ಡಿಸೆಂಬರ್ 18 ರಾಷ್ಟ್ರೀಯ ಅವಳಿ ಮಕ್ಕಳ ದಿನ ಅಂತ ಅಂತರ್ಜಾಲವು ನೆನಪಿಸುತ್ತಾ ಇದೆ. ಪ್ರಪಂಚದ ಜನಸಂಖ್ಯೆಯಲ್ಲಿ ಅವಳಿಗಳ ಸಂಖ್ಯೆ ಶೇಕಡಾ 2 ಕ್ಕಿಂತಲೂ ಕಡಿಮೆ . ಹಾಗಾಗಿ ಈ ಲೇಖನವನ್ನು ಓದುತ್ತಿರುವ ಎಲ್ಲಾ ಅವಳಿ ಮಕ್ಕಳಿಗೂ, ಅವಳಿ ಮಕ್ಕಳ ಪೋಷಕರಿಗೂ ವಿಶೇಷವಾದ ಶುಭಾಶಯಗಳು .
ಅವಳಿ ಮಕ್ಕಳಲ್ಲಿ ಎರಡು ವಿಧ - ತದ್ರೂಪಿ ಅವಳಿಗಳು ಹಾಗೂ ಭ್ರಾತೃ [ ನೋಡಲು ಒಂದೇ ತರಹ ಇರದ , ಭಿನ್ನ ಲಿಂಗದವರೂ ಆಗಿರಬಹುದಾದ ] ಅವಳಿಗಳು . ಬಹಳ ಅಪರೂಪವಾಗಿ ಎರಡಕ್ಕಿಂತಲೂ ಹೆಚ್ಚು ಮಕ್ಕಳು ಒಮ್ಮೆಗೇ ಹುಟ್ಟುವುದೂ ಇದೆ - ತ್ರಿವಳಿಗಳು ಇತ್ಯಾದಿ. 2021 ನೇ ಇಸವಿಯಲ್ಲಿ ಆಫ್ರಿಕಾ ಖಂಡದ ಮಾಲಿ ದೇಶದಲ್ಲಿ ಹಲೀಮಾ ಎಂಬ ಮುಸ್ಲಿಂ ಮಹಿಳೆಯೊಬ್ಬಳು ಯಾವುದೇ ಕೃತಕ ಗರ್ಭಧಾರಣೆಯ ನೆರವಿಲ್ಲದೆ ಒಂದೇ ಸಾರಿಗೆ 9 ಆರೋಗ್ಯವಂತ ಮಕ್ಕಳನ್ನು ಹೆತ್ತದ್ದು ಇದುವರೆಗಿನ ಅಧಿಕೃತ ದಾಖಲೆ.
ಪುರಾಣಗಳಲ್ಲಿ ಅವಳಿಗಳು :
ಇನ್ನು ನಮ್ಮ ಪುರಾಣಗಳ ಪ್ರಕಾರ ಮೊತ್ತ ಮೊದಲಾಗಿ ಹುಟ್ಟಿದ ಅವಳಿಗಳು ಯಾರೆಂದು ನೋಡೋಣ . ಅವಳಿ ಎಂಬುದು ಸಂಸ್ಕೃತದ "ಯಮಳ" ಎಂಬ ಪದದ ಕನ್ನಡ ರೂಪಾಂತರ . ಯಮಳ ಎಂದರೆ ಜೋಡಿ ಅಥವಾ ಜೊತೆಯಾಗಿರುವುದು . ಯಮಳ ಎಂಬ ಪದದಲ್ಲೇ ಇದಕ್ಕೆ ಉತ್ತರ ಇದೆ. ಹೌದು.. ಮೃತ್ಯುದೇವತೆ "ಯಮ" ನೇ ಮೊತ್ತ ಮೊದಲ ಯಮಳ ಅಥವಾ ಅವಳಿ ಅಂತ ಹಲವಾರು ಪುಸ್ತಕಗಳು ಹೇಳುತ್ತವೆ . ಯಮನ ನಿಜವಾದ ಹೆಸರು ಧರ್ಮ ಅಥವಾ ಕಾಲ . ಅವನ ಕೆಲಸ ಜನರನ್ನು ಸಾಯಿಸುವುದೂ ಅಲ್ಲ . ನಮ್ಮ ನಿಮ್ಮೆಲ್ಲರ ಸಮಯ ಮುಗಿದ ಬಳಿಕ ಪಾಪ ಪುಣ್ಯಗಳ ಲೆಕ್ಕಾಚಾರ ಹಾಕಿ ಗತಿ ಕಾಣಿಸುವುದು ಅಷ್ಟೇ ! ಮೊತ್ತ ಮೊದಲ ಬಾರಿ ಎರಡು ಮಕ್ಕಳು ಜೊತೆಯಾಗಿ ಜನಿಸಿದಾಗ - ಧರ್ಮ ಅಥವಾ ಕಾಲನನ್ನು ಎಲ್ಲರೂ "ಯಮ " (ಯಮಳ ದ ಸಂಕ್ಷಿಪ್ತ ರೂಪ. ಇಂಗ್ಲಿಷ್ನಲ್ಲಿ Hello Mr. Twin ಎಂದು ಕರೆದಂತೆ ) ಎಂದೇ ಗುರುತಿಸಲಾರಂಭಿಸಿ ಆ ಹೆಸರೇ ಹೆಚ್ಚು ಪ್ರಚಲಿತವಾಯಿತು . ನಿಜ ಅರ್ಥದಲ್ಲಿ ಪ್ರಪಂಚದ ಎಲ್ಲಾ ಅವಳಿಗಳನ್ನು "ಯಮ " ಎಂದು ದಾರಾಳವಾಗಿ ಕರೆಯಬಹುದು . ಅದೇ ನಿಜವಾದ ಅರ್ಥ .
