ರಾಜ್ಯದಲ್ಲಿ ವನ್ಯಜೀವಿಗಳಿಂದ ಆಗುತ್ತಿರುವ ಪ್ರಾಣ ಹಾನಿ ತುಸು ಇಳಿಮುಖವಾಗಿದೆ ಎನ್ನುವುದು ಸಮಾಧಾನ ತರುವ ವಿಷಯ. ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿರುವ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು, ಪೂರಕವಾಗಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಮೂಲಕ ವನ್ಯಜೀವಿ-ಮಾನವ ಸಂಘರ್ಷವನ್ನು ಹಾಗೂ ಅದರಿಂದ ಉಂಟಾಗುವ ಸಾವು ನೋವನ್ನು ಸಾಧ್ಯವಾದಷ್ಟು ಕನಿಷ್ಠ ಮಟ್ಟಕ್ಕಿಳಿಸಬೇಕಾಗಿದೆ.
ರಾಜ್ಯದಲ್ಲಿ ಕಳೆದ ೫ ವರ್ಷಗಳಲ್ಲಿ ೨೮೯ ಮಂದಿ ವನ್ಯಜೀವಿ ದಾಳಿಯಿಂದ ಮೃತಪಟ್ಟಿದ್ದಾರೆ. ೨೦೨೩ರಲ್ಲಿ ೬೫ ಜನ ಮೃತಪಟ್ಟಿದ್ದರೆ, ೨೦೧೫ರ ನವೆಂಬರ್ ವರೆಗಿನ ಅಂಕಿ ಅಂಶಗಳ ಪ್ರಕಾರ ೩೫ ಮಂದಿ ಮೃತಪಟ್ಟಿದ್ದಾರೆ. ಅಂದರೆ ಸರಿ ಸುಮಾರು ಅರ್ಧಕ್ಕೆ ಇಳಿಕೆಯಾಗಿದೆ. ಈ ಹಿಂದೆ ಬಹಳಷ್ಟು ಮಂದಿ ವನ್ಯಜೀವಿ ದಾಳಿಗೆ ಸಿಲುಕಿ ಮತಪಟ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು ಆಧುನಿಕ ತಂತ್ರಜ್ಞಾನಗಳ ನೆರವು ಪಡೆಯುವ ಮೂಲಕ ಈ ಸಕಾರಾತ್ಮಕ ಫಲಿತಾಂಶವನ್ನು ಪಡೆದಿದೆ. ರಾಜ್ಯದ ವಿವಿಧೆಡೆ ಕಾಡಂಚಿನಲ್ಲಿ ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕಾಡಾನೆ, ಹುಲಿ, ಚಿರತೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನವಲನದ ಮೇಲೆ ನಿಗಾ ಇರಿಸುವುದು, ಕಾಡಂಚಿನ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲು ಅಲರ್ಟ್ ವ್ಯವಸ್ಥೆ ಅರಣ್ಯದಂಚಿನ ಆಯ್ಕೆ ಪ್ರದೇಶಗಳಲ್ಲಿ ಎಐ ಆಧಾರಿತ ಕ್ಯಾಮರಾ ಅಳವಡಿಕೆ, ಡೋನ್ಗಳ ಮುಖಾಂತರವೂ ವನ್ಯಪ್ರಾಣಿಗಳ ಚಲನವಲನಗಳ ಮೇಲೆ ಗಮನ ಇರಿಸುವ ಮೂಲಕ ಈ ಯಶಸ್ಸನ್ನು ಸಾಧಿಸಲಾಗಿದೆ.
