ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಮತ್ತಷ್ಟು ಸದೃಢಗೊಂಡಿರುವುದು ಅಮೆರಿಕಕ್ಕೆ ತಳಮಳ ಮೂಡಿಸಿದೆ. ರಷ್ಯಾ ಅಧ್ಯಕ್ಷ ವ್ಯಾದಿಮಿರ್ ಪುತಿನ್ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವೆ ಹಲವು ಮಹತ್ವದ ಒಪ್ಪಂದಗಳು ಏರ್ಪಟ್ಟಿವೆ. ಮುಖ್ಯವಾಗಿ, ಅಮೆರಿಕದ ಬೆದರಿಕೆ ತಂತ್ರಕ್ಕೆ ಮಣಿಯುವುದಿಲ್ಲ ಎಂದು ಎರಡೂ ರಾಷ್ಟ್ರಗಳು ಸ್ಪಷ್ಟಪಡಿಸಿವೆ. ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಅಬಾಧಿತ ಎಂದು ಪುತಿನ್ ಸ್ಪಷ್ಟಪಡಿಸಿದ್ದರೆ, ರಷ್ಯಾದೊಂದಿಗಿನ ಮೈತ್ರಿ ಮತ್ತು ಸಹಕಾರ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಜಾಗತಿಕ ವಲಯ ಕುತೂಹಲದಿಂದ ಗಮನಿಸಿದೆ. ಆದರೆ, ಅಸಹನೆ ಹೆಚ್ಚಿರುವುದು ಅಮೆರಿಕಕ್ಕೆ. ಸುಂಕ ನೀತಿಯ ಮೂಲಕ ಹಲವು ದೇಶಗಳಿಗೆ ಪದೇಪದೆ ಬೆದರಿಕೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಮ್ಮೆ ಇದೇ ರೀತಿಯ ಮಾತುಗಳನ್ನಾಡಿದ್ದಾರೆ. 'ಭಾರತವು ಅಮೆರಿಕದ ಮಾರುಕಟ್ಟೆಗೆ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಡಂಪ್ ಮಾಡುತ್ತಿದ್ದು, ಇದನ್ನು ನಿಲ್ಲಿಸದಿದ್ದರೆ ಭಾರಿ ಸುಂಕ ವಿಧಿಸುವ ಮೂಲಕ ಡಂಪಿಂಗ್ ತಡೆಯಲಾಗುವುದು' ಎಂದಿರುವ ಟ್ರಂಪ್, 'ಸುಂಕ ವಿಧಿಸುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಇದನ್ನು ನಾನೇ ನಿಭಾಯಿಸುತ್ತೇನೆ' ಎಂದಿದ್ದಾರೆ. ಮೊದಲು ಭಾರತದ ಅಕ್ಕಿಗೆ ಅಮೆರಿಕ ಮಾರುಕಟ್ಟೆಯಲ್ಲಿ ಶೇಕಡ ೧೦ರಷ್ಟು ಸುಂಕ ಇತ್ತು. ಇತ್ತೀಚಿನ ತಿಂಗಳುಗಳಲ್ಲಿ ಅದು ಶೇ. ೪೦% ಕ್ಕೆ ಏರಿದೆ.
ಅಮೆರಿಕ ತನ್ನ ಹಿತಕ್ಕೆ ಏನು ಬೇಕೋ ಆ ಕ್ರಮಗಳನ್ನು ಕೈಗೊಳ್ಳಲಿ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ, ವಾಣಿಜ್ಯ ಮತ್ತು ಆರ್ಥಿಕ ಹಿತ ಸಾಧಿಸುವ ನೆಪದಲ್ಲಿ ರಾಜತಾಂತ್ರಿಕ ಮತ್ತು ದ್ವಿಪಕ್ಷೀಯ ಬಾಂಧವ್ಯಗಳಿಗೆ ಟ್ರಂಪ್ ಪೆಟ್ಟು ನೀಡುತ್ತಿರುವುದು, ಪದೇಪದೆ ಬೆದರಿಕೆಯ ಭಾಷೆ ಬಳಸುತ್ತಿರುವುದು ಸೂಕ್ತವಲ್ಲ. ಸುಂಕಾಸ್ತ್ರದ ಮೂಲಕ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ಟ್ರಂಪ್ ಗ್ರಹಿಕೆಯೇ ದೋಷಪೂರಿತವಾಗಿದೆ. ಭಾರತ ಹೆಚ್ಚು ಮಾನವ ಸಂಪನ್ಮೂಲ ಮತ್ತು ವಿಶ್ವದಲ್ಲೇ ಅತಿ ವಿಶಾಲ ಮಾರುಕಟ್ಟೆಯನ್ನು ಹೊಂದಿರುವ ದೇಶ, ರಪ್ತಿಗಾಗಿಯೂ ಅಮೆರಿಕ ಹೊರತುಪಡಿಸಿ ಇತರ ದೇಶಗಳ ಆಯ್ಕೆಯನ್ನು ಕಂಡುಕೊಳ್ಳುವ ಸಾಮರ್ಥ್ಯವಿದೆ. ಭಾರತದ ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳಿಗೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಮಾತ್ರವಲ್ಲ, ಭಾರತದೊಂದಿಗೆ ವಾಣಿಜ್ಯ ಸಂಬಂಧ ವೃದ್ಧಿಸಿಕೊಳ್ಳಲು, ಪರಸ್ಪರ ಸಹಕಾರ ಹೆಚ್ಚಿಸಲು ಹಲವು ರಾಷ್ಟ್ರಗಳು ಉತ್ಸಾಹ ತೋರಿವೆ. ಅಮೆರಿಕ ಸಾರಿರುವ ಸುಂಕ ಸಮರದ ಹೊರತಾಗಿಯೂ ಭಾರತ ಕಳೆದ ತ್ರೈಮಾಸಿಕದಲ್ಲಿ ಶೇಕಡ ೮.೨ರಷ್ಟು ಆರ್ಥಿಕ ಬೆಳವಣಿಗೆ (ಜಿಡಿಪಿ) ದಾಖಲಿಸಿರುವುದು ಸಾಧಾರಣ ಸಂಗತಿಯಲ್ಲ. ಅಲ್ಲದೆ, ವಿಶ್ವದಲ್ಲೇ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಹೀಗಿದ್ದರೂ, ಸುಂಕ ಬೆದರಿಕೆಯಿಂದ ಭಾರತವನ್ನು ಮಣಿಸಬಹುದು ಎಂದು ಟ್ರಂಪ್ ಅಂದುಕೊಂಡಿದ್ದರೆ ಅದು ಮಹಾಪ್ರಮಾದವೇ ಸರಿ, ಮಾತ್ರವಲ್ಲ, ಟ್ರಂಪ್ ಜಾರಿಗೊಳಿಸುತ್ತಿರುವ ಅವೈಜ್ಞಾನಿಕ ಸುಂಕ ನೀತಿಯಿಂದ ಅಮೆರಿಕದ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಆರ್ಥಿಕ ಬೆಳವಣಿಗೆ ವೇಗ ಕಳೆದುಕೊಳ್ಳುತ್ತಿದೆ ಎಂದು ಅಮೆರಿಕದ ವಿತ್ತೀಯ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ವಾಣಿಜ್ಯ ಸಮರದ ಭರದಲ್ಲಿ ಭಾರತ-ಅಮೆರಿಕ ನಡುವಿನ ಹಳೆಯ ಸ್ನೇಹ ಮತ್ತು ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ಆಗದಿರಲಿ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೦-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!