ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತಕ್ಕೆ ಅಕ್ಕಪಕ್ಕ ದೇಶಗಳ ಒಳ ನುಸುಳುವಿಕೆ ಒಂದು ಶಾಪವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಬಾಂಗ್ಲಾ ಮತ್ತು ಮ್ಯಾನ್ಮಾರ್ ನಿಂದ ಬಂದವರು ಇಲ್ಲಿ ದೇಶದ ಭದ್ರತೆಗೂ ಸವಾಲೆಸೆದು ಕುಳಿತಿದ್ದಾರೆ ಎಂಬುದು ವಿಷಾದನೀಯವೇ ಹೌದು. ಹಿಂದಿನಿಂದಲೂ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಿದ್ದು, ಅಕ್ಕಪಕ್ಕದ ದೇಶಗಳಿಂದ ಬಂದವರಿಗೆ ಗುರುತಿನ ಚೀಟಿ ಕೊಟ್ಟು ಇಲ್ಲೇ ಇರುವಂತೆ ಮಾಡಿದ ರಾಜಕೀಯ ಪಕ್ಷಗಳ ನಡೆಯೂ ಅಪರಾಧವೇ.
ಇತ್ತೀಚೆಗಷ್ಟೇ ಮುಗಿದ ಸಂಸತ್ ಅಧಿವೇಶನದ ವೇಳೆಯಲ್ಲಿ ಕೇಂದ್ರ ಸರಕಾರ ೨೦೧೪ರ ನಂತರದ ಈ ಒಳನುಸುಳುವಿಕೆ ಮತ್ತು ಇದನ್ನು ತಡೆದ ಬಗ್ಗೆ ಒಂದು ದತ್ತಾಂಶವನ್ನು ಒಳಗೊಂಡ ಮಾಹಿತಿ ನೀಡಿದೆ. ಇದರ ಪ್ರಕಾರ, ೨೦೧೪ರಿಂದ ಮೊದಲ್ಗೊಂಡು ೨೦೨೫ರ ನವೆಂಬರ್ ವರೆಗೆ ದೇಶದಲ್ಲಿ ಒಳನುಸುಳಿದ ಸುಮಾರು ೨೫ ಸಾವಿರ ಮಂದಿಯನ್ನು ಬಂಧಿಸಲಾಗಿದೆ. ಹಾಗೆಯೇ, ಇದೇ ಅವಧಿಯಲ್ಲಿ ೯,೭೦೦ ಬಾರಿ ಒಳನುಸುಳುವಿಕೆ ಯತ್ನಗಳು ನಡೆದಿದೆ ಎಂದು ಈ ವರದಿ ಹೇಳಿದೆ. ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದ ಕಡೆಗಳಿಂದ ಇಂಥ ಪ್ರಯತ್ನಗಳು ಹೆಚ್ಚಾಗಿವೆ. ಭೂತಾನ್ ಮತ್ತು ನೇಪಾಳದ ಕಡೆಗಳಿಂದಲೂ ಇಂಥ ಯತ್ನಗಳಾಗಿದ್ದರೂ ಅವು ಕಡಿಮೆ. ಆದರೆ ಚೀನಾದಿಂದೈದುವರೆಗೆ ಒಂದೇ ಒಂದು ಯತ್ನವೂ ನಡೆದಿಲ್ಲ ಎಂದು ಹೇಳುತ್ತಿದೆ ಈ ವರದಿ. ೨೦೧೪ರಿಂದ ಇಲ್ಲಿಯವರೆಗೆ ಬಾಂಗ್ಲಾದೇಶದಿಂದಲೇ ಬಹಳಷ್ಟು ಒಳನುಸುಳುವಿಕೆಯಾಗಿದೆ. ಅಂದರೆ, ೮,೬೩೨ ಪ್ರಯತ್ನಗಳು ಮತ್ತು ೨೧,೪೦೭ ಮಂದಿಯನ್ನು ಬಂಧಿಸಲಾಗಿದೆ. ಅತ್ತ ಪಾಕ್ ಗಡಿಯಲ್ಲಿ ೪೫೭ ಪ್ರಯತ್ನಗಳು ಮತ್ತು ೬೦೫ ಮಂದಿಯನ್ನು ಬಂಧಿಸಲಾಗಿದೆ. ಮ್ಯಾನ್ಮಾರ್ ನಿಂದ ೩೯೩ ಪ್ರಯತ್ನಗಳು ಹಾಗೂ ೨,೬೦೩ ಮಂದಿಯನ್ನು ಬಂಧಿಸಲಾಗಿದೆ.
