ದಿವಂಗತ ಎಸ್. ರಾಮಚಂದ್ರ ಮಲ್ಯರನ್ನು ಮೊದಲ ಬಾರಿ ಭೇಟಿಯಾದದ್ದು ಮಂಗಳೂರಿನ ಬಲ್ಮಠದ ಕಾರ್ಪೊರೇಷನ್  ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ. ಅವರು ಅದರ ಪ್ರಿನ್ಸಿಪಾಲ್; ನಾನು ಅಲ್ಲಿಗೆ ಪ್ರಾಧ್ಯಾಪಕನಾಗಿ ಸೇರಿಕೊಂಡಿದ್ದೆ. 

ಹಾಗೆ ಶುರುವಾದ ನಮ್ಮ ಆತ್ಮೀಯ ಸಂಬಂಧ ಸುಮಾರು ಮೂರು ದಶಕಗಳ ಕಾಲ ಮುಂದುವರಿಯಿತು. ಅವರು ನನ್ನ ಮೇಲಧಿಕಾರಿ ಎಂಬುದಕ್ಕಿಂತ, ಸಮಾನ ಚಿಂತಕರು, ಆಪ್ತರು ಹಾಗೂ ಅಭಿಮಾನಿ ಎಂಬ ನೆಲೆಗಳಲ್ಲಿ ನಮ್ಮ ಸಂಬಂಧ ಗಟ್ಟಿಯಾಯಿತು.

ಎಸ್. ಆರ್. ಮಲ್ಯರೆಂದೇ ಜನಪ್ರಿಯರಾಗಿದ್ದ ಅವರು ಸದಾ ಅಧ್ಯಯನಶೀಲರು. ಅವರ ಪಕ್ಕದಲ್ಲಿ ಯಾವಾಗಲೂ ಕೆಲವು ಆಯ್ದ ಪುಸ್ತಕಗಳು. ಹಾಳುಹರಟೆಯಲ್ಲಿ ಅವರಿಗೆ ಆಸಕ್ತಿಯಿಲ್ಲ. ಬದಲಾಗಿ ಉತ್ತಮ ಓದಿನಲ್ಲೇ ಆಸಕ್ತಿ. ಅದರಿಂದಾಗಿಯೇ ಅವರ ಮಾತುಗಳು ಯಾವತ್ತೂ ಸಕಾರಾತ್ಮಕ ಮತ್ತು ಇತರರಿಗೆ ಪ್ರೋತ್ಸಾಹದಾಯಕ. 

ಅವರು ಕೆನರಾ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಒಮ್ಮೆ ಅಕಸ್ಮಾತ್ ಸ್ವಾಮಿ ಚಿನ್ಮಯಾನಂದರ ಪ್ರವಚನ ಕೇಳಲು ಹೋಗಿದ್ದರು. ಅವರ ಪ್ರವಚನ, ಅವರು ಭಗವದ್ಗೀತೆಯ ತಾತ್ಪರ್ಯ ವಿವರಿಸುತ್ತಿದ್ದ ಪರಿ, ಅವರ ಮಾತುಗಾರಿಕೆ ಹಾಗೂ ವ್ಯಕ್ತಿತ್ವದಿಂದ ಪ್ರಭಾವಿತರಾದ ಎಸ್. ಆರ್. ಮಲ್ಯರು ಆ ಕ್ಷಣದಿಂದಲೇ ಸ್ವಾಮಿ ಚಿನ್ಮಯಾನಂದರ ಶಿಷ್ಯರಾದರು. ಅವರಿಬ್ಬರದು ಗುರು-ಶಿಷ್ಯರ ಸಂಬಂಧಕ್ಕಿಂತ ಮಿಗಿಲಾಗಿ ಆತ್ಮಬಂಧುಗಳ ಸಂಬಂಧವಾಗಿತ್ತು. 

