ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿನಿಸು ಯಾವುದೆಂದರೆ ಇಡ್ಲಿ ಎಂದು ಉತ್ತರಿಸಬಹುದಲ್ಲವೇ? ಯಾಕೆಂದರೆ ಇಡ್ಲಿಯನ್ನು ಇಷ್ಟ ಪಡದವರು ಯಾರೂ ಇಲ್ಲ. ಮನೆಯಲ್ಲಾಗಲೀ ಹೋಟೆಲಿನಲ್ಲಾಗಲೀ ತೆಂಗಿನಕಾಯಿ ಚಟ್ನಿ ಅಥವಾ ಬಿಸಿಬಿಸಿ ಸಾಂಬಾರಿನ ಜೊತೆ ಮೃದುವಾದ ಇಡ್ಲಿಗಳನ್ನು ಚಪ್ಪರಿಸಿ ತಿನ್ನುವುದೇ ಖುಷಿ.
ದಿನದ ಯಾವುದೇ ಹೊತ್ತಿನಲ್ಲಿ ಇಡ್ಲಿ ತಿನ್ನಬಹುದು, ಅಂಗೈ ಅಳತೆಯ ಇಡ್ಲಿ ತಯಾರಿಸುವುದು ಬಹಳ ಸುಲಭ ಮತ್ತು ಅದು ಎಲ್ಲ ಕಡೆಗಳಲ್ಲಿ ಸುಲಭ ಲಭ್ಯ ಎಂಬುದೇ ಇಡ್ಲಿಯ ವಿಶೇಷತೆಗಳು. ಈಗಂತೂ ಮನೆಗಳಲ್ಲಿ ಇಡ್ಲಿ ತಯಾರಿಸುವುದು ಬಹಳ ಸುಲಭ. ಯಾಕೆಂದರೆ ಎಲ್ಲ ದಿನಸಿ ಅಂಗಡಿಗಳು ಮತ್ತು ಮಾಲ್-ಗಳಲ್ಲಿ ಪ್ಯಾಕೆಟುಗಳಲ್ಲಿ ಇಡ್ಲಿ-ಮಿಕ್ಸ್ ಸಿಗುತ್ತದೆ. ಅದಲ್ಲದೆ, ಹಲವಾರು ಊರುಗಳಲ್ಲಿ ಮತ್ತು ನಗರಗಳಲ್ಲಿ ಮಾರಾಟಕ್ಕೆ ಇಡ್ಲಿಹಿಟ್ಟು ಲಭ್ಯ. 2025ರ ಆರಂಭದಿಂದ ಕರ್ನಾಟಕದ “ನಂದಿನಿ” (ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲಿಯ ಬ್ರಾಂಡ್) ಇಡ್ಲಿಹಿಟ್ಟು ಕೂಡ ಮಾರಾಟಕ್ಕೆ ಬಿಡುಗಡೆಯಾಗಿದೆ.
ರಸ್ತೆ ಬದಿಯಲ್ಲಿ ಅಥವಾ ಕೂಡು-ರಸ್ತೆಗಳಲ್ಲಿರುವ ಗಾಡಿ-ಹೋಟೆಲುಗಳಲ್ಲಿ, ಸಣ್ಣ ಕ್ಯಾಂಟೀನುಗಳಲ್ಲಿ, ದೊಡ್ಡ ಹೋಟೆಲುಗಳಲ್ಲಿ, ಸ್ಟಾರ್-ಹೋಟೆಲುಗಳಲ್ಲಿ, ಚಲಿಸುವ ರೈಲುಗಳಲ್ಲಿ - ಇಲ್ಲೆಲ್ಲ ಇಡ್ಲಿ ದಿನದ ಯಾವ ಹೊತ್ತಿಗೂ ಲಭ್ಯ. ನಾನು ಉದ್ಯೋಗದಲ್ಲಿದ್ದಾಗ, ಮುಂಬಯಿಗೆ ಹೋಗಿ ಐದಾರು ಸಲ ಒಂದು ತಿಂಗಳ ಅವಧಿ ಅಲ್ಲಿನ ಹೋಟೆಲುಗಳಲ್ಲಿ ಉಳಿಯಬೇಕಾಯಿತು. ಆಗೆಲ್ಲ, ದಿನದ ಮೂರು ಹೊತ್ತಿನಲ್ಲಿಯೂ ಇಡ್ಲಿ ತಿಂದು ಹಸಿವು ತಣಿಸಿಕೊಳ್ಳುತ್ತಿದ್ದೆ. ಯಾಕೆಂದರೆ, ಹಬೆಯಲ್ಲಿ ಬೇಯಿಸಿದ ಇಡ್ಲಿ ಸೇವಿಸಿದರೆ ಯಾವುದೇ ಆರೋಗ್ಯದ ಸಮಸ್ಯೆ ಉಂಟಾಗುತ್ತಿರಲಿಲ್ಲ.
