ಯಾವುದೇ ರಂಗಗಳಲ್ಲಿ ಖಾಸಗಿ ಸಂಸ್ಥೆಯೊಂದರ ಏಕಸ್ವಾಮ್ಯ ಎಷ್ಟು ಅಪಾಯಕಾರಿ ಎನ್ನುವುದನ್ನು ವೈಮಾನಿಕ ಸೇವೆಯಲ್ಲಿ ಇಂಡಿಗೂ ಸೃಷ್ಟಿಸಿರುವ ಅವಾಂತರದಿಂದಲೇ ದೇಶಾದ್ಯಂತ ಲಕ್ಷಾಂತರ ಪ್ರಯಾನಕರ ಯೋಜನೆಗಳನ್ನು ತಲೆಕೆಳಗೆ ಮಾಡಿ; ಹಿರಿಯ ನಾಗರಿಕರು, ರೋಗಿಗಳು, ಮಕ್ಕಳು, ಮಹಿಳೆಯರನ್ನು ಪರದಾಡುವಂತೆ ಮಾಡಿರುವುದು ಸಹಜವಾಗಿ ಪ್ರಯಾಣಿಕ ವರ್ಗದಲ್ಲಿ ಆಕ್ರೋಶ ಹೆಚ್ಚಿಸಿದೆ. ಇಷ್ಟು ಅಧ್ವಾನ ಘಟಿಸುವ ತನಕ ಕೇಂದ್ರ ಸರಕಾರ ಕಣ್ಮುಚ್ಚಿ ಕೂತಿದ್ದೇಕೆ ಎಂಬ ಜನಸಾಮಾನ್ಯರೊಳಗಿನ ಪ್ರಶ್ನೆಯೇ ಈಗ ದಿಲ್ಲಿ ಹೈಕೋರ್ಟ್ ಮೂಲಕ ಪ್ರತಿಧ್ವನಿಸಿದೆ. ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯ ಮೇಲೆ ಹಿಡಿತ ಸಾಧಿಸಲಾಗದಿರುವುದು ಕೇಂದ್ರ ಸರಕಾರದ ವೈಫಲ್ಯವಲ್ಲದೆ ಮತ್ತೇನೂ ಅಲ್ಲ.
ವೈಮಾನಿಕ ಪ್ರಯಾಣಿಕರ ಅನನುಕೂಲತೆ ಈಗ ಮೊದಲಿನಷ್ಟು ಇಲ್ಲವಾದರೂ, ಕಳೆದ ೧೦ ದಿನಗಳ ತೀವ್ರತೆ ಮರು ನೆನಪಿಸಿಕೊಳ್ಳುವುದೂ ಕಷ್ಟಕಷ್ಟ ಹಾಗೆ, ನೋಡಿದರೆ ನಿಯಂತ್ರಕ ಸಂಸ್ಥೆಗಳು ನಿಜಕ್ಕೂ ಮೇಲಿಂದ ಮೇಲೆ ನಿರಾಶೆ ಉಣ್ಣಿಸುತ್ತಿರುವುದು ಸ್ಪಷ್ಟ. ಇತ್ತೀಚೆಗೆ ವಿಷಯುಕ್ತ ಕೆಮ್ಮಿನ ಸಿರಪ್ ಕೋಲ್ಡ್ರಿಫ್ ಪ್ರಕರಣವೂ ಇದೇ ಮಾದರಿಯದ್ದೇ ಅಲ್ಲವೇ? ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ೨೫ಕ್ಕೂ ಹೆಚ್ಚು ಮಕ್ಕಳು ಈ ಅಪಾಯಕಾರಿ ಕೆಮ್ಮಿನ ಸಿರಪ್ ಸೇವಿಸಿ ಸಾವಿಗೀಡಾದರು. ಎರಡು ವರ್ಷಗಳ ಹಿಂದೆ ಗಾಂಬಿಯಾ, ಉಜ್ಬೇಕಿಸ್ತಾನದಲ್ಲೂ ಭಾರತ ಉತ್ಪಾದಿಸಿದ ಸಿರಪ್ ಮಾರಣಾಂತಿಕವಾಗಿ ದೇಶವನ್ನು ಜಗತ್ತಿನೆದುರು ತಲೆ ತಗ್ಗಿಸುವಂತೆ ಮಾಡಿತ್ತು. ಇಂಥ ಅವಘಡ ತಡೆಯಲು, ನಿಗಾ ಇಡಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ) ಇದ್ದಾಗ್ಯೂ, ಮೇಲಿಂದ ಮೇಲೆ ಘಟಿಸಿದ ಈ ಅವಘಡಗಳು ತೀರಾ ನಾಚಿಕೆಗೇಡಾಗಿದ್ದವು.
