ಒಂದಾನೊಂದು ಪಟ್ಟಣದಲ್ಲಿ ಷರೀಫನೆಂಬ ಪುರುಷನೊಬ್ಬನಿದ್ದನು. ಅವನು ದೈವ ಭಕ್ತನೂ, ಧಾರ್ಮಿಕ ಆಚಾರ ವಿಚಾರಗಳಲ್ಲಿ ನಂಬಿಕೆಯುಳ್ಳವನೂ ಆಗಿದ್ದನು. ಅವನು ಏಕಾಂಗಿಯಾಗಿದ್ದನು. ತನ್ನ ಊಟತಿಂಡಿಗಳನ್ನು ತಾನೇ ತಯಾರಿಸಿಕೊಳ್ಳುತ್ತಿದ್ದನು. ಅವನು ಬಡವನಾಗಿದ್ದುದರಿಂದ ನಿತ್ಯವೂ ರುಚಿರುಚಿಯಾದ ಅಡಿಗೆಯನ್ನು ಸಿದ್ಧಪಡಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಅಂಬಲಿಯೋ, ತುಂಬೇಸೊಪ್ಪೋ ಉಂಡು ತೃಪ್ತನಾಗಿಬಿಡುತ್ತಿದ್ದನು.

ಹೀಗಿರುವಾಗ ಒಂದು ದಿನ ಅಡಿಗೆಯ ಸಾಮಗ್ರಿಗಳು ಚೆನ್ನಾಗಿ ಸಿಕ್ಕಿ, ಅವನು ಸ್ವಾದಿಷ್ಟವಾದ ಭೋಜ್ಯಗಳನ್ನು ತಯಾರಿಸಿಕೊಂಡು, ಊಟಮಾಡಲೆಂದು ಎಲ್ಲವನ್ನೂ ಒಂದು ಮೇಜಿನ ಮೇಲೆ ಜೋಡಿಸಿಟ್ಟುಕೊಂಡನು. ಕೈತೊಳೆದು ಬರೋಣವೆಂದು ಬಚ್ಚಲುಮನೆಗೆ ಹೋದನು. ಅಷ್ಟರಲ್ಲಿಯೇ ನರಿಯೊಂದು ಅವನ ಮನೆಯೊಳಕ್ಕೆ ನುಗ್ಗಿ ಬಂದು, ಮೇಜಿನ ಮೇಲಿದ್ದ ವಸ್ತುಗಳನ್ನೆಲ್ಲ ಮೂಸುತ್ತ, ತನಗೆ ಬೇಕಾದ ಯಾವುದೋ ಒಂದನ್ನು ಸ್ವಲ್ಪ ತಿಂದಿತ್ತು. ಆಗಲೇ ಷರೀಫನು ಬಚ್ಚಲುಮನೆಯಿಂದ ಹೊರಬರಲಾಗಿ, ನರಿಯು ಅಂಜಿಕೊಂಡು ಓಡಿಹೋಯಿತು. ನರಿಯು ಎಂಜಲು ಮಾಡಿದ್ದನ್ನಾಗಲಿ, ಮುಟ್ಟಿದ್ದನ್ನಾಗಲಿ ಅಪವಿತ್ರವೆಂದು ಮುಸಲ್ಮಾನರು ಭಾವಿಸುತ್ತಾರೆ. ಅದನ್ನು ಹೊರಕ್ಕೆಸೆಯಬೇಕೇ ವಿನಹ ತಿನ್ನುವಂತಿಲ್ಲ. "ತಿಂದರೆ ಅಪವಿತ್ರನಾಗುತ್ತೇನೆ, ತಿನ್ನದಿದ್ದರೆ ಆಸೆಪಟ್ಟು ತಯಾರಿಸಿಕೊಂಡುದೆಲ್ಲ ಕೈತಪ್ಪಿಹೋಗುತ್ತದೆ, ಈಗೇನು ಮಾಡುವುದು" ಎಂಬ ದ್ವಂದ್ವಕ್ಕೆ ಷರೀಫನು ಸಿಕ್ಕಿಬಿದ್ದನು. ಹಸಿವಿನಿಂದ ಸಂಕಟ, ತಳಮಳಗಳಿಗೂ ಗುರಿಯಾದನು.