ಜೊತೆಗೆ, ಅಕ್ಕಿರವೆ ಮತ್ತು ಉದ್ದು ಬುರುಗು ಬರಿಸಿ, ಹಬೆಯಲ್ಲಿ ಬೇಯಿಸುವ ಇಡ್ಲಿ ಪೋಷಕಾಂಶಭರಿತ ಆಹಾರ. ಇದು ಬ್ರೆಡ್ಡಿಗಿಂತ ಉತ್ತಮ ಆಹಾರ ಎಂಬುದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಮತ್ತು ತರಕಾರಿಗಳನ್ನು ಹಾಕಿದ ಸಾಂಬಾರಿನ ಜೊತೆ ಸೇವಿಸುವ ಕಾರಣ ಇವು ಮೂರು ಸೇರಿದಾಗ ಸಮೃದ್ಧ ಭೋಜನ.
ಕಳೆದ 50-60 ವರುಷಗಳಲ್ಲಿ ಇಡ್ಲಿಯ ಹೊಸಹೊಸ ನಮೂನೆಗಳು ಜನಪ್ರಿಯವಾಗಿವೆ. ಉದಾಹರಣೆಗೆ: ರಾಗಿ, ಗೋಧಿ, ಓಟ್ಸ್, ಬಾರ್ಲಿ ಹಾಗೂ ಇತರ ಧಾನ್ಯಗಳಿಂದ ತಯಾರಿಸಿದ ಇಡ್ಲಿ. ಹಾಗೆಯೇ, ವಿವಿಧ ತರಕಾರಿಗಳನ್ನು ತುಂಬಿ ಬೇಯಿಸಿದ ಇಡ್ಲಿಗಳೂ ಜನಮನ ಗೆದ್ದಿವೆ. ರವೆ-ಇಡ್ಲಿ ಮತ್ತು ಬಟನ್-ಇಡ್ಲಿ (ಒಂದಿಂಚು ವ್ಯಾಸದ) ಈಗ ಹಲವು ಕ್ಯಾಂಟೀನ್, ರೆಸ್ಟೋರೆಂಟ್ ಮತ್ತು ಹೋಟೆಲುಗಳಲ್ಲಿ ಬಹು ಮುಖ್ಯ ತಿನಿಸು. ಬೆಂಗಳೂರಿನ ಸುತ್ತಮುತ್ತ ತಟ್ಟೆ-ಇಡ್ಲಿ ಪ್ರಸಿದ್ಧ. ಅನೇಕ ಹೋಟೆಲುಗಳ ವಿಶೇಷ ತಿನಿಸುಗಳ ಪಟ್ಟಿಯಲ್ಲಿ “ಫ್ರೈಡ್ ಇಡ್ಲಿ” ಸೇರಿಕೊಂಡಿದೆ. ಇದು ಲಿಕ್ಕರ್ ಬಾರ್-ಗಳಲ್ಲಿ ಮದ್ಯಗಳ ಜೊತೆ ನಂಜಿಕೊಂಡು ಚಪ್ಪರಿಸಲು ಸೂಕ್ತ. ಮಾಂಸಾಹಾರಿಗಳಿಗೆ ಪ್ರಾನ್ (ಸಿಗಡಿ), ಚಿಕನ್ ಮತ್ತು ಮಟನ್ ತುಂಬಿ ಬೇಯಿಸಿದ ಇಡ್ಲಿ ಲಭ್ಯ.
ಇಡ್ಲಿ ಸೇವನೆಗೆ ಸಂಬಂಧಿಸಿದ ಕೆಲವು ವಿಭಿನ್ನತೆಗಳನ್ನು ಗಮನಿಸಿದ್ದೀರಾ? ಯಾವುದೇ ಹೋಟೆಲಿಗೆ ಹೋಗಿ “ಒಂದು ಪ್ಲೇಟ್ ಡಿಪ್ ಇಡ್ಲಿ” ಅಂದರೆ, ಪುಟ್ಟ ದೋಣಿಯಾಕಾರದ ಪ್ಲೇಟಿನಲ್ಲಿ ತುಂಬಿದ ಸಾಂಬಾರಿನಲ್ಲಿ ತೇಲುತ್ತಿರುವ ಎರಡು ಇಡ್ಲಿಗಳನ್ನು ತಂದು ನಿಮ್ಮ ಮುಂದಿಡುತ್ತಾನೆ ಸರ್ವರ್. ಹಾಗೆಯೇ, “ಒಂದು ಪ್ಲೇಟ್ ಇಡ್ಲಿ ತನ್ನಿ” ಎಂದು ಹೋಟೆಲಿನ ಸರ್ವರ್-ಗೆ ಹೇಳಿದರೆ “ವಡೆ ಬೇಡವೇ ಸಾರ್?” ಎಂದು ಕೇಳಿಯೇ ಕೇಳುತ್ತಾನೆ. ಯಾಕೆಂದರೆ, ದಕ್ಷಿಣ ಭಾರತದಲ್ಲಿ ಇಡ್ಲಿ ಮತ್ತು ವಡೆ ಜೊತೆಯಾಗಿ ತಿನ್ನುವುದು ಶತಮಾನ ಹಳೆಯ ಪರಿಪಾಠ.
