ಮಕ್ಕಳಾಗದ ದಂಪತಿಗಳು ಹಲವಾರು ದೇವಾಲಯಗಳಿಗೆ ಹರಕೆ ಹೊತ್ತುಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿ. ನಮ್ಮ ದೇಶದಲ್ಲಿ ಇಂತಹ ದೇವಸ್ಥಾನಗಳ ಸಂಖ್ಯೆ ನೂರಾರಿವೆ. ಅವರವರ ನಂಬಿಕೆಯ ಪ್ರಕಾರ ಪೂಜೆ ಸಲ್ಲಿಸಿ ಅದರ ಫಲದಂತೆ ಮಕ್ಕಳನ್ನು ಪಡದುಕೊಂಡ ಹಲವಾರು ದಂಪತಿಗಳು ಇದ್ದಾರೆ. ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ಹೃದಯಭಾಗದಲ್ಲಿರುವ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಸ್ಥಾನವು ‘ಮಕ್ಕಳ ಜನಾರ್ದನ’ ದೇವಸ್ಥಾನ ಎಂದು ಖ್ಯಾತಿಯನ್ನು ಪಡೆದಿದೆ. ಇದೊಂದು ಇತಿಹಾಸ ಪ್ರಸಿದ್ಧವಾದ ದೇವಸ್ಥಾನ.

ಸಾಮಂತರಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು ಕ್ರಿ.ಶ.೧೦೦೧ರ ಅವಧಿಯಲ್ಲಿ ಇಂದ್ರವರ್ಮಾ ಎಂಬ ಪಾಳೇಗಾರ ಮಂಡ್ಯ ಪ್ರದೇಶವನ್ನು ಆಳ್ವಿಕೆ ನಡೆಸುತ್ತಿದ್ದನು. ಇವನಿಗೆ ಸಂತಾನ ಭಾಗ್ಯ ಇರಲಿಲ್ಲ. ಆಗ ಮಾಂಡವ್ಯ ಎಂಬ  ಋಷಿಗಳನ್ನು ಕೇಳಿಕೊಂಡಾಗ ಅವರು ಲಕ್ಷ್ಮೀ ಸಮೇತನಾಗಿರುವ ಶ್ರೀ ಜನಾರ್ದನ ಸ್ವಾಮಿಯನ್ನು ಪ್ರತಿಷ್ಠಾಪಿಸು ಇದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಮಾಂಡವ್ಯ ಋಷಿಗಳ ಮಾರ್ಗದರ್ಶನದಂತೆ ಇಂದ್ರವರ್ಮನು ಶ್ರೀ ಲಕ್ಷ್ಮೀಜನಾರ್ದನಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಠಾಪಿಸಿದನು. ಪ್ರತಿಷ್ಠಾಪಿಸಿದ ನಂತರ ಇಂದ್ರವರ್ಮನಿಗೆ ಪುತ್ರ ಸಂತಾನವಾಯಿತು. ಇದರ ನೆನಪಿಗಾಗಿ ಮಂಡ್ಯ ನಗರದಲ್ಲಿ ಕೋಟೆಯನ್ನು ನಿರ್ಮಾಣ ಮಾಡಿ ದಾನ ಧರ್ಮಗಳನ್ನು ಮಾಡಿದನು. ಈಗ ಕೋಟೆ ಇಲ್ಲದಿದ್ದರೂ ವೀರಗಲ್ಲು ಮಾತ್ರ ಹೆಬ್ಬಾಗಿಲಿನ ಬಳಿ ಕಾಣಬಹುದಾಗಿದೆ. ದೇವರಿಗೆ ನಡೆಯುವ ನಾಲ್ಕು ಬೀದಿಯ (ಚತುರ್ಬೀದಿ) ಉತ್ಸವಕ್ಕೆ ‘ಕೋಟೆ ಉತ್ಸವ’ ಎಂದು ಈಗಲೂ ಕರೆಯುವುದು ವಾಡಿಕೆ.

ಇಂದ್ರವರ್ಮಾನು ತನ್ನ ಮಗನಿಗೆ ಸೋಮವರ್ಮಾ ಎಂದು ನಾಮಕರಣ ಮಾಡಿದನು. ಅವನು ಮುಂದೆ ಸಕಲೇಶ್ವರಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿದನು. ಅಂದಿನಿಂದ ಇಂದಿನವರೆಗೂ ಯಾರಿಗೆ ಸಂತಾನವಿರುವುದಿಲ್ಲವೊ ಅವರು ಬಂದು ಹರಕೆ ಮಾಡಿಕೊಂಡರೆ ಸಂತಾನ ಪ್ರಾಪ್ತವಾಗುತ್ತಿರುವುದು ಇಂದಿಗೂ ಸತ್ಯವಾಗಿದೆ. ಈ ಕಾರಣದಿಂದ ಜನಾರ್ದನಸ್ವಾಮಿಗೆ ‘ಮಕ್ಕಳ ಜನಾರ್ದನʼ ವರದರಾಜ’ ಎಂಬ ಅಡ್ಡ ಹೆಸರುಗಳು ಬಂದಿದೆ.

ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದಲ್ಲಿರುವ ಮಹಾಲಕ್ಷ್ಮೀ ಅಮ್ಮನವರನ್ನು ವೇದವಲ್ಲೀ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಮಾಂಡವ್ಯ ಖುಷಿಗಳು ಕ್ರೂರಮೃಗಗಳು ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ಸಹ ವೇದವನ್ನು ಹೇಳಿಕೊಡುತ್ತಿದ್ದರು. ಆದ್ದರಿಂದ ಅವರು ತಪಸ್ಸನ್ನು ಆಚರಿಸಿದ ಅರಣ್ಯಕ್ಕೆ ವೇದಾರಣ್ಯ ಎಂಬ ಹೆಸರು ಬಂದಿತು. ಆದ್ದರಿಂದ ಮಹಾಲಕ್ಷ್ಮೀ ಅಮ್ಮನವರನ್ನು ವೇದವಲ್ಲೀ ಅಮ್ಮನವರು ಎಂದು ಕರೆಯುವುದು ವಾಡಿಕೆ.

ದೇವಸ್ಥಾನ ಸುಮಾರು ೨ ಎಕರೆಯ ಪ್ರದೇಶದ ಮಧ್ಯದಲ್ಲಿದ್ದು ರಾಜಗೋಪುರವನ್ನು ನಿರ್ಮಿಸಲಾಗಿದೆ. ದೇವಾಲಯವು ಪ್ರಾಕಾರ ವಿಮಾನಗೋಪುರ, ಗರ್ಭಗೃಹ, ಶುಕನಾಸಿ, ನವರಂಗಗಳನ್ನು ಹೊಂದಿದೆ. ಗಂಗರ ಲಾಂಛನವಾದ ಆನೆಯನ್ನು ಇಂದಿಗೂ ದೇವಸ್ಥಾನದ ಮುಂಭಾಗ ಕಾಣಬಹುದು. ಈಗಲೂ ಈ ದೇಗುಲದ ಖ್ಯಾತಿಯನ್ನು ಕೇಳಿ ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಲಕ್ಷ್ಮಿ ಜನಾರ್ದನ ಸ್ವಾಮಿಗೆ ಪೂಜೆ ಸಲ್ಲಿಸಿ, ಸಂತಾನ ಭಾಗ್ಯ ಪಡೆದುಕೊಂಡ ನಿದರ್ಶನಗಳಿವೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