ದ್ವೇಷದ ಭಾಷಣ, ದ್ವೇಷ ಹರಡುವಿಕೆ, ಹಿಂಸೆಗೆ ಪ್ರಚೋದನೆ ನೀಡುವವರಿಗೆ ೨ ರಿಂದ ೧೦ ವರ್ಷದವರೆಗೆ ಜೈಲು ಶಿಕ್ಷೆ ಮತ್ತು ೧ ಲಕ್ಷ ರು.ವರೆಗೆ ದಂಡ ವಿಧಿಸುವ 'ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕ-೨೦೨೫’ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವಲ್ಲಿ ಇದು ಮಹತ್ವದ ಹೆಜ್ಜೆ. ದ್ವೇಷದ ಭಾಷಣ ಪ್ರಕರಣಗಳು ಹೊಸದಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ವ್ಯಾಪಕವಾದ ಬಳಿಕ ಇಂಥ ಭಾಷಣಗಳು ಬೀರುತ್ತಿರುವ ಪ್ರಭಾವ ಆತಂಕಕಾರಿಯದ್ದು. ವ್ಯಕ್ತಿ ಅಥವಾ ಸಂಘಟನೆಯೊಂದು ನೀಡಿದ ಹೇಳಿಕೆ, ಮಾಡಿದ ಭಾಷಣ ಕ್ಷಣಾರ್ಧದಲ್ಲಿ ಜಗತ್ತಿನ ಮೂಲೆಮೂಲೆಗೆ ವ್ಯಾಪಿಸಿ ಆಕ್ರೋಶದ ದೊಡ್ಡ ಅಲೆಯನ್ನೇ ಎಬ್ಬಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿಯೇ 'ಇಂಥ ಪ್ರಕರಣಗಳಿಗೆ ಕಡಿವಾಣ ಹಾಕುವ ಅಗತ್ಯ ಅತ್ಯಂತ ಜರೂರಾಗಿತ್ತು. ಆ ನಿಟ್ಟಿನಲ್ಲಿ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದೆ.

ವಿಧಾನಸಭೆಯ ಅಂಗೀಕಾರಕ್ಕೆ ಸಜ್ಜಾಗಿರುವ ವಿಧೇಯಕದಲ್ಲಿ ಧರ್ಮ, ಜಾತಿ, ಜನಾಂಗ, ಭಾಷೆ, ಲಿಂಗ, ಜನ್ಮಸ್ಥಳ ಅಥವಾ ಲೈಂಗಿಕ ದೃಷ್ಟಿಕೋನಗಳ ಆಧಾರದ ಮೇಲೆ ದ್ವೇಷ ಹರಡುವವರಿಗೆ ಅಥವಾ ಹಿಂದೆಗೆ ಪ್ರಚೋದನೆ ನೀಡುವವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಪ್ರಸ್ತಾಪ ಮಾಡಲಾಗಿದೆ. ಜೊತೆಗೆ ಕಾಯ್ದೆಯ ವ್ಯಾಪ್ತಿಗೆ ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ದ್ವೇಷವನ್ನೂ ಸೇರ್ಪಡೆ ಮಾಡಿರುವುದು ಅತ್ಯಂತ ಮಹತ್ವದ ಸಂಗತಿ.

ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರು, ಧಾರ್ಮಿಕನಾಯಕರುಮಾತಿನಲ್ಲಿ ಸಂಯಮ ಕಳೆದುಕೊಂಡು ಮಾತನಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಮುದಾಯದ ನಡುವೆ, ಜಾತಿಗಳ ನಡುವೆ, ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದು ಸಮಾಜದಲ್ಲಿ ಶಾಂತಿಗೆ ಧಕ್ಕೆ ತರುವ ಮೂಲಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.

ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಇಂಥ ದ್ವೇಷದ ಭಾಷಣ, ಹೇಳಿಕೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರತಿ ವರ್ಷ ೧೦೦ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಇವುಗಳ ತಡೆಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ವ್ಯಕ್ತವಾಗಿತ್ತು. ಅದಕ್ಕೆ ಸರ್ಕಾರ ಪೂರಕವಾಗಿ ಸಂದಿಸಿದೆ. ಆದರೆ ಇಂಥ ಕಾಯ್ದೆಗಳು ರಾಜಕೀಯ ದಾಳ ಆಗದಂತೆ ನೋಡಿಕೊಳ್ಳುವ ಹೊಣೆಯೂ ಸರ್ಕಾರದ ಮೇಲಿದೆ. ಇಲ್ಲದೇ ಹೋದರೆ ಈ ಕಾಯ್ದೆ ವಿವಾದಕ್ಕೆ ಕಾರಣವಾಗಬಹುದು. ಈ ಕುರಿತು ಎಚ್ಚರಿಕೆ ಅಗತ್ಯ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೬-೧೨-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