ಗೃಹಲಕ್ಷ್ಮಿ ಯೋಜನೆಯ ಯಾವ ಕಂತು ಕೂಡ ಉಳಿದಿಲ್ಲ, ಎಲ್ಲಾ ಕಂತುಗಳನ್ನು ಪಾವತಿ ಮಾಡಲಾಗಿದೆ ಎಂದ ಸಚಿವರ ಹೇಳಿಕೆ ವಿಧಾನಸಭೆಯಲ್ಲಿ ಗದ್ದಲ ಮತ್ತು ಚರ್ಚೆಗೆ ಕಾರಣವಾದ ಘಟನೆಗೆ ಈಗ ಬಹುತೇಕ ತೆರೆ ಬಿದ್ದಿದೆ. ಸರಿಯಾದ ಮಾಹಿತಿಯಿಲ್ಲದೆ ಸಚಿವೆ ಹೇಳಿಕೆಯನ್ನು ನೀಡಿದ್ದು ಶಿಕ್ಷಾರ್ಹ ಅಪರಾಧವೇನೂ ಅಲ್ಲದಿದ್ದರೂ ಅದನ್ನು ಸಮರ್ಥಿಸಿಕೊಂಡ ರೀತಿ ಸರಿಯಲ್ಲ, ಒಂದು ಹಂತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನನ್ನನ್ನು ಮಹಿಳೆ ಎಂಬ ಕಾರಣಕ್ಕೆ ವಿರೋಧಿಸಲಾಗುತ್ತಿದೆ ಎನ್ನುವವರೆಗೆ ನಿಂತರು. ಇಂಥ ಹೇಳಿಕೆ ರಾಜಕೀಯ ಹೇಳಿಕೆಗಳಿಗೆ ಸರಿಯಾಗಬಹುದೇ ವಿನಾ ಸದನಕ್ಕಲ್ಲ, ಸದನದಲ್ಲಿ ರೋಚಕ ಚರ್ಚೆ, ಸಭಾತ್ಯಾಗ ಮತ್ತು ಧ್ವನಿಯೇರಿಸಿ ಮಾತಾಡುವುದನ್ನು ಕೂಡ ಗೌರವಪೂರ್ವಕವಾಗಿ ನೋಡಲಾಗುತ್ತದೆ. ಏಕೆಂದರೆ ಅದೆಲ್ಲಾ ಚರ್ಚೆಯ ದಾಟಿ. ಹಾಗೆ ನಡೆಯುವ ಚರ್ಚೆಗಳು ರಾಜ್ಯದ ಶ್ರೇಯೋಭಿವೃದ್ಧಿಗಾಗಿ ನಡೆಯುವಂಥದ್ದು. ಅಲ್ಲಿ ಯಾವುದೂ ವೈಯಕ್ತಿಕವಲ್ಲ, ಅಲ್ಲದೆ ಸದನ ಸಮಸ್ತ ರಾಜ್ಯಕ್ಕೆ ಉತ್ತರದಾಯಿಯಾಗಿರುವಂಥದ್ದು, ಅದರಿಂದ ಅದು ರಾಜ್ಯದ ಜನರಿಗೆ ಮೇಲ್ಪಂಕ್ತಿಯಾಗಿರಬೇಕು. ಸದನದಲ್ಲಿ ರಾಜಕಾರಣಿಗಳೇ ಇರುವುದು ಹೌದಾದರೂ ಅದು ರಾಜಕೀಯದಿಂದ ಹಲವು ಹೆಜ್ಜೆ ಮುಂದಿರುವಂಥದು.. ಈ ವ್ಯತ್ಯಾಸವನ್ನು ಅರಿತು ಸದನದ ಸದಸ್ಯರು ಅಲ್ಲಿ ವರ್ತಿಸಬೇಕು ಮತ್ತು ನಡೆದುಕೊಳ್ಳಬೇಕು. ಅದು ಸಂವಿಧಾನದ ಆಶಯ.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮಾಹಿತಿಯ ಕೊರತೆಯಿದ್ದಿರಬಹುದು. ಆದರೆ ಅದನ್ನು ಸಮರ್ಥಿಸಿಕೊಂಡ ರೀತಿ ಅದಲ್ಲ, ಸದನದಲ್ಲಿ ಆಡುವ ಮಾತುಗಳೆಲ್ಲವೂ ಚರಿತ್ರೆಯಾಗುವಂಥವು. ಇದುವರೆಗೆ ಸದನದಲ್ಲಿ ಇಂಥ ಮಾತುಗಳೆಲ್ಲವೂ ಚರಿತ್ರೆಯಾಗಿ ದಾಖಲಾಗಿವೆ. ಅಸಭ್ಯ-ಅಸಂವಿಧಾನಿಕ ಪದಬಳಕೆಯನ್ನು ಕಡತದಿಂದ ತೆಗೆಯಲು ಬಿರುಸಿನ ಚರ್ಚೆಗಳು ಸಾಕಷ್ಟು ನಡೆದಿದ್ದು ಕೂಡ ಸದನದ ಇತಿಹಾಸದಲ್ಲಿವೆ. ಅಂಥಲ್ಲಿ ತಪ್ಪು ಮಾಹಿತಿ ನೀಡಿರುವುದು ಕೂಡ ಸದನದ ಪವಿತ್ರ ಚರಿತ್ರೆಯನ್ನು ವಿಕೃತಗೊಳಿಸಿದಂತೆ. ಅಂಥಲ್ಲಿ ಅದಕ್ಕೆ ಸಚಿವರು ಗೌರವವನ್ನು ನೀಡಿ ತಮ್ಮ ತಪ್ಪು ಮಾಹಿತಿಯನ್ನು ಕಡತದಿಂದ ತೆಗೆದುಹಾಕುವಂತೆ ಕೇಳಿಕೊಳ್ಳಬೇಕಿತ್ತೇ ಹೊರತು ಮಹಿಳೆಯೆಂಬ ಕಾರಣಕ್ಕೆ ವಿರೋಧಿಸಲಾಗುತ್ತಿದೆ ಎನ್ನಬಾರದು. ಕೊನೆಗೂ ಸಚಿವರು ಎರಡು ಕಂತುಗಳ ಹಣ ಬಾಕಿ ಉಳಿದಿದೆ, ಮಾಹಿತಿ ತಪ್ಪಾಗಿತ್ತು ಎನ್ನುವ ಮೂಲಕ ಚರ್ಚೆ ಕೊನೆಗೊಂಡಿದೆ. ಈ ಪ್ರಕರಣದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಪ್ರಮುಖ ಆಶಯವೊಂದನ್ನು ಈಡೇರಿಸುವ ಸಂಕಲ್ಪ ಬಲಗೊಳ್ಳಬೇಕಿದೆ. ಚುನಾವಣಾ ರಾಜಕಾರಣದ ನಿತ್ಯದ ಆರೋಪ-ಪ್ರತ್ಯಾರೋಪ ಮತ್ತು ಸಂಸದೀಯ ವ್ಯವಸ್ಥೆಯೊಳಗಿನ, ಪಾವಿತ್ರ್ಯತೆ ಮತ್ತು ಗೌರವಗಳ ಅಂತರ ಮತ್ತು ವ್ಯತ್ಯಾಸವನ್ನು ರಾಜಕಾರಣಿಗಳು ಗುರುತ್ತಿಸಬೇಕಾಗಿದೆ. ಸದ್ಯ ಅದು ದೇಶದ ಯಾವ ಭಾಗದಲ್ಲೂ ಕಾಣುತ್ತಿಲ್ಲ ಎಂದು ಕೂಡ ವಿಷಾದದಿಂದಲೇ ಹೇಳಬೇಕಿದೆ. ಸದನದಲ್ಲಿ ಆಡುವ ಮಾತು, ನಡೆಯುವ ಚರ್ಚೆಗಳು ನಾಡಿಗಾಗಿ ಮಾತ್ರ. ಅಲ್ಲಿ ಸಂದಾಯವಾಗುವುದೆಲ್ಲವೂ ನಾಡಿಗಾಗಿ, ಸಂವಿಧಾನ ನಿರ್ಮಾತೃರ ಆಶಯ ಕೂಡ ಅದೇ ಆಗಿತ್ತು. ಸ್ವಾತಂತ್ರ್ಯದ ಆರಂಭದ ವರ್ಷಗಳಲ್ಲೂ ಮೌಲಿಕವಾದ ವ್ಯವಸ್ಥೆ ಸಂಸದೀಯ ವ್ಯವಸ್ಥೆಯಲ್ಲಿತ್ತು. ಅದನ್ನು ಮರಳಿ ಸ್ಥಾಪಿಸಬೇಕಾದ ಅವಶ್ಯಕತೆ ಇದ್ದೇ ಇದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೮-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!