ಮೊದಲಿಗೆ ಹೋಲಿಸಿದರೆ, ಪುಣೆ- ಬೆಂಗಳೂರು ಹೆದ್ದಾರಿಯು ಈಗ ಸಾವಿರ ಪಾಲು ಉತ್ತಮ ಎಂಬುದರಲ್ಲಿ ಮರುಮಾತಿಲ್ಲ, ಆದರೆ, ಇಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸರಣಿ ನಿಜಕ್ಕೂ ಘೋರ, ಗುರುವಾರ ನಸುಕಿನ ಜಾವ ಸಂಭವಿಸಿದ ಕಂಟೈನರ್ - ಬಸ್ ಡಿಕ್ಕಿ. ಇದರಿಂದ ಘಟಿಸಿದ ೬ ಸಾವು ಭಯಾನಕವೇ ಸರಿ. ಎಳೆಯ ಮಗು, ಈಗಷ್ಟೇ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೆಣ್ಣು ಮಕ್ಕಳ ಸಾವನ್ನು ಅರಗಿಸಿಕೊಳ್ಳಲಾಗದು.

ಕಂಟೈನರ್ ಚಾಲಕ ಸತತ ಚಾಲನೆಯಲ್ಲಿ ನಿರತನಾಗಿದ್ದರಿಂದ ದಣಿದು ಅಥವಾ ನಿದ್ದೆಯ ಮಂಪರಿನಲ್ಲಿ ವಾಹನವನ್ನು ವಿಭಜಕಕ್ಕೆ ಡಿಕ್ಕಿ ಹೊಡೆಸಿದ್ದರಿಂದ, ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ಸ್ಥಳದಲ್ಲಿ ಹೆದ್ದಾರಿಯಲ್ಲಿ ಡಿವೈಡರ್ ಕೇವಲ ಒಂದೂವರೆ ಅಡಿ ಅಂತರದಲ್ಲಿದ್ದು, ಬೃಹತ್ ವಾಹನಗಳು ಅಕ್ಕಪಕ್ಕದಲ್ಲಿ ಸರಿದು ಹೋಗುತ್ತವೆ. ವೇಗದ ವಾಹನಗಳು ಸ್ವಲ್ಪ ಆಯ ತಪ್ಪಿದರೂ ಸುಲಭವಾಗಿ ಡಿವೈಡರ್ ದಾಟಿ ಪಕ್ಕದ ಲೇನ್‌ನಲ್ಲಿ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುವ ಅಪಾಯವೇ ಹೆಚ್ಚು, ಈ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವವರು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿದೆ.

ವಿಶೇಷವಾಗಿ, ಹಿರಿಯೂರಿನ ಸಮೀಪದ ಪಿಬಿ ರಸ್ತೆಯಲ್ಲಿ ಆಗಾಗ್ಗೆ ಭೀಕರ ಅಪಘಾತಗಳು ಸಂಭವಿಸುತ್ತಿದ್ದು, ಇಲ್ಲಿನ ಸವಾಲುಗಳ ಬಗ್ಗೆ ವಿಶೇಷ ಅಧ್ಯಯನದ ಅಗತ್ಯ. ೨೦೧೪ರಲ್ಲಿ ಸ್ಲೀಪರ್ ಕೋಚ್ ಬಸ್ ಬೆಂಕಿಗೆ ಆಹುತಿಯಾಗಿ ೬ ಮಂದಿ, ೨೦೨೦ರಲ್ಲಿ ಬೆಳಗಿನ ಜಾವ ಖಾಸಗಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮಗು ಸೇರಿದಂತೆ ಒಂದೇ ಕುಟುಂಬದ ಐವರ ಸಜೀವ ದಹನವಾಗಿತ್ತು. ಈಗ ಅದಕ್ಕಿಂತ ಭೀಕರ ಘಟನೆಗೆ ಈ ತಾಣ ಸಾಕ್ಷಿಯಾಗಿದೆ.