ಎಸ್. ಆರ್. ಮಲ್ಯರು ಸ್ವಾಮಿ ರಜನೀಶ್ (ಓಶೋ) ಅವರಿಂದಲೂ ಪ್ರಭಾವಿತರಾಗಿದ್ದರು. ಸ್ವಾಮಿ ರಜನೀಶರ ಹಲವು ಪುಸ್ತಕಗಳನ್ನು ಓದಿದ್ದರು ಮತ್ತು ಅವರ ಎಲ್ಲ ಪ್ರವಚನಗಳ ವಿಡಿಯೋ ತರಿಸಿಕೊಂಡು ಆಗಾಗ ಕೇಳುತ್ತಿದ್ದರು. 

ಮಾತುಗಾರಿಕೆಯ ಮೋಡಿ 

ತಮ್ಮ ಮಾತುಗಾರಿಕೆಯಿಂದ ಯಾರದೇ ಮನ ಗೆಲ್ಲಬಲ್ಲವರಾಗಿದ್ದರು ಎಸ್. ಆರ್. ಮಲ್ಯ. ಅವರ ನಿರರ್ಗಳ ಮಾತು, ಪದಗಳನ್ನು ಕುಣಿಸುವ ಪರಿ, ಹಾವಭಾವ, ಕೇಳುಗರತ್ತ ನೆಟ್ಟ ನೋಟ - ಎಲ್ಲವೂ ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವು. ನಾಣ್ಣುಡಿಗಳು, ಕತೆಗಳು, ಪ್ರಸಂಗಗಳು ತುಂಬಿರುತ್ತಿದ್ದ ಅವರ ಉಪನ್ಯಾಸಗಳನ್ನು ಕೇಳುವುದೇ ಖುಷಿ. ಇಂಗ್ಲಿಷ್, ಹಿಂದಿ, ಕನ್ನಡ, ಕೊಂಕಣಿ - ಈ ನಾಲ್ಕೂ ಭಾಷೆಗಳನ್ನು ಅವರು ದುಡಿಸುತ್ತಿದ್ದ ಪರಿ ಅಸಾಧಾರಣ. 

ಎಸ್. ಆರ್. ಮಲ್ಯರು ಉತ್ತಮ ಹಾಡುಗಾರರೂ ಹೌದು. ಅದೊಂದು ತರಬೇತಿ ತಂಡದಲ್ಲಿ ಸುಮಾರು 70 ಭಾಗಿಗಳಿದ್ದರು. ಕ್ಲಾರ್ಕ್ ಆಗಿದ್ದ ಅವರೆಲ್ಲರೂ ಬ್ಯಾಂಕಿನ ಆಫೀಸರ್ ಹುದ್ದೆಗೆ ಭಡ್ತಿಯಾದವರು. ಆ ತಂಡದ ಸಮಾರೋಪ ಸಮಾರಂಭದಲ್ಲಿ ವಿದಾಯದ ಹಾಡೊಂದನ್ನು ಎಸ್. ಆರ್. ಮಲ್ಯರು ಭಾವುಕರಾಗಿ ಹಾಡಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. 

ಸಮಯಸ್ಫೂರ್ತಿ ಮತ್ತು ಹಾಸ್ಯ ಎಸ್. ಆರ್. ಮಲ್ಯರ ದೊಡ್ಡ ಕೌಶಲ್ಯಗಳು. ಎಷ್ಟೋ ಸಂಭಾಷಣೆ ಹಾಗೂ ಸಂವಾದಗಳಲ್ಲಿ ಅವರ ಸಮಯಸ್ಫೂರ್ತಿಯ ಮಾತುಗಳು ಅಲ್ಲಿನ ಸಂದರ್ಭಕ್ಕೆ ಅನಿರೀಕ್ಷಿತ ತಿರುವು ನೀಡುತ್ತಿದ್ದವು. ಅವರ ಹಾಸ್ಯಪ್ರಜ್ಞೆಗೆ ಸಾಟಿಯೇ ಇಲ್ಲ. ಉಪನ್ಯಾಸಗಳಲ್ಲಿ ಅವರಂತೆ ಹಾಸ್ಯ ಉಣಬಡಿಸಬಲ್ಲವರು ವಿರಳ. 