ಯಮನ ಜೊತೆಯಲ್ಲಿ ಅವಳಿ ತಂಗಿಯಾಗಿ ಹುಟ್ಟಿದವಳು "ಯಮಿ". ಅವಳ ಹೆಸರಿಗೂ "The female Twin" ಎಂದೇ ಅರ್ಥ. ಆ ಹೆಸರು ಹೆಚ್ಚಿನವರು ಕೇಳಿರಲಿಕ್ಕಿಲ್ಲ - ಯಮಿ ಗೌತಮ್ ಎಂಬ ನಟಿಯೊಬ್ಬಳದ್ದೇ ಹೆಸರು ಈ ವರೆಗೆ ನಾನು ಕೇಳಿದ್ದು . ಆದರೆ ಅವಳ ಇನ್ನೊಂದು ಹೆಸರು ಜಗತ್ ಪ್ರಸಿದ್ಧ - ಅದೇ "ಯಮುನಾ". ಉತ್ತರ ಭಾರತದಲ್ಲಿ ನದಿಯಾಗಿ ಹರಿಯುತ್ತಿದ್ದಾಳಲ್ಲ ಆಕೆಯೇ ಯಮನ ತಂಗಿ . ಯಮುನೆಯು ಭಗವಾನ್ ಕೃಷ್ಣನ ಅಷ್ಟ ಭಾರ್ಯೆಯರು ಅಂದರೆ ಹೆಂಡತಿಯರಲ್ಲಿ ಒಬ್ಬಳು . ಕೃಷ್ಣ ಹುಟ್ಟುವಾಗಲೇ ಯಮುನೆ ಹರಿಯುತ್ತಿದ್ದಳಲ್ಲಾ ಅಂತ ಕೇಳಬೇಡಿ . ಒಂದು ರೀತಿ ಕೃಷ್ಣನ ಕಥೆಗಳಲ್ಲಿ ಯಮುನೆಯು ಹಾಸು ಹೊಕ್ಕಾಗಿರುವುದರಿಂದ ಪುರಾಣಗಳಲ್ಲಿ ಈ ರೀತಿ ಬರೆದಿರಬಹುದು .
