ನಮ್ಮ ದೇಶ ಭಾರತ ಕತೆ ಹೇಳುವ ಪರಂಪರೆಗೆ ಪ್ರಸಿದ್ಧ. ಆದರೆ ಕಳೆದ ಎರಡು ತಲೆಮಾರುಗಳಲ್ಲಿ ಈ ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ.
ಇತ್ತೀಚೆಗೆ ಕತೆ ಹೇಳುವ ಪರಂಪರೆ ಪುನಶ್ಚೇತನಗೊಳ್ಳುತ್ತಿದೆ ಎಂಬುದು ಸಂತೋಷದ ಸಂಗತಿ. ಈಗ ಕತೆ ಹೇಳುವ ಹಲವಾರು ಕತೆಗಾರರು ಸುದ್ದಿಯಲ್ಲಿದ್ದಾರೆ. ಅವರಲ್ಲೊಬ್ಬರು 2019ರಲ್ಲಿ ಮುಂಬಯಿ ಸ್ಟೋರಿ ಟೆಲ್ಲರ್ಸ್ (ಕತೆ ಹೇಳುವವರ) ಸೊಸೈಟಿ ಸ್ಥಾಪಿಸಿದ ಉಷಾ ವೆಂಕಟರಾಮನ್.
ಭಾರತದ ಬಹುಪಾಲು ಮಕ್ಕಳಂತೆ ಇವರೂ ಬಾಲ್ಯದಲ್ಲಿ ತನ್ನ ಅಜ್ಜಿ ಹೇಳುತ್ತಿದ್ದ ನಿಗೂಢ ಮತ್ತು ವಿಸ್ಮಯದ ಘಟನೆಗಳ ಪುರಾಣ ಕತೆಗಳನ್ನು ಕೇಳುತ್ತಾ ಬೆಳೆದವರು. ಈಗ ಇವರು ಶಾಸ್ತ್ರೀಯ ಸಂಗೀತಗಾರರು, ಮಕ್ಕಳ ಶಿಕ್ಷಣ ತಜ್ಞರು, ರೇಡಿಯೋ ಕಾರ್ಯಕ್ರಮ ನಡೆಸುವವರು ಮತ್ತು ಆಪ್ತ ಸಮಾಲೋಚಕಿ. ಈ ಎಲ್ಲ ವೃತ್ತಿಗಳಿಗೂ “ಮಾತಾಡುವ ಕಲೆಯಲ್ಲಿ ಪರಿಣತಿ ಅವಶ್ಯ. ಮರೆಯಲಾಗದ ಕತೆಗಳನ್ನು ಹೇಳುವುದು ಪರಿಣಾಮಕಾರಿ ಸಂವಹನ ಸಾಧನ ಎಂಬುದು ಅವರ ನಂಬಿಕೆ. ಹಣದ ಉಳಿತಾಯದ ಪ್ರಾಮುಖ್ಯತೆ ತಿಳಿಸಲು ಭಾರತೀಯರಿಗೆ ದೀಪಾವಳಿ ಬಗೆಗಿನ ಜಾನಪದ ಕತೆ ಹೇಳುವುದಿರಲಿ ಅಥವಾ ವಿದೇಶಿ ಪ್ರಜೆಗಳಿಗೆ ರಾಮಾಯಣದ ಕತೆ ಹೇಳುವುದಿರಲಿ, ಈ ಸಂವಹನ ವಿಧಾನದ ಸಾಧ್ಯತೆಗಳನ್ನು ಅವರು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. ತಮ್ಮ ಸಂಸ್ಥೆಯ ಮೂಲಕ ಕತೆ ಹೇಳುವ ಕಾರ್ಯಕ್ರಮಗಳನ್ನು ಮತ್ತು ಕಾರ್ಯಾಗಾರಗಳನ್ನು ಆಗಾಗ ಸಂಘಟಿಸುತ್ತಿದ್ದಾರೆ. ಫೆಬ್ರವರಿ 2023ರಲ್ಲಿ 60 ಕಥನಕಾರರನ್ನು ಕರೆತಂದು “ಗಾಥಾ” ಎಂಬ ಅಂತರರಾಷ್ಟ್ರೀಯ ಕತೆ ಹೇಳುವ ಹಬ್ಬವನ್ನು ಆಯೋಜಿಸಿದ್ದರು.