“ಡಬ್ಬದಲ್ಲಿ ಚಕ್ಕುಲಿ ತುಂಬಿಸುವುದನ್ನು ಕಂಡಿದ್ದೀರಾ? ಡಬ್ಬ ತುಂಬಿದ ನಂತರ ಕುಲುಕಿದರೆ, ಆ ಡಬ್ಬದಲ್ಲಿ ಇನ್ನೂ ಐದಾರು ಚಕ್ಕುಲಿ ಹಾಕಲು ಜಾಗವಾಗುತ್ತದೆ. ಹಾಸ್ಯವೂ ಹಾಗೆಯೇ. ಮಾತಿನ ನಡುನಡುವೆ ಹಾಸ್ಯ ಬೆರೆಸಿದರೆ, ಇನ್ನಷ್ಟು ವಿಷಯಗಳನ್ನು ಕೇಳುಗರ ತಲೆಯೊಳಗೆ ತುಂಬಲು ಸಾಧ್ಯವಾಗುತ್ತದೆ” ಎಂದವರು ಮುಗುಳ್ನಗುತ್ತಾ ಆಗಾಗ ಹೇಳುತ್ತಿದ್ದುದು ಚಂದ. 

ಆದರ್ಶ ಪ್ರಾಧ್ಯಾಪಕ ಹಾಗೂ ಆಪ್ತಸಲಹೆಗಾರ 

ಪ್ರಾಧ್ಯಾಪಕನಾಗಿ ಬೆಳೆಯಲು ಅವಶ್ಯವಾದ ಹಲವಾರು ಸಂಗತಿಗಳನ್ನು ನಾನು ಎಸ್. ಆರ್. ಮಲ್ಯರಿಂದ ಕಲಿತೆ. ತರಗತಿಗಳಲ್ಲಿ ಕೀಟಲೆ ಮಾಡುವ ಭಾಗಿಗಳನ್ನು ನಿಭಾಯಿಸುವುದು ಹೇಗೆ? ಅನಾವಶ್ಯಕ ಪ್ರಶ್ನೆಗಳನ್ನು ಕೇಳುತ್ತಾ ಉಪನ್ಯಾಸಕ್ಕೆ ತೊಂದರೆ ಮಾಡುವ ಭಾಗಿಗಳನ್ನು ನಿರ್ವಹಿಸುವುದು ಹೇಗೆ? ಕೇಳುಗರ ಗಮನ ಸೆಳೆಯುವಂತೆ ಉಪನ್ಯಾಸವನ್ನು ಚಮತ್ಕಾರಿಕವಾಗಿ ಆರಂಭಿಸುವುದು ಹೇಗೆ? ಉಪನ್ಯಾಸದ ಮುಕ್ತಾಯದಲ್ಲೊಂದು ಮಾತಿನ “ಪಂಚ್” (ಗುದ್ದು) ನೀಡುವುದು ಹೇಗೆ? ಇವನ್ನೆಲ್ಲ ಅವರನ್ನು ನೋಡಿ ಕಲಿಯಲು ಸಾಧ್ಯವಾಯಿತು. 

ಮಾನವ ಸಂಬಂಧಗಳು, ವ್ಯಕ್ತಿ-ವ್ಯಕ್ತಿ ಸಂಬಂಧಗಳು, ವ್ಯಕ್ತಿತ್ವ ವಿಕಸನ, ಬದುಕಿನ ಪ್ರೇರಣೆ, ಬದುಕಿನಲ್ಲಿ ಹಾಸ್ಯ, ಸಂವಹನ ಕಲೆ, ಉತ್ತಮ ಭಾಷಣಕಾರ ಆಗುವುದು ಹೇಗೆ? ಬದುಕಿನಲ್ಲಿ ಅಧ್ಯಾತ್ಮ, ಭಗವದ್ಗೀತೆಯ ಸಂದೇಶ, ಭಗವದ್ಗೀತೆಯ ಮೆನೇಜ್-ಮೆಂಟ್ ತತ್ವಗಳು, ಪರಿಣಾಮಕಾರಿ ಮೆನೇಜ್-ಮೆಂಟ್ ಸೂತ್ರಗಳು ಮತ್ತು ಬ್ಯಾಂಕ್ ವ್ಯವಹಾರದ ವಿಷಯಗಳು - ಇವು ಎಸ್. ಆರ್. ಮಲ್ಯರು ಉಪನ್ಯಾಸ ನೀಡುತ್ತಿದ್ದ ಪ್ರಧಾನ ವಿಷಯಗಳು. 