ಈಗೊಂದು ದಶಕದಿಂದ ಭಾರತದ ಗಡಿಗಳನ್ನು ದಾಟಿರುವ ಇಡ್ಲಿ ಹಲವು ವಿದೇಶಗಳಲ್ಲಿಯೂ ಜನಪ್ರಿಯವಾಗಿದೆ. 2019ರ ಉಬೆರ್ ಈಟ್ಸ್ ಸಮೀಕ್ಷೆಯ ಅನುಸಾರ, ಅತ್ಯಧಿಕ ಇಡ್ಲಿ ಸೇವನೆಯಲ್ಲಿ ಭಾರತದ ಮಹಾನಗರಗಳ ನಂತರದ ಸ್ಥಾನ ಪಡೆದಿರುವುದು ಲಂಡನ್ ಮತ್ತು ಅಮೆರಿಕಾದ ಸಾನ್-ಫ್ರಾನ್ಸಿಸ್ಕೋ ಮಹಾನಗರಗಳು.
ಇಂತಹ ಪೋಷಕಾಂಶಭರಿತ ಹಾಗೂ ಜನಮೆಚ್ಚುಗೆಯ ಇಡ್ಲಿಗೆ ಕೆಲವು ಹೋಟೆಲಿನವರಿಂದಾಗಿ ಕಂಟಕ ಉಂಟಾಗಿದೆ. ಹೋಟೆಲುಗಳಲ್ಲಿ ಇಡ್ಲಿತಟ್ಟೆಯ ಮೇಲೆ ತೆಳು ಬಟ್ಟೆ ಹರಡಿ, ಇಡ್ಲಿ ಹಿಟ್ಟು ಹೊಯ್ದು ಬೇಯಿಸುವುದು ವಾಡಿಕೆ. ಆದರೆ ಕೆಲವು ಹೋಟೆಲಿನವರು, ಆ ಬಟ್ಟೆ ತೊಳೆಯುವ ಕೆಲಸ ಬೇಡವೆಂದು, ಪ್ಲಾಸ್ಟಿಕ್ ಹಾಳೆ ಹರಡಿ, ಇಡ್ಲಿ ಹಿಟ್ಟು ಹೊಯ್ದು ಬೇಯಿಸುತ್ತಿದ್ದಾರೆ. ಇದರಿಂದಾಗಿ “ಕ್ಯಾನ್ಸರ್ ಬಂದೀತು” ಎಂಬ ಗುಲ್ಲೆದ್ದಿತು. ಹಾಗಾಗಿ ಫೆಬ್ರವರಿ 2025ರಲ್ಲಿ ಕರ್ನಾಟಕದ ಆರೋಗ್ಯ ಇಲಾಖೆ “ಹೋಟೆಲು ಇತ್ಯಾದಿ ಆಹಾರ ತಯಾರಿ ಮತ್ತು ಮಾರಾಟದ ವಾಣಿಜ್ಯ ಸ್ಥಳಗಳಲ್ಲಿ ಇಡ್ಲಿ ತಯಾರಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ” ಹೊರಡಿಸಿದೆ.
ಅಂದ ಹಾಗೆ ಆಹಾರವಾಗಿ ಇಡ್ಲಿಯ ಮೂಲ ಎಲ್ಲಿ? ಎಂದು ಹುಡುಕುತ್ತ ಹೋದರೆ ನಮಗೆ ಸಿಗುವ ಒಂದು ಪ್ರಮುಖ ದಾಖಲೆ: ಕ್ರಿ.ಶ. 920ರ ಕನ್ನಡದ ಪ್ರಾಚೀನ ಗ್ರಂಥ “ವಡ್ಡಾರಾಧನೆ”. ಇದರಲ್ಲಿ ಉಲ್ಲೇಖವಾಗಿರುವ “ಇಡ್ಡಲಿಗೆ” ಎಂಬ ಪದವೇ ಇಡ್ಲಿ ಹೆಸರಿನ ಮೂಲ ಎಂದು ಭಾವಿಸಲಾಗಿದೆ.
ಇಡ್ಲಿಯ ಸಂಭ್ರಮಾಚರಣೆಗೂ ವರುಷದಲ್ಲೊಂದು ದಿನ ನಿಗದಿ ಪಡಿಸಲಾಗಿದೆ, ಗೊತ್ತೇ? 2015ರಲ್ಲಿ ಮಾರ್ಚ್ 30 ದಿನಾಂಕವನ್ನು “ಜಾಗತಿಕ ಇಡ್ಲಿ ದಿನ” ಎಂದು ಘೋಷಿಸಲಾಗಿದೆ. ನಮ್ಮ ನೆಲದ ಪೋಷಕಾಂಶಭರಿತ ತಿನಿಸೊಂದು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿ ಹೆಸರು ಮಾಡಿರುವುದನ್ನು ಸಂಭ್ರಮಿಸೋಣ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!