ಅಂತಾರಾಷ್ಟ್ರೀಯ ಸಂಬಂಧ ಎನ್ನುವುದು ಮುಳ್ಳುಬೇಲಿಯ ಮೇಲೆ ಹರವಿದ ತೆಳುವಾದ ಬಟ್ಟೆಯಿದ್ದಂತೆ. ಮುಳ್ಳುಬೇಲಿಯೇ ಅತ್ತಿತ್ತ ಅಲುಗಾಡಿದರೂ ಅಥವಾ ನಾವೇ ನಿರ್ಲಕ್ಷ್ಯದಿಂದ ಎಳೆದರೂ ಹರಿಯುವುದು ಬಟ್ಟೆಯೇ. ಹೀಗಾಗಿ ದೇಶವೊಂದರ ಒಳಾಡಳಿತಕ್ಕೆ ಗಮನವನ್ನು ಕೊಡುವ ರೀತಿಯಲ್ಲೇ ಅಂತಾರಾಷ್ಟ್ರೀಯ ಬಾಂಧವ್ಯವನ್ನು ಕಾಪಿಟ್ಟುಕೊಳ್ಳುವುದಕ್ಕೂ ಇನ್ನಿಲ್ಲದ ಒತ್ತು ನೀಡಲಾಗುತ್ತದೆ. ಆದರೆ, ಇಂಥ ಎಲ್ಲ ಸೌಹಾರ್ದಯುತ ಯತ್ನಗಳ ಹೊರತಾಗಿಯೂ, ಬಾಂಧವ್ಯಗಳು ಬಿಗಡಾಯಿಸುವುದಿದೆ. ಇದಕ್ಕೆ ರಾಜತಾಂತ್ರಿಕ, ವಾಣಿಜ್ಯಿಕ ಹೀಗೆ ಯಾವುದೇ ಕಾರಣಗಳಿರಬಹುದು. ಪಾಕಿಸ್ತಾನ, ಚೀನಾದಂತಹ ಕೆಲವೊಂದು ಸಾಂಪ್ರದಾಯಿಕ ಶತ್ರುಗಳ ಜತೆಗೆ ಕಾಲಾನುಕಾಲಕ್ಕೆ ಒಂದಿಷ್ಟು ತಿಕ್ಕಾಟ ನಡೆಯುವುದು ಬಿಟ್ಟರೆ, ಭಾರತವು ವಿಶ್ವದ ಬಹುತೇಕ ರಾಷ್ಟ್ರಗಳ ಜತೆಗೆ ಒಳ್ಳೆಯ ಸಂಬಂಧವನ್ನೇ ಹೊಂದಿದೆ. ವಿಶ್ವದ ವಿವಿದೆಡೆ ಸುನಾಮಿ/ಚಂಡಮಾರುತ, ಭೂಕಂಪದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಭಾರತವು ಮುಂದೆ ನಿಂತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡದ್ದಿದೆ. ಇದು ಬಹುತೇಕ ದೇಶಗಳಿಗೆ ಗೊತ್ತಿರುವ ಸಂಗತಿಯೇ.
ಇಷ್ಟಾಗಿಯೂ, ‘ವಿಶ್ವದ ದೊಡ್ಡಣ್ಣ’ ಅಮೇರಿಕ ಕಳೆದ ಕೆಲವು ತಿಂಗಳಿಂದ ಭಾರತದ ಮೇಲೆ ‘ಸುಂಕ ಸಮರ’ ಹೆಸರಿನಲ್ಲಿ ಕೆಂಗಣ್ಣು ಬೀರಿಕೊಂಡೇ ಬಂದಿದೆ. ಈ ಸಾಲಿಗೆ ಈಗ ಮೆಕ್ಸಿಕೋ ಕೂಡ ಸೇರಿರುವುದು ಹಲವರ ಹುಬ್ಬೇರಿಸಿದೆ; ಭಾರತದಿಂದ ತನ್ನಲ್ಲಿಗೆ ಆಮದಾಗುವ ವಿವಿಧ ಸರಕುಗಳಿಗೆ ಶೇ.೫೦ ರಷ್ಟು ಸುಂಕವನ್ನು ಹೇರಲು ಮೆಕ್ಸಿಕೋ ನಿರ್ಧರಿಸಿರುವುದು, ಇದಕ್ಕೆ ಅಲ್ಲಿನ ಸಂಸತ್ತು ಸಮ್ಮತಿಸಿರುವುದು ಇತ್ತೀಚಿನ ಬೆಳವಣಿಗೆ. ತಂತಮ್ಮ ಹಿತಾಸಕ್ತಿಯನ್ನು ರಕ್ಸಿಸಲು ವಿವಿಧ ದೇಶಗಳು ಇಂಥ ಕ್ರಮಕ್ಕೆ ಮುಂದಾಗುವುದರಲ್ಲಿ ಹೊಸದೇನಿಲ್ಲ, ಆದರೆ ಸುಂಕದ ಪ್ರಮಾಣ ಮತ್ತು ಅದು ಹೇರಿಕೆಯಾಗಿರುವ ಕಾಲಘಟ್ಟ ಈಗ ಚರ್ಚೆಗೆ ಗ್ರಾಸವಾಗಿರುವಂಥದ್ದು. ಒಟ್ಟಿನಲ್ಲಿ ‘ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ’ ಎಂಬ ಗ್ರಹಿಕೆಯನ್ನು ಒತ್ತಿಹೇಳುವಂಥ ಸಾಕಷ್ಟು ಘಟನೆಗಳು ನಡೆಯುತ್ತಿವೆ. ದೇಶದ ದೊಡ್ಡವರು ಈ ನಿಟ್ಟಿನಲ್ಲಿ ಯಾವ ಕ್ರಮವನ್ನು ತೆಗೆದುಕೊಳ್ಳುವರು ಎಂಬುದನ್ನು ಕಾದುನೋಡಬೇಕಷ್ಟೇ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೩-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!