ಈ ಅಂಕಿ ಅಂಶವನ್ನು ಗಮನಿಸಿದರೆ ಭಾರತಕ್ಕೆ ನುಗ್ಗಲು ಬಾಂಗ್ಲಾ ಮತ್ತು ಮ್ಯಾನ್ಮಾರ್ ನ ಕಡೆಯಿಂದ ಬಹಳಷ್ಟು ಪ್ರಯತ್ನಗಳಾಗಿದೆ. ಗಡಿಯಲ್ಲಿ ಸಿಲುಕದೇ ದೇಶದೊಳಗೆ ನುಗ್ಗಿದವರು ಅದೆಷ್ಟೋ ಮಂದಿ ಇದುವರೆಗೆ ಲೆಕ್ಕಕ್ಕೇ ಸಿಕ್ಕಿಲ್ಲ. ಎಂಬುದೂ ವಿಷಾದನೀಯ. ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವ ಕೆಲಸ ಬಹಳಷ್ಟಿದೆ. ಅಂದರೆ, ಇದುವರೆಗೆ ೧೬೪೩ ಕಿ ಮೀ ನಲ್ಲಿ ಬೇಲಿ ಹಾಕಿರುವುದು ಕೇವಲ ೯.೨೧ ಕಿ.ಮೀ ಗೆ ಮಾತ್ರ. ಅತ್ತ ಬಾಂಗ್ಲಾದ ಗಡಿಯಲ್ಲೂ ಪ. ಬಂಗಾಳದ ಸರ್ಕಾರದ ಮೊಂಡಾಟದಿಂದ ಬೇಲಿ ಹಾಕುವ ಕಾರ್ಯ ಶೇ. ೨೦ ರಷ್ಟು ಬಾಕಿ ಉಳಿದಿದೆ. ಪಾಕಿಸ್ತಾನದ ಜತೆಗಿನ ಗಡಿಯಲ್ಲಿ ಒಟ್ಟಾರೆ ೨,೨೮೯ ಕಿ.ಮೀ ನಲ್ಲಿ ೨,೧೩೫ ಕಿ.ಮೀ ಗೆ ಬೇಲಿ ಹಾಕಿದ್ದರೆ, ಉಳಿದ ೧೫೪ ಕಿ. ಮೀ ಗೆ ಇನ್ನೂ ಬೇಲಿ ಹಾಕಬೇಕಿದೆ.
ಸದ್ಯ ಬಾಂಗ್ಲಾ ಸ್ಥಿತಿ ಇನ್ನಷ್ಟು ವಿಷಮಕ್ಕೆ ತಿರುಗಿದ್ದು, ಅಲ್ಲಿಂದ ಇಲ್ಲಿಗೆ ಒಳನುಸುಳುವವರ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ಪ. ಬಂಗಾಳ ಸರ್ಕಾರ ರಾಜಕೀಯ ಮತ್ತು ವೋಟ್ ಬ್ಯಾಂಕ್ ರಾಜಕೀಯ ಬದಿಗಿಟ್ಟು ಬೇಲಿ ಹಾಕಲು ಭೂಮಿ ಒದಗಿಸಬೇಕು. ಹಾಗೆಯೇ ಮ್ಯಾನ್ಮಾರ್ ಜತೆಗಿನ ಗಡಿಗೆ ಶೀಘ್ರದಲ್ಲಿ ಬೇಲಿ ಹಾಕುವ ಕ್ರಮವಾಗಬೇಕು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೨-೦೧-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!