ಕತೆ ಹೇಳುವ ವೃತ್ತಿಯಲ್ಲಿ ಉಷಾ ವೆಂಕಟರಾಮನ್ ಅವರ ಎರಡೂವರೆ ದಶಕಗಳ ಅನುಭವವನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಈ ವೃತ್ತಿಗೆ ಲಭ್ಯವಿರುವ ಅವಕಾಶಗಳ ಅಂದಾಜು ಮಾಡಲು ಸಾಧ್ಯವಾಗುತ್ತದೆ. ಡಿಜಿಟಲ್ ಮಾಧ್ಯಮದ ಅಬ್ಬರದಲ್ಲಿ ಕತೆ ಹೇಳುವ ಕಲೆ ಮೂಲೆಗುಂಪಾಗಿದೆ ಎಂದು ಅನಿಸಬಹುದು. ಆದರೆ, ನಮ್ಮ ದೇಶದಲ್ಲಿ ಕತೆ ಹೇಳುವ ಹಬ್ಬಗಳ ಸಂಖ್ಯೆ ಹೆಚ್ಚುತ್ತಿದೆ. ಮಾತ್ರವಲ್ಲ, ಕತೆ ಹೇಳುವ ಕೌಶಲ್ಯ ಹಾಗೂ ಕಲೆ ಕಲಿಸುವ ಕೋರ್ಸುಗಳೂ ಶುರುವಾಗಿವೆ! ಕತೆ ಹೇಳುವುದು ಈಗ ಮಕ್ಕಳಿಗೆ ಮಲಗುವ ಮುನ್ನ ಹೇಳುವ ಕತೆಗಳಿಗೆ ಸೀಮಿತವಾಗಿಲ್ಲ; ಬದಲಾಗಿ ಶಿಕ್ಷಣದಿಂದ ತೊಡಗಿ ವ್ಯವಹಾರದ ವಿಷಯಗಳ ಬಗ್ಗೆ ಮಾಹಿತಿ ನೀಡಲಿಕ್ಕಾಗಿ ಮತ್ತು ಮನೋರಂಜನೆಗಾಗಿ ಕತೆ ಹೇಳುವುದು ಸಾಮಾನ್ಯವಾಗಿದೆ.
ಬೆಂಗಳೂರಿನಲ್ಲಿ ಕತೆ ಹೇಳುವ ಕಲೆಯ ಯಶೋಗಾಥೆಯನ್ನು ಮುನ್ನಡೆಸಿದವರು ಗೀತಾ ರಾಮಾನುಜಮ್. ಅವರು “ಕಥಾಲಯ ಕತೆ ಹೇಳುವ ಅಂತರರಾಷ್ಟ್ರೀಯ ಅಕಾಡೆಮಿ” ಸ್ಥಾಪಿಸಿದ್ದು 1996ರಲ್ಲಿ. ವಯಸ್ಕರಿಗೆ ಮತ್ತು ಮಕ್ಕಳಿಗೆ ಕತೆ ಹೇಳುವ ಕಾರ್ಯಕ್ರಮಗಳಿಂದ ಶುರುವಾದ ಸಂಸ್ಥೆಯ ಚಟುವಟಿಕೆಗಳು 2005ರಲ್ಲಿ ಅಂತರ ರಾಷ್ಟ್ರೀಯ ಕತೆ ಹೇಳುವ ಹಬ್ಬ ಸಂಘಟಿಸುವ ವರೆಗೆ ಮುಂದುವರಿದವು. 2003ರಲ್ಲಿ ಕತೆ ಹೇಳುವ ಪ್ರಾಥಮಿಕ ಮತ್ತು ಉನ್ನತ ಕೋರ್ಸುಗಳನ್ನು ಆರಂಭಿಸಿದ ಅವರ ಅಕಾಡೆಮಿ ಈ ವರೆಗೆ ಸುಮಾರು ಒಂದು ಲಕ್ಷ ಜನರಿಗೆ ತರಬೇತಿ ನೀಡಿದೆ. ತನ್ನ 27 ವರುಷಗಳ ಅನುಭವದ ಆಧಾರದಿಂದ, ಕತೆ ಹೇಳುವ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ ಎನ್ನುತ್ತಾರೆ ಅವರು. ಆದರೆ ಈ ಕ್ಷೇತ್ರದಲ್ಲಿ ಎದುರಿಸಬೇಕಾದ ಸವಾಲುಗಳು ಹಲವು ಇವೆ ಎಂದು ಬೊಟ್ಟು ಮಾಡುತ್ತಾರೆ. ಉದಾಹರಣೆಗೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಥನಕಾರರಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ ಮತ್ತು ನಗರ ಪ್ರದೇಶಗಳಲ್ಲಿ ಕತೆ ಹೇಳುವುದು ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ! ಕತೆ ಹೇಳುವ ಒಂದು ಕಾರ್ಯಕ್ರಮಕ್ಕೆ 500 ರೂಪಾಯಿ ಶುಲ್ಕ ನೀಡಲಿಕ್ಕೂ ಕೆಲವರು ತಯಾರಿಲ್ಲ ಯಾಕೆಂದರೆ ಅವರಿಗೆ ಈ ಕಲೆಯ ಬೆಲೆ ಗೊತ್ತಿಲ್ಲ ಎಂದು ವಿಷಾದದಿಂದ ತಿಳಿಸುತ್ತಾರೆ ಗೀತಾ ರಾಮಾನುಜಮ್.
ಪಾರಂಪರಿಕ ಕತೆಗಳನ್ನು ಈಗಿನ ಸಂದರ್ಭ ಹಾಗೂ ಸವಾಲುಗಳಿಗೆ ಸಂಬಂಧಿಸಿದಂತೆ ಪ್ರಸ್ತುತಪಡಿಸುವುದು ಹೇಗೆ? ಎಂಬುದು ಗೀತಾ ರಾಮಾನುಜಮ್ ಎದುರಿಸುವ ಇನ್ನೊಂದು ಸವಾಲು. “ಅದೇನಿದ್ದರೂ, ನಮ್ಮ ರಾಮಾಯಣ, ಮಹಾಭಾರತ ಮತ್ತು ಪುರಾಣ ಕಥೆಗಳಲ್ಲಿ ಈಗಿನ ವ್ಯಾವಹಾರಿಕ ಜಗತ್ತಿಗೆ ಅಗತ್ಯವಾದ ಹಲವಾರು ಪಾಠಗಳಿವೆ” ಎನ್ನುತ್ತಾರೆ ಅವರು.
ಕತೆ ಹೇಳುವ ಪಾರಂಪರಿಕ ಕಲೆಯ ಅವನತಿಗೆ ಕಾರಣಗಳೇನು? ಈ ಬಗ್ಗೆ ಚೆನ್ನೈಯ ಜಾಗತಿಕ ಕತೆ ಹೇಳುವ ಸಂಸ್ಥೆಯ ನಿರ್ದೇಶಕರಾದ ಡಾ. ಎರಿಕ್ ಮಿಲ್ಲರ್ ಒಂದು ಅಧ್ಯಯನ ಪ್ರಬಂಧ ಬರೆದಿದ್ದಾರೆ. ನಗರ ಪ್ರದೇಶಗಳಲ್ಲಿ ಕೂಡು ಕುಟುಂಬಗಳ ಅವನತಿ ಇದಕ್ಕೆ ಒಂದು ಪ್ರಮುಖ ಕಾರಣ. ಇದರಿಂದಾಗಿ ಕುಟುಂಬಗಳ ಹಿರಿಯರು ಮುಂದಿನ ತಲೆಮಾರಿನವರಿಗೆ ಕತೆಗಳನ್ನು ಹೇಳಲು ಅವಕಾಶವೇ ಇಲ್ಲದಂತಾಗಿದೆ.