ಇದಕ್ಕೇನಾದರೂ ಪರಿಹಾರವಿದ್ದರೆ ಕೇಳೋಣ ಎಂದು ಷರೀಫನು ಬಾಗಿಲು ಭದ್ರಪಡಿಸಿಕೊಂಡು ತನ್ನ ಪುರೋಹಿತನ ಬಳಿಗೆ ಹೋದನು. ಮುಲ್ಲಾನನ್ನು ಕುರಿತು "ನೋಡಿ ಸ್ವಾಮಿ, ಊಟಕ್ಕೆ ಮುನ್ನ ಹೀಗಾಗಿಬಿಟ್ಟಿತು, ನರಿಯೊಂದು ನನ್ನ ಊಟವನ್ನು ಕೊಂಚ ತಿಂದುಕೊಂಡು ಓಡಿತು. ಎಲ್ಲವನ್ನೂ ಅದು ಮೂಸಿಹೋಗಿದೆ, ಮುಟ್ಟಿಹೋಗಿದೆ. ಹಬ್ಬದ ಅಡುಗೆಯನ್ನು ಅಟ್ಟುಕೊಂಡು ಉಣ್ಣಬೇಕೆಂಬ ಆಸೆಯಲ್ಲಿದ್ದೆ. ಆ ನರಿಯು ಎಲ್ಲವನ್ನೂ ಹಾಳುಮಾಡಿಬಿಟ್ಟಿತು. ಈಗೇನು ಮಾಡಲಿ, ಏನಾದರೂ ಪರಿಹಾರವಿದ್ದರೆ ಹೇಳಿ" ಎಂದು ಗೋಗರೆದನು. ಷರೀಫನ ಮನಃಸ್ಥಿತಿ ಮುಲ್ಲಾನಿಗೆ ಅರ್ಥವಾಯಿತು. ರುಚಿಕರವಾದ ಅಡುಗೆಯನ್ನು ಬೀದಿಗೆ ಚೆಲ್ಲಿಬಿಡುವ ಮನಸ್ಸು ಅವನಿಗಿಲ್ಲ ಎಂಬುದು ತಿಳಿಯಿತು. ನಾಯಿಯ ಎಂಜಲೇನೂ ಅವರಿಗೆ ನಿಷಿದ್ದವಲ್ಲ. ನಾಯಿಗಿಂತ ನರಿಯು ಕೀಳು. ಈ ಭಾವನೆಯನ್ನು ಉಪಯೋಗಿಸಿಕೊಂಡು, ಮುಲ್ಲಾನು ಕ್ಷಣಕಾಲ ಆಲೋಚಿಸಿ "ನೋಡು ಷರೀಫಾ, ನರಿ ತಿಂದಿರುವ ಪಾತ್ರೆಯಿಂದಲೇ ಒಂದು ನಾಯಿಯನ್ನು ಬರಮಾಡಿಕೊಂಡು, ಸ್ವಲ್ಪವನ್ನು ಅದರಿಂದ ತಿನ್ನಿಸು, ನಾಯಿ-ನರಿಗಳು ಪರಸ್ಪರ ವೈರಿಗಳು, ಒಂದನ್ನೊಂದು ಕಂಡಾಗ ಕಚ್ಚಾಟಕ್ಕೆ ಇಳಿದುಬಿಡುತ್ತವೆ. ಹೀಗಾಗಿ ನರಿಯ ಎಂಜಲಿನಿಂದಾದ ಮೈಲಿಗೆ, ನಾಯಿ ಎಂಜಲಿನಿಂದ ಪರಿಹಾರವಾಗಿಬಿಡುತ್ತದೆ. ತರುವಾಯ ಎರಡೂ ಎಂಜಲುಗಳು ನಿನ್ನ ಹೊಟ್ಟೆಯಲ್ಲಿ ಪರಿಶುದ್ಧವಾಗಿಬಿಡುತ್ತವೆ. ಸದ್ಯಕ್ಕೆ ಇರುವುದು ಅದೊಂದು ಪರಿಹಾರ" ಎಂದು ಸೂಚಿಸಿದನು. ಷರೀಫನಿಗೆ ತುಂಬಾ ಸಂತೋಷವಾಯಿತು. ಮುಲ್ಲಾನಿಗೆ ಧನ್ಯವಾದಗಳನ್ನು ಹೇಳಿ, ನಾಯಿಯನ್ನು ಹುಡುಕಲು ಹೊರಟುಹೋದನು.

