳೆದಂತೆ ಹಲಸಿನ ಮರಗಳೂ ಅಪರೂಪವಾಗುತ್ತಿವೆ. ಹಲಸಿಗೂ ಬಂಗಾರದ ಬೆಲೆ ಬರುತ್ತಿದೆ. ನಗರ, ಪಟ್ಟಣಗಳಲ್ಲಿ ಹಲಸಿನ ಹಣ್ಣಿಗೆ ಕೆಜಿಗೆ ರೂ. ೨೦೦.೦೦ ಕ್ಕೂ ಅಧಿಕ ಬೆಲೆ ನೀಡಬೇಕಾಗುತ್ತದೆ. ಅದರಲ್ಲೂ ಹಲಸಿನ ತೊಳೆಯ ಬಣ್ಣ ಕೆಂಪು, ಕೇಸರಿ ಆದರಂತೂ ಅದರ ಬೆಲೆ ಇನ್ನೂ ಹೆಚ್ಚು. ವಾಣಿಜ್ಯಿಕವಾಗಿ ಹಲಸು ಬೆಳೆಯಲು ಯೋಜನೆಗಳನ್ನು ಹಾಕಿಕೊಂಡರೆ ಕೃಷಿಕರು ಉತ್ತಮ ಆದಾಯ ಗಳಿಸಬಹುದಾಗಿದೆ.

ಚಿತ್ರ ಕೃಪೆ: ಅಂತರ್ಜಾಲ ತಾಣ