ಕವಿ ಹೃದಯಿ, ಮಹಾ ಮುತ್ಸದ್ದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಬದುಕಿದ್ದರೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ೧೯೨೪ನೇ ಡಿಸೆಂಬರ್ ೨೫ರಂದು ಕೃಷ್ಣ ಬಿಹಾರಿ ವಾಜಪೇಯಿ ಹಾಗೂ ಕೃಷ್ಣಾ ದೇವಿಯವರ ಸುಪುತ್ರರಾಗಿ ಜನಿಸಿದ ಅಟಲ್ ಬಿಹಾರಿ ಭಾರತದ ರಾಜಕಾರಣದಲ್ಲಿ ಸೂರ್ಯನಂತೆ ಬೆಳಗಿದರು. ವಾಜಪೇಯಿಯವರದ್ದು ಕವಿ ಮನಸ್ಸು. ಅವರ ಜನ್ಮ ದಿನದ ಸಂದರ್ಭದಲ್ಲಿ ಅವರ ಬದುಕಿನ ಕೆಲವು ಹಾಸ್ಯಮಯ ಘಟನೆಗಳನ್ನು ಸಂಗ್ರಹಿಸಿ ನೀಡಲಾಗಿದೆ. 

ಕಾವ್ಯ - ಕಬಡ್ಡಿ

ವಾಜಪೇಯಿ ಅವರು ಒಂದು ಬಾರಿ ಕಾನ್ಪುರದ ಮಹಿಳಾ ಕಾಲೇಜಿನ ಸ್ವರ್ಣಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಜಪೇಯಿ ಅವರು ಉತ್ತಮ ಕವಿ ಎಂಬುದು ಪ್ರಾಚಾರ್ಯರಿಗೆ ತಿಳಿದಿತ್ತು. ಕವನ ವಾಚನ ಮಾಡುವಂತೆ ಅವರನ್ನು ವಿನಂತಿಸಿಕೊಂಡರು. ವಾಜಪೇಯಿ ಅವರ ಮಾತು ಮುಂದುವರಿದಿತ್ತು. ಆದಾಗ್ಯೂ ಪ್ರಿನ್ಸಿಪಾಲರು ಒಂದೆರಡು ಬಾರಿ ಅವರನ್ನು ತಡೆದು ಕವನ ವಾಚನ ಮಾಡುವಂತೆ ವಿನಂತಿಸಿದರು. ಇದರಿಂದ ಕಿರಿಕಿರಿಗೆ ಒಳಗಾದ ವಾಜಪೇಯಿ ಅವರು ಪ್ರಾಚಾರ್ಯರನ್ನು ಸುಮ್ಮನಿರಿಸುವುದಕ್ಕಾಗಿ ಹೀಗೆ ಹೇಳಿದರು. ''ಕವನ ವಾಚನ ಮಾಡಲು ನಾನು ಒಪ್ಪಿಕೊಂಡಿದ್ದೇನೆ. ಆದರೂ ಅವರು ನನ್ನನ್ನು ಒತ್ತಾಯಿಸುತ್ತಲೇ ಇದ್ದಾರೆ. ಅವರಿಗೆ ನಾನು ಕವಿ ಎಂಬುದಷ್ಟೇ ಗೊತ್ತು. ನಾನು ಉತ್ತಮ ಕಬಡ್ಡಿ ಆಟಗಾರ ಎಂಬುದು ಪ್ರಾಯಃ ಪ್ರಾಚಾರ್ಯರಿಗೆ ಗೊತ್ತಿಲ್ಲ", ಇದಾದ ಅನಂತರ ಪ್ರಾಚಾರ್ಯರು ಕವನ ವಾಚನ ಮಾಡುವಂತೆ ವಾಜಪೇಯಿ ಅವರನ್ನು ಒತ್ತಾಯಿಸಲಿಲ್ಲ!

ಅನ್ನದಾತೆ ಇಂದಿರಾ

ತುರ್ತು ಪರಿಸ್ಥಿತಿ ಘೋಷಿಸಿದ ಆನಂತರ ವಾಜಪೇಯಿ ಅವರನ್ನು ಬಂಧಿಸಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇಡಲಾಯಿತು. ಅವರನ್ನು ಕಾಣಲು ಅವರ ಮಿತ್ರ ಡಾ। ಎನ್.ಎಂ. ಘಟಾಟೆ ಬೆಂಗಳೂರಿಗೆ ಬಂದರು. ಜೈಲು ಪೋಷಾಕಿನಲ್ಲಿದ್ದ ವಾಜಪೇಯ ಅವರನ್ನು ಕಂಡು ಘಟಾಟೆ ಅವರು 'ಇದೇನು ಆಟಲ್‌ ಜಿ? ತಾವು ಹೊಸ ಅವತಾರದಲ್ಲಿ?'' ಅದಕ್ಕೆ ವಾಜಪೇಯಿ ನೀಡಿದ ಉತ್ತರ, "ಹೌದು. ಇದು ಹೊಸ ಅವತಾರ. ಇಂದಿರಾಜೀ ನಮಗೆ ಈ ವಸ್ತ್ರ ತೊಡಿಸಿದ್ದಾರೆ. ಈಗ ಅವರೇ ನಮಗೆ ಅನ್ನ ಹಾಕುತ್ತಿದ್ದಾರೆ. ಅವರು ನಮ್ಮ ಅನ್ನದಾತೆ. ಈ ಪೋಷಾಕಿಗೆ ಕಿಸೆ ಇಲ್ಲ. ಹಣ ಇಟ್ಟುಕೊಳ್ಳಲು ಬರುವುದಿಲ್ಲ. ಆದರೂ ಯಾವುದಕ್ಕೂ ಇಲ್ಲಿ ಹಣ ಕೊಡಬೇಕಿಲ್ಲ!''