ಇದಲ್ಲದೆ ಸದ್ಯವೇ ಕಾಡುಪ್ರಾಣಿಗಳ ಬಗ್ಗೆ ವಿವಿಧ ವಿಭಾಗಗಳಿಂದ ಲಭ್ಯವಾಗುವ ಮಾಹಿತಿಯನ್ನು ವಾಸ್ತವ ಕಾಲದಲ್ಲಿ ಸಂಗ್ರಹಿಸಿ, ವಿಶ್ಲೇಷಿಸಿ, ನಿರ್ಧಾರ ಕೈಗೊಳ್ಳಲು ಹಾಗೂ ಸಮನ್ವಯದಿಂದ ತುರ್ತು ಘಟನೆಗಳಿಗೆ ಕೂಡಲೇ ಪ್ರತಿಕ್ರಿಯಿಸಲು ಒಂದು ಸಂಯೋಜಿತ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಹಾಗೂ ೧೧ ವಿಭಾಗಗಳಲ್ಲಿ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಗಳು ಅಸ್ತಿತ್ವಕ್ಕೆ ಬರಲಿವೆ. ಆಗ ವನ್ಯಜೀವಿ-ಮಾನವ ಸಂಘರ್ಷ ತಡೆ ಇನ್ನಷ್ಟು ಸುಲಭ ಸಾಧ್ಯವಾಗಲಿದೆ. ಅಲ್ಲದೆ, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ೫ ವರ್ಷಗಳ ಕಾರ್ಯತಂತ್ರ ರೂಪಿಸುವ ಚಿಂತನೆಯೂ ಇದೆ.
ಮಾನವ ಮತ್ತು ವನ್ಯಜೀವಿ ಸಂಘರ್ಷ ಬಹಳ ಹಿಂದಿನ ಕಾಲದಿಂದಲೂ ಇರುವ ಸಮಸ್ಯೆ. ಹಿಂದೆ ಜನಸಂಖ್ಯೆ ಕಡಿಮೆ ಇದ್ದು ಕಾಡು ಹೇರಳವಾಗಿದ್ದಾಗ ಇಂತಹ ಪ್ರಕರಣಗಳು ಕಡಿಮೆ ಇದ್ದವು. ಈಗ ಕಾಡು ಕಡಿಮೆಯಾಗಿದೆ. ಜನಸಂಖ್ಯೆ ಹೆಚ್ಚಿದೆ. ಯಾವುದು ಒಂದು ಕಾಲದಲ್ಲಿ ಅರಣ್ಯವಾಗಿತ್ತೋ, ಅಲ್ಲೀಗ ಜನವಸತಿ ಏರ್ಪಟ್ಟಿದೆ. ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷ ಸಹಜವಾಗಿ ಉಂಟಾಗುತ್ತಿದೆ. ಜನಸಂಖ್ಯೆ ಇನ್ನಷ್ಟು ವೃದ್ಧಿಸಬಹುದೇ ವಿನಃ ಕಡಿಮೆಯಾಗುವುದಿಲ್ಲ ಆಗ ಈ ಅಪಾಯ ಕೂಡ ಹೆಚ್ಚುತ್ತದೆ. ಇದರಿಂದ ಪ್ರಾಣಹಾನಿ, ಸಾವು ನೋವು ತಡೆಯಲು ಪರಿಣಾಮಕಾರಿ ಮಾರ್ಗವೆಂದರೆ ಎಚ್ಚರಿಕೆಯಿಂದ ಇರುವುದು, ಆಧುನಿಕ ತಂತ್ರಜ್ಞಾನಗಳ ಬಳಸುವುದು. ಆನೆ, ಹುಲಿಯಂತಹ ಪ್ರಾಣಿಗಳು ಸಂಚಾರಕ್ಕೆ ನಿರ್ದಿಷ್ಟ ಮಾರ್ಗವನ್ನು ಹೊಂದಿರುತ್ತವೆ. ಇದೇ ಅವುಗಳ 'ಕಾರಿಡಾರ್'. ಅವುಗಳನ್ನು ಜನವಿರಹಿತಗೊಳಿಸುವುದು ಕೂಡ ಸಂಘರ್ಷ ತಡೆಯ ವಿಧಾನವಾಗಬಲ್ಲುದು. ಕಾಡಿನಲ್ಲಿ ಆಹಾರದ ಕೊರತೆಯಾದರೂ ವನ್ಯಜೀವಿಗಳು ನಾಡಿಗಿಳಿಯುತ್ತವೆ. ಹೀಗಾಗಿ ಒಂದೇ ಜಾತಿಯ ಮರಗಳ ನೆಡುತೋಪಿನ ಬದಲಾಗಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳೆಸುವುದು, ಕಾಡಿನಲ್ಲಿ ಅವುಗಳ ಸಹಜ ಆಹಾರ ಸಿಗುವಂತೆ ಮಾಡುವುದು ಕೂಡ ಪರಿಣಾಮಕಾರಿ ವಿಧಾನವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆಯೂ ದೃಷ್ಟಿಹರಿಸಬೇಕಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೬-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!