ಕೇಂದ್ರ ಚುನಾವಣ ಆಯೋಗವು ದೇಶದ ೯ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆ ಬೂತ್ ಮಟ್ಟದ ಅಧಿಕಾರಿ (ಬಿ ಎಲ್ ಒ) ಗಳನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ. ಚುನಾವಣ ಆಯೋಗದ ಕಟ್ಟುನಿಟ್ಟಿನ ನಿಯಮಾವಳಿಗಳು, ಗಡುವು, ರಾಜಕೀಯ ಪಕ್ಷಗಳ ಹಸ್ತಕ್ಷೇಪ, ಸಾರ್ವಜನಿಕರ ನಿರಾಸಕ್ತಿ ಇವೇ ಮೊದಲಾದ ಕಾರಣಗಳಿಂದಾಗಿ ಬಿ ಎಲ್ ಒಗಳು ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹರಸಾಹಸ ಪಡುವಂತಾಗಿದೆ. ಕೆಲಸದ ಒತ್ತಡ ತಾಳಲಾರದೆ ವಿವಿಧ ರಾಜ್ಯಗಳಲ್ಲಿ ಕೆಲವು ಬಿಎಲ್ಗಳು ಆತ್ಮಹತ್ಯೆಗೆ ಶರಣಾಗಿದ್ದರೆ ಮತ್ತೆ ಕೆಲವು ಅಧಿಕಾರಿಗಳು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಲವೊಂದರಲ್ಲಿಯೇ ೪೧ ಬಿಎಲ್ಒಗಳು ಸಾವಿಗೀಡಾಗಿದ್ದರೆ, ಉತ್ತರ ರಾಜ್ಯಗಳಲ್ಲೂ ಬಿಎಲ್ಒಗಳು ಇವೇ ಕಾರಣಗಳಿಂದ ಸಾವನ್ನಪ್ಪುತ್ತಿರುವುದು ವರದಿಯಾಗುತ್ತಲೇ ಇದೆ. ಚುನಾವಣ ಆಯೋಗದ ಈ ಪ್ರಕ್ರಿಯೆ ಬಿಎಲ್ಒಗಳ ಪಾಲಿಗೆ ಯಮಪಾಶವಾಗಿ ಮಾರ್ಪಟ್ಟಿರುವುದು ವಿಪರ್ಯಾಸವೇ ಸರಿ.
ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಚುನಾವಣ ಆಯೋಗ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ನಡೆಸಿತ್ತು. ಈ ಇಡೀ ಪ್ರಕ್ರಿಯೆ ತೀವ್ರ ವಿವಾದಕ್ಕೀಡಾಗಿ ಸುಪ್ರೀಂಕೋರ್ಟ್ನ ಕೆಲವು ನಿರ್ದೇಶಾನುಸಾರ ಆಯೋಗ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. ಮತದಾರರ ಪಟ್ಟಿಯ ಶುದ್ದೀಕರಣಕ್ಕಾಗಿ ಈ ಪ್ರಕ್ರಿಯೆಯನ್ನು ಅಧಿಕಾರವ್ಯಾಪ್ತಿಯಲ್ಲಿಯೇ ಕೈಗೆತ್ತಿಕೊಂಡಿರುವುದಾಗಿ ಆಯೋಗ ಪ್ರತಿಪಾದಿಸುತ್ತಲೇ ಬಂದಿದೆ. ಈಗ ಎರಡನೇ ಹಂತದಲ್ಲಿ ದೇಶದ ೯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ ಐ ಆರ್ ನಡೆಯುತ್ತಿದೆ. ಆದರೆ ಇಡೀ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರಗಿಸುವುದಾಗಿ ಆಯೋಗ ಎಚ್ಚರಿಕೆ ನೀಡಿರುವುದರಿಂದ ಬಿ ಎಲ್ ಒಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಡಿಜಿಟಲ್ ಮಾದರಿಯಲ್ಲಿ ಈ ಪ್ರಕ್ರಿಯೆ ನಡೆಸುತ್ತಿರುವುದರಿಂದ ತಂತ್ರಜ್ಞಾನದಿಂದ ಒಂದಿಷ್ಟು ದೂರವುಳಿದಿರುವ ಅಧಿಕಾರಿಗಳಿಗೆ ಇದು ತ್ರಾಸದಾಯಕವಾಗಿ ಪರಿಣಮಿಸಿದ್ದರೆ, ಪದೇಪದೆ ತಾಂತ್ರಿಕ ವೈಫಲ್ಯಗಳುಂಟಾಗುತ್ತಿರುವುದು ಕೂಡ ಅಧಿಕಾರಿಗಳ ಸಮಯವನ್ನು ವ್ಯರ್ಥಗೊಳಿಸುತ್ತಿದೆ. ಈ ಎಲ್ಲ ಸಮಸ್ಯೆ, ಒತ್ತಡಗಳ ನಡುವೆ ಎಸ್ ಐ ಆರ್ ಕುರಿತಾಗಿನ ರಾಜಕೀಯ ಹಗ್ಗಜಗ್ಗಾಟ ಅಗತ್ಯ ಮಾಹಿತಿಗಳನ್ನು ಕಲೆಹಾಕಲು ಬಿ ಎಲ್ ಒಗಳಿಗೆ ದೊಡ್ಡ ಅಡಚಣೆಯಾಗಿದೆ. ಈ ಕಾರಣಗಳಿಂದಾಗಿ ಬಿ ಎಲ್ ಒಗಳು ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ನಿರಂತರವಾಗಿ ಗಮನ ಸೆಳೆಯುತ್ತಲೇ ಬಂದಿದ್ದರೂ ಚುನಾವಣ ಆಯೋಗ ಇತ್ತ ಗಮನ ಹರಿಸಿಲ್ಲ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನೀಡಿದ ಹೇಳಿಕೆಯಿಂದ ಎಚ್ಚೆತ್ತ ಚುನಾವಣ ಆಯೋಗ ಇಡೀ ಪ್ರಕ್ರಿಯೆಯನ್ನು ೧ ವಾರ ವಿಸ್ತರಿಸಿ ಕೊನೆಗೂ ಆದೇಶ ಹೊರಡಿಸಿದೆ. ಆದರೆ ಆಯೋಗದ ಈ ನಿರ್ಧಾರ ಬಿ ಎಲ್ ಒಗಳ ಮೇಲಿನ ಒತ್ತಡ ಎಷ್ಟು ಶಮನ ಮಾಡೀತು ಎಂಬುದು ಪ್ರಶ್ನಾರ್ಹ.
ಎಸ್ ಐ ಆರ್ ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ವಿಪಕ್ಷಗಳ ನಡುವೆ ಆರಂಭದಿಂದಲೂ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಬಂದಿವೆ. ರಾಜಕೀಯ ವಾದ-ಪ್ರತಿವಾದಗಳೇನೇ ಇರಬಹುದು, ಚುನಾವಣ ಆಯೋಗ ಮತ್ತು ಕೇಂದ್ರ ಸರಕಾರ ಎಸ್ ಐ ಆರ್ ವಿಷಯದಲ್ಲಿ ಒಂದಿಷ್ಟು ಸಮಚಿತ್ತದ ನಿರ್ಧಾರವನ್ನು ಕೈಗೊಳ್ಳಬೇಕು. ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣ ಆಯೋಗ ರಾಜಕೀಯ ಪಕ್ಷಗಳ ತಾಳಕ್ಕೆ ಕುಣಿಯುವುದಾಗಲಿ ಇದನ್ನೊಂದು ಪ್ರತಿಷ್ಠೆಯ ಪ್ರಶ್ನೆಯಾಗಿಸುವುದಾಗಲಿ ಸರಿಯಲ್ಲ. ವಸ್ತುಸ್ಥಿತಿಯನ್ನು ಅರಿತುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ತನ್ನ ಅಧಿಕಾರ ವ್ಯಾಪ್ತಿಯ ಜತೆಯಲ್ಲಿ ಹೊಣೆಗಾರಿಕೆ, ಜನಹಿತವನ್ನೂ ಪರಿಗಣಿಸಿ, ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಪಾರದರ್ಶಕವಾಗಿ ಎಸ್ ಐ ಆರ್ ಪ್ರಕ್ರಿಯೆಯನ್ನು ನಡೆಸಿದ್ದೇ ಆದಲ್ಲಿ ಆಯೋಗದ ಮೇಲಿನ ದೇಶದ ಜನರ ವಿಶ್ವಾಸಾರ್ಹತೆ ಇನ್ನಷ್ಟು ವೃದ್ಧಿಯಾಗಲಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೨-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!