ಹಲವಾರು ಜನರು ಎಸ್. ಆರ್. ಮಲ್ಯರ ಬಳಿ ಬರುತ್ತಿದ್ದದ್ದು ಅವರ ಸಲಹೆ ಕೇಳಲಿಕ್ಕಾಗಿ. ಅವರೊಬ್ಬ ಪರಿಣಾಮಕಾರಿ ಆಪ್ತಸಲಹೆಗಾರ (ಕೌನ್ಸಿಲರ್). ಯಾರೇ ಬಂದು ಸಮಸ್ಯೆ ಹೇಳಿಕೊಂಡರೂ ಅವರು ಗಮನವಿಟ್ಟು ಕೇಳುತ್ತಿದ್ದರು. ಅನಂತರ, ತಮ್ಮ ಅಧ್ಯಯನ ಹಾಗೂ ಅನುಭವದ ಬಲದಿಂದ ಸೂಕ್ತ ಪ್ರತಿಕ್ರಿಯೆ ನೀಡುತ್ತಿದ್ದರು.ಇದರಿಂದಾಗಿ ಸಮಸ್ಯೆ ಇದ್ದವರ ಮನಸ್ಸು ಹಗುರಾಗುತ್ತಿದ್ದದ್ದು ಖಂಡಿತ. “ಯಾವುದೇ ಸಮಸ್ಯೆ ದೊಡ್ಡದಲ್ಲ, ಅದು ಹತ್ತಿಯಂತೆ ಹಗುರ” ಎಂದು ಬಿಂಬಿಸುವ ಚಾಕಚಕ್ಯತೆ ಅವರಲ್ಲಿತ್ತು. 

ಯಾಕೆಂದರೆ ಎಸ್. ಆರ್. ಮಲ್ಯರು ಬದುಕಿನ ಏಳುಬೀಳುಗಳನ್ನು ಅನುಭವಿಸಿದವರು. ಕುಂದಾಪುರ ಹತ್ತಿರದ ಸೌದದ ಬಡ ಕುಟುಂಬದಲ್ಲಿ ಹುಟ್ಟಿದ ಮಲ್ಯರು ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಅವರದು ಐದು ಸೋದರಿಯರು ಮತ್ತೊಬ್ಬ ಸೋದರನ ದೊಡ್ಡ ಕುಟುಂಬ. ಶಾಲೆಯ ಶುಲ್ಕ ಕಟ್ಟಲು ಮತ್ತು ಶಾಲಾ ಪುಸ್ತಕ ಖರೀದಿಸಲು ಹಣಕ್ಕಾಗಿ ಕೈಯೊಡ್ಡಬೇಕಾದ ಪರಿಸ್ಥಿತಿಯಿತ್ತು. ಬಂಧುಗಳ ಸಹಾಯದಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಯಿತೆಂದು ನೆನೆಯುತ್ತಿದ್ದರು. 

ಕಾರವಾರದಲ್ಲೊಮ್ಮೆ ಬ್ಯಾಂಕ್ ಕ್ಲಾರ್ಕ್ ಉದ್ಯೋಗಾಕಾಂಕ್ಷಿಗಳಿಗೆ ಆಯ್ಕೆ ಪರೀಕ್ಷೆಗೆ ಮೂರು ದಿನಗಳ ತರಬೇತಿ ನೀಡಬೇಕಾಗಿತ್ತು. ನಾಲ್ಕು ವಿಷಯಗಳ ಬಗ್ಗೆ ತರಬೇತಿ ನೀಡಲು “ನೀವೊಬ್ಬರು ಜೊತೆಗಿದ್ದರೆ ಸಾಕು” ಎಂದು ನನ್ನನ್ನು ಹುರಿದುಂಬಿಸಿ ಕರೆದೊಯ್ದರು. ಆ ತರಬೇತಿಯನ್ನು ಯಶಸ್ವಿಯಾಗಿ ನಾವಿಬ್ಬರೇ ನಡೆಸಿದೆವು. ಈ ರೀತಿಯಲ್ಲಿ ಅವರು ಹಲವರಲ್ಲಿ ಆತ್ಮವಿಶ್ವಾಸ ಬೆಳೆಯಲು ಕಾರಣರಾಗಿದ್ದರು. 