ಇಲ್ಲಿಯೂ, ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳ ಮೇಲ್ವಿಚಾರಣೆ ಹೊಣೆಯನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ವಹಿಸಿದೆ. ಪೈಲಟ್ ಗಳಿಗೆ ವಿಶ್ರಾಂತಿ ಸಮಯ ಹೆಚ್ಚಿಸುವ ಬಗ್ಗೆ ಡಿಜಿಸಿಎ ನಿಯಮ ರೂಪಿಸಿದಾಗ, ಇಂಡಿಗೊ ಏರ್ ಲೈನ್ಸ್ ಆರಂಭದಿಂದಲೇ ಅದನ್ನು ನಿರ್ಲಕ್ಷಿಸಿದ್ದು ಸ್ಪಷ್ಟವಿತ್ತು. ನಷ್ಟದಲ್ಲಿದ್ದ ಇತರೆ ವೈಮಾನಿಕ ಸಂಸ್ಥೆಗಳು ಇದನ್ನು ಜಾರಿಗೆ ಜಾರಿಗೆ ತಂದರೂ, ಲಾಭದಲ್ಲಿದ್ದ ಇಂಡಿಗೊ ಮಾತ್ರ ಮನಸ್ಸು ಬದಲಿಸಿರಲಿಲ್ಲ. ಅಸಹಕಾರದ ಪ್ರತೀಕವಾಗಿ ಇಂದಿಗೂ ತನ್ನ ವಿಮಾನಗಳನ್ನು ಏಕಾಏಕಿ ರದ್ದುಪಡಿಸಿ ಡಿಜಿಸಿಎಯನ್ನು ಅಕ್ಷರಶಃ ತನ್ನ ಮುಂದೆ ಮಂಡಿಯೂರುವಂತೆ ಮಾಡಿತು.
ಈ ಬೆಳವಣಿಗೆಯ ಪಾಠ ಇಷ್ಟೇ, ನಿಯಂತ್ರಕ ಸಂಸ್ಥೆಗಳು ಪರಿಣಾಮಕಾರಿಯಾಗದಿದ್ದರೆ, ಖಾಸಗಿ ವಲಯದ ಕಂಪನಿಗಳು ಇಂಡಿಗೋದಂತೆ ನಿರಂಕುಶವಾಗಿ ವರ್ತಿಸಬಹುದು. ತಮ್ಮದೇ ಮೂಗಿನ ನೇರಕ್ಕೆ ಧೋರಣೆ ಅನುಸರಿಸಬಹುದು. ಇದರ ಪರಿಣಾಮವಾಗಿ ಉತ್ಪನ್ನ ಮತ್ತು ಸೇವೆಗಳ ಗುಣಮಟ್ಟ ಕುಸಿಯುವುದಲ್ಲದೆ, ಸರಕಾರದ ಮೇಲಿನ ವಿಶ್ವಾಸಕ್ಕೂ ಕುಂದುಂಟಾಗುತ್ತದೆ. ಯಾವುದೇ ಗ್ರಾಹಕರ ದೂರುಗಳನ್ನು ಸಕಾಲಿಕ ಮತ್ತು ಸೂಕ್ತ ರೀತಿಯಲ್ಲಿ ಪರಿಹರಿಸುವ ಇಚ್ಚಾಶಕ್ತಿ ಪ್ರದರ್ಶಿಸದಿದ್ದರೆ, ಇಂದಿಗೂ ಅವಾಂತರವೇ ಬೇರೆ ಬೇರೆ ರಂಗಗಳಿಗೂ ಬಾಧಿಸಬಹುದು. ಇನ್ನಾದರೂ ಕೇಂದ್ರ ಸರಕಾರ ನಿಯಂತ್ರಕ ಸಂಸ್ಥೆಗಳನ್ನು ಕಟ್ಟುನಿಟ್ಟಾಗಿ ಇಟ್ಟುಕೊಳ್ಳಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!