ದೇಶದಲ್ಲಿ ಉತ್ಪಾದನೆಯಾಗುವ ಮತ್ತು ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಕೇಂದ್ರ ಸರಕಾರವು ಅಭಿವೃದ್ಧಿಪಡಿಸಿದ 'ಸಂಚಾರ್ ಸಾಥಿ' ಎಂಬ ಆ್ಯಪ್‌ನ್ನು ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿದ್ದ ಸರಕಾರವು, ಬಳಿಕ ವಿರೋಧ ಪಕ್ಷಗಳ ಮತ್ತು ಕೆಲವು ಮಂದಿಯ ಒತ್ತಡಕ್ಕೆ ಮಣಿದು ಆದೇಶದಲ್ಲಿ ತಿದ್ದುಪಡಿ ಮಾಡಿದೆ. ಈ ಆ್ಯಪ್‌ನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಲ್ಲ, ಐಚ್ಛಿಕ ಎಂಬುದಾಗಿ ಸ್ಪಷ್ಟಪಡಿಸಿದೆ. ನಿಜವಾಗಿ ಸರಕಾರವು ಸದುದ್ದೇಶದಿಂದಲೇ ಹಾಗೂ ಗ್ರಾಹಕರ ಹಿತಾಸಕ್ತಿಯಿಂದಲೇ ಈ ಸೈಬರ್ ಸೆಕ್ಯುರಿಟಿ ಆ್ಯಪ್‌ನ್ನು ಅಳವಡಿಸಲು ಸೂಚನೆ ನೀಡಿದ್ದು. ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವುದರಿಂದ, ಅಮಾಯಕರು ತಾವು ಗಳಿಸಿದ ಹಣವನ್ನು ಕಳೆದು ಕೊಳ್ಳುತ್ತಿರುವುದರಿಂದ ಅವರ ರಕ್ಷಣೆಗಾಗಿ ಈ ಆ್ಯಪ್ ಅಭಿವೃದ್ಧಿ ಪಡಿಸಿದ್ದಾಗಿ ಸರಕಾರವು ಹೇಳಿದೆ. ಫೋನ್ ಕಳೆದುಹೋದರೆ ಅಥವಾ ಕಳವಾದರೆ ಅದನ್ನು ಬ್ಲಾಕ್ ಮಾಡಲು, ವಂಚಕರ ಕರೆಗಳನ್ನು ಪತ್ತೆ ಹಚ್ಚಲು, ವಿದೇಶಗಳಿಂದ ಬರುವ ನಕಲಿ ಕರೆಗಳನ್ನು ಕಂಡುಹಿಡಿಯಲು ಈ ಆ್ಯಪ್ ನೆರವಾಗಲಿದೆ ಎಂದು ಸರಕಾರವು ಹೇಳಿದೆ. ಆದರೆ ವಿರೋಧ ಪಕ್ಷಗಳು ಮಾತ್ರ ಇದು ಇಸ್ರೇಲಿನ ಪೆಗಾಸಸ್ ಆ್ಯಪ್‌ನ ಮಾದರಿಯಲ್ಲೇ ಗ್ರಾಹಕರ ಮೇಲೆ ನಿಗಾ ಇಡುವ, ಸರಕಾರದ ಪರವಾಗಿ ಗುಪ್ತಚರ್ಯೆ ನಡೆಸುವ ಆ್ಯಪ್ ಎಂಬುದಾಗಿ ಗುಲ್ಲೆಬ್ಬಿಸಿವೆ. ಜನರ ಮೇಲೆ ಗೂಢಚಾರಿಕೆ ನಡೆಸುವುದೇ ಸರಕಾರದ ಉದ್ದೇಶ ಎಂದು ಆರೋಪಿಸಿವೆ.

ವಿಪರ್ಯಾಸವೆಂದರೆ ಆರೋಪಿಸುವವರೆಲ್ಲ ಚೀನಾ ನಿರ್ಮಿತ ಮೊಬೈಲ್‌ಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಬಳಸುತ್ತಾರೆ. ಅದರಲ್ಲಿ ಅಡಕವಾಗಿರುವ ಕೆಲವಾರು ಆ್ಯಪ್‌ಗಳ ಕುರಿತಂತೆ ಅನುಮಾನವನ್ನೇ ವ್ಯಕ್ತಪಡಿಸುವುದಿಲ್ಲ. ನಿಜಕ್ಕಾದರೆ ಚೀನಾದಲ್ಲಿ ನಿರ್ಮಾಣವಾಗುವ ಪ್ರತಿಯೊಂದು ಫೋನ್ ಕೂಡಾ ಚೀನಾ ಸರಕಾರದ ಪರವಾಗಿ ಗುಪ್ತ ಮಾಹಿತಿ ಸಂಗ್ರಹಿಸುವ ಆ್ಯಪ್‌ಗಳನ್ನು ಹೊಂದಿರುತ್ತವೆ ಎಂಬುದು ಬಹಿರಂಗ ರಹಸ್ಯ. ಆದರೆ ಈ ಕುರಿತಂತೆ ವಿಪಕ್ಷಗಳವರಿಗೆ ಕಳಕಳಿಯಿಲ್ಲ. ಅದೇರೀತಿ ಅಮೆರಿಕದಲ್ಲಿ ತಯಾರಾಗುವ ಹಲವಾರು ಆ್ಯಪ್‌ಗಳನ್ನು ತಮ್ಮ ಮೊಬೈಲ್‌ಗೆ ಇಳಿಸಲು ಕೂಡಾ ಅವರು ಹಿಂದೆಮುಂದೆ ನೋಡುವುದಿಲ್ಲ. ಅಂತಹ ಆ್ಯಪ್‌ಗಳು ನಮ್ಮ ಖಾಸಗಿ ಮಾಹಿತಿ ಸಂಗ್ರಹಿಸುವುದಕ್ಕೆ ಕಣ್ಣುಮುಚ್ಚಿ ಸಮ್ಮತಿ ನೀಡುತ್ತಾರೆ. ಆದರೆ ಭಾರತ ಸರಕಾರವು ಗ್ರಾಹಕರ ಹಿತರಕ್ಷಣೆಗೆಂದೇ ಆ್ಯಪ್ ಅಭಿವೃದ್ಧಿ ಪಡಿಸಿದರೆ ಆ ಕುರಿತು ಅಪಸ್ವರ ಎತ್ತಲಾಗುತ್ತದೆ. ಇದಷ್ಟೇ ಅಲ್ಲ, ಈ ಹಿಂದೆಯೂ ದೇಶೀ ನಿರ್ಮಿತ ಆ್ಯಪ್‌ಗಳ ಕುರಿತಂತೆ ಹಲವರು ಇದೇ ಬಗೆಯಲ್ಲಿ ಅಪಸ್ತರ ಎತ್ತಿದ್ದಿದೆ. ಭಾರತ ಸರಕಾರದ ಆ್ಯಪ್ ಗಳಿಗಿಂತ ಚೀನಾ, ಅಮೆರಿಕ ನಿರ್ಮಿತ ಆ್ಯಪ್‌ ಗಳು ಹೆಚ್ಚು ವಿಶ್ವಾಸಾರ್ಹವೇ? ವಾಸ್ತವದಲ್ಲಿ ಇವೆಲ್ಲ ಪೂರ್ವಗ್ರಹಪೀಡಿತ ಅಭಿಪ್ರಾಯಗಳೇ ಸರಿ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೪-೧೨-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