ನಾವೆಲ್ಲರೂ ಷರೀಫನ ಸ್ಥಿತಿಯಲ್ಲಿಯೇ ಇದ್ದೇವೆ. ನರಿಯ ಎಂಜಲು ಅಪವಿತ್ರ ಎಂಬುದು ಮೊದಲನೆಯ ಭ್ರಾಂತಿಯಾದರೆ, ನಾಯಿಯ ಎಂಜಲು ಅದನ್ನು ಪರಿಹರಿಸ ಬಲ್ಲದು ಎಂಬುದು ಎರಡನೆಯ ಭ್ರಾಂತಿ. ಮುಲ್ಲಾನಾದರೋ ಮೊದಲನೆಯ ಭ್ರಾಂತಿಯನ್ನು ಎರಡನೆಯ ಭ್ರಾಂತಿಯಿಂದ ನಿವಾರಿಸಿಕೊಟ್ಟನು. ಆಹಾರವು ಷರೀಫನ ಹೊಟ್ಟೆಯನ್ನು ಸೇರಿದ ಬಳಿಕ ಎರಡೂ ಭ್ರಾಂತಿಗಳು ಲಯವಾದುವು ಎಂದು ತಿಳಿಯಬಹುದು.

ನಾನಿನ್ನೂ ಜ್ಞಾನಿಯಾಗಿಲ್ಲ, ಅಜ್ಞಾನಿಯಾಗಿದ್ದೇನೆ ಎಂಬುದು ಮೊದಲನೆಯ ಭ್ರಾಂತಿ. ನಾನು ಜ್ಞಾನಿಯಾಗಲು ಸಾಧನೆ ಮಾಡಬೇಕು ಎಂಬುದು ಎರಡನೆಯ ಭ್ರಾಂತಿ. ಮೊದಲನೆಯ ಭ್ರಾಂತಿಯನ್ನು ಎರಡನೆಯ ಭ್ರಾಂತಿಯಿಂದ ಹೊಡೆದಟ್ಟಬೇಕಾಗಿದೆ. ಕೊನೆಗೆ ಎರಡೂ ಲಯವಾಗುತ್ತವೆ. ಇದು ಒಂದು ಮುಳ್ಳಿನಿಂದ, ನಮಗೆ ಚುಚ್ಚಿಕೊಂಡಿ ರುವ, ಇನ್ನೊಂದು ಮುಳ್ಳನ್ನು ತೆಗೆದರೆ ಹೇಗೋ ಹಾಗೆ. ಆಮೇಲೆ ಎರಡೂ ಮುಳ್ಳುಗಳನ್ನು ಎಸೆದುಬಿಡಬೇಕು. ತತ್ತ್ವಮಸಿ ಆ ಬ್ರಹ್ಮವಸ್ತುವೇ ನೀನಾಗಿದ್ದೀಯೆ~ ಎಂಬ ವಾಕ್ಯವನ್ನು ಶ್ರವಣಮಾಡಿಬಿಟ್ಟರೆ ಸಾಕು, ಕೆಲವರಿಗೆ ಜಗತ್ತು ಮಾಯವಾಗಿ, ಸತ್ಯವೇನೆಂಬುದು ಹೊಳೆದುಬಿಡುತ್ತದೆ. ಆದರೆ ಉಳಿದವರು ಈ ಭ್ರಾಂತಿಯಿಂದ ಪಾರಾಗಲು ಬಹಳ ಹೋರಾಡಬೇಕು.

(ಸಂಗ್ರಹ: ಸ್ವಾಮಿ ವಿವೇಕಾನಂದರ ಕಥಾ ಸಂಚಯ)

ಚಿತ್ರ ಕೃಪೆ: ಅಂತರ್ಜಾಲ ತಾಣ