ಕಳೆದ ವರ್ಷದ ಜೆನ್ ಝೀ ದಂಗೆ, ಹಿಂದೂಗಳ ಮೇಲಿನ ಹಿಂಸಾಚಾರ, ರಾಜಕೀಯ ಸ್ಥಿತ್ಯಂಥರಕ್ಕೆ ಕಾರಣವಾಗಿದ್ದ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸೆ ಭುಗಿಲೆದ್ದಿದೆ. ಕಳೆದ ವರ್ಷದ ದಂಗೆಯ ಮುಂಚೂಣಿ ನಾಯಕ ಷರೀಫ್ ಒಸ್ಮಾನ್ ಹದಿ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದು ದೇಶದಲ್ಲಿ ಮತ್ತೆ ಹಿಂಸಾಚಾರಕ್ಕೆ ಕಿಚ್ಚು ಹಚ್ಚಿದೆ. ಇದರ ಭಾಗವಾಗಿ ಶುಕ್ರವಾರ ಸರ್ಕಾರಿ ಕಚೇರಿ, ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ. ಮತ್ತೊಂದೆಡೆ ಭಾರತದಲ್ಲಿ ವಾಸಿಸುತ್ತಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಗಡೀಪಾರು ವಿಷಯ ಮುಂದಿಟ್ಟುಕೊಂಡು ಗುಂಪೊಂದು ಭಾರತೀಯ ರಾಯಭಾರ ಕಚೇರಿಗಳ ಮೇಲೆ ದಾಳಿ ಯತ್ನ ನಡೆಸಿವೆ. ಇದರ ಬೆನ್ನಲ್ಲೇ ಧರ್ಮ ನಿಂದನೆಯ ಹೆಸರಲ್ಲಿ ಹಿಂದೂ ವ್ಯಕ್ತಿಯನ್ನು ಹತ್ಯೆಗೈದು ಬಳಿಕ ಮರಕ್ಕೆ ನೇತುಹಾಕಿ ಸುಟ್ಟು ಹಾಕಿದ ಪೈಶಾಚಿಕ ಕೃತ್ಯವೂ ನಡೆದಿದೆ. ಇದೆಲ್ಲವೂ ಭಾರತ ಮತ್ತು ಜಾಗತಿಕ ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆ.
ಸಂಸದ ಶಶಿ ತರೂರ್ ನೇತೃತ್ವದ ಸಮಿತಿಯೊಂದು, ಬಾಂಗ್ಲಾದಲ್ಲಿನ ಪ್ರಸಕ್ತ ಪರಿಸ್ಥಿತಿಯು ೧೯೭೧ರ ಬಾಂಗ್ಲಾ ವಿಮೋಚನಾ ಹೋರಾಟದ ಬಳಿಕದ ಅತ್ಯಂತ ಗಂಭೀರ ಸಮಸ್ಯೆ. ಆಗಿನದ್ದು, ಸಮಸ್ಯೆಯಾಗಿದ್ದರೆ, ಈಗಿನದ್ದು ಪಾಕಿಸ್ತಾನ ಮತ್ತು ಚೀನಾ ಬೆಂಬಲಿತ ಮತೀಯವಾದಿಗಳ ಉದಯದ ಹೊಸ ವಿಪತ್ತು. ಇದನ್ನು ತಕ್ಷಣವೇ ನಿಗ್ರಹಿಸದೇ ಹೋದಲ್ಲಿ. ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಾಂಗ್ಲಾದಲ್ಲಿ ಇಂಥ ಸರಣಿ ಘಟನೆಗಳು ನಡೆದಿವೆ. ಈ ಹಿಂದೆ ಅಮೆರಿಕ, ಪಾಕಿಸ್ತಾನದ ಮೂಲಕ ಭಾರತವನ್ನು ನಿಯಂತ್ರಿಸುವ ಕೆಲಸ ಮಾಡುತ್ತಿತ್ತು. ಆ ಕೆಲಸವನ್ನು ಇದೀಗ ಚೀನಾ ವಹಿಸಿಕೊಂಡಿದೆ. ಜೊತೆಗೆ ಈ ಕೆಲಸಕ್ಕೆ ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮುಂತಾದ ದೇಶಗಳನ್ನು ದಾಳ ಮಾಡಿಕೊಳ್ಳುವ ಸತತ ಯತ್ನ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಮಾಲ್ಡೀವ್ಸ್ ಮತ್ತು ಶ್ರೀಲಂಕಾವನ್ನು ಮರಳಿ ತನ್ನ ಸ್ನೇಹದ ಅಪ್ಪುಗೆಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಆದರೆ ಮತೀಯವಾಗಿ ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಿರುವ ಬಾಂಗ್ಲಾ ದೇಶ ಇನ್ನೂ ಚೀನಾ ಮತ್ತು ಪಾಕ್ ತೆಕ್ಕೆಯಲ್ಲೇ ಇದೆ. ಬಾಂಗ್ಲಾದೇಶದಲ್ಲಿ ನೆರೆಹೊರೆಯ ದೇಶಗಳಲ್ಲಿ ಉಗ್ರವಾದಕ್ಕೆ ಪ್ರೋತ್ಸಾಹ ನೀಡುವ ಭವಿಷ್ಯದ ಯಾವುದೇ ಯೋಜನೆಗಳು ಭಾರತ ಮಾತ್ರವಲ್ಲದೆ ಜಾಗತಿಕ ಸಮುದಾಯಕ್ಕೆ ಅಪಾಯಕಾರಿ. ಹೀಗಾಗಿ ಈ ಸಮಸ್ಯೆಯನ್ನು ಚಿಗುರಿನಲ್ಲೇ ಚಿವುಟುವ ಕೆಲಸವನ್ನು ಭಾರತ ತ್ವರಿತವಾಗಿ ಮಾಡಬೇಕಾಗಿದೆ. ಮತ್ತೊಂದೆಡೆ ಹಂಗಾಮಿ ಸರ್ಕಾರದ ಅಧ್ಯಕ್ಷ ಮೊಹಮ್ಮದ್ ಯೂನಸ್ ಅವಧಿಯಲ್ಲಿ ಬಾಂಗ್ಲಾದಲ್ಲಿ ಅವರ ಅಣತಿಯಂತೆ ಏನೂ ನಡೆಯುತ್ತಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಲೇ ಇದೆ. ಮಾಜಿ ಪ್ರಧಾನಿ ಪ್ರಧಾನಿ ಖಲೀದಾ ಜಿಯಾ ಅವರ ಅವಾಮಿ ಲೀಗ್, ಸೇನೆ ಮತ್ತು ಬಾಹ್ಯ ಶಕ್ತಿಗಳ ಒತ್ತಾಸೆಯಂತೆ ಸರ್ಕಾರ ನಡೆಯುತ್ತಿದೆ. ಹೀಗಾಗಿ ಹಿಂದೂಗಳ ಮೇಲಿನ ದೌರ್ಜನ್ಯಗಳಿಗೆ ಕೊನೆ ಬೀಳುತ್ತಿಲ್ಲ. ಇಂಥ ಘಟನೆಯನ್ನು ಭಾರತ ಕಟುವಾಗಿ ಖಂಡಿಸಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೦-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!