ಸನಾತನ ಧರ್ಮದಲ್ಲಿ ಬರುವ ಇನ್ನೊಬ್ಬ ಪ್ರಸಿದ್ಧ ಅವಳಿಗಳು ಅಶ್ವಿನಿ ದೇವತೆಗಳು . ಯಮ-ಯಮಿ ಹಾಗೂ ಅಶ್ವಿನಿ ಕುಮಾರರು ಸಾಕ್ಷಾತ್ ಸೂರ್ಯ ದೇವರ ಮಕ್ಕಳು ಅಂದರೆ ಒಂದೇ ತಂದೆಗೆ ಹುಟ್ಟಿದ ಎರಡು ಜೊತೆ ಅವಳಿಗಳು . ವಿಶೇಷವೆಂದರೆ ಮಹಾಭಾರತದಲ್ಲಿ ಸಹ ಕುಂತಿಗೆ ಅಶ್ವಿನಿ ದೇವತೆಗಳಿಂದ ನಕುಲ ಸಹದೇವರೆಂಬ ಅವಳಿ ಮಕ್ಕಳು ಜನಿಸಿರುತ್ತಾರೆ . ಅವಳಿ ಮಕ್ಕಳಿಗೆ ಒಬ್ಬರಿಗಿಂತ ಹೆಚ್ಚು ತಂದೆಯರು ಇರಬಹುದೆಂದು ಆಧುನಿಕ ವಿಜ್ಞಾನ ಹೇಳುತ್ತದೆ ಹಾಗೂ ಅದಕ್ಕೆ ಕೆಲವು ಇತ್ತೀಚಿನ ಉದಾಹರಣೆಗಳೂ ಇವೆ . ಕೆಲವು ಹೆಂಗಸರಲ್ಲಿ ಒಂದು ಋತುಚಕ್ರದಲ್ಲಿ 24 ರಿಂದ 48 ಘಂಟೆಗಳ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚಿನ ಅಂಡಾಣುಗಳು ಬಿಡುಗಡೆಯಾಗುತ್ತವೆ . ಅಂಡಾಣುಗಳು ಸಕ್ರಿಯವಾಗಿರುವ 1 ರಿಂದ 2 ದಿನದೊಳಗೆ , ಈ ಹೆಂಗಸು ಬೇರೆ ಗಂಡಸರ ದೈಹಿಕ ಸಂಪರ್ಕ ಬೆಳೆಸಿದಲ್ಲಿ ಒಂದೇ ಗರ್ಭದಲ್ಲಿ - ಬೇರೆ ಬೇರೆ ತಂದೆಯರಿಗೆ ಜನಿಸಿದ ಅವಳಿ ಮಕ್ಕಳು ಬೆಳೆಯುತ್ತವೆ !
ಇಲ್ಲೊಂದು ತಮಾಷೆಯ ಮಾತು . ಸೂರ್ಯನ ಮಕ್ಕಳು ಯಮ ಹಾಗೂ ಅಶ್ವಿನಿ ದೇವತೆಗಳೆಂದು ಹೇಳಿದೆ ತಾನೇ ? ಕುಂತಿಗೆ ಸೂರ್ಯನಿಂದ ಹುಟ್ಟಿದವನು ಕರ್ಣ. ಯಮನಿಂದ ಹುಟ್ಟಿದವನು ಯುಧಿಷ್ಠಿರ ಹಾಗೂ ಅಶ್ವಿನಿ ದೇವತೆಗಳಿಂದ ಹುಟ್ಟಿದವರು ನಕುಲ ಸಹದೇವರು . ಹಾಗಂದ ಮೇಲೆ ಯುಧಿಷ್ಠಿರನಿಗೆ ಕರ್ಣ ಅಣ್ಣನೋ ಅಥವಾ ಚಿಕ್ಕಪ್ಪನೋ ? ನಕುಲ ಸಹದೇವರಿಗೆ ಕುಂತಿ ತಾಯಿಯೂ ಆಗುತ್ತಾಳೆ ಅಥವಾ ಒಂದು ರೀತಿಯಿಂದ ಅಜ್ಜಿಯೂ ಆಗುತ್ತಾಳೆ ಅಲ್ಲವೇ ? ಇನ್ನೊಂದು ವಿಷಯ - ಅವಳಿ ಮಕ್ಕಳಿಗೆ ಕನ್ನಡದಲ್ಲಿ "ಅವಳಿ ಜವಳಿ" ಎಂದೂ ಹೇಳುತ್ತಾರೆ . ಅವಳಿ ಎಂದರೆ ಜೋಡಿ , ಜವಳಿ ಅಂದರೆ ಬಟ್ಟೆ . ಹಾಗಾದಲ್ಲಿ ಅವಳಿ ಜವಳಿ ಎಂದರೆ ಯಾವಾಗಲೂ ಜೋಡಿಯಾಗಿರುವ ಬಟ್ಟೆಗಳು , ಉದಾಹರಣೆಗೆ ಶರ್ಟ್-ಪ್ಯಾಂಟ್ , ಸಲ್ವಾರ್-ಕಮೀಜ್ , ಸೀರೆ-ಬ್ಲೌಸ್ ಹೀಗೂ ವಿನೋದಕ್ಕಾಗಿ ಅರ್ಥ ಮಾಡಿಕೊಳ್ಳಬಹುದು