ಯಾರಿಗಾಗಿ ರೈಲು?

ಒಂದು ಬಾರಿ ಲೋಕಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುವಾಗ ರೈಲ್ವೇ ಸಚಿವರನ್ನು ತರಾಟೆಗೆ ತೆಗೆದುಕೊಂಡು ಸಚಿವರಿಗಾಗಿ ರೈಲ್ವೇಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ರೈಲ್ವೇ ಸಚಿವರು ಪ್ರಯಾಣಿಸುತ್ತಿದ್ದರೆ ರೈಲನ್ನು ಮನಬಂದ ಕಡೆ ನಿಲ್ಲಿಸಲಾಗುತ್ತದೆ. ರೈಲು ಇರುವುದು ಯಾರಿಗಾಗಿ ಎಂದು ಪ್ರಶ್ನಿಸಿದರು. ರೈಲ್ವೇ ಸಚಿವರು ಆರೋಪವನ್ನು ನಿರಾಕರಿಸಿದರು. ತಮ್ಮ ಆರೋಪವನ್ನು ಸಮರ್ಥಿಸುವುದಕ್ಕಾಗಿ ವಾಜಪೇಯ ಅವರು ಹೇಳಿದ್ದು: ''ಹಿಂದೆ ರೈಲ್ವೇ ಸಚಿವರೊಬ್ಬರಿದ್ದರು. ಹೆಂಡತಿಯೊಂದಿಗೆ ಪ್ರಯಾಣಿಸುತ್ತಿದ್ದರು. ಹೆಂಡತಿಗೆ ಮಾವಿನಹಣ್ಣನ್ನು ಖರೀದಿಸಲು ೧೫ಕ್ಕೂ ಹೆಚ್ಚು ಬಾರಿ ರೈಲನ್ನು ನಿಲ್ಲಿಸಿದರು!''

ಸ್ತ್ರೀಸಂವೇದಿ

ಬೆಲೆ ಏರಿಕೆ ಆದಾಗಲೆಲ್ಲ ವಾಜಪೇಯಿ ಪ್ರತಿಭಟಿಸುತ್ತಿದ್ದರು. ಆಗ ಮಹಿಳೆಯರು ಅವರನ್ನು ಹೊಗಳಿ ಆಟಲ್‌ ಜೀ ಬ್ರಹ್ಮಚಾರಿ' ಆದರೂ ಮಹಿಳೆಯರ ಸಮಸ್ಯೆಯ ಬಗ್ಗೆ ಕಾಳಜಿ ವಹಿಸುತ್ತಾರೆ ಎನ್ನುತ್ತಿದ್ದರು. ವಾಜಪೇಯಿ ಅವರು ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಬೆಲೆಗಳು ಏರಿದವು. ಆಗ ವಾಜಪೇಯಿ ಅವರನ್ನು ಮಹಿಳಾ ವಿರೋಧಿ ಎಂದು ಜರಿಯಲಾಯಿತು. ತಾನು ಯಾವತ್ತೂ ಮಹಿಳೆಯರ ಪರ, ಇದರಲ್ಲಿ ಸಂಶಯ ಬೇಡ ಎಂದು ಮಹಿಳೆಯರಿಗೆ ಅಭಯ ನೀಡಿದರು ವಾಜಪೇಯಿ.

ಕೆಟ್ಟ ಮರ - ಒಳ್ಳೇ ಹಣ್ಣು!

ವಾಜಪೇಯಿ ಟೀಕಾಕಾರರು ಅವರನ್ನು 'ಕೆಟ್ಟ ಪಕ್ಷದಲ್ಲಿರುವ ಒಳ್ಳೆಯ ಮನುಷ್ಯ ಎಂದು ಛೇಡಿಸುತ್ತಿದ್ದರು. ಅದನ್ನು ನಿರಾಕರಿಸುತ್ತ ಕೆಟ್ಟ ಮರ ಕೆಟ್ಟ ಮರವೇ. ಅವರಲ್ಲಿ ಒಳ್ಳೆಯ ಫಲ ಇರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದರು.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