ಈ ಹಿನ್ನೆಲೆಯಲ್ಲಿ ಕತೆ ಹೇಳುವ ಹಬ್ಬಗಳ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಮುಂಬಯಿ ಸ್ಟೋರಿ ಟೆಲ್ಲಿಂಗ್ ಫೆಸ್ಟಿವಲ್, ಕಥಾಕಾರ್, ಸ್ಪೋಕನ್ ಫೆಸ್ಟ್, ಕಥಾಲೋಕ್, ಉದಯಪುರ್ ಟೇಲ್ಸ್ - ಇವು ಮುಖ್ಯ “ಕತೆ ಹೇಳುವ ಹಬ್ಬಗಳು”. ಈ ಹಬ್ಬಗಳಲ್ಲಿ ಕಥನಕಾರರು ವಿವಿಧ ಭಾಷೆಗಳಲ್ಲಿ, ವಿಭಿನ್ನ ಮುಖಭಾವಗಳಲ್ಲಿ, ಧ್ವನಿಗಳ ಏರಿಳಿತಗಳಲ್ಲಿ, ಅಂಗಾಂಗಗಳ ಚಲನೆ ಹಾಗೂ ಹಾಡುಗಳ ಮೂಲಕ ತಾವು ಹೇಳುವ ಕತೆಗಳಿಗೆ ಜೀವ ತುಂಬುವುದನ್ನು ನೋಡುತ್ತಾ ಕೇಳುತ್ತಾ ಅನುಭವಿಸುವುದು ಒಂದು ಅದ್ಭುತ ಅನುಭವ.
ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕತೆ ಹೇಳಲು ಶುರು ಮಾಡಿದರೆ ಒಂದು ದಿನವಿಡೀ ಸತತವಾಗಿ ಕೇಳುಗರ ಆಸಕ್ತಿ ಕದಲದಂತೆ ರೋಮಾಂಚಕಾರಿಯಾಗಿ ಕತೆ ಹೇಳಬಲ್ಲ ಜಾನಪದ ಕಥನಕಾರರು ಈಗಲೂ ಇದ್ದಾರೆ ಎಂಬುದನ್ನು ನೆನಪಿಡೋಣ.
ಮಕ್ಕಳು ಬಾಲ್ಯದಲ್ಲೇ ಕತೆಗಳನ್ನು ಹೇಳಲು ಕಲಿತರೆ, ವಯಸ್ಸಾದಂತೆ ಅವರು ಉತ್ತಮ ಕತೆಗಾರರು ಆಗಬಲ್ಲರು. ಕತೆ ಹೇಳುವುದನ್ನು ನೋಡುತ್ತಾ, ಕೇಳುತ್ತಾ ಮತ್ತು ಕತೆಗಳನ್ನು ಓದುತ್ತಾ ಮಕ್ಕಳು ಕತೆ ಹೇಳುವ ಕಲೆ ಕಲಿಯಲು ಸಾಧ್ಯವಿದೆ. ನಮ್ಮ ಸೃಜನಶೀಲತೆಯನ್ನು ಬೆಳೆಸಲು ಕತೆ ಹೇಳುವುದು ಒಂದು ಪರಿಣಾಮಕಾರಿ ದಾರಿ ಎಂಬುದು ಖಂಡಿತ.
ಫೋಟೋ 1: ಬೆಂಗಳೂರಿನ ಕಥಾಲಯದ ಗೀತಾ ರಾಮಾನುಜಮ್
ಫೋಟೋ 2: ಬೆಂಗಳೂರಿನ ಕಥಾಲಯದ ಕಥೆ ಕೇಳುವ ಮಕ್ಕಳ ಒಂದು ತಂಡ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!