ಇನ್ನು ಮಹಾಭಾರತದಲ್ಲೇ, ಸವತಿಯಾದ ಕುಂತಿಯು ತನಗಿಂತ ಮೊದಲು ಗಂಡು ಮಗನನ್ನು ಹೆತ್ತಳು ಎಂಬ ಮತ್ಸರದಿಂದ ಗಾಂಧಾರಿಯು ತನ್ನ ಹೊಟ್ಟೆಯನ್ನು ಕಿವುಚಿಕೊಂಡಾಗ ಭ್ರೂಣವು ಹೊರ ಬಂತೆಂದೂ, ಅದನ್ನು ವ್ಯಾಸರ ಸಲಹೆಯ ಮೇಲೆ ೧೦೧ ತುಪ್ಪದ ಗಡಿಗೆಯಲ್ಲಿಟ್ಟು ಪೋಷಿಸಿದಾಗ 100 ಗಂಡು ಮಕ್ಕಳು , ಒಂದು ಹೆಣ್ಣು ಮಗು ಹುಟ್ಟಿತು ಎಂಬ ಕಥೆ ಬರುತ್ತದೆ. ಒಂದೇ ಭ್ರೂಣದಿಂದ ಹುಟ್ಟಿದ 101 ಮಕ್ಕಳು logic ಪ್ರಕಾರ ಒಂದೇ DNA ಯನ್ನು ಹೊಂದಿರಬೇಕು, ಒಂದೇ ರೀತಿ ಕಾಣಬೇಕು ಹಾಗೂ ಎಲ್ಲರೂ ಒಂದೇ ಲಿಂಗದವರಾಗಿರಬೇಕಾಗಿತ್ತು . ಆದರೆ ಹಾಗೆ ಆಗಲಿಲ್ಲ . ದೇವ ದೇವತೆಗಳಿಗೆ ನಮ್ಮಂತ ಸಾಮಾನ್ಯರ ಕಟ್ಟು ಪಾಡುಗಳು ಅನ್ವಯ ಆಗುವುದಿಲ್ಲ ನೋಡಿ !
ಕೊನೆಯ ಮಾತು :
ಕನ್ನಡದ ಪ್ರಸಿದ್ಧ ನಟಿ ಶ್ರುತಿಯವರ ತಂದೆ ಜಿ ವಿ ಕೃಷ್ಣ ಅವರು ರಾಧಾ ಹಾಗೂ ರುಕ್ಮಿಣಿ ಎಂಬ ಹೆಸರಿನ, ಒಂದೇ ರೂಪ, ಎತ್ತರ , ಬಣ್ಣದ - ಸದಾ ಒಂದೇ ರೀತಿಯ ಉಡುಗೆಯನ್ನು ಧರಿಸುವ, ಎಂದೆಂದಿಗೂ ಜೊತೆಯಲ್ಲೇ ಇರುವ ಅವಳಿ ಸಹೋದರಿಯರನ್ನು ವಿವಾಹವಾಗಿದ್ದಾರೆ. ಶ್ರುತಿಯವರಿಗೂ ಅವರ ಒಡ ಹುಟ್ಟಿದವರಿಗೂ ತಮಗೆ ಜನ್ಮ ಕೊಟ್ಟ ತಾಯಿ ಇಬ್ಬರಲ್ಲಿ ಯಾರು ಅಂತ ಇಂದಿಗೂ ಗೊತ್ತಿಲ್ಲವಂತೆ. ಎಲ್ಲಾ ಮಕ್ಕಳು ತಾಯಿಯ ಹೆಸರನ್ನು ರಾಧಾ ರುಕ್ಮಿಣಿ ಎಂದೇ ಬರೆಯುತ್ತಾರೆ. ತದ್ರೂಪಿ ಅವಳಿಗಳಾದ ತಾಯಿಯರಿಗೆ ಒಂದೇ ರೀತಿಯ ಡಿಎನ್ಎ ಇರುವುದರಿಂದ ತಂದೆ ತಾಯಿಯರು ಹೇಳದ ಹೊರತು ಯಾವ ವೈದ್ಯಕೀಯ ಪರೀಕ್ಷೆಯಿಂದಲೂ ಯಾರ ತಾಯಿ ಯಾರು ಅಂತ ಪತ್ತೆ ಹಚ್ಚಲು ಸಾಧ್ಯವಿಲ್ಲ. ಇದು ಬಹಳ ಅಪರೂಪದ ಕುಟುಂಬ !
ಬರಹ : ಕೃಷ್ಣ ರಾಜ್ ಭಟ್, ಮೇರಿಲ್ಯಾಂಡ್ USA
ಚಿತ್ರ ಕೃಪೆ : Perplexity AI Tool
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!