ಕೇಂದ್ರ ಭೂ ಸಾರಿಗೆ ಸಚಿವರು ಉಪಗ್ರಹದ ಮೂಲಕ ಟೋಲ್ ಸಂಗ್ರಹದ ಪ್ರಸ್ತಾಪಿಸುತ್ತಾರೆ. ಆದರೆ, ಲಾರಿ ಚಾಲಕರ ಪ್ರಮಾದ, ಮನುಷ್ಯ ದೋಷ ನಿಯಂತ್ರಣದ ವಿಚಾರದಲ್ಲೂ ಮಂತ್ರಿಗಳು ಗಮನ ಹರಿಸಲಿ. ಹಾಗೆ ನೋಡಿದರೆ, ಆಗಾಗ್ಗೆ ಅಪಘಾತ ಸಂಭವಿಸುವ ಹಾಗೂ ಹಾಳಾದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ನೈತಿಕತೆಯೇ ಸರಕಾರಕ್ಕೆ ಇಲ್ಲ. ಈ ಕಾರಣಕ್ಕೇ ಅಪಘಾತದ ಬಳಿಕದ ಇವರ ಸಂತಾಪ, ಪರಿಹಾರಗಳೆಲ್ಲ ಕೃತಕ ಎನ್ನಿಸುತ್ತಿರುತ್ತದೆ.

ಭಾರತದ ಹೆದ್ದಾರಿಗಳಲ್ಲಿ ಉಳಿದೆಲ್ಲರಿಗೂ ಒಂದು ಕಾನೂನು, ನ್ಯಾಷನಲ್ ಪರ್ಮಿಟ್‌ನ ಲಾರಿ ಚಾಲಕರಿಗೆ ಒಂದು ಕಾನೂನು? ಮಿತಿ ಮೀರಿದ ಸರಕುಗಳನ್ನು ತುಂಬಿಸಿಕೊಂಡ ವಾಹನ ತೀವ್ರ ವೇಗದಲ್ಲಿದ್ದಾಗ ಎಷ್ಟೇ ಬ್ರೇಕ್ ಒತ್ತಿದರೂ ನಿಯಂತ್ರಣ ಕಷ್ಟವಾಗಬಹುದು. ಭಾರ ತಡೆಯಲಾರದೆ ಟಯರ್ ಒಡೆಯುವ ಅಪಾಯವೂ ಹೆಚ್ಚು ದೂರದ ಟ್ರಿಪ್‌ ಗಳಲ್ಲಿನ ಚಾಲಕರಿಗೆ ನಿದ್ರೆ ಕೊರತೆಯೂ ಸಾಮಾನ್ಯ.

ಅತಿಭಾರಕ್ಕೆ ಕಠಿಣ ದಂಡ, ಪರವಾನಗಿ ರದ್ದು, ಚಾಲಕರಿಗೆ ಕಡ್ಡಾಯ ವಿಶ್ರಾಂತಿ. ಮಂಪರು ಮಾಪನಗಳು, ಹೆಚ್ಚಿನ ಟ್ರಕ್ ಪಾರ್ಕಿಂಗ್ ಸೌಲಭ್ಯ, ವಾಹನಗಳಿಗೆ ಸ್ಪೀಡ್ ಲಿಮಿಟ್ ಕಡ್ಡಾಯ, ನಿಯಮಿತ ಚಾಲಕರ ಫಿಟ್ರಿಸ್ ಪರೀಕ್ಷೆಗಳು ಇನ್ನಷ್ಟು ಕಡ್ಡಾಯಗೊಳ್ಳಬೇಕು. ಬಹುತೇಕ ಕಡೆ ಟ್ರಕ್‌ಗಳಿಗೆ ಪ್ರತ್ಯೇಕ ಲೇನ್ ಇಲ್ಲದಿರುವುದೂ ಇನ್ನೊಂದು ಸಮಸ್ಯೆ ಮಾರ್ಗದರ್ಶಿ ಫಲಕಗಳು ಸೂಕ್ತ ಕಡೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಕೆಯಾಗಬೇಕು. ತ್ವರಿತ ಆಂಬ್ಯುಲೆನ್ಸ್ ವ್ಯವಸ್ಥೆ, ಕಡ್ಡಾಯವಾಗಿ ಇರಬೇಕು. ಕರ್ನಾಟಕದಲ್ಲಿ ಲಾರಿ ಚಾಲನೆಗೆ ಮೋಟಾರು ವಾಹನ ಕಾಯಿದೆ ಮತ್ತು ರಾಜ್ಯ ನಿಯಮಗಳು ಅನ್ವಯವಾಗುತ್ತವೇನೋ ಸರಿ. ಆದರೆ, ಇದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂಬ ಬಗ್ಗೆಯೂ ದೂರುಗಳಿವೆ. ಹೈವೇ ಪೆಟ್ರೋಲಿಂಗ್ ವ್ಯವಸ್ಥೆಯೇ? ನಿದ್ರಿಸಿದರೆ, ತಪ್ಪೆಸಗುವ ಚಾಲಕರನ್ನು ಕೇಳುವವರಾರು?

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೬-೧೨-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