ಎಸ್. ಆರ್. ಮಲ್ಯರ ಪತ್ನಿ ಶ್ರೀಮತಿ ಗೌರಿ ಮಲ್ಯರು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸಿದ ಮಹಿಳೆ. ಆಕಾಶವಾಣಿಯಲ್ಲಿ ಕೊಂಕಣಿಯಲ್ಲಿ ಹಲವಾರು ಉಪನ್ಯಾಸಗಳನ್ನು ನೀಡಿರುವುದು ಮತ್ತು ಅನೇಕ ಲೇಖನಗಳನ್ನು ಬರೆದಿರುವುದು ಇವರ ಹೆಗ್ಗಳಿಕೆ. ಮನೆಗೆ ಬಂದ ಅತಿಥಿಗಳಿಗೆ ಹಸನ್ಮುಖದ ಆತಿಥ್ಯ ನೀಡುವವರು. ಎಸ್. ಆರ್. ಮಲ್ಯರ ನಿಧನಾ ನಂತರ, “ಮಾನವ ಸಂಬಂಧಗಳ” ಬಗೆಗಿನ ಕೆಲವು ಪುಸ್ತಕಗಳನ್ನು ನನಗಿತ್ತು “ನಿಮಗೆ ಇವು ಪ್ರಯೋಜನಕ್ಕೆ ಬಂದೀತು” ಎಂದವರು ಗೌರಿ ಮಲ್ಯ. 

ತಮ್ಮ ನಾಲ್ಕು ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿದವರು ಎಸ್. ಆರ್. ಮಲ್ಯ ದಂಪತಿ. 

ಮುಂದಿನ ತಲೆಮಾರಿಗಾದ ತುಂಬಲಾರದ ನಷ್ಟ ಎಸ್. ಆರ್. ಮಲ್ಯರು ಬರವಣಿಗೆಯಲ್ಲಿ ತೊಡಗಲಿಲ್ಲ ಎಂಬುದು. ಅವರ ಮಗಳು ಲತಾ, ತಂದೆ ತೀರಿಕೊಂಡ ಬಳಿಕ, ಅವರ ಸ್ಫೂರ್ತಿದಾಯಕ ಚಿಂತನೆಗಳನ್ನು “ಸೋಲ್ ಫುಡ್ - ಎ ಕಲೆಕ್ಷನ್ ಆಫ್ ಪಾಸಿಟಿವ್ ಥಾಟ್ಸ್” ಎಂಬ ಶೀರ್ಷಿಕೆಯ ಪುಟ್ಟ ಪುಸ್ತಕವಾಗಿ ಪ್ರಕಟಿಸಿದ್ದಾರೆ. (ಫೋಟೋ)

ಎಸ್. ರಾಮಚಂದ್ರ ಮಲ್ಯರು ಇಂದು ನಮ್ಮೊಂದಿಗಿಲ್ಲ. ಆದರೆ ಅವರಿಂದ ಪ್ರಭಾವಿತರಾದ ನನ್ನಂತಹ ಸಾವಿರಾರು ಜನರ ಮನದಲ್ಲಿ ಅವರು ನೆಲೆಸಿದ್ದಾರೆ. ಅವರ ನಗುಮುಖ, ಆಪ್ತ ಧ್ವನಿ, ಸ್ಫೂರ್ತಿಯ ಮಾತುಗಳು, ಹುರಿದುಂಬಿಸುವ ಪರಿ, ಇಡೀ ಬದುಕಿನಲ್ಲಿ ಸಕಾರಾತ್ಮಕ ನಡವಳಿಕೆ ಇವನ್ನೆಲ್ಲ ಎಂದಿಗೂ ಮರೆಯಲಾಗದು.